ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಗಿ ಮೇಷ್ಟ್ರು ಇನ್ನಿಲ್ಲ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಷ್ಟ್ರುಗಳ ಮೇಷ್ಟ್ರು’ ಎನಿಸಿಕೊಂಡು ಅನೇಕ ಕನ್ನಡ ಪ್ರಾಧ್ಯಾಪಕರಿಗೆ ಗುರುವಾಗಿದ್ದ ಎಸ್‌.ಆರ್‌.ಮಳಗಿ (103) ಅವರು ಮಂಗಳವಾರ ಬೆಳಗಿನ ಜಾವ  ನಿಧನರಾದರು. ಬಿಎಂಶ್ರೀ, ತೀನಂಶ್ರೀ ಅವರೊಂದಿಗೆ ಒಡನಾಟ ಹೊಂದಿದ್ದ ಮಳಗಿ ಅವರು, ಕವಿ ದ.ರಾ.ಬೇಂದ್ರೆ ಅವರನ್ನು ತಮ್ಮ ಅಧ್ಯಾತ್ಮ ಗುರು ಎಂದು ಭಾವಿಸಿದ್ದರು. ಛಂದಸ್ಸು, ವ್ಯಾಕರಣದಲ್ಲಿ ವಿದ್ವತ್ತನ್ನು ಪಡೆದಿದ್ದ ಅವರು ಅನೇಕ ಅನುವಾದಿತ ಕೃತಿಗಳು, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.

ವಿಜಾಪುರ ಜಿಲ್ಲೆ ಬಾದಾಮಿ ತಾಲ್ಲೂಕಿನ ಖ್ಯಾಡ ಗ್ರಾಮದಲ್ಲಿ  ಜುಲೈ 8, 1910 ರಂದು ಅವರು ಜನಿಸಿದರು. ಅವರ ತಂದೆ ರಾಘವೇಂದ್ರ ಪಾಂಡುರಂಗ ಮಳಗಿ ಮತ್ತು ತಾಯಿ ಲಕ್ಷ್ಮಿಬಾಯಿ. ಧಾರವಾಡ ಮತ್ತು ಗದಗದಲ್ಲಿ ತಮ್ಮ ಆರಂಭಿಕ ಶಿಕ್ಷಣ ಮುಗಿಸಿದ ಅವರು, 1937 ರಲ್ಲಿ ಕನ್ನಡ ಎಂ.ಎ ಪದವಿ ಪಡೆದರು. 1940 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿಯನ್ನು ಪಡೆದರು.

1938–42 ರವರೆಗೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ 1942–61ರವರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಂತರ ದಾವಣಗೆರೆಯ ಧರ್ಮರತ್ನಾಕರ ಮದ್ದೂರಾಯಪ್ಪ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಿವೃತ್ತರಾದ ನಂತರ ಶಿವಮೊಗ್ಗದ ಲಾಲ್‌ ಬಹದ್ದೂರ್‌ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಅರವಿಂದ ಆಶ್ರಮದಿಂದ ಹೊರಬರುತ್ತಿದ್ದ ‘ಅಖಿಲ ಭಾರತ ಪತ್ರಿಕೆ’ಯ ಪ್ರಧಾನ ಸಂಪಾದಕರಾಗಿ 1973– 95 ರವರೆಗೆ ಒಟ್ಟು 23 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.

 ಅವರ ಸಾಹಿತ್ಯ ಕೃತಿಗಳು: ಚಂದೋದರ್ಶನ (ಬ್ರಹ್ಮರ್ಷಿ ದೀವರಾಟ ಕೃತಿ), ವೈದಿಕ ಸಂಸ್ಕೃತ (ಇಂಗ್ಲಿಷ್ ಅನುವಾದ), ಬಿಡುಗಡೆಯ ಬೇಲಿ: ಸ್ವಾತಂತ್ರ್ಯ ಸಂಗ್ರಾಮ ಚರಿತೆ, ವಾಕ್ಯ ಮಾಣಿಕ್ಯ ಕೋಶ, ಹರಿಶ್ಚಂದ್ರ ಕಾವ್ಯ ಕಥೆ,  ಕನ್ನಡ ಕವಿ ಕಾವ್ಯ ಪರಿಚಯ (ಇಂಗ್ಲಿಷ್‌), ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತೆ, ಸಾಹಿತ್ಯ ವಿಮರ್ಶೆ, ವ್ಯಾಕರಣ ಛಂದಸ್ಸು, ಭಾಷಾ ಶಾಸ್ತ್ರ, ಕಾವ್ಯ ಮೀಮಾಂಸೆ, ವೀರಮಾತೆ ಗುತ್ತಲ ಗುರುಪಾದ ತಾಯಿ (ಜೀವನ ಚರಿತ್ರೆ), ಶ್ರೀ ಅರವಿಂದ ಪ್ರವೇಶಿಕೆ, ಬಾಳ ದಾರಿಯಲಿ (ಕವನ ಸಂಕಲನ).

ಸಂಪಾದಿತ ಕೃತಿಗಳು: ಕೇಶಿರಾಜನ ಶಬ್ದಮಣಿ ದರ್ಪಣ ಸಂಗ್ರಹ, ಕವಿ ಕಾವ್ಯ ದರ್ಶನ ಇನ್ನು ಮುಂತಾದವು. ಹೆಬ್ಬಾಳದ ವಿದ್ಯುತ್‌ ಚಿತಾಗಾರದಲ್ಲಿ  ಮಂಗಳವಾರ ಮಧ್ಯಾಹ್ನ 12.30 ಕ್ಕೆ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT