ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಬಾಡಿಗೆ ಭತ್ಯೆ ಪರಿಷ್ಕರಣೆ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು (ಎಚ್‌ಆರ್‌ಎ) 2001ರ ಜನಗಣತಿ ಪ್ರಕಾರ ನಾಲ್ಕು ವರ್ಗಗಳಾಗಿ ಪುನರ್‌ವಿಂಗಡಿಸಿ ಹಣಕಾಸು ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. 2012ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮನೆ ಬಾಡಿಗೆ ಭತ್ಯೆ ದರಗಳು ಪರಿಷ್ಕರಣೆ ಆಗಲಿವೆ.

ಜನಸಂಖ್ಯೆ ಹೆಚ್ಚಳದಿಂದಾಗಿ `ಡಿ~ ದರ್ಜೆಯ 17 ನಗರ ಮತ್ತು ಪಟ್ಟಣಗಳು `ಸಿ~ ದರ್ಜೆಯ ಸ್ಥಾನಮಾನಕ್ಕೆ ಅರ್ಹತೆ ಪಡೆದಿದ್ದು, ಅಂತಹ ಕಡೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಶೇ 7ರಿಂದ 10ರಷ್ಟು ಹೆಚ್ಚಾಗಲಿದೆ. ಉಳಿದಂತೆ ಇತರ ದರ್ಜೆಗಳಲ್ಲಿನ ನಗರಗಳ ಪುನರ್‌ವಿಂಗಡಣೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹೀಗಾಗಿ ಎ, ಬಿ ಮತ್ತು ಸಿ ದರ್ಜೆಯ ನಗರಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಚ್.ಆರ್.ಎ ಮತ್ತು ನಗರ ಪರಿಹಾರ ಭತ್ಯೆಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ.
ಇದುವರೆಗೂ 1991ರ ಜನಗಣತಿ ಪ್ರಕಾರ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿತ್ತು. 2011ರ ಅಧಿಕಾರಿ ವೇತನ ಸಮಿತಿಯ ಶಿಫಾರಸುಗಳ ಪ್ರಕಾರ, 2001ರ ಜನಗಣತಿಯನ್ನು ಮಾನದಂಡವಾಗಿ ಇಟ್ಟುಕೊಂಡು ನಗರಗಳನ್ನು ಪುನರ್ ವಿಂಗಡಿಸಲಾಗಿದೆ.

`ಡಿ~ ದರ್ಜೆಯಲ್ಲಿದ್ದ ಬಸವಕಲ್ಯಾಣ, ಚಾಮರಾಜನಗರ, ಚಿಕ್ಕಬಳ್ಳಾಪುರ, ಇಳಕಲ್, ಜಮಖಂಡಿ, ಹಾವೇರಿ, ಕೊಳ್ಳೇಗಾಲ, ಕೊಪ್ಪಳ, ಮಡಿಕೇರಿ, ಸಾಗರ, ಶಹಾಬಾದ್, ಸಿಂಧನೂರು, ಶಿರಾ, ಶಿರಸಿ, ತಿಪಟೂರು, ಉಡುಪಿ ಮತ್ತು ಯಾದಗಿರಿ ನಗರ/ಪಟ್ಟಣಗಳು ಪುನರ್ ವಿಂಗಡಣೆಯಿಂದ `ಸಿ~ ದರ್ಜೆಯ ನಗರ/ಪಟ್ಟಣಗಳಾಗಿ ಮೇಲ್ದರ್ಜೆಗೆ ಏರಿವೆ.

ಈ ನಗರ/ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಶೇ 7ರಷ್ಟು ಮನೆ ಬಾಡಿಗೆ ಭತ್ಯೆ ಪಡೆಯುತ್ತಿದ್ದಾರೆ. ಪರಿಷ್ಕೃತ ಆದೇಶದಿಂದ ಇವರು ಕೂಡ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಶೇ 10 ರಷ್ಟು ಎಚ್.ಆರ್.ಎ ಪಡೆಯಲಿದ್ದಾರೆ.

ಬೆಂಗಳೂರು ನಗರ ಮಾತ್ರ ರಾಜ್ಯದಲ್ಲಿ `ಎ~ ದರ್ಜೆಯ ನಗರವಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಶೇ 25ರಷ್ಟು ಎಚ್.ಆರ್.ಎ ನಿಗದಿ ಮಾಡಲಾಗಿದೆ. ಅದೇ ರೀತಿ `ಬಿ~ ದರ್ಜೆಯ ನಗರಗಳಲ್ಲಿನ ಸರ್ಕಾರಿ ನೌಕರರಿಗೆ ಶೇ 16ರಷ್ಟು, `ಸಿ~ ದರ್ಜೆ ನಗರಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಶೇ 10ರಷ್ಟು ಮತ್ತು `ಡಿ~ ದರ್ಜೆಯ ನಗರಗಳಲ್ಲಿನ ಸಿಬ್ಬಂದಿಗೆ ಶೇ 7ರಷ್ಟು ಎಚ್.ಆರ್.ಎ ನೀಡಲಾಗುತ್ತಿದೆ.

ಸ್ವಾಗತ: 2001ರ ಜನಗಣತಿ ಪ್ರಕಾರ ನಗರಗಳನ್ನು ಪುನರ್‌ವಿಂಗಡಿಸಿದ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಯು.ಡಿ.ನರಸಿಂಹಯ್ಯ ಸ್ವಾಗತಿಸಿದ್ದಾರೆ.

ನಗರಗಳ ವರ್ಗೀಕರಣ

`ಎ~ ವರ್ಗ  (25 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ)
 ಬೆಂಗಳೂರು
`ಬಿ~ ವರ್ಗ (5 ಲಕ್ಷದಿಂದ 25 ಲಕ್ಷ ಜನಸಂಖ್ಯೆ)
 ಮೈಸೂರು ಮತ್ತು ಹುಬ್ಬಳ್ಳಿ- ಧಾರವಾಡ
`ಸಿ~ ವರ್ಗ  (50 ಸಾವಿರದಿಂದ 5 ಲಕ್ಷದವರೆಗೆ)
 ಬೆಳಗಾವಿ, ಬಳ್ಳಾರಿ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ಬಸವಕಲ್ಯಾಣ, ಭದ್ರಾವತಿ, ಬೀದರ್, ವಿಜಾಪುರ, ಚಾಮರಾಜನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿಂತಾಮಣಿ, ಚಿತ್ರದುರ್ಗ, ದಾಂಡೇಲಿ, ದೊಡ್ಡಬಳ್ಳಾಪುರ, ಗದಗ, ಬೆಟಗೇರಿ, ಗಂಗಾವತಿ, ಗೋಕಾಕ, ಹರಿಹರ, ಹಾಸನ, ಹಾವೇರಿ, ಹೊಸಪೇಟೆ, ಇಳಕಲ್, ಜಮಖಂಡಿ, ಕಾರವಾರ, ಕೋಲಾರ, ಕೊಳ್ಳೇಗಾಲ, ಕೊಪ್ಪಳ, ಮಡಿಕೇರಿ, ಮಂಡ್ಯ, ನಿಪ್ಪಾಣಿ, ರಬಕವಿ ಬನಹಟ್ಟಿ, ರಾಯಚೂರು, ರಾಮನಗರ, ರಾಣೆಬೆನ್ನೂರು, ರಾಬರ್ಟ್‌ಸನ್‌ಪೇಟೆ, ಸಾಗರ, ಶಹಾಬಾದ್, ಶಿವಮೊಗ್ಗ, ಸಿಂಧನೂರು, ಶಿರಾ, ಶಿರಸಿ, ತಿಪಟೂರು, ತುಮಕೂರು, ಉಡುಪಿ, ಯಾದಗಿರಿ.

`ಡಿ~ ವರ್ಗ ಪಟ್ಟಣಗಳು (50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ   ಇರುವ ಇತರೆ ಎಲ್ಲಾ ಸ್ಥಳಗಳು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT