ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಬೆಡಗಿ `ಸೀತಾ'

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟವಾದ ಆಗುಂಬೆ ಪರ್ವತ ಸಾಲಿನಲ್ಲಿ ತುತ್ತತುದಿಯಿಂದ ಭೋರ್ಗರೆಯುತ್ತಿದ್ದಾಳೆ ಸೀತಾ. ಸುಮಾರು 150 ಅಡಿ ಎತ್ತರದಿಂದ ಯಾವುದೇ ಕಲ್ಲುಗಳನ್ನೂ ಸ್ಪರ್ಶಿಸದೇ ನೇರವಾಗಿ ಹರಿಯುವ ಈಕೆ ಮಲೆನಾಡ ಬೆಡಗಿ. ಚಳಿಗಾಲದಲ್ಲಂತೂ ಇಲ್ಲಿಯ ನೀರು ವಿಪರೀತ ತಂಪಾಗಿದ್ದು ಅಂದರೆ ಸುಮಾರು 3 ಡಿಗ್ರಿಯಷ್ಟಿರಬಹುದು. ವಿಶಾಲವಾದ ನೀರಿನ ಹರಿವು ಇರುವುದರಿಂದ ಈಜಾಡಲೂ ಈ ಜಾಗ ಸೂಕ್ತವಾಗಿದೆ. ನಡು ಮಧ್ಯಾಹ್ನದ ಸಮಯ ನೀರಿಗಿಳಿಯುವಾಗ ಸಿಗುವ ಮಜವೇ ಬೇರೆ.

`ಸೀತಾ ಫಾಲ್ಸ್' ಜಲಧಾರೆಯ ದರ್ಶನ ಪಡೆಯಲು ಹೀಗೆ ಸಾಗಬೇಕು. ಉಡುಪಿಯಿಂದ ಸುಮಾರು 42 ಕೀ.ಮೀ ದೂರ ಪಯಣಿಸಿದಾಗ ಹೆಬ್ರಿ ಎಂಬ ಪಟ್ಟಣ ಸಿಗುತ್ತದೆ. ಹಾಗಂತ ಅಲ್ಲಿಗೆ ಹೋಗಬೇಕಿಲ್ಲ. ಹೆಬ್ರಿಗಿಂತ 6 ಕೀ.ಮೀ ಮೊದಲೇ ಎಡ ದಿಕ್ಕಿಗೊಂದು ರಸ್ತೆ. ಅಲ್ಲಿಯೇ ಸೂಚನಾ ಫಲಕದೊಂದಿಗೆ ಬೃಹತ್ ದ್ವಾರವು ನಿಮ್ಮನ್ನು ಸ್ವಾಗತಿಸುವುದು.

ಹಾಗೆಯೇ 3ರಿಂದ 4 ಕೀ.ಮೀ ಮುಂದೆ ಸಾಗಿದ ಬಳಿಕ ಸಿಗುವ ಮತ್ತೊಂದು ಎಡ ರಸ್ತೆ ಸೀತಾ ನದಿ ದಂಡೆಗೆ ಅಂತ್ಯಗೊಳ್ಳುವುದು. ಅಲ್ಲಿ ಸಿಗುವ ಕಿರುಸೇತುವೆ ಮೂಲಕ ಬೈಕ್ ಹೊರತು ಬೇರಾವುದೇ ವಾಹನ ಸಾಗಲಾರದು. ನೀರಿನ ಹರಿವು ಕಡಿಮೆಯಿದ್ದರೆ ಘನವಾಹನಗಳಿಗೆ ನದಿದಾಟಲು ಸಾಧ್ಯ. ಬಳಿಕ ಕಾಡಿನೊಂದಿಗೆ 4 ಕೀ.ಮೀ ರಸ್ತೆಯಲ್ಲೇ ಸಾಗುವಾಗ ಕಾಣಸಿಗುವ ದೃಶ್ಯ ಆಕರ್ಷಕ. ಹೂವಿನ ಮಕರಂದ ಹೀರಲೆಂದು ಸಾಲು ಸಾಲಾಗಿ ಹಾರಾಡುತ್ತಿರುವ ಬಣ್ಣ ಬಣ್ಣಗಳ ಪತಂಗಗಳ ದೃಶ್ಯ ಪ್ರವಾಸಿಗರನ್ನು ಕಣ್‌ಸೆಳೆಯಬಲ್ಲುದು. ಮುಂದೆ ಲಭಿಸುವುದು ನಿಮ್ಮೆಲ್ಲರ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸಲೋ ಅಥವಾ ಹೊಸ ಥ್ರಿಲ್ ನೀಡಲೋ ಕಠಿಣವಾದ 1-2 ಕೀ.ಮೀನಷ್ಟು ಟ್ರಕಿಂಗ್. ನಂತರ ನಿಮ್ಮನ್ನು ಸ್ವಾಗತಿಸುವುದೇ ರಮಣೀಯ ಸೀತಾ ಫಾಲ್ಸ್.

ಇರಲಿ ಎಚ್ಚರ: ಸೀತಾಳ ಸೌಂದರ್ಯ ಕಣ್ತುಂಬಿಸಿಕೊಳ್ಳಲು ಒಂದಿಷ್ಟು ಹೆಣಗಾಡಲೇಬೇಕು. ಅಲ್ಲಲ್ಲಿ  ಜಿಗಣೆ ಕಾಟ. ಅದರ ಕಡಿವಾಣಕ್ಕೆ ಉಪ್ಪು ಅಥವಾ ಅಗತ್ಯ ವಸ್ತು ಕೈಯಲ್ಲಿರಲಿ. ಕಠಿಣ ಕಾಲುದಾರಿಯಾದ್ದರಿಂದ ಶೂ ಧರಿಸಿ. ಹಾವು, ಪ್ರಾಣಿಗಳ ಹಾವಳಿಯಿದೆ. ಈ ಜಲಪಾತವನ್ನು ವೀಕ್ಷಿಸಲು ಬರುವವರು ಜತೆಗೆ ಸಾಕಾಗುವಷ್ಟು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಬರುವುದು ಸೂಕ್ತ. ಸಂಜೆ ಉಪಾಹಾರವನ್ನು ಬಿಸಿ ಬಿಸಿ ದೋಸೆಯೊಂದಿಗೆ ಹೆಬ್ರಿ ಪೇಟೆಯಲ್ಲಿ ಮುಗಿಸಬಹುದು.

ಉಡುಪಿ ಪಟ್ಟಣದಿಂದ ಹೆಬ್ರಿಗೆ ಕ್ರಮಿಸುವ ರಸ್ತೆಯಲ್ಲಿ ಸುಮಾರು 32 ಕಿ.ಮೀಟರ್‌ನಷ್ಟು ಬಂದರೂ ಈ ಫಾಲ್ಸ್‌ನ ದರ್ಶನ ಪಡೆಯಬಹುದು. ಇಲ್ಲಿಗೆ ಬರುವ ಪ್ರವಾಸಿಗರು ಸಮಯವಿದ್ದರೆ ಸನಿಹದಲ್ಲಿರುವ ಮಂಗತೀರ್ಥ ಜಲಪಾತಕ್ಕೂ ಭೇಟಿ ಕೊಡಬಹುದು. ಹೆಬ್ರಿಯಿಂದ 12 ಕೀ.ಮೀ ತಿರುವು ಮುರುವು ರಸ್ತೆಯೊಂದಿಗೆ ಪಶ್ಚಿಮ ಘಟ್ಟದ ಸುಂದರ ತಾಣ ಆಗುಂಬೆಗೆ ಭೇಟಿ ಕೊಟ್ಟರೆ ಸೂರ್ಯಾಸ್ತಮಾನದ ಅಪೂರ್ವ ನೋಟ ನಿಮ್ಮದಾಗಲಿದೆ. ಪ್ರಶಾಂತ ವಾತಾವರಣದಲ್ಲೊಂದು ಬೃಹತ್ ಕೊಳವಿದ್ದು, ರಿಯಾಯ್ತಿ ಶುಲ್ಕ ನೀಡಿ ದೋಣಿ ವಿಹಾರವನ್ನೂ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT