ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಾಟ ತಡೆಯಲು ಆದೇಶ

Last Updated 25 ಡಿಸೆಂಬರ್ 2012, 8:58 IST
ಅಕ್ಷರ ಗಾತ್ರ

ಚಿತ್ತಾಪುರ: ಕಾಗಿಣಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ಮಾಡಿ ಮರಳು ಸಾಗಾಟ ತಡೆಯಲು ಮುಂದಾಗಬೇಕು ಎಂದು ತಹಶೀಲ್ದಾರ್ ಬಾಲರಾಜ್ ದೇವರಖದ್ರಾ ಅವರು ಕಂದಾಯ ನಿರೀಕ್ಷಕರಿಗೆ, ಗ್ರಾಮ ಲೇಖಪಾಲಕರಿಗೆ ತಾಕೀತು ಮಾಡಿದ್ದಾರೆ.

ಭಾನುವಾರ ಮುಂಜಾನೆ ಪಶುಸಂಗೋಪನಾ ಸಚಿವ ರೇವೂನಾಯಕ ಬೆಳಮಗಿ ಅವರು ಭಾಗೋಡಿ ಗ್ರಾಮಕ್ಕೆ ಭೇಟಿ ನೀಡುವ ಮುಂಚೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಅವರು, ಮರಳು ಸಾಗಾಟ ಮಾಡಲು ನದಿಯಲ್ಲಿ ಅಪಾರ ಸಂಖ್ಯೆಯಲ್ಲಿ ನಿಂತಿರುವ ಟ್ರ್ಯಾಕ್ಟರ್‌ಗಳನ್ನು ನೋಡಿ ಬೆಚ್ಚಿ ಬಿದ್ದರು. ಯಾರ ಅಂಜಿಕೆ, ಭಯ ಇಲ್ಲದೆ ಜನರು ಮರಳು ಸಾಗಾಟ ದಂಧೆಯಲ್ಲಿ ನಿರತರಾಗಿದ್ದರು.

ಅದನ್ನು ನೋಡಿದ ತಹಶೀಲ್ದಾರ್ ಬಾಲರಾಜ್ ಅವರು, ಕಂದಾಯ ನಿರೀಕ್ಷಕರಿಗೆ, ಗ್ರಾಮ ಲೇಖಪಾಲಕರಿಗೆ ದೂರವಾಣಿ ಮೂಲಕ ಮಾತನಾಡಿ ಇಷ್ಟೊಂದು ರಾಜಾರೋಷವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಭಾಗೋಡಿ ಹತ್ತಿರ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂದು ಅನೇಕ ದೂರುಗಳು ಬಂದಿವೆ. ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಗರಂ ಆಗಿದ್ದಾರೆ. ಯಾವುದೇ ನೆಪ ಹೇಳದೆ ಅಕ್ರಮ ಮರಳು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ತಹಶೀಲ್ದಾರ್ ಅವರು ಕಂದಾಯ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದರು.

ಅಕ್ರಮವಾಗಿ ಮರಳು ಸಾಗಾಟ ಎಲ್ಲೆಲ್ಲಿ ನಡೆಯುತ್ತಿದೆ ಎಂದು ನಿಖರವಾಗಿ ಪತ್ತೆ ಮಾಡಬೇಕು. ಅಕ್ರಮ ದಂಧೆ ಮಾಡುತ್ತಿರುವ ಜನರಿಗೆ ತಾಲ್ಲೂಕು ಆಡಳಿತದ ಬಿಸಿ ಮುಟ್ಟಿಸಬೇಕು. ಮರಳು ತುಂಬಿದ ವಾಹನಗಳನ್ನು ಕಂಡರೆ ಅವುಗಳನ್ನು ಹಿಡಿದು ಅಧಿಕ ಪ್ರಮಾಣದ ದಂಡ ವಿಧಿಸಬೇಕು.

ಅಕ್ರಮ ಮರಳು ಸಾಗಾಟ ಮಾಡುವ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಎಲ್ಲಾ ವಾಹನಗಳನ್ನು ಜಪ್ತಿ ಮಾಡಿಕೊಂಡು ಸಂಬಂಧಿತ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದು, ಜಪ್ತಿಯಾದ ವಾಹನಗಳನ್ನು ಪೊಲೀಸ್ ಠಾಣೆಗೆ ರವಾನಿಸಿ, ಅಪರಾಧ ಪ್ರಕರಣ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT