ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಯ ಸುತ್ತಮುತ್ತ...

ಅಕ್ಷರ ಗಾತ್ರ

ಡಾ. ವಿ. ಎಸ್. ಆಚಾರ್ಯರು ತಮ್ಮ ಸರಳತೆ ಮತ್ತು ಸಜ್ಜನಿಕೆಗಳ ಮೂಲಕ ಮನ್ನಣೆಗೆ ಪಾತ್ರರಾದ ರಾಜಕಾರಣಿ. ನಮ್ಮ ಬಹುಪಾಲು ರಾಜಕಾರಣಿಗಳ ನಡೆ-ನುಡಿಗಳು ಎಷ್ಟು ಅಪಮೌಲ್ಯಕ್ಕೆ ಒಳಗಾಗಿವೆಯೆಂದರೆ, ನಾವು ತಾತ್ವಿಕವಾಗಿ ವಿರೋಧಿಸುವವರನ್ನೂ ವೈಯಕ್ತಿಕ ನಡವಳಿಕೆಗಾಗಿ ಮೆಚ್ಚಿಕೊಂಡು ಪ್ರಶಂಸೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ;

ಅಲ್ಲದೆ, ನಮಗೆ ಒಪ್ಪಿಗೆಯಾಗದ ತತ್ವಾನುಬದ್ಧತೆಯಿದ್ದವರು ಅವರ ತತ್ವಕ್ಕೆ ಪ್ರಾಮಾಣಿಕರಾಗಿದ್ದರೂ ಸಾಕು ಎನ್ನುವಷ್ಟರ ಮಟ್ಟಿಗೆ ರಿಯಾಯಿತಿಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಈ ಮಾತುಗಳು ವಿ.ಎಸ್. ಆಚಾರ್ಯ ಅವರ ಮಟ್ಟಿಗಂತೂ ನಿಜವಾಗಿವೆ.

ವಿ.ಎಸ್.ಆಚಾರ್ಯರ ಮರಣಾನಂತರ ತುಮಕೂರು ವಿಶ್ವವಿದ್ಯಾಲಯದ ಪ್ರಸಾರಾಂಗವು `ಮರ್ಯಾದಾ ಪುರುಷೋತ್ತಮ~ ಎಂಬ ಈ ಗ್ರಂಥವನ್ನು ಪ್ರಕಟಿಸಿದೆ. ಪ್ರಕಟಣೆಯ ಉಚಿತಾನುಚಿತ ಪ್ರಶ್ನೆಗಳನ್ನು ಉತ್ತರಿಸಿಕೊಳ್ಳುವುದಕ್ಕೆ ಮುಂಚೆ ಈ ಗ್ರಂಥದ ಒಟ್ಟು ಸ್ವರೂಪದ ಬಗ್ಗೆ ಗಮನ ಕೊಡೋಣ.
 
ಎಂಟು ವಿಭಾಗಗಳನ್ನು ಒಳಗೊಂಡಿರುವ ಈ ಗ್ರಂಥವು ಆಚಾರ್ಯರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ವಿವರಗಳನ್ನು ವಿವಿಧ ವ್ಯಕ್ತಿಗಳ ನೋಟದ ಮೂಲಕ ದಾಖಲಿಸುತ್ತದೆ.

ಭಾಗ ಒಂದರಲ್ಲಿ- ವಿ.ಎಸ್.ಆಚಾರ್ಯರ ಜೀವನಯಾನವನ್ನು ಚಿತ್ರಿಸುವ ಲೇಖನವಿದೆ. ಇದನ್ನು ವೇಣುಗೋಪಾಲ್ ಅವರು ಆಂಗ್ಲ ಭಾಷೆಯಲ್ಲಿ ಬರೆದಿದ್ದು ಗೀತಾ ವಸಂತ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆದಿಪರ್ವ, ಕಾಲೇಜು ಪರ್ವ, ಸಂಸಾರ ಪರ್ವ, ಉದ್ಯೋಗ ಪರ್ವ- ಇವೇ ಮುಂತಾಗಿ `ಪರ್ವ~ಗಳಲ್ಲಿ ಜೀವನಯಾನವನ್ನು ವಿಂಗಡಿಸುವ ಮೂಲಕ ಮಹಾಭಾರತದ ಪರ್ವಗಳ ಮಹತ್ವವನ್ನು `ತೊಡಿಸಲು~ ಪ್ರಯತ್ನಿಸಿದ್ದರೂ ಈ ಬರಹವು ಆಚಾರ್ಯರ ಜೀವನದ ವಿವರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಮುಂದಿನ ಭಾಗಗಳಲ್ಲಿ ಕುಟುಂಬದವರು, ಗುರುಹಿರಿಯರು, ಸಮಕಾಲೀನರು, ಸಮೀಪದಿಂದ ಬಲ್ಲ ಇತರರು ಕಟ್ಟಿಕೊಟ್ಟ `ವ್ಯಕ್ತಿಚಿತ್ರ~ ಬರಹಗಳಿವೆ. ಈ ಬರಹಗಳು ಕೆಲವೊಮ್ಮೆ ಪುನರಾವರ್ತನೆಯ ದೋಷಕ್ಕೆ ಒಳಗಾಗುತ್ತವೆಯೆಂದು ಅನ್ನಿಸಿದರೂ ಈ ಪುನರಾವರ್ತನೆಯು ಆಚಾರ್ಯರ ಸರಳ, ಸೌಜನ್ಯದ ನಡವಳಿಕೆಯ ವಿವರಗಳಿಗೇ ಮಿತಗೊಂಡಿರುವುದು ಸಮಾಧಾನ ತರುತ್ತದೆ.

ಅನುಭವದ ವಿವರಗಳಲ್ಲಿ ಅನೇಕ ಲೇಖನಗಳು ವಿಭಿನ್ನ ಮಾಹಿತಿ ನೀಡುವುದು ಮೆಚ್ಚಬೇಕಾದ ಅಂಶವಾಗಿದೆ. ಮೈದುಂಬಿದ ಪ್ರಶಂಸೆಯ ಭಾರ ಹೊತ್ತ ಈ ಬರಹಗಳಲ್ಲಿ ಸಹಜವಾಗಿಯೇ ಭಾವನಾತ್ಮಕ ಅಂಶಕ್ಕೆ ಆದ್ಯತೆಯಿದೆ.

ಬಹುಪಾಲು ವಿ.ಎಸ್.ಆಚಾರ್ಯರ ಸಾಮಾಜಿಕ - ರಾಜಕೀಯ ವಲಯದವರ ಬರಹಗಳಿಂದ ತುಂಬಿರುವ ಈ ಗ್ರಂಥವು ಅಪವಾದವೆಂಬಂತೆ ಒಂದಿಬ್ಬರು ಅನ್ಯ ರಾಜಕೀಯ ಪಕ್ಷದವರ ಮತ್ತು ಸಂಘ ಪರಿವಾರ ದೂರದವರ ಲೇಖನಗಳನ್ನು ಒಳಗೊಂಡು `ನ್ಯಾಯಪರತೆ~ಯನ್ನು `ಪ್ರದರ್ಶಿಸಿದೆ!~.
 
ಸಂಘ ಪರಿವಾರದ ಸಿದ್ಧಾಂತ ಮತ್ತು ಬಿ.ಜೆ.ಪಿ. ಪಕ್ಷಗಳಾಚೆಗೆ ನಿಂತು ನೋಡಿದ ಈ ಕೆಲವರು ಸಹ (ಮೋಟಮ್ಮ, ಯು.ಆರ್. ಸಭಾಪತಿ, ಎ.ವಿ. ಪ್ರಸನ್ನ, ಅಂಬಳಿಕೆ ಹಿರಿಯಣ್ಣ, ಮಹಾಬಲೇಶ್ವರರಾವ್ - ಮುಂತಾದವರು) ಆಚಾರ್ಯರ ನಡವಳಿಕೆಯಲ್ಲಿ ಹುಳುಕನ್ನು ಹುಡುಕುವುದಿಲ್ಲ.
 
ಅವರ ಸರಳ, ಸಜ್ಜನಿಕೆಯನ್ನು ಮೆಚ್ಚದೆ ಮುಂದೆ ಹೋಗುವುದಿಲ್ಲ. ನಮ್ಮ ರಾಜಕಾರಣದಲ್ಲಿ ಸೌಜನ್ಯವೇ ಬಹುದೊಡ್ಡ `ಸಿದ್ಧಾಂತ~ವಾಗುವ ಹಂತಕ್ಕೆ ಪ್ರಜಾಪ್ರಭುತ್ವ ಬಂದು ತಲುಪಿಬಿಟ್ಟಿರುವುದು ವಿಷಾದನೀಯ ಸಂಗತಿಯೆಂದು ನನಗನ್ನಿಸುತ್ತದೆ. ಜನಪರವಾದ ಸಾಮಾಜಿಕ ಆರ್ಥಿಕ ಸಿದ್ಧಾಂತಗಳೇ ನೈತಿಕ ನೆಲೆಯ ಭಾಗವಾಗಬೇಕಿತ್ತು.

ಸಹಜ ನಡವಳಿಕೆಯಾಗಬೇಕಾದ ಸೌಜನ್ಯಕ್ಕೆ ಇಷ್ಟೊಂದು `ಬರ~ ಬರಬಾರದಿತ್ತು! ಅದೇನೇ ಇರಲಿ, ಈ ಗ್ರಂಥದ ಬಹುಪಾಲು ಲೇಖನಗಳಲ್ಲಿರುವ ಅಭಿಪ್ರಾಯ ಆಚಾರ್ಯರ ಸರಳ ಸಜ್ಜನಿಕೆಯ ನಡೆ-ನುಡಿಗೆ ಸಂಬಂಧಿಸಿರುವುದು ನಿಜ.

ಪ್ರಾತಿನಿಧಿಕವಾಗಿ ಕೆ.ವಿ.ಆಚಾರ್ಯರ ಈ ಮಾತುಗಳನ್ನು ನೋಡಿ: `ಸೌಮ್ಯವಾಗಿ ವಿಷಯ ಮಂಡನೆ ಮಾಡುವ ಕಲೆ, ಅಗಾಧ ಪಾಂಡಿತ್ಯ, ಸ್ವಪ್ರತಿಭೆಗಳಿಂದ ರಾಜಕೀಯದಲ್ಲಿ ತನ್ನ ಛಾಪು ಮೂಡಿಸಿದ ವ್ಯಕ್ತಿ ಡಾ. ವಿ.ಎಸ್. ಆಚಾರ್ಯ.
 
ರಾಜಕೀಯ ವಿರೋಧಿಗಳಿಗೂ ಸುಲಭವಾಗಿ ಎಟುಕುತ್ತಿದ್ದು, ರಾಜಕೀಯದಲ್ಲಿ ಸಮನ್ವಯತೆಯನ್ನು ಸಾಧಿಸಿದ್ದರು ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಿದ್ದರು~ (ಪುಟ - 113). ಡಾ. ಕೆ.ವಿ. ಆಚಾರ್ಯರ ಈ ಮಾತುಗಳೇ ಡಾ. ವಿ.ಎಸ್. ಆಚಾರ್ಯರನ್ನು ಕುರಿತ ಬಹುಪಾಲು ಬರಹಗಳ ಕೇಂದ್ರ ಪ್ರಜ್ಞೆಯಾಗಿವೆ.

ಆದರೆ, ಕುಟುಂಬ ವರ್ಗದವರ ಬರಹಗಳು ಉಳಿದವುಗಳಿಗಿಂತ ಸ್ವಾಭಾವಿಕವಾಗಿಯೇ ಸ್ವಲ್ಪ ಭಿನ್ನವಾಗಿವೆ. ಇವುಗಳಲ್ಲಿ ವಿ.ಎಸ್.ಆಚಾರ್ಯರ ಪತ್ನಿ ಶ್ರೀಮತಿ ಶಾಂತಾ ಮತ್ತು ಅಡಿಗೆ ಭಟ್ಟ ನಾರಾಯಣ ನಾವಡ ಅವರ ಸ್ವಾನುಭವಗಳು ನಿಜಕ್ಕೂ ಗಮನ ಸೆಳೆಯುತ್ತವೆ.
 
ನಾರಾಯಣ ನಾವಡ ಅವರು ಆಚಾರ್ಯರು ಮಂತ್ರಿಪದವಿಯಲ್ಲಿದ್ದರೂ ದುಂದು ವೆಚ್ಚಕ್ಕೆ ವಿರುದ್ಧವಾಗಿದ್ದ ಬಗ್ಗೆ, ವಿಧಾನ ಸಭೆಯಲ್ಲಿ `ಸೆಕ್ಸ್ ಫಿಲ್ಮ್~ ನೋಡಿದ ಪ್ರಕರಣದಿಂದ ನೊಂದ ಬಗ್ಗೆ, ತನಗೆ ಹೆಚ್ಚು ದುಡಿಮೆ ಬರುತ್ತದೆಯಾದ್ದರಿಂದ ಊರಿಗೆ ಕಳಿಸಿ ಎಂದು ಕೇಳಿದಾಗ ಪ್ರೀತಿಯಿಂದ ಬೀಳ್ಕೊಟ್ಟ ಬಗ್ಗೆ ಚೆನ್ನಾಗಿ ನಿರೂಪಿಸಿದ್ದಾರೆ.
 
ಪತ್ನಿ ಶ್ರೀಮತಿ ಶಾಂತಾ ಅವರು ಆಚಾರ್ಯರು ಗೃಹ ಮಂತ್ರಿಯಾಗಿದ್ದಾಗ ನಡೆದ ಪೊಲೀಸ್ ವರ್ಗಾವಣೆಯ ಪ್ರಸಂಗವನ್ನು ತೀವ್ರ ವಿಷಾದದಿಂದ ದಾಖಲಿಸಿದ್ದಾರೆ.

ಆಚಾರ್ಯರು ಕಷ್ಟ ಪಟ್ಟು ತಯಾರಿಸಿದ ವರ್ಗಾವಣೆಯ ಪಟ್ಟಿಯನ್ನು ಮೇಲಿನವರು (ಮುಖ್ಯಮಂತ್ರಿ?) ಪೂರ್ಣ ಬದಲಾಯಿಸಿ ಆದೇಶ ಹೊರಡಿಸಿದ್ದಾರೆ (ಈ ಸುದ್ದಿ ಆಗ ಚಾಲ್ತಿಯಲ್ಲಿತ್ತು). ಆಗ ಆಚಾರ್ಯರು ಮೌನ ವೇದನೆಯಲ್ಲಿ ನರಳುತ್ತಾರೆ. ಶಾಂತಾ ಅವರು ಈ ಪ್ರಸಂಗದ ಮೂಲಕ ಬಿ.ಜೆ.ಪಿ. ಸರ್ಕಾರದ ಕಾರ್ಯವೈಖರಿಯನ್ನು ಸಹಜವೆಂಬಂತೆ ಬಯಲು ಮಾಡಿದ್ದಾರೆ (ಅವರ ಉದ್ದೇಶ ತಮ್ಮ ಪತಿಯ ನ್ಯಾಯಯುತ ಶ್ರಮ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆಯಾದುದನ್ನು ಹೇಳುವುದಾಗಿತ್ತು).

ಇಲ್ಲಿ ನನಗೆ ಎದುರಾಗುವ ಪ್ರಶ್ನೆ ಬೇರೆ ರೀತಿಯದು. ನಿಜ; ಆಚಾರ್ಯರ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆದು ಅನ್ಯಾಯ ಮಾಡಲಾಯಿತು. ಆಗ ಗೃಹಮಂತ್ರಿಗಳು ಪ್ರತಿಭಟಿಸಲಿಲ್ಲ. ಬಹಿರಂಗವಾಗಿಯಲ್ಲದಿದ್ದರೂ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯಬಹುದಿತ್ತು. ಬರೆದ ಬಗ್ಗೆ ಮಾಹಿತಿಯಿಲ್ಲ.
 
ಹಾಗಾದರೆ ನಮ್ಮ ಸಮಾಜದಲ್ಲಿ ಸಜ್ಜನಿಕೆಯೆನ್ನುವುದು ಹೊಂದಾಣಿಕೆ ಮತ್ತು ಅಸಹಾಯಕತೆಗೆ ಹಾದಿ ಮಾಡಿಕೊಡಬೇಕೆ? ಸಜ್ಜನಿಕೆ ಮತ್ತು ನಿಷ್ಠುರತೆಗಳು ಒಟ್ಟಿಗೇ ಇರಲು ಸಾಧ್ಯವಿಲ್ಲವೆ? `ಸಾಧ್ಯ~ ಎಂದು ನಾನು ನಂಬಿದ್ದೇನೆ. ಅಸಹಾಯಕತೆ ಮತ್ತು ಹೊಂದಾಣಿಕೆಗಳಿಗೆ ಸಜ್ಜನಿಕೆಯು ಇನ್ನೊಂದು ಹೆಸರಾಗಬಾರದೆಂಬ ಎಚ್ಚರ ಮತ್ತು ವಿವೇಕ ಅಗತ್ಯವೆಂದು ಭಾವಿಸುತ್ತೇನೆ.

ಇಡೀ ಪುಸ್ತಕದಲ್ಲಿ ಉಪಯುಕ್ತವಾದ ಭಾಗವೆಂದರೆ `ಸದನ ಕಲಾಪ~. ವಿಧಾನ ಮಂಡಲದ ಚರ್ಚೆಗಳಲ್ಲಿ ಆಚಾರ್ಯರು ಭಾಗವಹಿಸಿದ ಯಥಾವತ್ತಾದ ದಾಖಲೆಯ ಭಾಗವಿದು. ಯಥಾವತ್ತಾದ ದಾಖಲೆಯಾದ್ದರಿಂದಲೇ ಅಧ್ಯಯನಕ್ಕೆ ಉಪಯುಕ್ತವಾದುದು.

ಆಚಾರ್ಯರ ಆಶಯ, ಅಭಿಪ್ರಾಯಗಳು ಅವರ ಮಾತುಗಳಲ್ಲೇ ಇರುವುದರಿಂದ ಅವರ ದೃಷ್ಟಿ-ಧೋರಣೆ, ಶಕ್ತಿ, ಮಿತಿ - ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು. ಆಚಾರ್ಯರ ಮಾತುಗಳ ಸುತ್ತಮುತ್ತ ಎದ್ದ ಪ್ರಶ್ನೆಗಳು, ಚರ್ಚೆಯ ಭಾಗಗಳು ಸಹ ಇದ್ದ ಹಾಗೆಯೇ ದಾಖಲಾಗಿದ್ದು ಇತರರ ಅಭಿಪ್ರಾಯಗಳೂ ಕ್ವಚಿತ್ತವಾಗಿ ತಿಳಿದು ಬರುತ್ತವೆ; ಚರ್ಚೆಯ ಒಟ್ಟು ಸಂದರ್ಭವನ್ನು ಕಟ್ಟಿಕೊಡುತ್ತವೆ.

ಆಚಾರ್ಯರ ನಿಧನಾನಂತರ ಗ್ರಂಥವಾದ್ದರಿಂದ ವಿಚಾರಗಳ ವಿಶ್ಲೇಷಣೆಗಿಂತ ವ್ಯಕ್ತಿತ್ವದ ವೈಭವೀಕರಣದ ಕಡೆಗೇ ಬಹುಪಾಲು ಬರಹಗಳು ವಾಲಿರುವುದು ಸ್ವಾಭಾವಿಕ. ವೈಯಕ್ತಿಕವಾಗಿಯಷ್ಟೇ ಅಲ್ಲ, ವೈಚಾರಿಕವಾಗಿಯೂ ಆಪ್ತರಾದವರ ಬರಹಗಳೇ ಹೆಚ್ಚಾಗಿರುವುದು ಈ ಅಂಶಕ್ಕೆ ಪೂರಕ.

ಇವರು ಹೇಳಿದ ಅಂಶಗಳು `ಅಸತ್ಯ~ ಎಂದು ನಾನು ಹೇಳುತ್ತಿಲ್ಲವಾದರೂ ವಿಶ್ಲೇಷಣೆಯ ಆಯಾಮದ ಗೈರು ಹಾಜರಿಯತ್ತ ಗಮನ ಸೆಳೆಯುತ್ತಿದ್ದೇನೆ. ಈ ಗ್ರಂಥದ ಹೆಸರನ್ನೇ ನೋಡಿ: `ಮರ್ಯಾದಾ ಪುರುಷೋತ್ತಮ~! ವಾಲ್ಮೀಕಿ ರಾಮಾಯಣದ ಶ್ರೀರಾಮನಿಗೆ ಮಾತ್ರ ಅನ್ವಯಿಸುತ್ತ ಬಂದಿದ್ದ ಈ ನಾಮವಿಶೇಷಣವನ್ನು ಗ್ರಂಥನಾಮವಾಗಿಸಿದ್ದು ಎಷ್ಟು ಉಚಿತ?

ಇದು ಮೆಚ್ಚುಗೆಯ ಮಿತಿಯನ್ನು ಮೀರಿದ ವೈಭವೀಕರಣವಲ್ಲವೆ? ಒಟ್ಟಾರೆ ಹೇಳುವುದಾದರೆ, ಈ ಗ್ರಂಥವು `ಮರಣೋತ್ತರ ಅಭಿನಂದನ ಗ್ರಂಥ~ವಾಗಿ ರೂಪುಗೊಂಡಿದೆ. ಸಂಪಾದಕ ನಿತ್ಯಾನಂದ ಬಿ. ಶೆಟ್ಟಿ ಅವರು ಈ ದಿಕ್ಕಿನಲ್ಲೇ ಶ್ರಮಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಶರ್ಮ ಅವರ ಆಶಯ ಅಥವಾ ಆದೇಶದಂತೆ ಗ್ರಂಥವನ್ನು ರೂಪಿಸಿದ್ದಾರೆ.

ಈಗ - ಇಂಥ ಪುಸ್ತಕವನ್ನು ವಿಶ್ವವಿದ್ಯಾಲಯವೊಂದು ಸಿದ್ಧಪಡಿಸಿ ಪ್ರಕಟಿಸುವುದು ಎಷ್ಟರ ಮಟ್ಟಿಗೆ ಔಚಿತ್ಯಪೂರ್ಣ ಎಂಬ ಪ್ರಶ್ನೆ. ವಿ.ಎಸ್. ಆಚಾರ್ಯರು ರಾಜಕಾರಣಿ ಹಾಗೂ ಸಂಘ ಪರಿವಾರದವರು ಎಂಬ ಕಾರಣಕ್ಕಾಗಿಯೇ ಈ ಪ್ರಶ್ನೆ ಎತ್ತುತ್ತಿಲ್ಲ.

ವಿಶ್ವವಿದ್ಯಾಲಯವೊಂದು ಪ್ರಕಟಿಸಬೇಕಾದ ಕೃತಿಗಳಿಗೆ ನಿರ್ದಿಷ್ಟ ನಿಯಮಾವಳಿಯಿಲ್ಲವೆ? ವಿ.ಎಸ್. ಆಚಾರ್ಯರ ಬಗ್ಗೆಯೇ ಒಂದು ಪುಸ್ತಕ ತರಬೇಕಿದ್ದರೆ ಯಾವುದಾದರೂ ಸೂಕ್ತ `ಕೃತಿ ಮಾಲೆ~ಯಡಿಯಲ್ಲಿ ಇತರೆ ಪುಸ್ತಕಗಳ ಜೊತೆಗೆ ಇವರ ಜೀವನ ಪರಿಚಯಕ್ಕೆ ಮಾತ್ರ ಮೀಸಲಾದ ಪುಸ್ತಕವನ್ನು ತಂದು ಸಮರ್ಥಿಸಿಕೊಳ್ಳಬಹುದಿತ್ತು.

ಉದಾಹರಣೆಗೆ `ಜೀವನ ಚರಿತ್ರೆ ಮಾಲೆ~ ಎಂಬುದೊಂದು ಇದ್ದರೆ ಅದರಡಿಯಲ್ಲಿ ಪುಟ್ಟ ಪುಸ್ತಕದ ಪ್ರಕಟಣೆ ಮಾಡಿದ್ದರೆ ಅರ್ಥಪೂರ್ಣವಾಗುತ್ತಿತ್ತೋ ಇಲ್ಲವೋ `ಅರ್ಥಪೂರ್ಣ~ ಸಮರ್ಥನೆಯಾದರೂ ಇರುತ್ತಿತ್ತು. ವಿ.ಎಸ್. ಆಚಾರ್ಯರು ಉನ್ನತ ಶಿಕ್ಷಣ ಸಚಿವರಾಗಿದ್ದರು ಎಂಬ ಕಾರಣಕ್ಕೆ ಈ ಗ್ರಂಥದ ಪ್ರಕಟಣೆಯಾಗಿದೆಯೆಂದು ಸಮರ್ಥಿಸಿಕೊಳ್ಳುವುದು ಅಸಮರ್ಥನೀಯವೇ ಆಗುತ್ತದೆ.
 
ಹೋಗಲಿ, ತುಮಕೂರು ವಿ.ವಿ. ಸ್ಥಾಪನೆ ಮತ್ತು ಸಾಧನೆಗೆ ಒಡೆದು ಕಾಣುವಂಥ ಅತ್ಯಂತ ವಿಶಿಷ್ಟ ಕೊಡುಗೆಯಿದೆಯೇ ಎಂದರೆ ಒಬ್ಬ ಸಚಿವರಾಗಿ ಸೂಕ್ತ ಸಹಾಯ, ಸಹಕಾರ ನೀಡಿದ್ದಾರಷ್ಟೇ ಎಂದು ಹೇಳಬಹುದು. ಹಾಗಾದರೆ ಕುಲಪತಿಗಳ ಈ ಅಪೂರ್ವ ಆಸಕ್ತಿಗೆ ಯಾವುದಾದರೂ ಋಣ ತೀರಿಸಲು ಕಾರಣವಿರಬಹುದೇ ಎಂಬ ಅನುಮಾನ ಮೂಡುತ್ತದೆ.
 
ಕುಲಪತಿಗಳೇ ಆಸಕ್ತಿ ವಹಿಸಿ ವಿಶ್ವವಿದ್ಯಾಲಯದ ಹೊರಗಿನ ಸಂಸ್ಥೆಯಿಂದ ಪ್ರಕಟಿಸಿದ್ದರೆ ಅದು ವೈಯಕ್ತಿಕವಾಗುತ್ತಿತ್ತು. ಆಕ್ಷೇಪಕ್ಕೂ ಅವಕಾಶವಿರುತ್ತಿರಲಿಲ್ಲ. ಕುಲಪತಿಯವರ ಔಚಿತ್ಯೋಲ್ಲಂಘನೆಯು ಗ್ರಂಥ ಪ್ರಕಟಣೆಗಷ್ಟೇ ಸೀಮಿತವಾಗಿಲ್ಲ. ವಿ.ವಿ.ಯಲ್ಲಿ ಕಂಚಿನ ಪ್ರತಿಮೆ ಮತ್ತು ಸ್ಮಾರಕ ಭವನ ಸ್ಥಾಪಿಸಿರುವುದನ್ನು ಅವರೇ ಈ ಗ್ರಂಥದಲ್ಲಿ ಹೇಳಿಕೊಂಡಿದ್ದಾರೆ.

ಸರ್ಕಾರವು ಕನ್ನಡ ಭಾಷಾಭಿವೃದ್ಧಿಗೆಂದು ನೀಡಿದ ಒಂದು ಕೋಟಿ ರೂಪಾಯಿ ಅನುದಾನವನ್ನು ಬಳಸಿಕೊಂಡು ಪ್ರಕಟಿಸಿರುವ ಪುಸ್ತಕಗಳ ಸ್ವರೂಪದ ಬಗ್ಗೆ ಈಗಾಗಲೇ ವಿವಾದವಿರುವಾಗ, ಆತ್ಮಾವಲೋಕನದ ಅಗತ್ಯವಿದೆ. ಡಾ. ವಿ.ಎಸ್. ಆಚಾರ್ಯರನ್ನು ಎಷ್ಟೇ ಮೆಚ್ಚಿಕೊಂಡರೂ ವಿಶ್ವವಿದ್ಯಾಲಯವು ಈ ಸ್ವರೂಪದ ಗ್ರಂಥವನ್ನು ಹೊರತಂದದ್ದು ಚರ್ಚಾರ್ಹವಾಗಿದೆ.

ನನ್ನ ಮಾತುಗಳನ್ನು ಮುಕ್ತಾಯಗೊಳಿಸುವಾಗ ಇದೇ ಗ್ರಂಥದಲ್ಲಿರುವ ಮಹಾಬಲೇಶ್ವರರಾವ್ ಅವರ ಉಚಿತ ವ್ಯಾಖ್ಯಾನದ ನುಡಿಗಳನ್ನು ಉಲ್ಲೇಖಿಸ ಬಯಸುತ್ತೇನೆ: `ಡಾ. ಆಚಾರ್ಯರು ಜೆ.ಎಚ್. ಪಟೇಲರಂತೆ ರಸಿಕರಲ್ಲ; ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬಂದವರಲ್ಲ. ದೇವರಾಜ ಅರಸರಂತೆ ದಮನಿತ ವರ್ಗಗಳ ಪರವಾದ ಆಲೋಚನೆ ಉಳ್ಳವರಲ್ಲ.
 

ಸಾಹಿತ್ಯಾಭಿಮಾನಿಯಾದರೂ ವಾಜಪೇಯಿಯವರಂತೆ ಕವಿ ಹೃದಯದವರಲ್ಲ. ಲಾಲ್‌ಕೃಷ್ಣ ಅದ್ವಾನಿಯವರ ಅಪಾರ ಅಭಿಮಾನಕ್ಕೆ ಪಾತ್ರರಾದರೂ ಅವರಿಗಿರುವ ಅಭಿಮಾನಿ ಪರಂಪರೆ ಹೊಂದಿದವರಲ್ಲ. ನರೇಂದ್ರ ಮೋದಿಯ ಹಾಗೆ ಉಗ್ರ ಹಿಂದೂವಾದಿಯಲ್ಲ. ಯಡಿಯೂರಪ್ಪನವರಂತೆ ಒರಟು ಹಟವಾದಿಯಲ್ಲ. ರಾಮಕೃಷ್ಣ ಹೆಗಡೆಯವರಂತೆ ಉದಾರವಾದಿಯಲ್ಲದಿದ್ದರೂ ಅವರಂತೆ ಸರಳತೆ, ಸಜ್ಜನಿಕೆಯುಳ್ಳ ಅನನ್ಯ ವೈದ್ಯ ರಾಜಕಾರಣಿ. ತಮ್ಮ ವೈದ್ಯಕೀಯ ಜ್ಞಾನವನ್ನು ಸಮುದಾಯದ ಹಿತಕ್ಕೆ ಬಳಸಿ ಅಕಾಲಿಕವಾಗಿ ರಂಗದಿಂದ ಕಣ್ಮರೆಯಾದ ವಿಶಿಷ್ಟ ವ್ಯಕ್ತಿ~.

-ವ್ಯಕ್ತಿಯೊಬ್ಬರು ನಿಧನರಾದ ಹೊಸತರಲ್ಲಿ ಬಂದಿರುವ ವಸ್ತುನಿಷ್ಠ ಉಚಿತ ವ್ಯಾಖ್ಯಾನವಿದು. ಆದರೆ ಕುಲಪತಿಗಳಿಗೆ ಇದರ ಪದರುಗಳು ಅರ್ಥವಾಗಬೇಕಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT