ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾರಾಟವೇ ಸರ್ವಸ್ವ'

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೋರ್ಡ್ ರೂಮಿನ ಸುತ್ತ ಮುತ್ತ

ವಿಕ್ರಯದ ಆಟದೊಳಗೇನಿಹುದುದೆನ್ನದಿರು/
ಅಕ್ರಮದ ವಹಿವಾಟುಗಳನ್ನೆಲ್ಲ ಇವರು//
ಸಕ್ರಮವಾಗಿಸುತ ಎದೆತನವ ತೋರಿಹರು/
ವಿಕ್ರಯಾರ್ಜುನರಿವರೆ! - ನವ್ಯಜೀವಿ//
ನಮ್ಮ ದೇಹದಲ್ಲಿನ ಅಂಗಾಂಗಗಳಲ್ಲೆಲ್ಲ ಅತ್ಯಂತ ಅವಶ್ಯಕವಾದ ಅಂಗ ಯಾವುದು? ಇದಕ್ಕೆ ಒಬ್ಬೊಬ್ಬರು ಒಂದೊಂದು ಉತ್ತರವನ್ನು ಕೊಟ್ಟಾರು.

ಮೇಧಾವಿ ತಾನೆಂದು ತಿಳಿದವನು `ಮೆದುಳು' ಎಂದರೆ, ಆಟಗಾರನೊಬ್ಬ `ಕೈ ಕಾಲುಗಳು' ಎಂದಾನು. ಹುಡುಗಿಯರ ಹಿಂದೆ ಬಿದ್ದವ ಮುಖದಲ್ಲಿನ `ಕಣ್ಣು', ಮೂಗು, ತುಟಿ', ಹೀಗೆ ಎಲ್ಲವನ್ನೂ ಉದಾಹರಿಸಿದರೆ ಕುಡಿತಕ್ಕೆ ಶರಣು ಎಂದವ. `ಲಿವರ್' ಎನ್ನುತ್ತ ಕೈಯೊಳಗಿರುವ ಗ್ಲಾಸನ್ನು ತುಟಿಗೇರಿಸಿಯಾನು!

ಯೋಗಿಯಾಗಬೇಕೆಂದಿರುವವನು ಬೆನ್ನನ್ನು ಸೆಟೆದು ನಡುವನ್ನು ಬಿಗಿದು ಧ್ಯಾನದಲ್ಲಿ ಕುಳಿತರೆ, ರೋಗಿಯಾಗಬೇಕೆಂದು ನಿಶ್ಚಯಿಸಿರುವವನು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುತ್ತ ತನ್ನ ಮುಂದಿರುವ ಹೋಳಿಗೆಯ ಪಾತ್ರೆಗೆ ಎಂಟನೇ ಸಲ ಕೈಯೊಡ್ಡಿರುತ್ತಾನೆ. ಇವರೆಲ್ಲರ ವಿಚಾರಧಾರೆಗಳು ಅವರವರ ಅನುಸಾರ ಸರಿಯೇ ಆಗಿದೆ. ದೇಹದಲ್ಲಿ ಇದು ಅವಶ್ಯಕ. ಇದು ಅನಾವಶ್ಯಕ ಎಂದು ಹೇಳುವಂತೆಯೇ ಇಲ್ಲ. ಎಲ್ಲವೂ ಇರಬೇಕು. ಎಲ್ಲವೂ ಬೇಕು. ಒಬ್ಬೊಬ್ಬರಿಗೆ ಒಂದು ಮುಖ್ಯ, ಅಷ್ಟೆ!

ಈ ಪ್ರಶ್ನೆಯನ್ನೇ ಈಗ ಸ್ವಲ್ಪ ಬದಲಾಯಿಸಿ ನಮ್ಮ ದೇಹದಲ್ಲಿರುವ ಅಂಗಾಂಗಗಳಲ್ಲೆಲ್ಲಾ ಸದಾ ಜೀವಂತವಾಗಿಯೇ ಇರಬೇಕಾದ ಅಂಗ ಯಾವುದು? ಎಂದು ಕೇಳುವುದಾದರೆ, ಅದಕ್ಕೆ ಉತ್ತರ ಮಾತ್ರ ಒಂದೇ- `ಹೃದಯ'. ಅದು ಕೆಲಸ ಮಾಡುತ್ತಿರುವವರೆಗೆ ನಾಲ್ಕು ಜನರ ನಡುವೆ ಗುರಿಯೊಂದರ ಹಿಂದೆ ನಮ್ಮ ಜೀವನ. ಅದು ನಿಂತಿತೆಂದರೆ ಮರುಗಳಿಗೆಯಲ್ಲೇ ನಾಲ್ಕು ಜನರ ಹೆಗಲ ಮೇಲೆ ದಿಕ್ಕುದೆಸೆಯಿಲ್ಲದೆ ನಮ್ಮ ಯಾನ!

ದೇಹದ ಇನ್ನಾವುದೇ ಅವಯವಕ್ಕೂ ಹೃದಯಕ್ಕಿರುವ ಸ್ಥಾನಮಾನವಿಲ್ಲ. ಕೈಗಳು ಇಲ್ಲದವನೂ ಬದುಕುತ್ತಾನೆ. ಬಹುತೇಕ ಸಮಯಗಳಲ್ಲಿ ಏನನ್ನಾದರೂ ಸಾಧಿಸಿ ಕೈಗಳಿದ್ದವರಿಗಿಂತಲೂ ಚೆನ್ನಾಗಿಯೇ ಬದುಕುತ್ತಾನೆ. ಕಣ್ಣಿದ್ದವರಿಗಿಂತಲೂ ತಮ್ಮ ಕ್ರಿಕೆಟ್ ಆಟದಲ್ಲಿ ಮೂವತ್ತೊಂದು ಎಸೆತಗಳಿಗೇ ಸೆಂಚುರಿ ಭಾರಿಸಿ ಸಚಿನ್ ಇನ್ನೂ ಏಕೆ ನಿವೃತ್ತಿ ಹೊಂದುತ್ತಿಲ್ಲ ಎಂದು ಪ್ರಶ್ನಿಸಿ ಬಿಡುತ್ತಾರೆ! ಬದುಕು ಹಾಗೂ ಸಾರ್ಥಕ ಬದುಕಿಗೆ ಕೊಂಡಿಯಂತಿರುವ ಮೆದುಳಿಗೆ ಅತ್ಯಂತ ಪ್ರಾಶಸ್ತ್ಯವಿದೆ.

ಆದರೆ ಮೆದುಳು ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟರೂ ದೇಹ ಸಾಯುವುದಿಲ್ಲ, ಕೊಳೆತು ನಾರುವುದಿಲ್ಲ. ಇನ್ನೂ ಬದುಕಿರುತ್ತದೆ. `ಎಂದಾದರೊಂದು ದಿನ ಅದಾವುದೋ ಅತಿಶಯ ಶಕ್ತಿಯಿಂದ ಆತ ಮತ್ತೆ ಕೋಮಾದಿಂದ ಎದ್ದು ಬಂದಾನು' ಎಂಬ ಆಶಯದೊಂದಿಗೆ ಅವನ ಆಪ್ತ ಪ್ರಪಂಚ ಕಾದು ಕುಳಿತಿರುತ್ತದೆಯೇ ಹೊರತು ಹರಿಶ್ಚಂದ್ರಘಾಟಿನ ವಿದ್ಯುತ್ ಶವಾಗಾರದಲ್ಲಿ ಸಮಯವನ್ನು ನಿಗದಿ ಪಡಿಸುವುದಿಲ್ಲ. ಆದರೆ ಅಂಗಾಂಗಗಳಲ್ಲಿ ನಂಬರ್ ಒನ್ ಆದ ಹೃದಯ ನಿಂತಿತೆಂದರೆ, ಅಲ್ಲಿಗೆ ಆ  ಕಾದಂಬರಿ ಮುಕ್ತಾಯವಾದಂತೆಯೇ ಸರಿ.

ಹೃದಯ ನಿಂತ ತಕ್ಷಣ ಅದನ್ನು ಪುನಶ್ಚೇತನಗೊಳಿಸಲು ವಿದ್ಯುತ್ ಶಾಕ್ ನೀಡುತ್ತಾರೆ. ಅದೂ ಒಂದೆರಡು ನಿಮಿಷಗಳಷ್ಟೆ. ಅಷ್ಟರಲ್ಲಿ ಮತ್ತೆ ಬಡಿತ ಶುರುವಾದರೆ ಸರಿ. ಇಲ್ಲದಿದ್ದರೆ ಆ ಗಳಿಗೆಯಿಂದಲೇ ಇಡಿಯ ದೇಹ ಕೊಳೆಯುತ್ತಾ `ಆದಷ್ಟೂ ಬೇಗ ನನ್ನನ್ನು ಕಳುಹಿಸಿಕೊಡಿ' ಎಂದು ಮೌನವಾಗಿ ಬೇಡುತ್ತದೆ. ತಾಸುಗಳ ನಂತರ ಅಚಾನಕ್ ಹೃದಯದ ಬಡಿತ ಶುರುವಾಗಿಬಿಟ್ಟರಂತೂ, ದೈವಕೃಪೆಯನ್ನು ಹೊಗಳುವ ಮುನ್ನ ಆ ದೇಹದಲ್ಲಿ ದೆವ್ವ ಸೇರಿಬಿಟ್ಟಿದೆ ಎಂದು ಪರಿಗಣಿಸುವವರೇ ಹೆಚ್ಚು ಜನ ಎಂಬ ವಿಚಾರವನ್ನು ನಾವಿಲ್ಲಿ ಮರೆಯುವ ಹಾಗಿಲ್ಲ.
`ಈ ದಿನ ದೇಹದ ಬಗ್ಗೆ ಇಷ್ಟೊಂದು ವಿಚಾರಗಳೇಕೆ?' ಎಂದು ನಿಮಗನ್ನಿಸಿರಬಹುದು.

ಇಂದಿನಿಂದ ಮುಂದಿನ ಕೆಲ ಲೇಖನಗಳನ್ನೂ ಸೇರಿದಂತೆ ನಾನು ಚರ್ಚಿಸಬೇಕೆಂದಿರುವುದು ಕಂಪೆನಿಯೊಂದರ `ಸೇಲ್ಸ್ ಅಂಡ್ ಮಾರ್ಕೆಟಿಂಗ್' ಅಥವಾ `ಮಾರಾಟ ವಿಭಾಗ'ದ ಬಗ್ಗೆ, ಅದರ ಕಾರ್ಯವೈಖರಿಯ ಬಗ್ಗೆ, ಅದರ ಫಲಾನುಭವಿಗಳ ಬಗ್ಗೆ, ಅದರ ಅವಶ್ಯಕತೆ ಹಾಗೂ ಅನಿವಾರ್ಯಗಳ ಬಗ್ಗೆ. ಈ ಚರ್ಚೆಗೆ ಮುನ್ನುಡಿಯಾಗಿ ಇದು ಸಮಂಜಸವೆಂದು ನನಗೆ ತೋರಿದ್ದರಿಂದ ದೇಹಾಂಗಕ್ಕೆ ಒಂದು ಪುಟವನ್ನೇ ಮುಡುಪಾಗಿಟ್ಟಿದ್ದೇನೆ.
`ದೇಹವೊಂದಕ್ಕೆ ಹೃದಯವೆಂತೋ, ಅಂತೆಯೇ ಯಾವುದೇ ಕಂಪೆನಿಗೆ ಅದರ ಮಾರಾಟ ವಿಭಾಗ'.

ವಿಪರ್ಯಾಸವೆಂದರೆ ಇದನ್ನು ಕಂಪೆನಿಯ ಅನೇಕರು ತಕ್ಷಣಕ್ಕೆ ಒಪ್ಪುವುದಿಲ್ಲ. ಹಾಗೊಮ್ಮೆ ಒಪ್ಪಿದರೂ ಅದಕ್ಕೆ ಸಲ್ಲಬೇಕಾದ ಗೌರವವನ್ನು ಬಹಿರಂಗವಾಗಿ ತೋರ್ಪಡಿಸುವುದಿಲ್ಲ. ಏಕೆಂದರೆ, `ಮಾರಾಟ' ಎಂಬ ಕ್ರಿಯೆಯೇ ಅಲ್ಪವಾದದ್ದು ಹಾಗೂ ಅದಕ್ಕಾಗಿ ಮೆದುಳಿನ ಯಾವುದೇ ಅಣುವಿನ ಅಗತ್ಯವಿಲ್ಲ ಎಂಬುದು ಅವರ ತಪ್ಪು ಗ್ರಹಿಕೆ.
ವೈಯಕ್ತಿಕವಾಗಿ ನಾನು ಈ ಧೋರಣೆಗೆ ಸಮ್ಮತನಲ್ಲ. ನನ್ನ ಇಪ್ಪತ್ತೆಂಟು ವರ್ಷಗಳ ಕೆಲಸದಲ್ಲಿ, ಮೂರು ವರ್ಷಗಳ ಮಟ್ಟಿಗೆ ಸಂಶೋಧನಾತ್ಮಕವಾದ ಪ್ರಾಜೆಕ್ಟುಗಳಲ್ಲಿದ್ದೆ.

ಇನ್ನುಳಿದ ಇಪ್ಪತ್ತೈದು ವರ್ಷಗಳನ್ನು ಮಾರಾಟ ವಿಭಾಗದಲ್ಲೇ ಕಳೆದಿದ್ದೇನಾದ್ದರಿಂದ ನಾನಿದರ ಒಳ-ಹೊರಗುಗಳನ್ನು ಸೂಕ್ಷ್ಮವಾಗಿ ಬಲ್ಲೆ. ಇದರ ಎಲ್ಲೆ, ವಿಸ್ತಾರ ಹಾಗೂ ಆಳ ಕಂಪೆನಿಯ ಇನ್ನುಳಿದ ವಿಭಾಗಗಳಿಗೆ ಹೇಗೆ ಸಾಫಲ್ಯವನ್ನು ತಂದುಕೊಡಬಲ್ಲವು ಎಂಬುದನ್ನೂ ಮನಗಂಡಿದ್ದೇನೆ. ಇದು ಕಮರಿದಾಗ ಅದೆಷ್ಟು ಶ್ರೇಷ್ಠ ಕಂಪೆನಿಗಳು ನೆಲಸಮವಾಗಿ ಹೋಗಿವೆ ಎಂಬುದನ್ನೂ ಹತ್ತಿರದಿಂದ ಕಂಡಿದ್ದೇನೆ. ಇದೊಂದರ ಬಲದ ಮೇಲೆ ಅದೆಷ್ಟು ಸಾಧಾರಣ ಕಂಪೆನಿಗಳು ಕೂಡಾ ಯಶಸ್ಸನ್ನು ಹೊಂದಿವೆ ಎಂಬುದನ್ನು ಸ್ವಾನುಭವದಿಂದ ಅರಿತಿದ್ದೇನೆ.

ಇಷ್ಟಾದರೂ ಈ ವಿಭಾಗವನ್ನು ದೇಹದ ಹೃದಯಕ್ಕೆ ಹೋಲಿಸಿದರೆ ಹೇಗೆ ಎಂದು ಹುಬ್ಬೇರಿಸಬೇಡಿ. ಯಾವುದೇ ವಹಿವಾಟಿನ ಮೂಲ ಕೆಲಸವೆಂದರೆ ತಮಗಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಾವು ಹೊರತರುವ ವಸ್ತುವೊಂದನ್ನು ಮಾರುಕಟ್ಟೆಯಲ್ಲಿ ಹಣವಾಗಿ ಪರಿವರ್ತಿಸುವುದೇ ಆಗಿದೆ. ಈ ಪರಿವರ್ತನೆಗೆ ಚಾಲನೆ ನೀಡಿ ಅದಕ್ಕೆ ಜೀವ ತುಂಬುವುದೇ ಮಾರಾಟ ವಿಭಾಗದ ಕರ್ತವ್ಯ. ಅದರ ದಕ್ಷತೆಯನ್ನಾಧರಿಸಿಯೇ ಕಂಪೆನಿಯೊಂದರ ಲಾಭ-ನಷ್ಟ, ಅಳಿವು - ಉಳಿವುಗಳು. ಅಷ್ಟೇಕೆ, ಆ ಕಂಪೆನಿಯ ಎಲ್ಲರ ವೇತನವೂ ಕೂಡ!

ಕಂಪೆನಿಯೊಂದರ ವಸ್ತು - ಅದು ಕಣ್ಣಿಗೆ ಕಾಣುವ ಯಂತ್ರಾಂಶವಿರಬಹುದು ಅಥವಾ ಅಗೋಚರವಾದ ತಂತ್ರಾಂಶವಿರಬಹುದು, ಅವುಗಳೆಲ್ಲ ಖರ್ಚನ್ನು ತೊಳೆದುಕೊಂಡು ಲಾಭವಾಗಿ ಪರಿವರ್ತನೆಗೊಳ್ಳಬೇಕಾದರೆ ತಮ್ಮ ಮಾರಾಟ ವಿಭಾಗವನ್ನು ಅವಲಂಬಿಸಲೇಬೇಕು. ಇದರ ಹೊರತಾಗಿ ಅದಕ್ಕೆ ಮೋಕ್ಷವೇ ಇಲ್ಲ.

ಆದರೆ ಮಾರಾಟ ವಿಭಾಗಕ್ಕೆ ಹಾಗೂ ಅದರಲ್ಲಿನ `ವಿಕ್ರಯಾರ್ಜುನರಿಗೆ' ವಸ್ತು ತನ್ನದೇ ಆಗಿರಬೇಕೆಂಬ ಹಟವಾಗಲೀ ಅಥವಾ ಬೇರೆಯವರದಾಗಿರಬೇಕೆಂಬ ನಿಯಮವಾಗಲೀ ಇಲ್ಲ. ಪ್ರಸ್ತುತವಾದ ವಸ್ತುವೊಂದು ಮೂಲತಃ ಇರಲೇಬೇಕೆಂಬ ಧೋರಣೆಯೂ ಇಲ್ಲ. ಏನೂ ಇಲ್ಲದಿದ್ದರೆ ಎಲ್ಲಿಂದಲೋ ಏನನ್ನೋ ಖರೀದಿಸಿ ಇನ್ನೆಲ್ಲಿಯೋ ಅದನ್ನು ಮಾರಾಟ ಮಾಡಿ ಕಂಪೆನಿಗಳನ್ನು ಜೀವಂತವಾಗಿಡುವವರು ಅನೇಕರಿದ್ದಾರೆ ಎಂದಾಗ ಇದರ ಮಹತ್ವವನ್ನು ಯಾರೂ ಅರಿಯಬಹುದು. ಅಂತೆಯೇ ಇನ್ನಾರೂ ಇಲ್ಲದಿದ್ದರೂ ಇದು ಜೀವಂತ. ಆದರೆ ಇದು ಸತ್ತ ದಿನ ಮಾತ್ರ ಎಲ್ಲವಿದ್ದರೂ ಎಲ್ಲದರ ಸಾವು ಖಚಿತ. ಹೃದಯವೊಂದನ್ನು ಬಿಟ್ಟು ದೇಹದ ಮತ್ತಾವ ಅವಯವವನ್ನು ನಾನಿದನ್ನು ಹೋಲಿಸಲಾದೀತು ಹೇಳಿ?

ಭಾನುವಾರ ಕುಟುಂಬ ಸಮೇತರಾಗಿ ಕುಳಿತು ಭರ್ಜರಿ ಊಟವಾಗಿದೆ. ಎಲೆಯಡಿಕೆ ಜಗಿದು ವಾರದ ಶ್ರಮವನ್ನೆಲ್ಲ ಒಂದು ಸುಖ ನಿದ್ದೆಯಲ್ಲಿ ಮುಳುಗಿಸಬೇಕೆಂಬ ಇಚ್ಚೆಯಿಂದ ಹಾಸಿಗೆ ಸೇರಿ ಇನ್ನೇನು ಹಲಗುಗನಸಿಗೆ ಜಾರುತ್ತಿದ್ದೀರಿ ಎನ್ನುವಷ್ಟರಲ್ಲಿ ಮನೆಯ ಕರೆಗಂಟೆಯನ್ನು ಮೃದುವಾದರೂ ದೃಢವಾಗಿಯೇ ಒತ್ತಿದ್ದಾರೆ. ನಿಮ್ಮ ನಿದ್ರಾಭಂಗ ಮಾಡಿರುವ ಈ ವ್ಯಕ್ತಿ ಮತ್ತಾರೂ ಅಲ್ಲ, ಯಾರಿಗೂ ಬೇಕಿಲ್ಲದ ಈ ಆಗುಂತಕನೇ `ಡೋರ್ ಟು ಡೋರ್ ಸೇಲ್ಸ್‌ಮನ್' ಅಥವಾ ಮನೆಮನೆಗೂ ವಸ್ತುಗಳನ್ನು ತಂದು ಮಾರುವ ಮಾರಾಟಗಾರ. ಕೆಲವು ಮನೆಗಳ ಮುಂದೆ `ಮಾರಾಟಗಾರರಿಗೆ ಒಳಕ್ಕೆ ಪ್ರವೇಶವಿಲ್ಲ' ಎಂಬ ಫಲಕಗಳನ್ನೂ ಹಾಕಿಬಿಟ್ಟಿರುತ್ತಾರೆ. ಮಾರಾಟಗಾರರಿಗೆ ಅಷ್ಟೊಂದು ಮರ್ಯಾದೆ!

`ಯಾಕೆ ನಿನ್ನೆಯ ದಿವಸವೇ ಊರಿಗೆ ಬಂದು ನನ್ನನ್ನು ಕಾಣುವುದಾಗಿ ಹೇಳಿದ್ದಿರಲ್ಲ. ಇಂದೂ ಏಕೆ ಬರಲಿಲ್ಲವೆಂದು ವಿಚಾರಿಸಲು ಕರೆ ಮಾಡಿದೆ. ನಾಳೆಯಾದರೂ ನಮ್ಮ ಭೇಟಿ ಸಾಧ್ಯವೇ? ಮುಂದಿರುವ ಪ್ರಾಜೆಕ್ಟಿನ ಬಗ್ಗೆ ತುರ್ತಾಗಿ ಮಾತನಾಡುವುದಿತ್ತು. ಉನ್ನತ ಹೈಟೆಕ್ ಪ್ರಪಂಚದಲ್ಲಿ `ಸೇಲ್ಸ್ ಎಂಜಿನಿಯರ್' ಜೊತೆಗೆ ಹೀಗೆ ಮಾತಿಗಿಳಿಯುವ ಗ್ರಾಹಕರೂ ಇದ್ದಾರೆ. ಮಾರಾಟಗಾರರಿಗೆ ಅಷ್ಟೊಂದು ಮರ್ಯಾದೆ!'

`ಮಾರ್ಕೆಟಿಂಗ್ ಈಸ್ ಎವರಿತಿಂಗ್' ಅರ್ಥಾತ್ `ಮಾರಾಟವೇ ಸರ್ವಸ್ವ' ಎಂದು ಉದ್ಗರಿಸಿದ್ದು ಮತ್ತಾರೂ ಅಲ್ಲ - ಮ್ಯಾನೇಜ್‌ಮೆಂಟಿನ ಗುರು ಎನಿಸಿಕೊಂಡಿರುವ `ಪೀಟರ್ ಡ್ರುಕರ್'

ಈ ಹೇಳಿಕೆಯ ಹಿನ್ನೆಲೆಯಲ್ಲಿ ಮನೆ ಮನೆಗೂ ಬಂದು ಮಾರಾಟ ಮಾಡುವುದರಿಂದ ಹಿಡಿದು ಹೈಟೆಕ್ ಜಗತ್ತಿನಲ್ಲಿ ಸುಳಿದಾಡುವ ಮಾರಾಟ ವಿಭಾಗದವರನ್ನೆಲ್ಲ, ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ಹೇಗೆ ಜೀವಂತವಾಗಿಟ್ಟುಕೊಳ್ಳಬೇಕು ಎಂಬ ವಿಚಾರಧಾರೆಯಲ್ಲಿ ಮುಂದೆ ಸಾಗೋಣ....
ಲೇಖಕರನ್ನು 
 http://satyesh.bellur@gmail.com
ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT