ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ:ಸಮ್ಮೇಳನ ಅಸ್ತವ್ಯಸ್ತ

ನುಡಿಹಬ್ಬಕ್ಕೆ ಮನೆಬಿಟ್ಟು ಬಾರದ ಜನತೆ
Last Updated 17 ಫೆಬ್ರುವರಿ 2013, 10:22 IST
ಅಕ್ಷರ ಗಾತ್ರ

ಕುಷ್ಟಗಿ: ಲಯತಪ್ಪಿದಂತೆ ಕೇಳಿಬಂದ ನಾಡಗೀತೆ, ರೈತಗೀತೆಯಿಂದಲೇ ಸಮಾರಂಭಕ್ಕೆ ಅಪಶಕುನ ವಕ್ಕರಿಸಿತು. ಸಭಾಂಗಣ, ವೇದಿಕೆಯಲ್ಲಿನ ಬಹಳಷ್ಟು ಕುರ್ಚಿಗಳು ಖಾಲಿ, ಉದ್ಘಾಟನೆ ಮುಗಿದು ಇನ್ನೇನು ಸಮ್ಮೇಳನಾಧ್ಯಕ್ಷರ ಭಾಷಣ ಶುರು ಆಗಬೇಕು, ಜನ ಬಾರದಿದ್ದರೂ ನಿರೀಕ್ಷೆಯಂತೆ ಮಳೆರಾಯ ಮಾತ್ರ ಗೈರು ಹಾಜರಾಗಲಿಲ್ಲ. ಕುರ್ಚಿ, ಪೇಪರ್‌ಗಳ ಮೊರೆ ಹೋದರೂ ವೇದಿಕೆಯಲ್ಲಿದ್ದವರು, ಸಭಿಕರು ಒದ್ದೆಯಾಗುವುದರಿಂದ ತಪ್ಪಿಸಿಕೊಳ್ಳಲು ಪರದಾಡಿದರು.

ಶನಿವಾರ ಇಲ್ಲಿಯ ಕ್ರೀಡಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡುಬಂದ ಚಿತ್ರಣವಿದು. ಸಮ್ಮೇಳನ ಕೆಲಹೊತ್ತು ಅಸ್ತವ್ಯಸ್ತಗೊಂಡರೆ ಮಳೆ ನಿಂತರೂ ಜನ ಮಾತ್ರ ವೇದಿಕೆಯತ್ತ ಸುಳಿಯದೇ ಜಾಗ ಖಾಲಿ ಮಾಡಿದ್ದಕ್ಕೆ ಕೆಲ ಸಾಹಿತಿಗಳು ತಮ್ಮ ಮಾತುಗಳಲ್ಲೆ ಅಸಮಾಧಾನ ಹೊರಹಾಕಿದರು.

`ಸಣ್ಣ ಮಳೆಗೇ ಹೆದರಿ ಓಡಿಹೋಗುತ್ತೀರಿ ಇನ್ನು ಅನ್ಯ ಭಾಷಿಕರ ದಬ್ಬಾಳಿಕೆಯನ್ನು ಹೇಗೆ ಮೆಟ್ಟಿ ನಿಲ್ಲುತ್ತೀರಿ? ಇದೇನಾ ಸಮ್ಮೇಳನಾಧ್ಯಕ್ಷರಿಗೆ ನೀವು ಕೊಡುವ ಗೌರವ' ಎಂದೆ ಕಸಾಪ ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಆಕ್ರೋಶ ವ್ಯಕ್ತಪಡಿಸುವಂತಾಯಿತು. ಅಷ್ಟೇ ಅಲ್ಲ ಎಲ್ಲ ಸಮ್ಮೇಳನಗಳಲ್ಲೂ ಊಟದ ಹೊತ್ತಿಗೆ ಸರಿಯಾಗಿ ಅಧ್ಯಕ್ಷೀಯ ಭಾಷಣಕ್ಕೆ ಅವಕಾಶ ನೀಡುವುದಕ್ಕೂ ಬಾದವಾಡಗಿ ಆಕ್ಷೇಪ ವ್ಯಕ್ತಪಡಿಸಿದರು.

ಕಸಾಪದ ಎಲ್ಲ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬಂದಿದ್ದರೇನೆ ಅದು ಮೆರವಣಿಗೆ ಎನಿಸುತ್ತಿತ್ತು. ಮೆರವಣಿಗೆಯಲ್ಲಿ ಕಾಣಿಸಿಕೊಳ್ಳದ ಮಾಜಿ ಶಾಸಕರು ನೇರವಾಗಿ ವೇದಿಕೆ ಏರಿದರೆ  ಪಟ್ಟಣದಲ್ಲೇ ಸಮ್ಮೇಳನ ನಡೆದರೂ ಜನ ಮನೆ ಬಿಟ್ಟು ಹೊರಬರಲಿಲ್ಲ. ಈ ಹಿಂದೆ ಹೋಬಳಿ ಕೇಂದ್ರಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರ ಶೇಕಡ ಅರ್ಧದಷ್ಟು ಸಹ ಇರದಿರುವುದು ಅಚ್ಚರಿ ಮೂಡಿಸಿದ್ದನ್ನು ಹಿಂದಿನ ಸಮ್ಮೇಳನಾಧ್ಯಕ್ಷರೇ ಹೇಳಿದ್ದು ವಸ್ತುಸ್ಥಿತಿಯನ್ನು ಬಿಂಬಿಸಿತು. ಅಲ್ಲದೇ ಇಂಥ ಸಮ್ಮೇಳನಗಳನ್ನು ನಡೆಸುವಾಗ ಅನುಭಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ ಸಾಹಿತಿಯೊಬ್ಬರು ಅವ್ಯವಸ್ಥೆ ಕುರಿತು ನೇರವಾಗಿಯೇ ಸಂಘಟಿಕರ ಕಿವಿಹಿಂಡಿದರು.

ಸ್ಮರಣಸಂಚಿಕೆ ಎಲ್ಲಿ?:  ಅಚ್ಚರಿಯ ಸಂಗತಿಯಂದರೆ ಸಮ್ಮೇಳನದ ನೆನಪಿಗಾಗಿ ಹೊರತರುವುದಾಗಿ ಹೇಳಿದ್ದ `ಚಿರಪ್ರಕಾಶ' ಸ್ಮರಣ ಸಂಚಿಕೆಗಳು ಕಾಣಲಿಲ್ಲ, ಆದರೆ ಕೆಲವರ ಕೈಚೀಲದಲ್ಲಿ ಕೇವಲ ಎರಡು ಹಾಳೆಯ ರಕ್ಷಾಪುಟ ಮಾತ್ರ ಕಂಡುಬಂದಿದ್ದು ಅವು ಇನ್ನೂ ಮುದ್ರಣವಾಗಿಲ್ಲ ಎಂಬುದು ತಿಳಿಯಿತು.

ಖಾಲಿ ಮಳಿಗೆ: ಸಮ್ಮೇಳನಾಂಗಣದಲ್ಲಿ ಐದಾರು ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಒಂದರಲ್ಲಿ ಮಾತ್ರ ಪುಸ್ತಕಗಳು ಇದ್ದರೆ ಉಳಿದವುಗಳೆಲ್ಲ ಖಾಲಿಯಾಗಿದ್ದವು. ಮಧ್ಯಾಹ್ನ 12ಕ್ಕೆ ಮೊದಲ ಗೋಷ್ಠಿ ಇದ್ದರೆ ಆರಂಭವಾದದ್ದು 3 ಗಂಟೆಗೆ. ಎರಡು ಗೋಷ್ಠಿ ಮುಗಿಯುವ ವೇಳೆಗೆ ದೀಪಗಳು ಬೆಳಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT