ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ವರದಿ ಆಧರಿಸಿ ಪ್ರಕರಣ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆಯೋಗ ಎಚ್ಚರಿಕೆ
Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದರೆ ಅಭ್ಯರ್ಥಿಯ ವಿರುದ್ಧ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಿದೆ' ಎಂದು ಭಾರತ ಚುನಾವಣಾ ಆಯೋಗದ ಮಹಾನಿರ್ದೇಶಕ ಅಕ್ಷಯ್ ರಾವುತ್ ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಭಾರತ ಮುಖ್ಯ ಚುನಾವಣಾ ಆಯೋಗ, ವಾರ್ತಾ ಇಲಾಖೆಯ ಸಹಯೋಗದಲ್ಲಿ ವಿಕಾಸಸೌಧದಲ್ಲಿ ಬುಧವಾರ ನಡೆದ `ಚುನಾವಣಾ ಪ್ರಕ್ರಿಯೆಗಳ ಕುರಿತ ಮಾಧ್ಯಮ ಕಾರ್ಯಾಗಾರ'ದಲ್ಲಿ ಮಾತನಾಡಿದರು.

ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಮೊದಲು ಬೆಳಕು ಚೆಲ್ಲುವುದೇ ಮಾಧ್ಯಮಗಳು. ಈ ಚುನಾವಣೆಯ ಸಂದರ್ಭ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಆಧಾರದಲ್ಲಿ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಿದೆ. ಜನರ ದೂರಿಗಾಗಿ ಕಾಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮತದಾರರಲ್ಲಿ ಜಾಗೃತಿ ಮೂಡಿಸಿ: `ಮೂರು ವರ್ಷಗಳಿಂದ ಆಯೋಗವು ಸುವ್ಯವಸ್ಥಿತವಾಗಿ ಮತದಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಮಾಧ್ಯಮಗಳ ಸಹಕಾರ ಅತೀ ಮುಖ್ಯ. ಮಾಧ್ಯಮಗಳು ಸ್ವಯಂಪ್ರೇರಿತವಾಗಿ ಮತದಾರರ ಜಾಗೃತಿ ಕಾರ್ಯದಲ್ಲಿ ತೊಡಗಬೇಕು. ಮತದಾರರಲ್ಲಿ ಸ್ಪೂರ್ತಿ ತುಂಬಿ ಜಾಗೃತಿ ಮೂಡಿಸಿ ಮಾಹಿತಿ ನೀಡಲು ಮಾಧ್ಯಮಗಳು ಸ್ವಲ್ಪ ಜಾಗ ಮೀಸಲಿಡಬೇಕು' ಎಂದು ಅವರು ವಿನಂತಿಸಿದರು.

ಸ್ವಯಂಸಂಹಿತೆ ಅಗತ್ಯ:  `ಕಾಸಿಗಾಗಿ ಸುದ್ದಿ (ಪೇಯ್ಡ ನ್ಯೂಸ್) ಮತದಾರರಲ್ಲಿ ಗೊಂದಲ ಉಂಟು ಮಾಡುತ್ತದೆ. ಕಾಸಿಗಾಗಿ ಸುದ್ದಿ ಮಾಡುವುದು ಅನೈತಿಕ. ಈ ಸಮಸ್ಯೆ ಪರಿಹಾರ ಕಂಡುಹಿಡಿಯಲು ಮಾಧ್ಯಮಗಳು ಸ್ವಯಂಸಂಹಿತೆ ಅಳವಡಿಸಿಕೊಳ್ಳಬೇಕು. ಆದರೆ, ಎಲ್ಲ ಮಾಧ್ಯಮ ಕೇಂದ್ರಗಳು ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತಿಲ್ಲ' ಎಂದು  ಬೇಸರ ವ್ಯಕ್ತಪಡಿಸಿದರು.

`ಚುನಾವಣಾ ವರದಿಗಾರಿಕೆ ಬಗ್ಗೆ ಆಯೋಗ ಈಗಾಗಲೇ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದನ್ನು ಮಾಧ್ಯಮಗಳು ಪಾಲಿಸಬೇಕು. ಕಾಸಿಗಾಗಿ ಸುದ್ದಿ ರೂಪದಲ್ಲಿ ಕೆಲವು ಪಕ್ಷಗಳ ಹಾಗೂ ಅಭ್ಯರ್ಥಿಗಳ ಪರವಾಗಿ ಸುದ್ದಿ ಪ್ರಕಟವಾಗಿರುವ ಬಗ್ಗೆ ಆಯೋಗಕ್ಕೆ ಈಗಾಗಲೇ ದೂರುಗಳು ಬಂದಿವೆ. ಈ ದೂರುಗಳನ್ನು ಆಯೋಗ ಪರಿಶೀಲನೆ ನಡೆಸುತ್ತಿದೆ' ಎಂದರು.

ಮಾಧ್ಯಮ ಸ್ನೇಹಿ: `ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರ ವೆಬ್‌ಸೈಟ್ ಅನ್ನು ಮಾಧ್ಯಮಸ್ನೇಹಿಯನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾಮಪತ್ರ ಸಲ್ಲಿಕೆ ಸಂದರ್ಭ ಅಭ್ಯರ್ಥಿಗಳು ನೀಡುವ ಆಸ್ತಿವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಫೇಸ್ ಬುಕ್, ಟ್ವಿಟರ್ ಸೇರಿದಂತೆ ನವ ಮಾಧ್ಯಮಗಳ ಮೂಲಕ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆಯೂ ಗಮನ ಹರಿಸಲಾಗುವುದು' ಎಂದು ಅವರು ಭರವಸೆ ನೀಡಿದರು.

`ಮತದಾನದ ದಿನ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟಪಡದವರಿಗೆ (ನೆಗೆಟಿವ್ ಓಟ್) ನೆರವಾಗಲು ಚುನಾವಣಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು. ನೆಗೆಟಿವ್ ಓಟ್ ಬಗ್ಗೆ ಆಯೋಗ ಪ್ರಚಾರ ಮಾಡಲು ಆಗುವುದಿಲ್ಲ. ಇದರಿಂದ ಮತದಾನ ಮಾಡಬೇಡಿ ಎಂಬ ಸಂದೇಶ ಹೋಗುವ ಸಾಧ್ಯತೆ ಇದೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು. 

`ನಮ್ಮ ದೇಶದ್ದು ದೊಡ್ಡ ಚುನಾವಣಾ ವ್ಯವಸ್ಥೆ. ದೇಶದಲ್ಲಿ 78 ಕೋಟಿ ಮತದಾರರು ಇದ್ದಾರೆ. ಇಂತಹ ದೊಡ್ಡ ವ್ಯವಸ್ಥೆಯನ್ನು ಯಾವ ರೀತಿ ನಿರ್ವಹಣೆ ಮಾಡಲಾಗುತ್ತದೆ ಎಂದು ಇತರ ರಾಷ್ಟ್ರಗಳು ಅಚ್ಚರಿ ವ್ಯಕ್ತಪಡಿಸುತ್ತಿವೆ. ಮಾಧ್ಯಮಗಳ ಪಾಲುದಾರಿಕೆಯಿಂದಾಗಿ 62 ವರ್ಷಗಳಿಂದ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾಧ್ಯವಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, `ಮಾಧ್ಯಮಗಳು ಹಾಗೂ ಆಯೋಗ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದರೆ ಈ ಚುನಾವಣೆ ಉತ್ತಮ ರೀತಿಯಲ್ಲಿ ಸಂಪನ್ನಗೊಳ್ಳಲಿದೆ. ಮಾಧ್ಯಮಗಳು ವಸ್ತುನಿಷ್ಠವಾಗಿ ಚುನಾವಣಾ ವಿಶ್ಲೇಷಣೆ ಮಾಡಬೇಕು' ಎಂದರು.

ವಿಶೇಷ ಕರ್ತವ್ಯ ಅಧಿಕಾರಿ (ಚುನಾವಣಾ ವೆಚ್ಚ ಮೇಲ್ವಿಚಾರಕರು) ಪಂಕಜ್ ಕುಮಾರ್ ಪಾಂಡೆ, `ಅಭ್ಯರ್ಥಿಗಳ ವೆಚ್ಚ, ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಪತ್ತೆಗೆ ನವೀನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಯೋಗ ಬಿಗು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಮತ್ತಷ್ಟು ಚಾಣಾಕ್ಷ ಆಗುತ್ತಿವೆ. ಇಂತಹ ಚಟುವಟಿಕೆಗಳಿಗೆ ತಡೆ ಒಡ್ಡುವುದು ದೊಡ್ಡ ಸವಾಲಾಗಿದೆ. ಜೊತೆಗೆ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಬಗ್ಗೆ ಮಿತಿ ನಿಗದಿಪಡಿಸುವ ವ್ಯವಸ್ಥೆ ಇಲ್ಲ' ಎಂದರು. 

`ಬ್ಯುಸಿನೆಸ್‌ಲೈನ್-ದಿ ಹಿಂದೂ' ಬ್ಯೂರೋ ಮುಖ್ಯಸ್ಥ ಕೆ.ಗಿರಿಪ್ರಕಾಶ್ ಕಾರ್ಯಾಗಾರ ಉದ್ಘಾಟಿಸಿದರು.  ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT