ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ತ್ಯಾಜ್ಯದಿಂದ ತೈಲ, ಕೊಬ್ಬು

ಪಾಲಿಕೆಯಿಂದ ಸಾಧ್ಯತೆ ಪರಿಶೀಲನೆ
Last Updated 6 ಡಿಸೆಂಬರ್ 2012, 6:53 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಪ್ರತಿ ದಿನ 7 ಟನ್‌ಗಳಷ್ಟು ಮಾಂಸ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದನ್ನು ಮರು ಸಂಸ್ಕರಣೆಗೆ ಒಳಪಡಿಸಿ ತೈಲ ಮತ್ತು ಕೊಬ್ಬು ಉತ್ಪಾದಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೆ ಮಾಂಸದ ತ್ಯಾಜ್ಯದಿಂದ ಉಂಟಾಗುವ ಇತರ ತೊಂದರೆಗಳಿಗೆ ತೆರೆ ಬೀಳಲಿದೆ.

ಮಹಾರಾಷ್ಟ್ರದಲ್ಲಿ ಇಂತಹ ಪ್ರಯೋಗ ನಡೆಸಿ ಯಶಸ್ವಿಯಾದ ವ್ಯಕ್ತಿಯೊಬ್ಬರು ಪಾಲಿಕೆಗೆ ಬಂದಿದ್ದಾರೆ. ತಮ್ಮ ಸಾಧನೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರನ್ನು ಮತ್ತೆ ಕರೆಸಿಕೊಂಡು ಅವರು ನಡೆಸಿದ ಪ್ರಯೋಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ವಿಚಾರ ಇದೆ. ಪ್ರಯೋಗ ಯಶಸ್ವಿಯಾಗಬಹುದು ಎಂಬುದು ಮನವರಿಕೆಯಾದರೆ ಅದನ್ನು ಜಾರಿಗೆ ತರಲು ಹಿಂದೇಟು ಹಾಕುವುದಿಲ್ಲ ಎಂದು ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಬುಧವಾರ ಅತ್ತಾವರ ಶಾಲೆಯಲ್ಲಿ ನಡೆದ  ಪ್ಲಾಸ್ಟಿಕ್ ಅರಿವು ಕಾರ್ಯಕ್ರಮದ ಸಂದರ್ಭದಲ್ಲಿ `ಪ್ರಜಾವಾಣಿ'ಗೆ ತಿಳಿಸಿದರು.

ಸರ್ಕಾರದ ಒಪ್ಪಿಗೆ: 2 ಪ್ಯಾಕೇಜ್‌ಗಳಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಇದೀಗ ತಾನೇ ಒಪ್ಪಿಗೆ ನೀಡಿದೆ. ಈ ಕಾರ್ಯ ಇನ್ನು 6-7 ತಿಂಗಳಲ್ಲಿ ಆರಂಭವಾಗಬಹುದು. ಆದರೆ ಪಚ್ಚನಾಡಿಯ ಕಸ ವಿಲೇವಾರಿ ಸ್ಥಳದಲ್ಲಿ ಕಾಂಪೋಸ್ಟ್ ಗೊಬ್ಬರ ಉತ್ಪಾದಿಸುವ ಕಾರ್ಯ 15 ದಿನದೊಳಗೆ ಆರಂಭವಾಗಲಿದೆ. ಕಸ ವಿಲೇವಾರಿಯ ಗುತ್ತಿಗೆಯನ್ನು ದೆಹಲಿ ಮೂಲದ ಆಂಟನಿ ಗ್ರೂಪ್ ಪಡೆದುಕೊಂಡಿದೆ ಎಂದು ಆಯುಕ್ತರು ತಿಳಿಸಿದರು.

ಉರ್ವದಲ್ಲಿನ ಜೈವಿಕ ಇಂಧನ ಉತ್ಪಾದನಾ ಘಟಕದಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಹೀಗೆ ಉತ್ಪಾದನೆಯಾದ ವಿದ್ಯುತ್‌ನಿಂದ 250 ಬೀದಿದೀಪಗಳು ಉರಿಯುತ್ತಿವೆ. ಆದರೆ ಘಟಕದ ಔಪಚಾರಿಕ ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ ಎಂದು ಅವರು ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ತೈಲ ಉತ್ಪಾದಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದ ಅವರು, ಜನರು ತಾವು ಬಳಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಒಂದು ಕಡೆಯಲ್ಲಿ ಸಂಗ್ರಹಿಸಿ ಸಂಸ್ಕರಣೆಗೆ ಕೊಟ್ಟರೆ ಯಾವುದೇ ಸಮಸ್ಯೆಯೂ ಇಲ್ಲ ಎಂದರು.

`ಬೇರೆ ನಗರಗಳಲ್ಲಿ ಕಸ ಆಯುವವರು ನೂರಾರು ಸಂಖ್ಯೆಯಲ್ಲಿದ್ದಾರೆ. ಆದರೆ ಮಂಗಳೂರಿನಲ್ಲಿ ಅವರ ಸಂಖ್ಯೆ 20ರಷ್ಟೂ ಇಲ್ಲ. ದೇಶದ ಕೆಲವು ಕಡೆಗಳಲ್ಲಿ ಹಣ ನೀಡಿ ಪ್ಲಾಸ್ಟಿಕ್ ತ್ಯಾಜ್ಯ ಪಡೆಯುವ ಪರಿಪಾಠವೂ ಇದೆ.

ಮಂಗಳೂರಿನ ಜನತೆಗೆ ಕಸ ಎಂದರೆ ತೀರಾ ತಿರಸ್ಕಾರ ಭಾವನೆ ಇದ್ದಂತಿದೆ. ತಮ್ಮ ಮನೆಯಿಂದ ಕಸ ಹೊರಗೆ ಬಿದ್ದರೆ ಸಾಕು ಎಂಬ ಭಾವನೆ ಜನರಲ್ಲಿ ಮನೆಮಾಡಿದ್ದಷ್ಟು ಸಮಯವೂ ಈ ಸಮಸ್ಯೆಗೆ ಕೊನೆ ಎಂಬುದು ಇರುವುದಿಲ್ಲ. ಬದಲಿಗೆ ಕಸವನ್ನು ಪ್ರತ್ಯೇಕಿಸಿ ಇಡುವುದು ಸಹಿತ ಸೂಕ್ತ ವಿಲೇವಾರಿಯ ಕ್ರಮಗಳು ಮನೆಯಲ್ಲೇ ಆರಂಭವಾದರೆ ಬಹಳಷ್ಟು ಸಮಸ್ಯೆಗಳು ದೂರವಾಗುತ್ತವೆ' ಎಂದ ಹರೀಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT