ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಬೆಳಕಿನಡಿ...

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಂಕಲನ ನಡೆಯುವ ಮೇಜಿನ ಮುಂದೆ ಕುಳಿತು ದೃಶ್ಯಗಳನ್ನು ನೋಡಿದವರಿಂದ ಬಂದ ಪ್ರತಿಕ್ರಿಯೆ ಕಂಡು ದೀಪಕ್ ನಂಬಿಕೆಯ ದೀಪ ಜೋರಾಗಿ ಉರಿಯತೊಡಗಿದೆ. `ಮಾಗಡಿ~ ಅವರ ಪಾಲಿಗೆ ಸದ್ಯಕ್ಕೆ ಕಾಣುತ್ತಿರುವ ಭರವಸೆಯ ಬೆಳಕು.

ಈ ಸಿನಿಮಾ ತಮ್ಮ ಕನಸಿನ ಪ್ರಾಜೆಕ್ಟ್ ಎನ್ನುತ್ತಾ ಅವರು ನಿರ್ದೇಶಕ ಸುರೇಶ್ ಗೋಸ್ವಾಮಿ ಕಡೆಗೆ ನೋಟ ಬೀರಿದರು. ಗೋಸ್ವಾಮಿ ಅಹುದೆಂಬಂತೆ ತಲೆಯಾಡಿಸಿದರು.
ಅಂದುಕೊಂಡದ್ದು 45 ದಿನ. ಆದರೆ, ಚಿತ್ರೀಕರಣ ಮುಗಿಸಲು ಸಾಧ್ಯವಾಗಿದ್ದು 59 ದಿನಗಳಲ್ಲಿ. ನಿರ್ಮಾಪಕ ಭಾ.ಮಾ.ಹರೀಶ್ ಮೊದಮೊದಲು ಈ ವಿಷಯವಾಗಿ ಸಹಜವಾಗಿಯೇ ಕೊಸರಾಡಿದರಂತೆ.
 
ಆದರೆ, ಸಿನಿಮಾ `ರಷಸ್~ ನೋಡಿದ ಮೇಲೆ ಅವರ ಬೇಸರ ಮರೆಯಾಗಿದ್ದು ನಿರ್ದೇಶಕ ಗೋಸ್ವಾಮಿಯವರಿಗೆ ಸಮಾಧಾನ ತಂದಿದೆ. ಅಂದುಕೊಂಡಿದ್ದಕ್ಕಿಂತ ಸಿನಿಮಾ ಚೆನ್ನಾಗಿ ಬಂದಿದೆ ಎಂಬುದು ಅವರ ಒಂದು ಸಾಲಿನ ಪ್ರತಿಕ್ರಿಯೆ.

ಚಿತ್ರದ ಕುರಿತು ಹೆಚ್ಚು ಮಾತನಾಡಿದ್ದು ನಾಯಕ ದೀಪಕ್. ರಾಜೇಶ್ ರಾಮನಾಥ್ ಸಂಗೀತ ಚೆನ್ನ, ವಿಶ್ವ ಎಡಿಟಿಂಗ್ ಸೂಪರ್, ಡಾನ್ಸ್ ಮಾಸ್ಟರ್ ರಘು ಕೊರಿಯಾಗ್ರಫಿ ಫೈನ್, ಕ್ಯಾಮೆರಾಮನ್ ರಮೇಶ್ ಕೆಲಸ ಫೆಂಟಾಸ್ಟಿಕ್- ಹೀಗೆ ತಮ್ಮ ತಂಡದ ಎಲ್ಲರ ಬೆನ್ನುತಟ್ಟಲು ಅವರು ಹೊಗಳಿಗೆಯ ಸುರಿಮಳೆಗರೆದರು.

ಕೇರಳ ಮೂಲದ ನಾಯಕಿ ರಕ್ಷಿತಾ ಚಿತ್ರೀಕರಣಕ್ಕೆ ಒಂದು ತಾಸು ಮುಂಚೆಯೇ ಸಂಭಾಷಣೆ ಹೇಳಿಸಿಕೊಂಡು ಸಿದ್ಧಗೊಳ್ಳುತ್ತಿದ್ದ ರೀತಿಯನ್ನೂ ಮೆಚ್ಚಿಕೊಂಡರು. ಆದರೆ, ರಕ್ಷಿತಾ ಔತಣಕೂಟದಲ್ಲಿ ಹಾಜರಿರಲಿಲ್ಲ.

ಚಿತ್ರದಲ್ಲಿ ದುಷ್ಟ ಕಾರ್ಪೊರೇಟರ್ ಪಾತ್ರ ನಿರ್ವಹಿಸಿರುವ ಸುರೇಶ್ ಚಂದ್ರ ಚಿತ್ರೀಕರಣ ನಡೆದ ನಿರ್ಮಾಪಕರ ಸಹೋದರನ ಮನೆಯಲ್ಲಿದ್ದ `ಪಗ್~ ನಾಯಿಗೆ ತಿಮ್ಮೇಗೌಡ ಎಂದು ಹೆಸರಿಟ್ಟಿರುವುದನ್ನು ನೆನಪಿಸಿಕೊಂಡು ನಕ್ಕರು. ನಿರ್ದೇಶಕರ ಶ್ರದ್ಧೆಯ ಕುರಿತು ಅವರ ಮಾತಿನಲ್ಲಿ ಹೊಗಳಿಕೆ ಇತ್ತು. ದೀಪಕ್‌ಗೆ ಈ ಚಿತ್ರ ಬ್ರೇಕ್ ನೀಡಲಿ ಎಂಬುದು ಅವರ ಹಾರೈಕೆ.

ಸುದ್ದಿಗೋಷ್ಠಿಗೆ ಸುಮಾರು ಒಂದು ತಾಸು ತಡವಾಗಿ ಬಂದ ಅತಿಥಿ ಎನ್.ಕುಮಾರ್, ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಕ್ಕಷ್ಟೇ ಮಾತನ್ನು ಸೀಮಿತಗೊಳಿಸಿದರು.

`ಮೆಜೆಸ್ಟಿಕ್~ ಚಿತ್ರ ಮಾಡಿದಾಗ ಇದ್ದ ಪಾಸಿಟಿವ್ ಎನರ್ಜಿ ಈ ಚಿತ್ರದಲ್ಲೂ ಕಾಣುತ್ತಿದೆ. ಚಿತ್ರೀಕರಣ ಮುಗಿದಿದ್ದು, ಇನ್ನೇನು ರೀರೆಕಾರ್ಡಿಂಗ್ ಕೆಲಸ ಶುರುವಾಗುತ್ತದೆ. ಎಲ್ಲಾ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಭಾ.ಮಾ.ಹರೀಶ್ ಮಾತನ್ನು ಚುಟುಕಾಗಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT