ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ತೊಳಲಾಟ

Last Updated 19 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಚಿತ್ರ: ಸಾಥ್ ಖೂನ್ ಮಾಫ್
ಓಂಕಾರ್ ಹಾಗೂ ಕಮೀನೆ ಚಿತ್ರಗಳ ಮೂಲಕ ಭರವಸೆ ಹುಟ್ಟಿಸಿದ್ದ ನಿರ್ದೇಶಕ ವಿಶಾಲ್ ಭಾರದ್ವಾಜ್, ‘ಸಾಥ್ ಖೂನ್ ಮಾಫ್’ ಸಿನಿಮಾದಲ್ಲಿ ನಿರಾಶೆ ಮೂಡಿಸುತ್ತಾರೆ. ನಿರೀಕ್ಷಿಸಿದ ಪ್ರೀತಿ ಸಿಗಲಿಲ್ಲವೆಂದು ಒಂದಲ್ಲ, ಎರಡಲ್ಲ, ಆರು ಮಂದಿ ಗಂಡಂದಿರರನ್ನು ಕೊಲ್ಲುವ ನಾಯಕಿಯನ್ನು ಸಾಮಾನ್ಯ ಪ್ರೇಕ್ಷಕರು ಒಪ್ಪಿಕೊಳ್ಳುವುದು ಕಷ್ಟ!

ಪ್ರೀತಿಗಾಗಿ ಹುಡುಕಾಟ ನಡೆಸುವ ಆಂಗ್ಲೊ ಇಂಡಿಯನ್ ಯುವತಿ ಸೂಸನ್‌ಳ (ಪ್ರಿಯಾಂಕಾ ಛೋಪ್ರಾ) ಕಥೆ ಇದು. ನಿರೀಕ್ಷಿಸಿದ ಪ್ರೀತಿ ಸಿಗದೆ ಇದ್ದಾಗ ಪತಿಯನ್ನು ಕೊಲ್ಲುವುದು, ನಂತರ ಮತ್ತೊಬ್ಬ ಸಂಗಾತಿಯತ್ತ ಹೆಜ್ಜೆ ಹಾಕುತ್ತಾಳೆ. ಇಳಿ ವಯಸ್ಸಿನವರೆಗೂ ಈ ಹುಡುಕಾಟ ನಡೆಯುತ್ತದೆ.

ನಾಯಕಿಯ ಈ ಕೊಲೆಗಳಿಗೆ ಅವಳ ಮನೆಯ ಆಳುಗಳು ಸಹಾಯಕ್ಕೆ ನಿಲ್ಲುತ್ತಾರೆ. ಅವಳ ನಡೆಯನ್ನು ಸಮರ್ಥಿಸಿಕೊಂಡು ಅದಕ್ಕೊಂದು ಉದಾಹರಣೆ ನೀಡುತ್ತಾರೆ. ಸೂಸನ್ ಬಾಲಕಿಯಾಗಿದ್ದಾಗ ಶಾಲೆಗೆ ಹೋಗುವ ದಾರಿಯಲ್ಲಿ ನಾಯಿಯೊಂದು ಬೊಗಳುತ್ತಿತ್ತಂತೆ. ಮಾರ್ಗ ಬದಲಿಸುವ ಬದಲು ಸೂಸನ್ ನಾಯಿಯನ್ನು ಗುಂಡಿಟ್ಟು ಸಾಯಿಸಿ ಅದೇ ಹಾದಿಯಲ್ಲಿ ಮುಂದುವರಿಯುತ್ತಾಳೆ. ವೈವಾಹಿಕ ಜೀವನದಲ್ಲೂ ಇದೇ ದಾರಿ ತುಳಿಯುತ್ತಾಳೆ.   ಪ್ರೇಕ್ಷಕರಿಗೆ ಅವಳ ನಡೆ ಇಷ್ಟವಾಗುವುದು ಕಷ್ಟ. ಮನೋವಿಜ್ಞಾನದ ನೆಲೆಗಟ್ಟಿನಲ್ಲಿ ನಿರೂಪಿಸಿದ್ದರೆ ಸಿನಿಮಾಗೆ  ಒಂದಷ್ಟು ಗಟ್ಟಿತನ ಸಿಗುತ್ತಿತ್ತು.

ಸಿನಿಮಾ ಆಂಗ್ಲೊ ಇಂಡಿಯನ್ ಲೇಖಕ ರಸ್ಕಿನ್ ಬಾಂಡ್ ಅವರ ‘ಸೂಸನ್ಸ್ ಸೆವೆನ್ ಹಸ್ಬೆಂಡ್ಸ್’ ಸಣ್ಣಕಥೆಗಳನ್ನಾಧರಿಸಿದ್ದು. ಇಲ್ಲಿ ಏಳು ಗಂಡಂದಿರರು ಎನ್ನುವ ಶೀರ್ಷಿಕೆ ಸರಿಯಾಗಿದೆ. ಇದೇ ಅಂಶವನ್ನು ಮುಖ್ಯವನ್ನಾಗಿಸಿ ‘ಸಾಥ್ ಖೂನ್ ಮಾಫ್’ ಎಂದು ಹೆಸರಿಟ್ಟಿರುವುದು ಹಾಸ್ಯಾಸ್ಪದ. ಸಿನಿಮಾದಲ್ಲಿ ಆರು ಗಂಡಂದಿರರ ಕೊಲೆಯಾಗುತ್ತದೆ. ಏಳನೇ ಪತಿ ಯಾರು ಎನ್ನುವುದು ಸಸ್ಪೆನ್ಸ್.

ನಾಯಕಿ ಪ್ರಧಾನ ಕಥೆಯಾದ್ದರಿಂದ ಹೀರೋಗಳಿಗೆ ಹೆಚ್ಚಿನ ಅವಕಾಶ ಇಲ್ಲ. ನೀಲ್ ನಿತೀನ್ ಮುಖೇಶ್, ಜಾನ್ ಅಬ್ರಹಾಂ, ಇರ್ಫಾನ್ ಖಾನ್, ನಾಸಿರುದ್ದೀನ್ ಶಹಾ, ಅನ್ನುಕಪೂರ್, ಅಲೆಕ್ಸಾಂಡರ್ (ರಷ್ಯಾ ನಟ) ಇತರರು ಕೇವಲ ಹಾಜರಾತಿ ಹಾಕಿದಂತಿದೆ.

ನಿಧಾನಗತಿಯ ನಿರೂಪಣೆಯಿಂದಾಗಿ ಎರಡೂವರೆ ಗಂಟೆ ಕಳೆಯುವಷ್ಟರಲ್ಲಿ ಪ್ರೇಕ್ಷಕ ಹೈರಾಣಾಗಿರುತ್ತಾನೆ. ‘ಸಿನಿಮಾ ನೋಡಲು ಬಂದಿದ್ದೇ ತಪ್ಪಾಯಿತು’ ಎಂದು ಕೆಲವರಿಗೆ ಅನ್ನಿಸಿದರೆ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT