ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಸಮಯ ಪ್ರಜ್ಞೆ; ದರೋಡೆಕೋರರ ಸೆರೆ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರ ಸಮಯ ಪ್ರಜ್ಞೆಯು ಗೃಹಿಣಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹಾಗೂ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರಿಗೆ ನೆರವಾಗಿದೆ.

ರಾಜರಾಜೇಶ್ವರಿನಗರ ನಿವಾಸಿಗಳಾದ ಹರೀಶ್‌ (25) ಮತ್ತು ನಾಗರಾಜ (28) ಬಂಧಿತರು.

ಆರೋಪಿಗಳು ಬುಧವಾರ (ಜ.1) ನಂದಿನಿ ಲೇಔಟ್‌ ಸಮೀಪದ ಕೂಲಿನಗರದ ಇಂದಿರಮ್ಮ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದರು. ಇಂದಿರಮ್ಮ ಮನೆಯಲ್ಲಿ ಒಂಟಿಯಾಗಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಆರೋಪಿಗಳು ಕೃತ್ಯದ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಆರೋಪಿಗಳು ಇಂದಿರಮ್ಮ ಅವರ ಮನೆಗೆ ನುಗ್ಗಿ, ಚಾಕುವಿನಿಂದ ಬೆದರಿಸಿ ಅವರ ಬಳಿಯಿದ್ದ ಚಿನ್ನಾಭರಣ ಕಸಿದುಕೊಂಡಿದ್ದರು. ಈ ವೇಳೆ ತಾಳಿಯನ್ನು ಕೊಡುವಂತೆ ಇಂದಿರಮ್ಮ ಆರೋಪಿಗಳಲ್ಲಿ ಅಂಗಲಾಚುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಪಕ್ಕದ ಮನೆಯ ಶಾರದಮ್ಮ ಎಂಬುವರು ಕಿಟಕಿಯಿಂದ ಮನೆಯೊಳಗೆ ಇಣುಕಿ ನೋಡಿದ್ದಾರೆ.

ಕಿಡಿಗೇಡಿಗಳು ಇಂದಿರಮ್ಮ ಅವರ ಕುತ್ತಿಗೆಗೆ ಚಾಕು ಹಿಡಿದಿದ್ದನ್ನು ಕಂಡ ಶಾರದಮ್ಮ, ಕೂಡಲೇ ಮನೆಗೆ ಹೋಗಿ ಪತಿ ರಾಮಣ್ಣ ಅವರಿಗೆ ವಿಷಯ ತಿಳಿಸಿದ್ದಾರೆ. ರಾಮಣ್ಣ ಠಾಣೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಶೀಘ್ರವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆಯೊಳಗಿದ್ದ ಆರೋಪಿಗಳನ್ನು ಹೊರಗೆ ಬಂದು ಶರಣಾಗುವಂತೆ ಹೇಳಿದೆವು. ಆದರೆ, ಮಾರಕಾಸ್ತ್ರಗಳನ್ನು ಹೊಂದಿದ್ದ ಆರೋಪಿಗಳು ಮನೆಯಿಂದ ಹೊರಬಂದ ಕೂಡಲೇ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದರು. ಆದರೆ, ಸರ್ವಿಸ್‌ ರಿವಾಲ್ವಾರ್‌ ತೆಗೆದು, ಗುಂಡು ಹಾರಿಸುವುದಾಗಿ ಎಚ್ಚರಿಸಿದ ಬಳಿಕ ಆರೋಪಿಗಳು ಶರಣಾದರು ಎಂದು ನಂದಿನಿ ಲೇಔಟ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT