ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣ ಕಾರ್ಯ ಚುರುಕುಗೊಳಿಸಿ

Last Updated 6 ಜನವರಿ 2012, 8:25 IST
ಅಕ್ಷರ ಗಾತ್ರ

ಶಿವಮೊಗ್ಗ:  ಇಂದಿರಾ ಆವಾಸ್ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಿರುವ ಮನೆಗಳ ನಿರ್ಮಾಣ ಕಾರ್ಯ ಕುಂಠಿತವಾಗಿದ್ದು, ಇನ್ನು 2 ತಿಂಗಳ ಒಳಗಾಗಿ ನಿವೇಶನ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಿ ಮನೆ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷದ ಗುರಿಯಲ್ಲಿ ಬಾಕಿ ಉಳಿದಿರುವ 2,094 ಮನೆಗಳು ಹಾಗೂ ಪ್ರಸಕ್ತ ಸಾಲಿನ 3,147 ಮನೆಗಳು ಸೇರಿದಂತೆ ಒಟ್ಟು 5,341ಮನೆಗಳನ್ನು ನಿರ್ಮಿಸಬೇಕಾಗಿದೆ. ಆದರೆ, ಈವರೆಗೆ 850ಮನೆಗಳನ್ನು ನಿರ್ಮಿಸಲಾಗಿದೆ. ಹೀಗಾದರೆ ಪ್ರಗತಿ ಸಾಧಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸಂಸದರು, ಪ್ರಗತಿ ಕುಂಠಿತಕ್ಕೆ ಬಹುಮುಖ್ಯ ಕಾರಣವಾಗಿರುವ ನಿವೇಶನ ಹಕ್ಕುಪತ್ರ ಗೊಂದಲ ಹಾಗೂ ನಿವೇಶನ ಕೊರತೆ ಇವುಗಳ ಇತ್ಯರ್ಥಕ್ಕೆ ಕೂಡಲೇ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದರು.

ಜಿಲ್ಲೆಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 51.91ಕೋಟಿ ರೂ. ಬಿಡುಗಡೆಯಾಗಿದ್ದು, ಈವರೆಗೆ ಕೇವಲ 21ಕೋಟಿ ಮಾತ್ರ ಖರ್ಚಾಗಿದೆ. ಇದರಲ್ಲಿಯೂ ಕೂಡ ಪ್ರಗತಿ ಕುಂಠಿತವಾಗಿದೆ. ಈ ಯೋಜನೆಯಡಿ ಮುಂದಿನ ದಿನಗಳಲ್ಲಿ ಹೆಚ್ಚು ಕಾಮಗಾರಿ ಕೈಗೆತ್ತಿಕೊಂಡು ಹೆಚ್ಚು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಕಾಮಗಾರಿ, ವಸತಿ ಯೋಜನೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಕೈಗೊಂಡು ಗುರಿ ಸಾಧನೆಗೆ ಮುಂದಾಗಬೇಕು ಎಂದರು.

ಸಂಸದರ ನಿಧಿಗೆ ಈ ಮೊದಲು ಕೇಂದ್ರ ಸರ್ಕಾರ ನೀಡುತ್ತಿದ್ದ 2ಕೋಟಿ ರೂ.ಗಳ ಅನುದಾನವನ್ನು ಇದೀಗ 5ಕೋಟಿ ರೂ.ಗೆ ಹೆಚ್ಚಿಸಿರುವುದರಿಂದ ಈ ಅನುದಾನವನ್ನು ಬಳಸಿಕೊಂಡು ಅಪೂರ್ಣ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು  ಎಂದ ಅವರು, ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಬೇಕು ಎಂದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, 3 ತಿಂಗಳಿಗೆ ಒಮ್ಮೆ ನಡೆಸಬೇಕಾಗಿದ್ದ ಸಭೆಯನ್ನು 14ತಿಂಗಳ ನಂತರ ನಡೆಸಲಾಗುತ್ತಿದೆ ಇದರಿಂದ ಅಭಿವೃದ್ದಿ ಯೋಜನೆಗಳ ಬಗ್ಗೆ ಸಮಗ್ರ ಪ್ರಗತಿ ಪರಿಶೀಲನೆ ನಡೆಸಲು ತೊಡಕಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಸಿ ನೆಡುವ ಕಾರ್ಯಕ್ರಮದಡಿ ಗ್ರಾ.ಪಂ.ಗಳಿಗೆ ಬಹಳಷ್ಟು ಅನುದಾನ ನೀಡಲಾಗಿದೆಯಾದರೂ ಸಸಿಗಳನ್ನು ಪರಿಣಾಮಕಾರಿಯಾಗಿ ನೆಡದೆ ಹಣ ದುರುಪಯೋಗ ಮಾಡಲಾಗಿದೆ ಎಂದು ದೂರು ಕೇಳಿ ಬರುತ್ತಿವೆ ಎಂದ ಅವರು, ಗಿಡವನ್ನೇ ನೆಟ್ಟಿಲ್ಲ, ಆದರೂ ನೀರನ್ನ ಹಾಕಲು ಖರ್ಚು ತೋರಿಸಲಾಗಿದೆ ಎಂದು ಆರೋಪಿಸಿದರು.

ಮನೆಗಳ ನಿರ್ಮಾಣ ಕಾರ್ಯ ಕುಂಠಿತವಾಗಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಪಂಚಾಯ್ತಿವಾರು ಲಭ್ಯವಿರುವ ಭೂಮಿಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು 1ವರ್ಷದ ಹಿಂದೆಯೇ ಸೂಚನೆ  ಬಂದಿದ್ದರೂ ಬಹಳಷ್ಟು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂತಹ ಅಧಿಕಾರಿಗಳಿಗೆ ಷೋಕಾಸ್ ನೋಟೀಸ್ ನೀಡಬೇಕು ಎಂದರು.

ಇದಕ್ಕೆ ಪೂರಕವಾಗಿ ಧ್ವನಿಗೂಡಿಸಿದ ಶಾಸಕ ಕೆ.ಜಿ. ಕುಮಾರಸ್ವಾಮಿ, ಅಧಿಕಾರಿಗಳ ನಿರಾಸಕ್ತಿ ಹಾಗೂ ಬೇಜವಾಬ್ದಾರಿಯಿಂದಾಗಿ ಅಭಿವೃದ್ದಿ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಶಾಲೆಗಳಲ್ಲಿ ಹಣ್ಣಿನ ಗಿಡ ನೆಡಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಆದರೆ, ಯಾವ ಶಾಲೆಯಲ್ಲಿಯೂ ಗಿಡ ನೆಟ್ಟಿರುವುದು ಕಂಡು ಬರುತ್ತಿಲ್ಲ ಎಂದು ದೂರಿದರು.
ಸಮಿತಿಯ ಸದಸ್ಯ ಕೆ.ಎಸ್. ಗುರುಮೂರ್ತಿ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ರಸ್ತೆ ನಿರ್ಮಿಸಿದ ತರುವಾಯ 5ವರ್ಷ ಅವಧಿಯವರೆಗೆ ಆ ರಸ್ತೆ ನಿರ್ವಹಣೆ ಮಾಡಬೇಕೆಂಬ ನಿಬಂಧನೆ ಇದ್ದರೂ ಕೆಲವು ಕಡೆ ಹಾಳಾಗಿರುವ ರಸ್ತೆ ದುರಸ್ತಿ ಮಾಡಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಆಯ್ದ ಕೆರೆಗಳಿಗೆ ಮೀನುಮರಿಗಳನ್ನು ಬಿಡುವ ಕಾರ್ಯಕ್ರಮದಡಿ, ಇತ್ತೀಚೆಗೆ ಅಂಜನಾಪುರ ಜಲಾಶಯಕ್ಕೆ 12 ಲಕ್ಷ ಮೀನುಮರಿ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ಕೇವಲ 3ಲಕ್ಷ ಮೀನುಮರಿ ಮಾತ್ರ ಬಿಟ್ಟಿರುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಶಾಸಕ ಕುಮಾರಸ್ವಾಮಿಯವರು ಧ್ವನಿಗೂಡಿಸಿದರು. 

 ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಅವರು ಮಾತನಾಡಿ, ಜಿಲ್ಲೆಗೆ ಸಂಪೂರ್ಣ ಸ್ವಚ್ಛತಾ ಯೋಜನೆಯಡಿ ಪುರಸ್ಕಾರ ಲಭಿಸಿದೆ ಆದರೆ, ಬಹಳಷ್ಟು ಕಡೆ ನಿರ್ಮಾಣವಾಗಿರುವ ಶೌಚಾಲಯಗಳನ್ನು ಬೇರೆ ಉದ್ಧೇಶಕ್ಕೆ ಬಳಸಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಬಿಜ್ಜೂರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT