ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಣೆಗೆ ಪರವಾನಗಿ ಪತ್ರ: ಪ್ರತಿಭಟನೆ

Last Updated 11 ಜನವರಿ 2012, 6:20 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹೊನ್ನೂರು ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಪೂರೈಕೆ ನೆಪದಲ್ಲಿ ಅನಧಿಕೃತ ಮರಳು ತುಂಬಿದ ಟ್ರ್ಯಾಕ್ಟರ್‌ಗಳನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ತುಂಬಲು ದಿನಾಂಕ, ಸ್ಥಳ ಮತ್ತು ಸಮಯ ಯಾವುದೇ ಮಾಹಿತಿಯನ್ನು ಪರವಾನಿಗೆ ಪತ್ರದಲ್ಲಿ ನಮೂದಿಸದೆ ಪಾಸ್‌ಗಳನ್ನು ತಹಸೀಲ್ದಾರರು ನೀಡಿದ್ದಾರೆ.
 
ಅನೇಕ ದಿನಗಳಿಂದ ರಾತ್ರೋ-ರಾತ್ರಿ  ಹೊನ್ನೂರು ಗ್ರಾಮದ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬಿ ಸಾಗಿಸಲಾಗುತ್ತಿತ್ತು. ಅನುಮಾನಗೊಂಡ ಗ್ರಾಮಸ್ಥರು ಟ್ರ್ಯಾಕ್ಟರ್‌ಗಳನ್ನು ತಡೆದು ಪರವಾನಗಿ ಪತ್ರಗಳನ್ನು  ಪರಿಶೀಲಿಸಿದಾಗ ತಹಸೀಲ್ದಾರ ಕಚೇರಿಯ ತಪ್ಪುಗಳು ಬಹಿರಂಗ ಗೊಂಡಿವೆ.

ಕೆ.ಆರ್.ಐ.ಡಿ.ಎಲ್ ಸಹಾಯಕ ನಿರ್ದೇಶಕ ಕಚೇರಿಯ ಕಟ್ಟಡ ಕಾಮಗಾರಿಗಳಿಗೆ ಮರಳು ಪೂರೈಕೆಗಾಗಿ 100 ಪಾಸ್ ಪಡೆದು ರಾಯಲ್ಟಿ ಕಟ್ಟಲಾಗಿದೆ. ತಹಸೀಲ್ದಾರ ಕೊಟ್ಟ ಪಾಸುಗಳಲ್ಲಿ ದಿನಾಂಕ, ಸ್ಥಳ ಮತ್ತು ಸಮಯ ಖಾಲಿ ಬಿಡಲಾಗಿದ್ದನ್ನು ಗಮನಿಸಿ  ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಖಾಲಿ ಪಾಸ್‌ಗಳಿಗೆ ತಹಸೀಲ್ದಾರ ಬಸವರಾಜ ಸೋಮಣ್ಣನವರ ಸಹಿ ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ.

`ಬಡವರು ಸ್ವಂತ ಮನೆ ಕಟ್ಟುವುದಕ್ಕೆ ಒಂದು ಟ್ರ್ಯಾಕ್ಟರ್ ಮರಳು ತುಂಬಿದರೆ ಕೇಸ್ ಹಾಕ್ತೀರಿ ಖಾಲಿ ಪಾಸ್‌ಗಳ ಮೂಲಕ ಅಕ್ರಮ ಮರಳು ಸಾಗಣಿಕೆಗೆ ತಾಲ್ಲೂಕು ಆಡಳಿತವೇ ಕುಮ್ಮಕ್ಕು ನೀಡುತ್ತಿದೆ~ ಎಂದು ಗ್ರಾಮದ ಮುಖಂಡರಾದ ಎ.ಕೆ. ಹೊನ್ನೂರಪ್ಪ, ಎಲ್. ರಾಮಣ್ಣ, ಹಮ್ಮಿಗಿ ವೀರಣ್ಣ ಮತ್ತು ಹಮ್ಮಿಗಿ ಹನುಮಂತಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ ಬಸವರಾಜ ಸೋಮಣ್ಣನವರ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರೆಲ್ಲ ಮುತ್ತಿಗೆ ಹಾಕಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ `ನಮ್ಮದು ತಪ್ಪಾಗಿದೆ~ ಎಂದು ಒಪ್ಪಿಕೊಂಡರು.

ಕಚೇರಿಯ ಶಿರಸ್ತೇದಾರರು ಪಾಸ್‌ಗಳಲ್ಲಿ ಸರಿಯಾಗಿ ಮಾಹಿತಿ ನಮೂದಿಸದೇ ಇರುವುದರಿಂದ ತಪ್ಪಾಗಿದೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

 ಕಾನೂನುಬದ್ಧವಾಗಿ ತಾಲ್ಲೂಕು ಆಡಳಿತ ಕಾರ್ಯ ನಿರ್ವಹಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಅಕ್ರಮವಾಗಿ ಮರಳು ಸಾಗಣೆಗೆ ಅನುಮತಿ ನೀಡಿದರೆ ಹೋರಾಟ ಮತ್ತೆ ಆರಂಭವಾಗಲಿದೆ ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT