ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ ಬೆಲೆ ಇಳಿಮುಖ: ರೆಸಿಡೆಕ್ಸ್

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಲವಾರು ಕಾರಣಗಳಿಗಾಗಿ ನಗರಗಳಲ್ಲಿ ನೆಲೆಸಿ, ದಿನೇ ದಿನೇ ಬೆಲೆ ಏರಿಕೆ ಮಧ್ಯೆ ಬೇಯುತ್ತ, ಸ್ವಂತ ಮನೆಯ ಕನಸು ಎಂದು ನನಸಾಗುವುದೋ ಎಂದು ಹಂಬಲಿಸುವವರಿಗೊಂದು ಸಂತಸ ಸುದ್ದಿ ತಂದಿದೆ ಈ ಬಾರಿಯ ರಾಷ್ಟ್ರೀಯ ವಸತಿ ಬ್ಯಾಂಕ್‌ನ (ಎನ್‌ಎಚ್‌ಬಿ) ತ್ರೈಮಾಸಿಕ ವರದಿ `ರೆಸಿಡೆಕ್ಸ್'.

ಈ ವರದಿ ಪ್ರಕಾರ ದೇಶದ ಪ್ರಮುಖ 26 ನಗರಗಳ ಪೈಕಿ ದೆಹಲಿ ಮತ್ತು ಮುಂಬೈ ಸೇರಿದಂತೆ 22 ನಗರಗಳಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಮನೆಗಳ ಮೌಲ್ಯ ಇಳಿಮುಖವಾಗಿದೆ.

ಬಡ್ಡಿದರ ಏರಿಕೆ, ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಗೃಹಸಾಲ ಕುರಿತಾದ ಬಿಗಿಯಾದ ಕ್ರಮಗಳು, ಡಾಲರ್ ಎದುರು ಭಾರಿ ಪ್ರಮಾಣದಲ್ಲಿ ಕುಸಿದ ರೂಪಾಯಿ ಮೌಲ್ಯ ಮತ್ತು ಅದರ ಪರಿಣಾಮದಿಂದ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆ ಈ ಎಲ್ಲ ಕಾರಣಗಳು ವಸತಿ ನಿರ್ಮಾಣ ಕ್ಷೇತ್ರದ ಮೇಲೆ ಬೀರಿರುವ ತೀವ್ರತರದ ಪರಿಣಾಮದಿಂದಾಗಿ ಈ ಬೆಳವಣಿಗೆ ಕಂಡುಬಂದಿದೆ.

ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿನ ಬೇಡಿಕೆಗೆ ಹೋಲಿಸಿದರೆ ಈ ಬಾರಿ ಮನೆಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಬಹುತೇಕ ನಗರಗಳಲ್ಲಿ ಇದೇ ಪರಿಸ್ಥಿತಿ ಕಂಡುಬಂದಿದೆ. ಈ ಕುಸಿತ ಪ್ರಮಾಣ ಮುಂಬೈಯಲ್ಲಿ ಶೇ (ಮೈನಸ್) -0.45 ರಿಂದ ಲೂಧಿಯಾನಾದಲ್ಲಿ ಶೇ  (ಮೈನಸ್) -5.99ರವರೆಗೆ ಕಾಣಿಸಿಕೊಂಡಿದೆ ಎನ್ನುತ್ತದೆ ಈ ಸಮೀಕ್ಷಾ ವರದಿ.

ವಿವಿಧ ನಗರಗಳಲ್ಲಿ ಕಂಡುಬಂದಿರುವ ಶೇಕಡಾವಾರು ಇಳಿಕೆ ಮೌಲ್ಯ ಇಂತಿದೆ: ಇಂಧೋರ್ (ಶೇ -5.64), ವಿಜಯವಾಡ (ಶೇ -5.43), ಹೈದರಾಬಾದ್ (ಶೇ -4.55), ಕೊಲ್ಕತ್ತ(ಶೇ -4.06), ಗುವಾಹಟಿ (ಶೇ -3.92), ಕೊಚ್ಚಿ (ಶೇ -3.37), ಪಟ್ನಾ(ಶೇ -3.29), ಕೊಯಮತ್ತೂರು (ಶೇ -3.26), ಅಹಮದಾಬಾದ್ (ಶೇ -3.13), ಪರಿಧಾಬಾದ್(ಶೇ -2.42), ಚೆನ್ನೈ (ಶೇ -2.26), ಜೈಪುರ(ಶೇ -1.79), ದೆಹಲಿ (ಶೇ -1.49), ಭೂಪಾಲ್ (ಶೇ -1.30).

2013ರ ಏಪ್ರಿಲ್ -ಜೂನ್ ಮಧ್ಯದ ಅವಧಿಯಲ್ಲಿ ದೇಶದ ನಾಲ್ಕು ನಗರಗಳಲ್ಲಿ ಮಾತ್ರ ಮನೆಗಳ ಮೌಲ್ಯ ಏರಿಕೆ ಕಂಡುಬಂದಿದೆ. ಅದು ಡೆಹರಾಡೂನ್‌ನಲ್ಲಿ ಕನಿಷ್ಠ ಶೇ 0.55ರಷ್ಟಿದ್ದರೆ, ನಾಗಪುರದಲ್ಲಿ ಗರಿಷ್ಠ ಶೇ 3.07ರಷ್ಟು ಏರಿಕೆಯಾಗಿದೆ.

2007ರ ತ್ರೈಮಾಸಿಕ ಅವಧಿಯಲ್ಲಿದ್ದ ಮನೆಗಳ ಮೌಲ್ಯಗಳ ಆಧಾರ ಮೇಲೆ ಎನ್‌ಎಚ್‌ಬಿ  ತಯಾರಿಸಿರುವ ಈ ವರದಿಯಲ್ಲಿ ದೆಹಲಿಯ `ಆಸ್ತಿ ವ್ಯವಹಾರಗಳ ಸೂಚ್ಯಂಕ'(ಇಂಡೆಕ್ಸ್) ಗುರಗಾಂವ್, ನೋಯಿಡಾ, ಗ್ರೇಟರ್ ನೋಯಿಡಾ ಮತ್ತು ಗಾಜಿಯಾಬಾದ್ ನಗರಗಳನ್ನು ಒಳಗೊಂಡಿದೆ.

ಬೆಲೆ ಇಳಿಕೆ ಪರಿಣಾಮ
ಏರುತ್ತಿರುವ ಗೃಹಸಾಲ ಬಡ್ಡಿದರಗಳು ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ನಗರ ಪ್ರದೇಶಗಳ ಗ್ರಾಹಕರು ಮನೆ ಖರೀದಿಗೆ ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರಾಟವಾಗದೆ ಹಾಗೇ ಉಳಿದಿರುವ ಮನೆಗಳ ಸಂಖ್ಯೆ ಹೆಚ್ಚುತ್ತಾ ಇದೆ ಎನ್ನುತ್ತಾರೆ `ಎನ್‌ಎಚ್‌ಬಿ' ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ.ವರ್ಮಾ.

ಅಲ್ಲದೇ, ಕಟ್ಟಡ ನಿರ್ಮಾಣದಾರರು ಸಾಲ ಮರುಪಾವತಿ ಹೊಣೆಗಾರರು ಆಗಿರುವ ಜತೆಗೆ ಈಗಾಗಲೇ ಆರಂಭಿಸಿರುವ ಯೋಜನೆಯನ್ನು ಪೂರ್ಣಗೊಳಿಸಲು ಅವಶ್ಯಕವಾದ ಹಣದ ಪೂರೈಕೆದಾರರು ಆಗಿರುತ್ತಾರೆ. ಆದ್ದರಿಂದ ಅವರು ತಮ್ಮ ಅಗತ್ಯಗಳಿಗಾಗಿ ಅನಿವಾರ್ಯವಾಗಿ ಬೆಲೆ ತಗ್ಗಿಸಿ ಮನೆಗಳನ್ನು ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ವರ್ಮಾ.

ಗ್ರಾಹಕರನ್ನು ಬಹಳವಾಗಿ ಸೆಳೆಯುವಷ್ಟರ ಮಟ್ಟಿಗೇನೂ ಮನೆಗಳ ಮೌಲ್ಯ ಕುಸಿತ ಆಗಿಲ್ಲ. ಆದರೂ, ಈಗಿನದ್ದು ಖರೀದಿದಾರರ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಸದ್ಯದ ಆರ್ಥಿಕ ಪರಿಸ್ಥಿತಿ ಬದಲಾವಣೆಯಾಗದೆ ಹೋದರೆ ಕಡಿಮೆ ಬೆಲೆಯಲ್ಲಿ ಮನೆ ಖರೀದಿಸಬೇಕೆನ್ನುವ ತುಡಿತ ಹೊಂದಿರುವವರಿಗೆ ಸುಯೋಗ ಒದಗಿ ಬರಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೂಡಿಕೆದಾರರು ಈ ಕ್ಷೇತ್ರ ತೊರೆಯಲಿದ್ದಾರೆ ಎನ್ನುತ್ತಾರೆ ಆಸ್ತಿ ಸಲಹಾ ಸಂಸ್ಥೆ `ಕುಶಮನ್ ಅಂಡ್ ವೆಕ್‌ಫೀಲ್ಡ್'ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜಯ ದತ್.

ದತ್ ಅವರ ವಾದಕ್ಕೆ ಪ್ರತಿವಾದ ಮಂಡಿಸುವ ವರ್ಮಾ ಅವರು, `ಹಾಗೇನಾದರೂ ಆದರೆ ಮನೆಗಳ ಬೆಲೆ ಕುಸಿತ ಕಟ್ಟಡ ನಿರ್ಮಾಣದಾರ ಮತ್ತು ಕೊನೆಯ ಗ್ರಾಹಕ ಈ ಇಬ್ಬರಿಗೂ ವರವಾಗಿ ಪರಿಣಮಿಸಲಿದೆ. ಇದರಿಂದ ಹಣದ ಮೌಲ್ಯ ಏರಿಕೆಯಾಗುತ್ತದೆ. ಅಲ್ಪಾವಧಿಯಲ್ಲಿ ಅಧಿಕವಲ್ಲದೇ ಹೋದರು, ಹಣ ಸಂಪಾದಿಸುವ ಅವಕಾಶ ಒದಗುತ್ತದೆ. ಇದು ಮನೆಗಳನ್ನು ಕೊಳ್ಳುವವರಿಗೆ ಸಕಾರಾತ್ಮಕ ಅಂಶವಾಗುತ್ತದೆ' ಎನ್ನುತ್ತಾರೆ.

ಮನೆಗಳ ಬೆಲೆ ಕುಸಿದರೆ ಮನೆ ಖರೀದಿ ವ್ಯವಹಾರಗಳು ಹೆಚ್ಚುತ್ತವೆ. ಇದರಿಂದಾಗಿ ಈ ವಸತಿ ನಿರ್ಮಾಣ ಕ್ಷೇತ್ರಕ್ಕೆ ಹಣದ ಹರಿವು ಹೆಚ್ಚುತ್ತದೆ. 2008-2009ರಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ರಿಯಲ್ ಎಸ್ಟೆಟ್ ಕ್ಷೇತ್ರ ಬೆಲೆ ತಗ್ಗಿಸಿ ತನ್ನ ವಹಿವಾಟು ಹೆಚ್ಚಿಕೊಳ್ಳುವ ಮೂಲಕ ಈ ಸುಳಿಯಿಂದ ಹೊರಬಂದಿತ್ತು ಎಂಬುದನ್ನು ನೆನಪಿಸುತ್ತಾರೆ ವರ್ಮಾ.
 
ನಿಯಂತ್ರಣ ಪ್ರಾಧಿಕಾರ
ಲಾಭದ ಕಣಜದಂತೆ ರಿಯಲ್ ಉದ್ಯಮ ಬೆಳೆಯುತ್ತಿದ್ದರೆ ಮತ್ತೊಂದೆಡೆ ಕೆಲ ಕಂಪೆನಿಗಳು ಮೋಸದ ದಂಧೆಯಲ್ಲಿ ತೊಡಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಅವ್ಯವಹಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚಿಸಲು ನಿರ್ಧರಿಸಿದೆ. ಈ ಸಂಬಂಧ ವಿಧೇಯಕವನ್ನು ಸಿದ್ಧಪಡಿಸಿದೆ. ಇದರಿಂದ ಪಾರದರ್ಶಕ ವ್ಯವಹಾರ ನಡೆಯಲಿದ್ದು, ಭ್ರಷ್ಟತನಕ್ಕೆ ಕಡಿವಾಣ ಬೀಳಲಿದೆ ಎಂಬುದು ಸರ್ಕಾರದ ಆಭಿಪ್ರಾಯ.

ದೇಶದೆಲ್ಲಡೆ 27 ರಿಯಲ್ ಎಸ್ಟೆಟ್ ಕಂಪೆನಿಗಳ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 18 ಕಂಪೆನಿಗಳು ಸಾರ್ವಜನಿಕರಿಗೆ ಮೋಸ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ಕಂಪೆನಿಗಳು ಸಂಚಿತ ಹೂಡಿಕೆ ಯೋಜನೆ (Collective Inve-stment Scheme)ಅಡಿಯಲ್ಲಿ ಜನರಿಂದ ಹಣ ಸಂಗ್ರಹಿಸಿ ಬೋಗಸ್ ಮತ್ತು ನಕಲಿ ಹಕ್ಕು ಪತ್ರಗಳನ್ನು ನೀಡುತ್ತಿವೆ ಎಂಬ ಆರೋಪಗಳಿವೆ. ಇವುಗಳಲ್ಲಿ ಏಳು ಕಂಪೆನಿಗಳು ಜನರಿಗೆ ಮೋಸ ಮಾಡಿರುವ ಬಗ್ಗೆ `ಸೆಬಿ'ಗೆ ಸೂಕ್ತ ಸಾಕ್ಷ್ಯದಾರಗಳು ಲಭ್ಯವಾಗಿವೆ.

ಸೆಬಿಯ ನಿಯಮ ಮತ್ತು ನಿಬಂಧನೆಗಳನ್ನು ಗಾಳಿಗೆ ತೂರಿ ಜನರಿಂದ ಅಕ್ರವಾಗಿ ಹಣ  ಸಂಗ್ರಹಿಸಿರುವ ಎಂಟು ಕಂಪೆನಿಗಳ ವಿರುದ್ಧ `ಸೆಬಿ' ಕ್ರಮಕ್ಕೆ ಮುಂದಾಗಿದೆ.  ಅವ್ಯವಹಾರದ ಆರೋಪ ಹೊತ್ತಿರುವ ಇನ್ನೂ ಏಳು ಕಂಪೆನಿಗಳ ವಿರುದ್ಧ ತನಿಖೆ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT