ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಬೆಂಕಿ ಹಚ್ಚಿ ಐವರ ಸಜೀವ ದಹನ

Last Updated 19 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ಆಸ್ತಿ ಕಬಳಿಸುವ ದುರಾಸೆಯಿಂದ ಮನೆಗೆ ಬೆಂಕಿ ಹಚ್ಚಿ ಇಬ್ಬರು ಹಸುಳೆಗಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಸಜೀವ ದಹನ ಮಾಡಿರುವ ಘಟನೆ ತಾಲ್ಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ತೋಟದ ಮನೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಯಾದವ ಗೊಲ್ಲರ ಜನಾಂಗಕ್ಕೆ ಸೇರಿದ ಮನೆ ಯಜಮಾನಿ ಜುಂಜಮ್ಮ (78), ಇವರ ಪುತ್ರಿ ಗೋಡೆಕೆರೆ ಗ್ರಾ.ಪಂ. ಮಾಜಿ ಸದಸ್ಯೆ ಶಿವಮ್ಮ (45), ಅಳಿಯ ಕೃಷ್ಣಪ್ಪ (58), ಮುಮ್ಮಕ್ಕಳಾದ ಜೀವಂತ್ (4), ಗುರುಮೂರ್ತಿ (2) ಮೃತಪಟ್ಟ ನತದೃಷ್ಟರು. ಕೃಷ್ಣಪ್ಪನ ಇಬ್ಬರು ಪುತ್ರಿಯರ ಮಕ್ಕಳಾದ ಪುಟಾಣಿಗಳು ಅಜ್ಜಿ ಮನೆಗೆ ಇತ್ತೀಚೆಗಷ್ಟೆ ಬಂದಿದ್ದರು. ಕೃಷ್ಣಪ್ಪನ ಪುತ್ರ ಜಗದೀಶನ ದೇಹ ಬೆಂಕಿಯಲ್ಲಿ ಶೇ. 60ರಷ್ಟು ಸುಟ್ಟುಹೋಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮ್ಮ ಸಂಯುಕ್ತ ಜನತಾ ದಳದ ಕಾರ್ಯಕರ್ತೆ.

ಸೊಂಡೇನಹಳ್ಳಿ ಗೊಲ್ಲರಹಟ್ಟಿಯಿಂದ ಅರ್ಧ ಕಿ.ಮೀ. ದೂರದ ತೋಟದಲ್ಲಿರುವ ಒಂಟಿ ಮನೆಯಲ್ಲಿ ಈ ಕುಟುಂಬ ವಾಸವಿತ್ತು. ಸುಮಾರು 8 ಎಕರೆ ಜಮೀನಿನಲ್ಲಿ 300 ತೆಂಗಿನ ಗಿಡಗಳನ್ನು ಹೊಂದಿರುವ ಈ ಕುಟುಂಬ ಕೃಷಿ ಚಟುವಟಿಕೆ ಜತೆಗೆ ಬಿಡುವಿನ ದಿನಗಳಲ್ಲಿ ಹತ್ತಿರದ ಗಣಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಜುಂಜಮ್ಮನಿಗೆ ಗಂಡು ಮಕ್ಕಳು ಇಲ್ಲದ ಕಾರಣಕ್ಕೆ ತಮ್ಮ ಪುತ್ರಿ ಶಿವಮ್ಮನನ್ನು ತಿಪಟೂರು ತಾಲ್ಲೂಕಿನ ಬೆನ್ನಾಯಕನಹಳ್ಳಿಯ ಕೃಷ್ಣಪ್ಪನಿಗೆ ಮದುವೆ ಮಾಡಿ, ಮನೆ ಅಳಿಯನಾಗಿ ಇಟ್ಟುಕೊಂಡಿದ್ದರು. ಮೊದಲ ಪತ್ನಿ ತೀರಿ ಹೋಗಿದ್ದರಿಂದ ಕೃಷ್ಣಪ್ಪ ಶಿವಮ್ಮನನ್ನು ಮದುವೆಯಾಗಿ ಅತ್ತೆ ಮನೆಯಲ್ಲೇ ಇದ್ದರು.

ಆಸ್ತಿ ಪಾಲಿನ ವಿಚಾರದಲ್ಲಿ ಜುಂಜಮ್ಮ ಮತ್ತು ಇವರ ಸಹೋದರರಾದ ತಿಮ್ಮಯ್ಯ ನಡುವೆ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನ ಜಾವ 2.30ರ ಸಮಯದಲ್ಲಿ ದುಷ್ಕರ್ಮಿಗಳು ಹೆಂಚಿನ ಮನೆಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ್ದಾರೆ. ಹಿತ್ತಲಿನಲ್ಲಿದ್ದ ಹುಲ್ಲಿನ ಬಣವೆ ಹಾಗೂ ಕೊಟ್ಟಿಗೆಗೂ ಬೆಂಕಿ ಹಾಕಿದ್ದಾರೆ.

3.30ರ ಸಮಯದಲ್ಲಿ ಅದೇ ಮಾರ್ಗದಲ್ಲಿ ಬಂದ ಅದಿರು ಲಾರಿ ಚಾಲಕ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಸ್ಥರು ಬರುವಷ್ಟರಲ್ಲಿ ಐವರು ಸಜೀವ ದಹನವಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಜಗದೀಶನನ್ನು ಕಿಟಕಿ ಮೂಲಕವೇ ಹೊರಗೆಳೆದು ರಕ್ಷಿಸಿದ್ದಾರೆ. ಕೊಟ್ಟಿಗೆಗೆ ತಗುಲಿದ್ದ ಬೆಂಕಿ ನಂದಿಸಿ ಜಾನುವಾರುಗಳ ಪ್ರಾಣ ಉಳಿಸಿದ್ದಾರೆ. ಮನೆಯಲ್ಲಿದ್ದ ಕೊಬ್ಬರಿ, ಒಂದು ಬೈಕ್, ಒಂದು ಸೈಕಲ್, ಪೀಠೋಪಕರಣ ಸೇರಿದಂತೆ ಇಡೀ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

‘ಸಂಬಂಧಿಕರೇ ಆದ ತಿಮ್ಮಯ್ಯ ಮತ್ತು ಅವರ ಮಕ್ಕಳೇ ಈ ಕೃತ್ಯ ಎಸಗಿದ್ದಾರೆ. ಬೆಂಕಿಯ ಹೊಗೆ ಮನೆ ಆವರಿಸಿದಾಗ ಹೊರ ಬರಲು ಪ್ರಯತ್ನಿಸಿದೆ. ಆದರೆ, ಕಿಟಕಿ, ಬಾಗಿಲು ತೆರೆಯಲು ಆಗಲಿಲ್ಲ ಎಂದು ಗಾಯಾಳು ಜಗದೀಶ್ ತಿಳಿಸಿದ್ದಾರೆ.

ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ, ಆರೋಪಿಗಳೆಲ್ಲರನ್ನು ತಕ್ಷಣವೇ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ.ಎಸ್.ಹರ್ಷ ವಿಶೇಷ ತಂಡ ರಚಿಸಿದ್ದಾರೆ ಎಂದು ಎಎಸ್‌ಪಿ ಪಿ.ಕೆ.ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ಗ್ರಾಮಸ್ಥರು ಕೃಷ್ಣಪ್ಪನ ಹಿರಿಯ ಪತ್ನಿ ಮಗ ನಾಗೇಶ್ ಮೇಲೂ ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT