ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ರೋಗಗಳು ಜೋಕೆ

Last Updated 20 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ವಿಶಿಷ್ಟ ಸ್ಥಾನ ಹೊಂದಿದೆ. ಗ್ರಾಮೀಣ ಭಾರತದ ಆರ್ಥಿಕ ಮಟ್ಟ ಮತ್ತು ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸಿ, ರೈತರಿಗೆ ಸಾಮಾಜಿಕ ಭದ್ರತೆಯನ್ನು ನೀಡುತ್ತಿದೆ.

ಇತ್ತೀಚೆಗಂತೂ ಪಶುಸಂಗೋಪನೆ ಒಂದು ವಾಣಿಜ್ಯ ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಹಳ್ಳಿಗಾಡಿನ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರಸಕ್ತ ವರ್ಷ ಭೀಕರ ಬರ ಬಿದ್ದಿದೆ. ಆದರೆ ಅನೇಕ ಕಡೆ ತಡವಾಗಿಯಾದರೂ ಒಂದಿಷ್ಟು ಮಳೆ ಬಂದಿದೆ. ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಅದು ತುಸು ಹೆಚ್ಚಾಗಿ ಪ್ರವಾಹ ಉಂಟಾಗಿದೆ. ಇಂಥ ಸಂದರ್ಭಗಳಲ್ಲಿ ಜಾನುವಾರುಗಳನ್ನು ಸಹ ಅನೇಕ ಕಾಯಿಲೆಗಳು ಬಾಧಿಸುತ್ತವೆ. ಇವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಗಳಲೆ ರೋಗ ಅಥವಾ ಗಂಟಲು ಬೇನೆ
ಇದು ದನ, ಎಮ್ಮೆ, ಕುರಿ, ಮೇಕೆ ಹಾಗೂ ಹಂದಿಗಳಲ್ಲಿ ಪ್ಯಾಶ್ಚುರೆಲ್ಲಾ ಮಲ್ಟೊಸಿಡಾ ಎಂಬ ಬ್ಯಾಕ್ಟೀರಿಯದಿಂದ ಕಂಡುಬರುವ ರೋಗ. ಸಾಮಾನ್ಯವಾಗಿ ಹೆಚ್ಚು ತೇವಾಂಶವಿರುವ ವಾತಾವರಣ, ಸರಿಯಾದ ಗಾಳಿ ಬೆಳಕು ಇಲ್ಲದ ಕೊಟ್ಟಿಗೆಗಳು, ವಾತಾವರಣದ ವೈಪರೀತ್ಯ, ಮೇವು ಮತ್ತು ನೀರಿನ ಅಭಾವದಿಂದಾಗುವ ಪ್ರಯಾಸ, ದೂರದ ಪ್ರಯಾಣ ಇವೇ ಮುಂತಾದ ಅಂಶಗಳಿಂದ ರೋಗ ಬರುತ್ತದೆ.
 
ಕೆಲವೊಮ್ಮೆ ಈ ರೋಗಾಣುಗಳು ಆರೋಗ್ಯವಂತ ರಾಸುಗಳಲ್ಲಿ ಸುಪ್ತಾವಸ್ತೆಯಲ್ಲಿರುತ್ತವೆ. ಆದರೆ ಪ್ರಾಣಿಗಳು ಬಳಲಿದಾಗ ರೋಗ ನಿರೋಧಕ ಶಕ್ತಿ ಕುಗ್ಗಿ, ಶ್ವಾಸಕೋಶ ಹೊಕ್ಕಿ ಗಂಟಲು ಬೇನೆ ತಂದೊಡ್ಡುತ್ತವೆ. ತೀವ್ರತರವಾದ ಕಾಯಿಲೆಯಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಜಾನುವಾರುಗಳು ಸಾಯುತ್ತವೆ.

ಉಳಿದಂತೆ ಅತಿಯಾದ ಜ್ವರ, ಮೇಲುಸಿರಾಟ, ಕೆಮ್ಮು, ಗಂಟಲು ಮತ್ತು ಕುತ್ತಿಗೆ ಬಾಗದಲ್ಲಿ ಊತ, ಮೂಗಿನ ಹೊಳ್ಳೆಗಳಿಂದ ಅಂಟಾದ ದ್ರವ ಸೋರಿಕೆ, ಕಣ್ಣುಗಳಿಂದ ನೀರು ಸೋರಿಕೆಯಂತಹ ಲಕ್ಷಣಗಳನ್ನು ನೋಡಬಹುದು.

ಗಳಲೆ ರೋಗ ತಡೆಗಟ್ಟಲು ಲಸಿಕೆ ಲಭ್ಯ. ಮುಂಜಾಗ್ರತಾ ಕ್ರಮವಾಗಿ ವರ್ಷಕ್ಕೊಮ್ಮೆ ಮುಂಗಾರಿನ ಮುಂಚೆ ಕೊಡಿಸಬೇಕು. ರೋಗಪೀಡಿತ ಪ್ರದೇಶಗಳಲ್ಲಿ ವರ್ಷಕ್ಕೆರಡು ಬಾರಿ ಲಸಿಕೆ ನೀಡಬೇಕು. 

ಚಪ್ಪೆ ರೋಗ ಅಥವಾ ಬ್ಲಾಕ್ ಕ್ವಾರ್ಟರ್
ಆರು ತಿಂಗಳಿನಿಂದ ಎರಡು ವರ್ಷದೊಳಗಿನ ದಷ್ಟಪುಷ್ಟ ಹಸು ಮತ್ತು ಕುರಿಗಳಲ್ಲಿ ಕಂಡುಬರುವ ಒಂದು ಸಾಂಕ್ರಾಮಿಕ ರೋಗವೇ ಚಪ್ಪೆರೋಗ. ಕ್ಲಾಸ್ಟ್ರೀಡಿಯಂ ಚವೈ ಎಂಬ ನಿರ್ವಾತ ವಾತಾವರಣದ ಬ್ಯಾಕ್ಟೀರೀಯಾ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಈ ರೋಗಾಣುಗಳು ಬೀಜಕಣಗಳ ರೂಪದಲ್ಲಿ ಮಣ್ಣಿನಲ್ಲಿ ಹುದುಗಿಕೊಂಡಿರುತ್ತವೆ.

ಮಳೆಗಾಲದಲ್ಲಿ ತೇವದಿಂದಾಗಿ ಬೀಜಕಣದಿಂದ ಹೊರಬಂದು ಪ್ರಾಣಿಗಳು ಸೇವಿಸುವ ನೀರು, ಮೇವು ಅಥವಾ ಮೈಯಲ್ಲಿನ ಗಾಯಗಳ ಮುಖೇನ ದೇಹವನ್ನು ಸೇರಿ, ಅತಿಯಾದ ಜ್ವರ ಮತ್ತು ಮಾಂಸಖಂಡಗಳ ಉರಿಯೂತ ಉಂಟು ಮಾಡುತ್ತವೆ. ಸಕಾಲಕ್ಕೆ ಉಪಚರಿಸದೇ ಇದ್ದರೆ ಇದು ಮಾರಣಾಂತಿಕವಾಗಿ ಪ್ರಾಣಿಗಳು ಸಾವನ್ನಪ್ಪುತ್ತವೆ.

ಈ ರೋಗಕ್ಕೂ ಲಸಿಕೆ ಇದೆ. ಆದರೆ ಮುಂಗಾರಿನ ಮುಂಚೆ ಮತ್ತು ರೋಗಪಿಡಿತ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಲಸಿಕೆ ಕೊಡಿಸಬೇಕು. ರೋಗದಿಂದ ಸತ್ತ ರಾಸುಗಳನ್ನು ಆಳವಾದ ಗುಂಡಿಗಳಲ್ಲಿ ಹೂಳಬೇಕು.

ನೆರಡಿ ರೋಗ ಅಥವಾ ಆಂಥ್ರ್ಯಾಕ್ಸ್
ಬ್ಯಾಸಿಲಸ್ ಆಂಥ್ರ್ಯಾಸಿಸ್ ಎಂಬ ರೋಗಾಣುವಿನಿಂದ, ದನ, ಎಮ್ಮೆ, ಕುರಿ, ಮೇಕೆಗಳಲ್ಲಿ ಕಂಡುಬರುವ ಒಂದು ಮಾರಣಾಂತಿಕ ಕಾಯಿಲೆ ಇದು. ಈ ರೋಗಾಣುವಿನ ಬೀಜಕಣಗಳು ಕಲುಷಿತ ನೀರು ಮತ್ತು ಮೇವಿನ ಮುಖಾಂತರ ಆರೋಗ್ಯವಂತ ಪ್ರಾಣಿಗಳ ದೇಹವನ್ನು ಸೇರುತ್ತವೆ.
 
ಅದರಿಂದ ಜಾನುವಾರು ಅತಿ ಜ್ವರದಿಂದ ಬಳಲುತ್ತದೆ. ಅಲ್ಲದೆ ರೋಗಾಣುಗಳು ಅನೇಕ ವಿಷಕಾರಕ ಅಂಶಗಳನ್ನು ಉತ್ಪಾದಿಸಿ ರೋಗಪೀಡಿತ ರಾಸುಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ಮಾಡಿ ಸಾವು ತರುತ್ತವೆ. ಹೀಗಾಗಿ ಸತ್ತ ಪ್ರಾಣಿಗಳ ಎಲ್ಲಾ ನೈಸರ್ಗಿಕ ದ್ವಾರಗಳ ಮುಖಾಂತರ ಕಪ್ಪು ರಕ್ತ ಹೊರ ಬರುತ್ತದೆ.

ಕೆಲವೊಮ್ಮೆ ಪ್ರಾಣಿಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಸಾವನ್ನಪ್ಪಬಹುದು. ಪ್ರಾಣಿಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೆ ಆಳವಾದ ಗುಂಡಿಗಳಲ್ಲಿ ಸುಣ್ಣ ಮತ್ತು ಉಪ್ಪನ್ನು ಹಾಕಿ ಮುಚ್ಚಬೇಕು.

ಇದರಿಂದ ಆಂಥ್ರ್ಯಾಕ್ಸ್ ರೋಗಾಣುಗಳು ವಾತಾವರಣ ಸೇರದಂತೆ ನಿಯಂತ್ರಿಸಿ ಇತರೆ ಪ್ರಾಣಿಗಳಿಗೆ ರೋಗ ಹರಡದಂತೆ ತಡೆಯಬಹುದು. ಈ ರೋಗವನ್ನು ಲಸಿಕೆಗಳ ಮೂಲಕ ತಡೆಗಟ್ಟಬಹುದು. ಆದರೆ ರೋಗಪೀಡಿತ ಪ್ರದೇಶಗಳಲ್ಲಿ ಮಾತ್ರ ಲಸಿಕೆ ಕೊಡಬೇಕು.

ಲೆಪ್ರೋಸ್ಪೈರೋಸಿಸ್ ಅಥವಾ ಇಲಿ ಜ್ವರ
ಲೆಪ್ರೋಸ್ಪೈರಾ ಗುಂಪಿನ ಸೂಕ್ಷ್ಮಾಣು ಜೀವಿಗಳಿಂದ ಈ ರೋಗವು ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳಲ್ಲಿ ಹಾಗೂ ಮನುಷ್ಯರಲ್ಲಿ ಕಂಡುಬರುತ್ತದೆ. ಜಾನುವಾರುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವವರು, ಪ್ರಾಣಿ ಪರಿಚಾರಕರು ಹಾಗು ರೈತರಿಗೆ ಈ ರೋಗ ಹರಡುವ ಸಂಭವ ಹೆಚ್ಚು.

ರೋಗ ಪೀಡಿತ ಪ್ರಾಣಿಗಳ ಮಲಮೂತ್ರಗಳಿಂದ ನೀರು ಇಲ್ಲವೆ ಮೇವು ಕಲುಷಿತಗೊಂಡು ರೋಗ ಹರಡುತ್ತದೆ. ಇಲಿಗಳಲ್ಲಿ ಈ ರೋಗಾಣುಗಳು ಸರ್ವೇ ಸಾಮಾನ್ಯವಾಗಿ ಇರುವ ಕಾರಣ ಅವುಗಳ ಮಲ ಮೂತ್ರಗಳಿಂದ ಪಶು ಆಹಾರ ಮತ್ತು ನೀರು ಕಲುಷಿತವಾಗದಂತೆ ತಡೆಯುವುದು, ಇಲಿ ಸಂತತಿ ನಿಯಂತ್ರಿಸುವುದು ಈ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸದ್ಯಕ್ಕೆ ನಾಯಿಗಳಲ್ಲಿ ಉಪಯೋಗಿಸಲು ಮಾತ್ರ ಲಸಿಕೆ ಲಭ್ಯವಿದ್ದು, ವರ್ಷಕ್ಕೊಮ್ಮೆ ಹಾಕಿಸಬೇಕಾಗುತ್ತದೆ.ಇವಲ್ಲದೆ, ಜಾನುವಾರುಗಳ ಎಫಿಮೆರಲ್ ಜ್ವರ ಅಥವಾ ಮೂರು ದಿನಗಳ ಕಾಯಿಲೆ, ಕುರಿಗಳಲ್ಲಿ ನೀಲಿನಾಲಿಗೆ ರೋಗ ಹಾಗೂ ಪಿಪಿಆರ್ ಕಾಯಿಲೆಗಳನ್ನೂ ಸಹ ಮಳೆಗಾಲದಲ್ಲಿ ಕಾಣಬಹುದು. ಇವೆಲ್ಲ ಸಾಂಕ್ರಾಮಿಕ ಇಲ್ಲವೇ ಅಂಟುಜಾಡ್ಯಗಳು.

ಆಗಿಂದಾಗ್ಗೆ ಕರುಗಳಿಗೆ ಜಂತು ನಿವಾರಕ ಔಷಧೋಪಚಾರ ಮಾಡಿಸಿದ ನಂತರ ಲಸಿಕೆ ನೀಡಬೇಕು. ಆಗ ತಾನೆ ಹುಟ್ಟಿದ ಎಳೆಕರುಗಳಿಗೆ ಗಿಣ್ಣು ಹಾಲನ್ನು ಆದಷ್ಟು ಬೇಗನೆ ಕುಡಿಸುವುದರಿಂದ ತಾಯಿಯ ರೋಗ ನಿರೋಧಕ ಶಕ್ತಿಯನ್ನು ಕರುಗಳಿಗೆ ವರ್ಗಾಯಿಸಬಹುದು. ರೋಗ ಹೆಚ್ಚಿರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಲಸಿಕೆಗಳನ್ನು ಕೊಡಿಸಬೇಕು.

ರೋಗಪೀಡಿತ ಜಾನುವಾರುಗಳನ್ನು ಇತರೆ ಆರೋಗ್ಯವಂತ ಪ್ರಾಣಿಗಳಿಂದ ಬೇರ್ಪಡಿಸಿ ಸೂಕ್ತ ಔಷಧೋಪಚಾರ ಮಾಡಿಸಿ, ರಕ್ತ ಇಲ್ಲವೆ ಅಂಗಾಂಶ ಮಾದರಿಗಳನ್ನು ಪ್ರಯೋಗಾಲಯಕ್ಕೆ ಸಲ್ಲಿಸಿ ರೋಗವನ್ನು ದೃಢಪಡಿಸಿಕೊಳ್ಳಬೇಕು. ಜಾನುವಾರುಗಳ ಕಳೇಬರಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು.
 
ಇದರಿಂದ ರೈತರು ತಮಗೆ ಆಗಬಹುದಾದ ನಷ್ಟಗಳನ್ನು ತಡೆದು ಪಶುಸಂಗೋಪನೆಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಾಗಿಸಿ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಬಹುದು.

 (ಲೇಖಕರು ಹೆಬ್ಬಾಳ ಪಶುವೈದ್ಯ  ಕಾಲೇಜು ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT