ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲು ಮಸೂದೆ ಅಂಗೀಕಾರ!

Last Updated 6 ಜನವರಿ 2011, 8:35 IST
ಅಕ್ಷರ ಗಾತ್ರ

ಮೈಸೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆ ಅಂಗೀಕಾರ, 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಹಗರಣಗಳ ತೀವ್ರ ಚರ್ಚೆ, ಬೆಲೆ ಏರಿಕೆಗೆ ವಿರೋಧ ಪಕ್ಷಗಳ ಖಂಡನೆ. -ಇವು ದೆಹಲಿಯ ಸಂಸತ್ ಭವನದಲ್ಲಿ ನಡೆದ ಚರ್ಚೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಬದಲಾಗಿ ಇವುಗಳ ಬಗ್ಗೆ ಚರ್ಚೆಯಾಗಿದ್ದು, ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯ ಜವಾಹರ್ ನವೋದಯ ಶಾಲೆಯಲ್ಲಿ ಬುಧವಾರ ನಡೆದ 14ನೇ ಯುವ ಸಂಸತ್ ಸ್ಪರ್ಧೆಯಲ್ಲಿ.

ದೆಹಲಿಯ ಸಂಸತ್ ಭವನದಲ್ಲಿ ಶೇ.33ರ ಮಹಿಳಾ ಮೀಸಲಾತಿಯನ್ನು ಸಂಸತ್‌ನಲ್ಲಿ ಅಂಗೀಕಾರ ಮಾಡಲು ಹಲವು ವರ್ಷಗಳೇ  ಬೇಕಾಯಿತು. ಆದರೆ ನವೋದಯ ಶಾಲೆಯ ವಿದ್ಯಾರ್ಥಿಗಳು ಕೇವಲ ಒಂದು ಗಂಟೆಯಲ್ಲಿ ಬಿಲ್ ಪಾಸ್ ಮಾಡಿದರು. ಅಧಿವೇಶನ ಆರಂಭವಾಗುತ್ತಿದ್ದಂತೆ ಕೆಲವರು ಖಾದಿ ಬಟ್ಟೆ ತೊಟ್ಟು ವೇದಿಕೆ ಅಲಂಕರಿಸಿದರು.  ಕೆಲವರು ಗಾಂಧಿ ಟೋಪಿ ಧರಿಸಿದ್ದರು. ಪಂಚೆ ಜುಬ್ಬಾ, ಮತ್ತೆ ಕೆಲವರು ಸಿಂಗ್ ಟೋಪಿ ಧರಿಸಿದ್ದರು. ವಿದ್ಯಾರ್ಥಿನಿಯರು ಸೀರೆ, ತುಂಬುತೋಳಿನ ರವಿಕೆ ತೊಟ್ಟಿದ್ದರು.

ಸ್ಪೀಕರ್ ಕುರ್ಚಿ, ಅದರ ಮುಂದೆ ಪ್ರಧಾನಮಂತ್ರಿ, ಅವರ ಪಕ್ಕದಲ್ಲೇ ಕ್ಯಾಬಿನೆಟ್ ಸಚಿವರು. ಮತ್ತೊಂದು ಕಡೆ ವಿರೋಧ ಪಕ್ಷದ ನಾಯಕರು, ಸಂಸದರು ವೇದಿಕೆಯನ್ನು ಅಲಂಕರಿಸಿದ್ದರು. ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರಮಾಣ ವಚನ ಸ್ವೀಕಾರ ಸಮಾರಂಭ. ಡಾ.ಅಭಿದರ್ಶನ್ ಮೈಸೂರಿನ ಸಂಸದ ಎಂದು ಕೂಗುತ್ತಿದ್ದಂತೆ ವೇದಿಕೆಯ ಎದುರು ಕುಳಿತಿದ್ದ ಮೈಸೂರಿನ ನಿಜವಾದ ಸಂಸದ ಎಚ್.ವಿಶ್ವನಾಥ್ ಮುಗುಳ್ನಕ್ಕರು.

ಅನಂತರ ನಡೆದಿದ್ದು, ಈಚೆಗೆ ನಿಧನರಾದ ಕೇರಳದ ಮಾಜಿ ಮುಖ್ಯಮಂತ್ರಿ ಕರುಣಾಕರನ್‌ಗೆ ಶ್ರದ್ಧಾಂಜಲಿ, ಎಲ್ಲ ಸಂಸದರೂ ಎದ್ದು ನಿಂತು ಸಂತಾಪ ಸೂಚಿಸಿದರು.ನಂತರ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಪ್ರಸಾದ್, ರಾಗಿಣಿ ಅವರ ಪರಿಚಯ. ನಂತರ ಪ್ರಶ್ನೋತ್ತರ ವೇಳೆಯಲ್ಲಿ ಬೆಲೆ ಏರಿಕೆಯ ಚರ್ಚೆ. ಟೊಮೆಟೋ ಕೆ.ಜಿ.12ರಿಂದ 20 ರೂಪಾಯಿಗೆ ಏರಿದೆ, ಈರುಳ್ಳಿ 30ರಿಂದ 60 ರೂಪಾಯಿ, ಬೆಳ್ಳುಳ್ಳಿ 140ರೂಪಾಯಿಂದ 240ಕ್ಕೆ ಏರಿದೆ. ಅದರಂತೆ, ಎಲ್‌ಪಿಜಿ, ಪೆಟ್ರೋಲ್ ಬೆಲೆಗಳು ಏರಿಕೆ ಕಂಡಿವೆ. ಇದರ ವಿರುದ್ಧ ಯಾವ ಕ್ರಮ ಕೈಗೊಂಡಿರುವಿರಿ ಎಂದು ವಿರೋಧ ಪಕ್ಷದ ನಾಯಕಿ ಸಹನಾ ಪ್ರಶ್ನಿಸುತ್ತಿದ್ದಂತೆ ಅದಕ್ಕೆ ಉತ್ತರಿಸಿದ ಕೃಷಿ ಸಚಿವರು “ಸಾರ್ವಜನಿಕ ವಿತರಣಾ ಪದ್ಧತಿಯ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುವುದು” ಎಂದು ಉತ್ತರಿಸಿದರು.

ಬೆಲೆ ಏರಿಕೆಯ ನಂತರ ಚರ್ಚೆಯಾಗಿದ್ದು, ಕಾಮನ್‌ವೆಲ್ತ್ ಹಗರಣ. 1.76 ಲಕ್ಷ ಕೋಟಿ ರೂಪಾಯಿ  ವಂಚನೆಯಾಗಿದೆ. ಇದರ ವಿರುದ್ಧ ಯಾವ ಕ್ರಮ ಕೈಗೊಂಡಿರುವಿರಿ ಎಂದು ವಿರೋಧ ಪಕ್ಷದ ನಾಯಕರು  ಪ್ರಶ್ನಿಸುತ್ತಿದ್ದಂತೆ ಇದಕ್ಕೆ ಉತ್ತರಿಸಿದ ಕ್ರೀಡಾ ಸಚಿವರು ಹಗರಣಕ್ಕೆ ಸಂಬಂಧಪಟ್ಟಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ಅನಂತರ ಚರ್ಚೆಗೆ ಬಂದಿದ್ದು, ವಿದೇಶಾಂಗ ನೀತಿ. ಪಾಕಿಸ್ತಾನ ಆತಂಕವಾದಿ ರಾಷ್ಟ್ರ, ಇದರ ಬಗ್ಗೆ ಮೃದು ಧೋರಣೆ ತಳೆಯುವುದು ತರವಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಪ್ರಶ್ನಿಸುತ್ತಿದ್ದಂತೆ ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿ ಪಾಕಿಸ್ತಾನದ ನಮ್ಮ ನೆರೆಯ ರಾಷ್ಟ್ರವಾಗಿದ್ದು, ಉತ್ತಮ ಸಂಬಂಧ ಹೊಂದುವುದು ಅನಿವಾರ್ಯ ಎಂದರು.

ನಂತರ ಶುರುವಾಯಿತು ಶೂನ್ಯವೇಳೆ. ಇಲ್ಲಿ ಸ್ಪೀಕರ್ ಕುರ್ಚಿಯನ್ನು ಅಲಂಕರಿಸಿದ್ದು, ಉಪಸಭಾಪತಿ. ವಿರೋಧ ಪಕ್ಷಗಳು ಇಲ್ಲಿ ಚರ್ಚಿಸಿದ್ದು, ನಕ್ಸಲ್ ಸಮಸ್ಯೆ. ದೇಶದಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಿಲುವು ಏನು ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿದ್ದಂತೆ. ದೇಶದ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚಿಸಲಾಗುವುದು. ನಕ್ಸಲರಿಗೆ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಗೃಹಮಂತ್ರಿಗಳು ಉತ್ತರ ನೀಡಿದರು. ನಂತರ ಕಾಶ್ಮೀರ ಸಮಸ್ಯೆ, ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ಆಯಿತು.

ಕೇಂದ್ರ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಉಷಾ ಮಾಥೂರ್, ಅಧೀನ ಕಾರ್ಯದರ್ಶಿ ಆರ್.ಸಿ.   ಮೊಹಾಂತಿ, ಸಂಸದ ಎಚ್.ವಿಶ್ವನಾಥ್, ನವೋದಯ ವಿದ್ಯಾಲಯ ಸಮಿತಿಯ ಜಂಟಿ ಕಾರ್ಯದರ್ಶಿ ಟಿ.ಸಿ.ಎಸ್.ನಾಯ್ಡು, ಹೈದರಾಬಾದ್ ವಲಯದ ಮಾಜಿ ಉಪ ಆಯುಕ್ತೆ ಎಚ್.ಪಿ.  ಶಾಮಲಾ, ಆರ್‌ಐಇ ಪ್ರಾಂಶುಪಾಲ ಕೆ.ದೊರೆಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತಾ, ನವೋದಯ ವಿದ್ಯಾಲಯದ ಪ್ರಾಂಶುಪಾಲ ಸಿದ್ದ ರಾಮೇಗೌಡ, ಅನುರಾಧಾ, ಶ್ರೀನಿ ವಾಸನ್, ರಾಜು, ಡಿ.ಎನ್.ಕೃಷ್ಣಮೂರ್ತಿ  ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT