ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರನಬಸರಿಯಲ್ಲೊಂದು ಮಾದರಿ ಶಾಲೆ...!

Last Updated 9 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮುಖ್ಯವಾಹಿನಿಗೆ ತರುವಲ್ಲಿ ರೋಣ ತಾಲ್ಲೂಕಿನ ಮಾರನಬಸರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಇತರ ಶಾಲೆಗಳಿಗೆ ಮಾದರಿಯಾಗಿದೆ.

ಇಲ್ಲಿನ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಕ್ರೀಡಾ ಸಾಧನೆಗೇನೂ ಕೊರತೆಯಿಲ್ಲ. ವಿದ್ಯಾರ್ಥಿಗಳು ಮಲ್ಲಕಂಬ, ಅಟ್ಯಾಪಟ್ಯಾ, ರೊಪ ಸ್ಕಿಂಪಿಂಗ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಉತ್ತಮ ಸಾಧನೆ ತೋರಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

2010ನೇ ಸಾಲಿನ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟದಲ್ಲಿ ಶೃತಿ ಹೂಗಾರ, ಸಂಗೀತಾ ಪೂಜಾರ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಟ್ಯಾಪಟ್ಯಾ ರಾಷ್ಟ್ರಮಟ್ಟದಲ್ಲಿ ಕಳಕಮ್ಮ ಮರಡಿ ಸಾಧನೆ ತೋರಿದ್ದಾರೆ. ಅಷ್ಟೇ ಅಲ್ಲದೆ ಈ ಶಾಲೆಯ ವಿದ್ಯಾರ್ಥಿನಿಯರಾದ ಸಂಗೀತಾ ಪೂಜಾರ, ವಿಜಯಲಕ್ಷ್ಮೀ ಜಾಲಿಹಾಳ, ಶಾಜಿದಾ ದೋಟಿಹಾಳ ಹಾಗೂ ರಾಜೇಶ್ವರಿ ಮರಡಿ ಅ. 1ರಿಂದ 3ರವರೆಗೆ ಆಂಧ್ರಪ್ರದೇಶದ ಧರ್ಮಾವರಂನಲ್ಲಿ ನಡೆದ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ರೊಪ ಸ್ಕಿಂಪಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿದ್ದಾರೆ.

ಆಸಕ್ತಿ : ಮೂಲತಃ ಮೈಸೂರಿನವರಾದ ವಿಜ್ಞಾನ ವಿಷಯ ಶಿಕ್ಷಕ ಜಿ.ಎನ್. ಉಮೇಶ 2005ರಲ್ಲಿ ಈ ಶಾಲೆಯಲ್ಲಿ ಸೇವೆಗೆ ಸೇರಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕರ್ನಾಟಕದ ಜನಪದ ನೃತ್ಯವಾದ ಕಂಸಾಳೆಯನ್ನು ಪರಿಚಯಿಸಿದರು. ಅಷ್ಟೇ ಅಲ್ಲದೆ, ಕಂಸಾಳೆ ನೃತ್ಯ ತರಬೇತುದಾರರನ್ನು ಕರೆಯಿಸಿ ರಜಾ ದಿನದಲ್ಲಿ ವಿದ್ಯಾರ್ಥಿಗಳಿಗೆ 15ದಿನ ತರಬೇತಿ ಕೊಡಿಸಿದ್ದಾರೆ. ಇದನ್ನೇ ನಿತ್ಯ ಪರಿಪಾಠವನ್ನಾಗಿಸಿಕೊಂಡು ವಿದ್ಯಾರ್ಥಿಗಳು ಕಂಸಾಳೆ ನೃತ್ಯವನ್ನು ಉತ್ತಮವಾಗಿ ಪ್ರದರ್ಶಿಸುತ್ತಿದ್ದಾರೆ. ಅಚ್ಚುಕಟ್ಟಾಗಿ ಕಂಸಾಳೆ ನೃತ್ಯವನ್ನು ಕರಗತ ಮಾಡಿಕೊಂಡಿರುವ ವಿದ್ಯಾರ್ಥಿನಿಯರು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ.

ಗಜೇಂದ್ರಗಡದಲ್ಲಿ ನಡೆದ ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕುಷ್ಟಗಿ ತಾಲ್ಲೂಕಿನ ಹನುಮನಾಳದಲ್ಲಿ ನಡೆದ ಕುಷ್ಟಗಿ ತಾಲ್ಲೂಕು ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಉತ್ಸವ-2010, ಗದುಗಿನಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳೋತ್ಸವದಲ್ಲಿ ಶಾಲೆಯ ಕಂಸಾಳೆ ನೃತ್ಯ ತಂಡ ಭಾಗವಹಿಸಿ ಜನಮನ ಗೆದ್ದಿದೆ.  

ಮಲ್ಲಕಂಬ ಪಟು ಗಂಗಮ್ಮ ಸಾಧನೆ
ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿನಿ ಗಂಗಮ್ಮ ಕಂಬಾಳಿಹಿರೇಮಠ ರೊಪ ಮಲ್ಲಕಂಬದಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಕ್ರೀಡೆಯನ್ನು ಇಲ್ಲಿನ ವಿದ್ಯಾರ್ಥಿನಿಯರಿಗೆ ಹೇಳಿಕೊಟ್ಟು ತರಬೇತಿ ನೀಡುತ್ತಿದ್ದಾರೆ. 25-30 ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿನಿಯಿಂದ ಮಾಗದರ್ಶನ, ತರಬೇತಿ ಪಡೆದ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿ ಪ್ರಸಂಶೆಗೆ ಪಾತ್ರರಾಗಿದ್ದಾರೆ. 

ಶಾಲೆಯ ಅವಧಿ ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿದಿನ ಆಟಗಳನ್ನು ಆಡಿಸಲಾಗುತ್ತದೆ. ಅವರ ಆಸಕ್ತಿಗೆ ಅನುಗುಣವಾಗಿ ಆಟದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. ಇದಕ್ಕೆ ಶಾಲೆಯ ಎಲ್ಲ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಸದಸ್ಯರು ಸಹಕಾರ ನೀಡುತ್ತಾರೆ ಎಂದು ಮುಖ್ಯಾಧ್ಯಾಪಕ ಡಿ.ಬಿ. ಪಾಟೀಲ ಹೇಳುತ್ತಾರೆ.

ಈ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿ ವಿದ್ಯಾರ್ಥಿಗೂ ಭಾವಚಿತ್ರ ಹೊಂದಿದ ಗುರುತಿನ ಚೀಟಿಯ ಚೆಸ್ಟ್‌ಕಾರ್ಡ್ ನೀಡಲಾಗಿದೆ. ಸಮಯ ಪರಿಪಾಲನೆ, ಕ್ರಮಬದ್ಧ ಅಧ್ಯಯನ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಸಹ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಬಳಗದ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT