ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾದಂಡ ಹಾಕಿ ನಮ್ಮೆ'ಗೆ ದಿನಗಣನೆ

Last Updated 12 ಏಪ್ರಿಲ್ 2013, 7:06 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 17ನೇ ವರ್ಷದ ಕೊಡವ `ಮಾದಂಡ ಹಾಕಿ ನಮ್ಮೆ' ಪಂದ್ಯಾವಳಿಯು ಏ.14ರಂದು ಆರಂಭವಾಗಲಿದೆ ಎಂದು ಹಾಕಿ ನಮ್ಮೆಯ ಮುಖ್ಯ ಸಂಚಾಲಕ ಎಂ.ಪಿ. ತಿಮ್ಮಯ್ಯ ತಿಳಿಸಿದರು.

ವಿರಾಜಪೇಟೆ ಸಮೀಪದ ಬಾಳಗೋಡುವಿನ ಕೊಡವ ಸಮಾಜದ ಒಕ್ಕೂಟಗಳ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಛಯದ ವೇದಿಕೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದ ಅವರು ಈ ವಿಷಯ ತಿಳಿಸಿದರು.

ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಛಯದ ಜಾಗದಲ್ಲಿ ಪಂದ್ಯಾಟವನ್ನು ನಡೆಸಲು ಎರಡು ಕ್ರೀಡಾಂಗಣವನ್ನು ಸಜ್ಜುಗೊಳಿಸಿದ್ದು, ಒಂದನೇ ಕ್ರೀಡಾಂಗಣದಲ್ಲಿ ಸುಮಾರು 12 ಸಾವಿರ ಜನರು ಹಾಗೂ 2ನೇ ಕ್ರೀಡಾಂಗಣದಲ್ಲಿ ಒಂದು ಸಾವಿರ ಜನರು ಕ್ರೀಡಾಕೂಟವನ್ನು ವೀಕ್ಷಿಸುವ ಗ್ಯಾಲರಿಯನ್ನು ನಿರ್ಮಿಸಲಾಗಿದೆ ಎಂದರು.

ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಅಪ್ಪಚ್ಚು ರಂಜನ್, ಸಂಸದ ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ, ಟಿ. ಜಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಎಂ.ಎನ್. ಬೆಳ್ಳಿಯಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಎಂ.ಸಿ. ಮೊಣ್ಣಪ್ಪ, ವಿರಾಜಪೇಟೆ ತಾಲ್ಲೂಕಿನ ಅಕ್ರಮ -ಸಕ್ರಮ ಸಮಿತಿಯ ಅಧ್ಯಕ್ಷ ಎಂ.ಪಿ. ಸುಜಾ ಕುಶಾಲಪ್ಪ, ಕಾವೇರಿ ಗ್ರೂಪ್ ಕಂಪೆನಿಯ ಅಧ್ಯಕ್ಷ ಅರುಣ್ ಕಾರ್ಯಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಉದ್ಘಾಟನಾ ವಿಶೇಷ
ಪಂದ್ಯಾವಳಿಯ ಉದ್ಘಾಟನೆಯ ಅಂಗವಾಗಿ ಕೊಡಗು ಇಲೆವೆನ್ ಮತ್ತು ಪಂಜಾಬ್ ಇಲೆವೆನ್ ತಂಡಗಳು ಸೆಣಸಾಟ ನಡೆಸಲಿವೆ. ಮೊದಲ ದಿನದ ವಿಶೇಷವಾಗಿ ಕೊಡವ ಸಂಸ್ಕೃತಿ ಬಿಂಬಿಸುವ ಕೊಡವ ನೃತ್ಯಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಸುಮಾರು 225 ಕೊಡವ ಕುಟುಂಬಗಳು ಭಾಗವಹಿಸಲಿದ್ದು, ಪ್ರತಿದಿನ ಎರಡು ಕ್ರೀಡಾಂಗಣದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಮೇ 12 ರಂದು ಫೈನಲ್ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು.

ಸೆಮಿ ಫೈನಲ್ ಪಂದ್ಯಾಟದ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಈ ಬಾರಿ ಕ್ರೀಡಾಕೂಟ ವೀಕ್ಷಣೆಗಾಗಿ ವಿರಾಜಪೇಟೆಯಿಂದ ಬಾಳುಗೋಡಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕ್ರೀಡಾಂಗಣದ ಒಳಗಡೆ ವೀಕ್ಷಕರಿಗೆ ತಿಂಡಿ ತಿನಿಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಹಾಕಿ ನಮ್ಮೆಯ ಸಂಚಾಲಕ ಸುಧೀರ್ ಗಣಪತಿ ಮಾತನಾಡಿ, ಪಂದ್ಯಾಟದಲ್ಲಿ ಕೊಡವ ಕುಟುಂಬಗಳು ಒಟ್ಟಾಗಿ ಭಾಗವಹಿಸುವ ಮೂಲಕ ಜನಾಂಗದ ಬಾಂಧವ್ಯ ಬೆಸೆಯುವ ಜೊತೆಗೆ ಸಂಸ್ಕೃತಿಯ ಬೆಳವಣಿಗೆಗೂ ಸಹಾಯಕವಾಗಲಿದೆ ಎಂದು ಹೇಳಿದರು.   ಹಾಕಿ ನಮ್ಮೆಯ ಕಾರ್ಯದರ್ಶಿ ಸಾಬು ತಿಮ್ಮಯ್ಯ, ಸಂಚಾಲಕರಾದ ಜಗದೀಶ್, ರವಿ ಸೋಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT