ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾದ ಕೊಕ್ಕೊ ಅಂಗಳದ ಮಿಂಚು!

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಅಂದಿನ ಮೈಸೂರು ರಾಜ್ಯದ ಕೊಕ್ಕೊ ಆಟದ ಅಂಗಳ ದಲ್ಲಿ `ಮಿಂಚಿನ ಆಟಗಾರ~ನೆಂದೇ ಕರೆಸಿಕೊಂಡಿದ್ದ ಎಂ.ಎಸ್. ನಾಗರಾಜ್ ಈಗ ಬರೀ ನೆನಪು ಮಾತ್ರ.

ಜನವರಿ 2ರಂದು ತೀವ್ರ ಹೃದಯಾಘಾತದಿಂದ ನಿಧನರಾದ ನಾಗರಾಜ್ ಅವರ  ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿದರು. ಅರಮನೆ ನಗರಿಯ ಚಾಮರಾಜ ಮೊಹಲ್ಲಾದ ಜಯಲಕ್ಷ್ಮೀ ವಿಲಾಸ ರಸ್ತೆಯಲ್ಲಿರುವ ನಾಗರಾಜ್ ಅವರ ಮನೆಯಲ್ಲೆಗ ನೀರವ ಮೌನ. 62ರ ಹರೆಯದಲ್ಲಿಯೂ ಸಂಪೂರ್ಣ ಆರೋಗ್ಯದಿಂದ ಇದ್ದ ಅವರು ಏಕಾಏಕಿ ಹೀಗೆ ಹೋಗಿದ್ದನ್ನು ಅರಗಿಸಿಕೊಳ್ಳುವ ಪ್ರಯತ್ನದಲ್ಲಿ ಪತ್ನಿ ಪದ್ಮಾ, ಮಗಳು ಶ್ರುತಿ ಇದ್ದಾರೆ. ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಮಗ ಸ್ವರೂಪ್ ತಮ್ಮ ತಂದೆಯನ್ನು ನೆನೆದು ಗದ್ಗದಿತರಾಗುತ್ತಾರೆ. ತಂದೆಯಿಂದ ಪ್ರೇರಿತನಾಗಿ ಕೊಕ್ಕೊ, ಫುಟ್‌ಬಾಲ್, ಕ್ರಿಕೆಟ್ ಆಡಿರುವ ಅವರು, ಅಪ್ಪನ ಕುರಿತು ಒಂದಿಷ್ಟು ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಾಗರಾಜ್ ಅವರ ತಂದೆ ಶಿವಣ್ಣ ಅವರು ಫುಟ್‌ಬಾಲ್ ಆಟಗಾರರಾಗಿದ್ದ ವರು. ಆದರೆ ಮಗ ಮಾತ್ರ ಅಪ್ಪಟ ದೇಸಿ ಕ್ರೀಡೆಗೆ ಮನಸೋತರು. ಆಗಿನ ಮೈಸೂರು ರಾಜ್ಯದಲ್ಲಿಯೇ ಪ್ರತಿಷ್ಠಿತವಾಗಿದ್ದ ಪಯೋನಿಯರ್ ಕ್ಲಬ್‌ನ ಕೊಕ್ಕೊ ತಂಡದ ಅವಿಭಾಜ್ಯ ಅಂಗವಾಗಿಬಿಟ್ಟರು. 1969-70ರಲ್ಲಿ ಕ್ಲಬ್‌ನ ನಾಯಕನಾಗಿದ್ದ ಅವರು ತುಮಕೂರಿನ ಅಖಿಲ ಭಾರತ ಅಹ್ವಾನ ಟೂರ್ನಿಯೂ ಸೇರಿದಂತೆ ರಾಷ್ಟ್ರಮಟ್ಟದ ಟೂರ್ನಿಗಳ ಪ್ರಶಸ್ತಿ ಗೆಲ್ಲಲು ಕಾರಣರಾದರು.
ಉತ್ತಮ ಚೇಸರ್ ಮತ್ತು ಡಾಜರ್ ಆಗಿದ್ದ ಅವರ ನಾಯಕತ್ವದಲ್ಲಿ ತಂಡವು ಮೇರು ಸಾಧನೆ ಮಾಡಿತ್ತು. ಎದುರಾಳಿಗಳನ್ನು ಹಿಡಿದು ಹಾಕುವುದರಲ್ಲಿ ನಿಷ್ಣಾತರಾಗಿದ್ದ ಅವರು, ತಪ್ಪಿಸಿಕೊಳ್ಳುತ್ತ ಪ್ರತಿಸ್ಪರ್ಧಿ ಆಟಗಾರರಿಗೆ ಚಳ್ಳೇಹಣ್ಣು ತಿನ್ನಿಸುವುದರಲ್ಲಿಯೂ ನಿಪುಣರಾಗಿದ್ದರು.

ಕುಸ್ತಿ, ಫುಟ್‌ಬಾಲ್‌ನಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಕೊಕ್ಕೊದಲ್ಲಿಯೂ ಗಳಿಸಿದ್ದ ಕೀರ್ತಿ ಅಪಾರ. ಸಂಜೆಯ ಹೊತ್ತು ಕೊಕ್ಕೊ ಪಂದ್ಯಗಳು ನಡೆಯುತ್ತವೆ ಎಂದರೆ ಮೈದಾನಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಈ ಚುರುಕಿನ ಆಟವನ್ನು ಆಡುವ ಪ್ರತಿಭಾವಂತರಿಗೆ ನೌಕರಿ ಕೊಡಲು ಎಫ್.ಕೆ. ಇರಾನಿಯವರ ಜಾವಾ ಕಂಪೆನಿ ಸದಾ ಸಿದ್ಧವಾಗಿರುತ್ತಿತ್ತು. ನಾಗರಾಜ್ ಕೂಡ ಅಲ್ಲಿಯೇ ನೌಕರಿ ಗಳಿಸಿದರು. ಅವರ ಸಮಕಾಲೀನರಾದ ಡಾ. ಕೃಷ್ಣ (ಸದ್ಯ ಮೈಸೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರು), ವೆಂಕಟರಾಜು,  ಜೀವೇಂದ್ರ, ಎಚ್. ಮಹದೇವಪ್ಪ ಮುಂತಾದವರೂ ರಾಜ್ಯದ ಕೀರ್ತಿಯನ್ನು ಕೊಕ್ಕೊ ಆಟದ ಮೂಲಕ ಹೆಚ್ಚಿಸಿದ್ದರು. ಕೆಲವು ಕಾಲ ರಾಜ್ಯ ತಂಡಕ್ಕೆ ತರಬೇತಿಯನ್ನೂ ಸಹ ನೀಡಿದ್ದರು.

ಆಟದಲ್ಲಿ ಎಷ್ಟು ಚುರುಕು ಮತ್ತು ಬಿರುಸಾಗಿದ್ದರೋ, ವ್ಯಕ್ತಿತ್ವದಲ್ಲಿ ಅಷ್ಟೇ ಸರಳ ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಯಾವುದೇ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನಗಳಿಗೆ ಆಸೆಪಡ ಲಿಲ್ಲ. ಆದರೆ ಅವರ ಸಾಧನೆಯನ್ನು ಮೆಚ್ಚಿ ಬರಬೇಕಿದ್ದ ಪ್ರಶಸ್ತಿಗಳೂ ಅವರಿಗೆ ಸಿಗಲಿಲ್ಲ ಎನ್ನುವುದು ಮಾತ್ರ ವಿಷಾದದ ಸಂಗತಿ. ಗುರುತಿಸಬೇಕಾದ ಅಧಿಕಾರ ವರ್ಗದ ನಿರ್ಲಕ್ಷ್ಯಭಾವವೂ ಇದಕ್ಕೆ ಮೂಲ ಕಾರಣ.

ಅವರು ನಾಯಕರಾಗಿದ್ದ ತಂಡದ ಆಟಗಾರರಿಗೆ ಏಕಲವ್ಯ ಸೇರಿದಂತೆ ಮತ್ತಿತರ ಪ್ರಶಸ್ತಿಗಳು ಬಂದಾಗಲೆಲ್ಲ ಮನದುಂಬಿ ಸಂತಸಪಟ್ಟವರು ಅವರು. ಸಂಘಟನೆಗಳ ಪದಾಧಿಕಾರಿಯಾಗುವ ಅವಕಾಶ ಬಂದಾಗಲೂ ಬೇರೆಯವರಿಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದವರು. ಅವರಿಗೆ ತಮ್ಮ ಮೆಚ್ಚಿನ ಕೊಕ್ಕೊ  ಆಟವು ಅಂತರರಾಷ್ಟ್ರೀಯಮಟ್ಟದಲ್ಲಿ ಬೆಳೆಯ ಬೇಕು ಎಂಬ ಕನಸಿತ್ತು. ಆ ಆಸೆಯನ್ನು ಮನದಲ್ಲಿಟ್ಟುಕೊಂಡೇ ಮರಳಿ ಬಾರದ ಲೋಕಕ್ಕೆ ಸಾಗಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT