ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೂ ಅಧಿಕಾರದ ಚುಕ್ಕಾಣಿ; ಕಾಂಗ್ರೆಸ್ ಸಾಧನೆ

Last Updated 4 ಅಕ್ಟೋಬರ್ 2012, 9:25 IST
ಅಕ್ಷರ ಗಾತ್ರ

ಹಾಸನ: `ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮಾಡಿದ ಪರಿಣಾಮವಾಗಿ ದೇಶದ ಲಕ್ಷಾಂತರ ಮಹಿಳೆಯರು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಮಹಿಳೆಯರಿಗೂ ಸಮಾನ ಸ್ಥಾನಮಾನ, ಅಧಿಕಾರ ನೀಡುವ ಏಕೈಕ ಪಕ್ಷ ಕಾಂಗ್ರೆಸ್~ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನುಡಿದರು.

ಹಾಸನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

`ಮಹಿಳೆಯರಿಗೆ ಅಧಿಕಾರ ಕೊಟ್ಟಿದ್ದರಿಂದ ಕೆಲವೇ ವರ್ಷಗಳಲ್ಲಿ ದೇಶದ ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿ ಭಾರಿ ಬದಲಾವಣೆ ಗೋಚರವಾಗಿದೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ಇಷ್ಟೊಂದು ಕ್ಷಿಪ್ರ ಬದಲಾವಣೆ ಕಾಣಿಸಿಕೊಂಡಿಲ್ಲ. ಇದರ ಜತೆಗೆ ವಿಧಾನಸಭೆ, ಲೋಕಸಭೆಗಳಲ್ಲೂ ಶೇ 33 ಮೀಸಲಾತಿ ನೀಡುವುದಾಗಿ ಸೋನಿಯಾ ಗಾಂಧಿ ದೇಶದ ಮಹಿಳೆಯರಿಗೆ ಮಾತು ಕೊಟ್ಟಿದ್ದಾರೆ. ಶೀಘ್ರದಲ್ಲೇ ಅದು ಈಡೇರಲಿದೆ ಎಂದರು.

ಬಿಜೆಪಿ ಕಾರ್ಯ ವೈಖರಿಯನ್ನು ಟೀಕಿಸಿದ ಪರಮೇಶ್ವರ್, `ಆ ಪಕ್ಷ ರಾಜ್ಯದ ಗೌರವವನ್ನು ಹಾಳು ಮಾಡಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಪುಸ್ತಕ ಮುದ್ರಿಸಿ ಕೊಡಿತ್ತೇವೆ, ಅದನ್ನು ಮನೆಮನೆಗೆ ಹಂಚಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು. ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಜೆಡಿಎಸ್‌ನವರೂ ರಾಜ್ಯದ ರೈತರ ಅಭಿವೃದ್ಧಿಗಾಗಿ ಯಾವ ಯೋಜನೆಯನ್ನೂ ಮಾಡಿಲ್ಲ.
ಹಿಂದೆ ಕೋಮುವಾದಿ ಪಕ್ಷದ ಜತೆಗೆ ಸೇರಿ ಅಧಿಕಾರ ನಡೆಸಿದವರು ಈಗ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಿ ಕಣ್ಣೀರಿಡುತ್ತಿದ್ದಾರೆ. ಇವೆಲ್ಲವೂ ನಾಟಕ~ ಎಂದು ಟೀಕಿಸಿದರು.

`ಮಹಿಳೆಯರಿಗೆ ಸ್ಥಾನ ಮೀಸಲು~
ಪ್ರತಿ ಜಿಲ್ಲೆಯಲ್ಲೂ ಕೆಲವು ಸೀಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಮಹಿಳಾ ಮುಖಂಡರು ಮಾಡಿರುವ ಬೇಡಿಕೆಗೆ ಸ್ಪಂದಿಸಿದ ಪರಮೇಶ್ವರ್, `ಪ್ರತಿ ಜಿಲ್ಲೆಯಿಂದಲೂ ಒಂದು ಸ್ಥಾನಕ್ಕೆ ಮಹಿಳೆಯ ಹೆಸರನ್ನು ಸೂಚಿಸುವಂತೆ ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರಿಗೂ ಸೂಚನೆ ನೀಡುತ್ತೇನೆ~ ಎಂದರು.

ಕಾಂಗ್ರೆಸ್‌ನ ಮಹಿಳಾ ರಾಷ್ಟ್ರೀಯ ಘಟಕದ ಅಧ್ಯಕ್ಷೆ ಅನಿತಾ ವರ್ಮಾ, `ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಕೇಂದ್ರ   ಸರ್ಕಾರ ನೀಡುವ ಅನುದಾನ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಪಿಂಚಣಿ ಹಣವನ್ನು ಕೇಂದ್ರ ಕೊಟ್ಟಿದ್ದರೂ, ರಾಜ್ಯದಲ್ಲಿ ಒಂದು ವರ್ಷದಿಂದ ಪಿಂಚಣಿ ಕೊಟ್ಟಿಲ್ಲ. ಮಹಿಳೆಯರು ಜಾಗೃತರಾಗಿ ಇಂಥ ವಿಚಾರಗಳ ವಿರುದ್ಧ ಧ್ವನಿ ಎತ್ತಬೇಕು~ ಎಂದರು.

ಮೋಟಮ್ಮ ಮಾತನಾಡಿ, `ಮಹಿಳೆಯರ ಮೇಲೆ ಕಾಂಗ್ರೆಸ್ ಋಣ ಜಾಸ್ತಿ ಇದೆ. ಮಹಿಳೆಯರಿಗೆ ಯಾವ ಸರ್ಕಾರವೂ ನೀಡದಷ್ಟು ಕೊಡುಗೆಯನ್ನು ಕಾಂಗ್ರೆಸ್ ನೀಡಿದೆ ಎಂದರು.

ಮಾಜಿ ಸಚಿವ ಡಿ.ಕೆ. ಶಿವಕುಮಾರ್, ರೈಲ್ವೆ ಖಾತೆ ರಾಜ್ಯ ಸಚಿವ, ಕೆ.ಎಚ್.ಮುನಿಯಪ್ಪ ಹಾಗೂ ವಿಧಾನ ಪರಿಷತ್  ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಕಾಂಗ್ರೆಸ್ ಸಾಧನೆಗಳನ್ನು ವಿವರಿಸಿದರು.

ಮುಖಂಡರಾದ ಮಂಜುಳಾ ನಾಯ್ಡು, ಕಮಲಮ್ಮ, ಲಲಿತಮ್ಮ, ತಾರಾದೇವಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು, ಶಾಸಕರಾದ ಎ. ಮಂಜು ಹಾಗೂ ರುದ್ರೇಶ್‌ಗೌಡ, ಬಿಂದಾ ರಾಯ್ಕರ  ಮತ್ತಿತರರು ಇದ್ದರು.
 

ಆರು ತಿಂಗಳಲ್ಲಿ ಸಮೀಕ್ಷೆ: ಮುನಿಯಪ್ಪ

ಹಾಸನ: `ದುದ್ದ - ತಿಪಟೂರು ಮೂಲಕ ಬೆಂಗಳೂರಿಗೆ ರೈಲು ಮಾರ್ಗ ಆರಂಭಿಸಲು ಹಲವರು ಒತ್ತಾಯಿಸಿದ್ದು, ಈ ನಿಟ್ಟಿನಲ್ಲಿ ಆರು ತಿಂಗಳೊಳಗೆ ಸಮೀಕ್ಷೆ ನಡೆಸಲಾಗುವುದು~ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಹಾಸನದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಬಂದಿದ್ದ ಅವರು ತಮ್ಮನ್ನು ಭೇಟಿಮಾಡಿದ ಪತ್ರಕರ್ತರೊಡನೆ ಮಾತನಾಡಿದರು. `ಹಾಸನ -ಬೆಂಗಳೂರು ನಡುವಿನ 166 ಕಿ.ಮೀ. ಮಾರ್ಗ ಪೂರ್ಣಗೊಳ್ಳಲು ಕುಣಿಗಲ್‌ನಲ್ಲಿ ಸ್ವಲ್ಪ ಸಮಸ್ಯೆ ಇದೆ.

ಜತೆಗೆ ಮಧ್ಯದಲ್ಲಿ ಒಂದಿಬ್ಬರು ರೈತರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಸಮಸ್ಯೆಗಳನ್ನು ಪರಿಹರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. 1300 ಕೋಟಿ ರೂಪಾಯಿಯ ಈ ಯೋಜನೆ ಬೇಗನೆ ಪೂರ್ಣಗೊಳ್ಳುವುದೆಂಬ ವಿಶ್ವಾಸವಿದೆ. ರಾಜ್ಯದಲ್ಲಿ 20 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು ಬೇಡಿಕೆ ಬಂದಿದೆ.
 
ರೈಲ್ವೆ ಇಲಾಖೆ ಸುಮಾರು 20 ಕೋಟಿ ರೂಪಾಯಿಯ ಪ್ರಸ್ತಾವನೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು. ಬೆಂಗಳೂರು-ಮಂಗಳೂರಿಗೆ ರಾತ್ರಿ ವೇಳೆಯಲ್ಲಿ ಇನ್ನೊಂದು ರೈಲು ಬಿಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು- ಮಂಗಳೂರು- ಕಾರವಾರಗಳನ್ನು ಬೆಸೆಯುವ ರೈಲು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುನಿಯಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT