ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಕಾಲುವೆ ದುರಸ್ತಿ: ಅವ್ಯವಹಾರ ಆರೋಪ

ಮೇಲು ಸೇತುವೆ ನಿರ್ಮಾಣಕ್ಕೆ 25 ಲಕ್ಷ, ನಿರ್ವಹಣೆಗೆ 1.43 ಕೋಟಿ ವೆಚ್ಚ!
Last Updated 26 ಡಿಸೆಂಬರ್ 2012, 6:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವಲಗುಂದ ತಾಲ್ಲೂಕಿನ ಶಿರೂರು ಆಯಟ್ಟಿ ನಡುವೆ ಮಲಪ್ರಭಾ ಬಲದಂಡೆ ಒಡೆದಿರುವ ವಿಚಾರದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ  ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದಶಿ ಎನ್.ಎಚ್.ಕೋನರಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಯಟ್ಟಿ ಬಳಿಯ ತುಪ್ಪರಿಹಳ್ಳ ಮೇಲು ಸೇತುವೆಯ ನಿರ್ವಹಣೆಗೆ ಕಳೆದ 10 ವರ್ಷಗಳಿಂದ ಹಣ ಖರ್ಚು ಮಾಡಿಲ್ಲ ಎಂದು ಅಧಿಕಾರಿಗಳು ವಿವರಣೆ ನೀಡುತ್ತಾರೆ. ವಾಸ್ತವವಾಗಿ ಕಾಲುವೆಯಿಂದ ಶಾಶ್ವತವಾಗಿ ನೀರು ಸೋರಿಕೆ ತಡೆಗಟ್ಟಲು 2010ರಿಂದ 12ರವರೆಗೆ ಎರಡು ವರ್ಷಗಳ ಅವಧಿಯಲ್ಲಿ 1 ಕೋಟಿ 23 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಕೋನರಡ್ಡಿ ನೀರಾವರಿ ಇಲಾಖೆಯಿಂದ ಪಡೆದ ದಾಖಲೆಗಳೊಂದಿಗೆ ಬಹಿರಂಗಗೊಳಿಸಿದ್ದಾರೆ.

ಕಳಪೆ ಕಾಮಗಾರಿ: 1975ರಲ್ಲಿ ರೂ 25 ಲಕ್ಷ ರೂಪಾಯಿ ಖರ್ಚು ಮಾಡಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ ಅದರ ನಿರ್ವಹಣೆಗೆ ಇಲ್ಲಿಯವರೆಗೆ 1 ಕೋಟಿ 43 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಸೋರಿಕೆ ಶಾಶ್ವತವಾಗಿ ತಡೆಗಟ್ಟುವ ಕಾಮಗಾರಿಯನ್ನು ಹುಬ್ಬಳ್ಳಿಯ ವಿ.ಐ.ಶೆಟ್ಟಿ ಎಂಬ ಗುತ್ತಿಗೆದಾರರಿಗೆ ನೀಡಲಾಗಿತ್ತು. ಕೋಟಿಗಟ್ಟಲೇ ಹಣ ಖರ್ಚು ಮಾಡಿದರೂ ಕಳಪೆ ಕಾಮಗಾರಿಯಿಂದಾಗಿ ಕಾಲುವೆ ಸುಲಭವಾಗಿ ಒಡೆದಿದೆ ಎಂದು ಆರೋಪಿಸಿದ್ದಾರೆ.

ಕಾಲುವೆ ದುರಸ್ತಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರವಾಗಿದೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯುವಂತೆ ಜಲಸಂಪನ್ಮೂಲ ಸಚಿವರನ್ನು ಕೋನರಡ್ಡಿ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಹೊಸಪೇಟೆ ಬಳಿ ತುಂಗಭದ್ರಾ ಕಾಲುವೆ ಒಡೆದಾಗ ಒಂದು ವಾರದ ಒಳಗಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಮಲಪ್ರಭಾ ಕಾಲುವೆ ಒಡೆದಾಗ ಐದು ದಿನದಲ್ಲಿ ರಿಪೇರಿ ಕೈಗೊಳ್ಳುವುದಾಗಿ ಹೇಳಲಾಗಿತ್ತು. ಇಲ್ಲಿಯವರೆಗೂ ದುರಸ್ತಿ ಕಾರ್ಯ ನಡೆದಿಲ್ಲ. ತುರ್ತಾಗಿ ದುರಸ್ತಿ ಕೈಗೊಂಡು ಕಾಲುವೆಗೆ ನೀರು ಹರಿಸುವಂತೆ ಕೋನರಡ್ಡಿ ಪತ್ರಿಕಾ ಪ್ರಕಟಣೆ ಮೂಲಕ  ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT