ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡೆಲಿಂಗ್- ಸಿನಿಮಾ ಒಂದೇ, ಆದರೂ...

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಹೊಸವರ್ಷಕ್ಕೆ ಹೊಸಮುಖವೊಂದು ಕನ್ನಡ ಚಿತ್ರರಂಗಕ್ಕೆ ದೊರೆತಿದೆ. ಮಾಡೆಲ್ ಜಗತ್ತಿನಿಂದ ಸೆಲ್ಯುಲಾಯ್ಡ ಜಗತ್ತಿಗೆ ಜಿಗಿದವರು ದೀಪಿಕಾ ಕಮಯ್ಯ. ಕೊಡಗಿನ ಬೆಡಗಿ. ದರ್ಶನ್ ಅಭಿನಯದ `ಚಿಂಗಾರಿ~ ಚಿತ್ರದ ನಾಯಕಿ. ಕನ್ನಡದಲ್ಲಿ ಇದು ಇವರ ಮೊದಲ ಚಿತ್ರ.
ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದಾಗಿನಿಂದ ಹಿಡಿದು ಕ್ಯಾಮೆರಾ ಎದುರಿಸಿದ ಕ್ಷಣದವರೆಗೆ ವಿವಿಧ ಮಜಲುಗಳ ಕುರಿತು ದೀಪಿಕಾ `ಮೆಟ್ರೊ~ ಜತೆ ಮಾತನಾಡಿದರು. ಈ ಚೆಲುವಿನ ಚಿಂಗಾರಿಯ ಅನುಭವಗಳು ಈಗ ನಿಮ್ಮ ಮುಂದೆ.

ಮಾಡೆಲಿಂಗ್‌ಗೂ ಸಿನಿಮಾಗೂ ಇರುವ ಮುಖ್ಯ ವ್ಯತ್ಯಾಸವೇನು?
ಎರಡೂ ಒಂದೇ ಆದರೂ ಬೇರೆ ಬೇರೆ! ನಾನು ಐದು ವರ್ಷ ರೂಪದರ್ಶಿಯಾಗಿದ್ದೆ. ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದೆ. ಅಲ್ಲೆಲ್ಲಾ ಕ್ಯಾಮೆರಾ ಎದುರಿಸಿದ್ದೆ. ಆದರೆ ಸಿನಿಮಾಕ್ಕಾಗಿ ಕ್ಯಾಮೆರಾ ಎದುರಿಸುವುದೇ ಬೇರೆ. ಜಾಹೀರಾತುಗಳಿಗೆ ಅಭಿನಯಿಸುವಾಗ ಯಾವುದೇ ಅಂಜಿಕೆ ಇರುತ್ತಿರಲಿಲ್ಲ. ಚಿಂಗಾರಿ ಚಿತ್ರೀಕರಣದ ಆರಂಭದಲ್ಲಿ ಒಂಥರಾ ಹೆದರಿಕೆ ಇತ್ತು. ಎಲ್ಲಿ ಏನು ತಪ್ಪಾಗುತ್ತದೋ ಎನ್ನುವ ಭಯ. ಆದರೆ ಒಂದೂವರೆ ವರ್ಷಗಳ ಈ ಸಿನಿಮಾ ಯಾನ ನನಗೆ ಹೊಸತನ್ನು ಕಲಿಸಿತು. ಕ್ರಮೇಣ ಕ್ಯಾಮೆರಾಗೆ ಒಗ್ಗಿಕೊಂಡೆ. ನನ್ನೆಲ್ಲಾ ಪರಿಶ್ರಮ ಹಾಕಿದೆ.

ರೂಪದರ್ಶಿಗಳಾದವರು ಅಭಿನಯದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಮಾತಿದೆಯಲ್ಲಾ?
ಅದು ನಿಜವಿರಬಹುದು. ಆದರೆ ನನ್ನ ಮಟ್ಟಿಗೆ ಅಲ್ಲ. ಏಕೆಂದರೆ `ಚಿಂಗಾರಿ~ಗೂ ಮೊದಲು ತಮಿಳು ಚಿತ್ರವೊಂದರಲ್ಲಿ ನಟಿಸಿದ್ದೆ. `ಆನ್ಮಯ್ ತವರೇಲ್~ ಅನ್ನುವುದು ಅದರ ಹೆಸರು. ಈ ಪುಟ್ಟ ಅನುಭವ ನನಗಿತ್ತು. ಇದರಿಂದ ಅಭಿನಯ ಸುಲಭವಾಯಿತು. ಮಾಡೆಲಿಂಗ್‌ನಿಂದ ಸಿನಿಮಾಕ್ಕೆ ಇದ್ದಕ್ಕಿದ್ದಂತೆ ಧುಮುಕಿದಾಗ ಬಹುತೇಕರು ಕಷ್ಟ ಎದುರಿಸುವುದು ಸಹಜ.

ಚಿಂಗಾರಿ~ ನಿಮಗೆ ಬ್ರೇಕ್ ನೀಡಲಿದೆಯೇ?
ಖಂಡಿತ. ಇಡೀ ಚಿತ್ರ ಸ್ಟೈಲಿಶ್ ಆಗಿ ಮೂಡಿಬಂದಿದೆ. ನಾಯಕ ಪ್ರಧಾನ ಚಿತ್ರವಾದರೂ ನನ್ನ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರೆತಿದೆ. ನಿರ್ದೇಶಕ ಎ.ಹರ್ಷ ನನ್ನೊಳಗಿನ ಅಭಿನೇತ್ರಿಯನ್ನು ಬಡಿದೆಬ್ಬಿಸಿದ್ದಾರೆ. ಶೀಘ್ರವೇ ಸಿನಿಮಾ ತೆರೆಮೇಲೆ ಬರಲಿದೆ. ಪ್ರೇಕ್ಷಕರು ಒಪ್ಪಿದರೆ ಅದಕ್ಕಿಂತ ದೊಡ್ಡ ಯಶಸ್ಸು ಬೇರೇನಿದೆ?

ನೀವು ಅಭಿನಯಿಸಲು ಇಚ್ಛಿಸುವ ಕನ್ನಡದ ನಟರು ಯಾರು?
ದರ್ಶನ್ ಅವರಂತಹ ದೊಡ್ಡ ನಟರೊಂದಿಗೆ ಅಭಿನಯಿಸಬೇಕು ಎಂಬ ಕನಸು ಈಡೇರಿದೆ. ಇನ್ನೂ ದೊಡ್ಡ ನಟರ ಜತೆ ನಟಿಸಬೇಕು ಎಂಬ ಆಸೆ ಇದೆ. ಪುನೀತ್, ಸುದೀಪ್ ಅವರಂತಹ ನಟರ ಜತೆ ನಟಿಸುವ ಭಾಗ್ಯ ಸಿಗಲಿ ಎಂದು ಬಯಸುತ್ತೇನೆ.

ಸಿನಿಮಾ ನಿಮ್ಮ ಆಯ್ಕೆ ಅಲ್ಲದೇ ಇದ್ದರೆ ಬೇರೇನಾಗಿರುತ್ತಿದ್ದಿರಿ?
ಖಂಡಿತ ಒಬ್ಬ ಮಾಡೆಲ್ ಆಗಿರುತ್ತಿದ್ದೆ. ಮೊದಲಿನಿಂದಲೂ ಅದು ನಾನು ಬಲ್ಲ ಕ್ಷೇತ್ರ. ನಾನು ನಗರದ ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿರುವಾಗಲೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟೆ. ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ. ಎಂಟಿವಿಯಂತಹ ವಾಹಿನಿಗಳಲ್ಲಿ ಅವಕಾಶ ದೊರೆತಿತ್ತು.

ನಿಮ್ಮ ಹವ್ಯಾಸಗಳೇನು?
ಡಾನ್ಸ್‌ನಲ್ಲಿ ನನಗೆ ಹೆಚ್ಚು ಒಲವು. ಅದು ಬಿಟ್ಟರೆ ಸಿನಿಮಾಗಳನ್ನು ನೋಡುತ್ತೇನೆ. ಅದರಲ್ಲಿಯೂ ತಮಿಳು, ತೆಲುಗು ಚಿತ್ರಗಳೆಂದರೆ ಪಂಚಪ್ರಾಣ. ಅಲ್ಲಿ ವೈವಿಧ್ಯ ಇರುತ್ತದೆ. ಹೆಚ್ಚು ಹೆಚ್ಚು ಪ್ರಯೋಗಗಳು ನಡೆಯುತ್ತವೆ.

ಹಾಗಾದರೆ ಕನ್ನಡ ಸಿನಿಮಾಗಳು?
ಕನ್ನಡ ಸಿನಿಮಾಗಳಲ್ಲೂ ಪ್ರಯೋಗ ನಡೆಯುತ್ತದೆ. ಆದರೆ ಅಲ್ಲೊಂದು ಇಲ್ಲೊಂದು. ಅನುಕರಣೆಯೇ ಹೆಚ್ಚು. ಹೊಸತನ್ನು ಯೋಚಿಸುವವರ ಸಂಖ್ಯೆ ಕಾಲಿವುಡ್- ಟಾಲಿವುಡ್‌ನಲ್ಲಿ ಹೆಚ್ಚಿದೆ. ಕನ್ನಡ ಚಿತ್ರರಂಗ ಬೇರೊಂದು ಚಿತ್ರರಂಗವನ್ನು ಅವಲಂಬಿಸಬಾರದು ಎಂಬುದು ನನ್ನ ಕಳಕಳಿ.

ಬೆಂಗಳೂರಿನ ಬಗ್ಗೆ ಒಂದಿಷ್ಟು ಹೇಳಿ...
ನಾನು ಎಲ್ಲಿಗೇ ಹೋದರೂ ಈ ಊರಿನತ್ತಲೇ ಮನಸ್ಸು ತುಡಿಯುತ್ತಿರುತ್ತದೆ. ಯಾವಾಗ ಊರಿಗೆ ಮರಳುತ್ತೇನೋ ಎಂಬ ಕಾತರ ಇರುತ್ತದೆ. ಇದು ನನ್ನೊಬ್ಬಳದೇ ಮಾತಲ್ಲ. ಮುಂಬೈ, ದೆಹಲಿ, ಕೋಲ್ಕತ್ತ ಹೀಗೆ ಯಾವುದೇ ಊರಿನವರನ್ನು ಕೇಳಿ ನೋಡಿ. ಅವರಿಗೆ ಬೆಂಗಳೂರಿನ ಬಗ್ಗೆ ಏನೋ ಒಂಥರ ಪ್ರೀತಿ. ಅದಕ್ಕೆ ಇಲ್ಲಿನ ಸಮಶೀತೋಷ್ಣ ಹವಾಗುಣ ಕಾರಣ ಇರಬಹುದು. ಬೆಂಗಳೂರು ಎಂದರೆ ಹಸಿರು ಎಂಬ ಕಾರಣವೂ ಇರಬಹುದು. ಐ ಲವ್ ಬೆಂಗಳೂರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT