ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ಸೂನ್ ಎಂಬ ಜೂಜುಗಾರ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

  ಮತ್ತೆ ರೈತ ಮುಗಿಲತ್ತ ಮುಖ ಮಾಡಿದ್ದಾನೆ. ಮುಂಗಾರು ಮಳೆ ಇಂದು ಬರಬಹುದು ನಾಳೆ ಬರಬಹುದು ಎಂದು ಊಹೆ ಮಾಡಿ ಮಾಡಿ ನಿರಾಸೆಗೊಳ್ಳುತ್ತಿದ್ದಾನೆ. ರೇಡಿಯೊ, ದೂರದರ್ಶನಗಳಲ್ಲಿ ಹವಾಮಾನ ತಜ್ಞರ ನುಡಿಗಳನ್ನು ತದೇಕಚಿತ್ತದಿಂದ ಕೇಳುತ್ತಿದ್ದಾನೆ.
 
ವಿಜ್ಞಾನಿಗಳ ಹೇಳಿಕೆಗಳು ಮಾನ್ಸೂನ್‌ನೊಡನೆ ಹುಸಿಯಾಗುತ್ತಿದ್ದರೂ , ರೈತ ಅವರ ಹೇಳಿಕೆಗಳನ್ನು ದಿಟವೆಂದೇ ನಂಬುತ್ತಿದ್ದಾನೆ. ಕಾರಣ ಮಳೆಯನ್ನು ಬಿಟ್ಟು ರೈತ ತನ್ನ ಬದುಕನ್ನು ಊಹಿಸಿಕೊಳ್ಳಲಾರ.

 ಮುಂಗಾರು ಹಂಗಾಮಿನಲ್ಲಿ ಬಿತ್ತುವ ಬೀಜಗಳನ್ನು ಹದಮಾಡಿಟ್ಟುಕೊಂಡು ರೈತ ಕಾಯುತ್ತಿದ್ದಾನೆ. ವಾಡಿಕೆಯಂತೆ ಜೂನ್ ಒಂದರಿಂದ ಮಳೆ ಬಂದಿದ್ದರೆ ಮುಂಗಾರಿನ ಬೆಳೆಗಳು ಭೂಮಿಯ ತುಂಬ ಹಸಿರು ಹಾಸುತ್ತಿದ್ದವು.
 
ಮಾನ್ಸೂನ್ ಸ್ಥಿತಿ ಹೀಗೇ ಮುಂದುವರಿದರೆ ಈ ಸಲ ಬೆಳೆಗಳು ಕೈಕೊಡುವುದರಲ್ಲಿ  ಯಾವುದೇ ಸಂಶಯವಿಲ್ಲ. ಮತ್ತೆ ಭೀಕರ ಬರ ಎದುರಿಸುವತ್ತ ರೈತನ ಬದುಕು ಸಾಗಿದೆ. ರಾಜ್ಯ ಮತ್ತು ರೈತ ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ರಾಜಕೀಯ ನಾಯಕರು ತಮ್ಮ ಸ್ವಾರ್ಥಪರ ಹಿತಾಸಕ್ತಿಗಳಿಗನುಸಾರವಾಗಿ ಕುರ್ಚಿದಾಹದಲ್ಲಿ ಬಿದ್ದೊದ್ದಾಡುತ್ತಿರುವುದು ಮಾತ್ರ ರಾಜ್ಯದ ಜನರ ನಂಬಿಕೆಗೆ ಬಗೆದ ದ್ರೋಹವಾಗಿದೆ.

ಈ ಸಲ ಮುಂಗಾರು ಬೆಳೆ ವಿಫಲಗೊಳ್ಳುವುದರೊಂದಿಗೆ ಕೃಷಿ ಕ್ಷೇತ್ರದ ಮೇಲೆ ಭಾರಿ ಹೊಡೆತ ಬೀಳಲಿದೆ. ಅದು ಇಡೀ ದೇಶದ ಮೇಲೆ, ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಯಾವುದಾದರೂ ಕ್ರಮ ಕೈಗೊಳ್ಳಲು ಯೋಚಿಸುವುದು ಒಳಿತು.

 ಕಳೆದ ಹತ್ತು ವರ್ಷಗಳಲ್ಲಿ ಮಳೆಯ ಪ್ರಮಾಣ ಮಲೆನಾಡನ್ನು ಹೊರತುಪಡಿಸಿ ಮಿಕ್ಕ ಪ್ರದೇಶಗಳಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಬಯಲು ಸೀಮೆ ಪ್ರದೇಶಗಳಲ್ಲಂತೂ ಕೆರೆ ಕಟ್ಟೆಗಳು ತುಂಬಿ 10-15 ವರ್ಷಗಳೇ ಕಳೆದಿವೆ. ನೀರಿನ ಅವಲಂಬನೆಗಾಗಿ ಹೆಚ್ಚು ಹೆಚ್ಚು ಕೊಳವೆ ಬಾವಿಗಳನ್ನು ತೋಡಿದ ಪರಿಣಾಮ ಇಂದು ಅಂತರ್ಜಲದ ಮಟ್ಟ ಶೋಚನೀಯವಾಗಿ  ಇಳಿದಿದೆ.
 
ಮೇಲಾಗಿ ಕಳೆದ ಬಾರಿಯೂ ಸರಿಯಾಗಿ ಮಳೆಯಾಗದೆ ನೂರಾರು ತಾಲೂಕುಗಳು ಬರಗಾಲದಿಂದ ತತ್ತರಿಸುತ್ತಿವೆ. ಬರದ ಬೇಗೆಯಲಿ ಬೆಂದ ಭೂಮಿ ತಾಯಿ, ರೈತನೊಂದಿಗೆ ಚಾತಕ ಪಕ್ಷಿಯಂತೆ ವರುಣನಿಗಾಗಿ ಕಾಯುತ್ತಿದ್ದಾಳೆ. ರೈತನ ಕೂಗು ಅರಣ್ಯರೋದನವಾಗಿದೆ. ರೈತ ಈಗ ಯಾರನ್ನು ದೂರಬೇಕು ?

 ಗುಬ್ಬಿ ತಾಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT