ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್: ಇಸ್ಲಾಂ ಉಗ್ರವಾದದ ಹೊಸ ನೆಲೆ?

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಸ್ಲಿಮರ ಪ್ರಾಬಲ್ಯದ ದ್ವೀಪರಾಶಿ ದೇಶ ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಸಾಧ್ಯತೆಗಳು ಕಾಣುತ್ತಿಲ್ಲ. ಪೊಲೀಸರು ಮತ್ತು ಕೆಲ ಮಿಲಿಟರಿ ಅಧಿಕಾರಿಗಳ ಬೆಂಬಲದೊಂದಿಗೆ ನಡೆದ ರಕ್ತರಹಿತ ಕ್ಷಿಪ್ರ ಕ್ರಾಂತಿಯಲ್ಲಿ ಅಧಿಕಾರ ಕಬಳಿಸಿದ ಮಹಮದ್ ವಹೀದ್‌ಗೆ ಈಗಾಗಲೇ ಅಧಿಕಾರದ ರುಚಿ ಹತ್ತಿದೆ.

ತಮ್ಮನ್ನು ಅಧಿಕಾರಕ್ಕೆ ತಂದ ಕಟ್ಟಾ ಇಸ್ಲಾಂವಾದಿಗಳು ಹೇಳಿದಂತೆ ವಹೀದ್ ಕುಣಿಯತೊಡಗಿದ್ದಾರೆ. ಅಧ್ಯಕ್ಷ ಮಹಮದ್ ನಷೀದ್ ಅವರನ್ನು ಪದಚ್ಯುತಗೊಳಿಸಲು ನೆರವಾದ ಹಿಂದಿನ ಸರ್ವಾಧಿಕಾರಿ ಮಮೂನ್ ಅಬ್ದುಲ್ ಗಯೂಮ್ ಬೆಂಬಲಿಗರಿಗೆ ಸಚಿವ ಸ್ಥಾನಗಳು ಸಿಕ್ಕಿದ್ದರೆ ಮತ್ತು ರೆಸಾರ್ಟ್ ಮಾಲೀಕರೊಬ್ಬರು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 

 ತಮ್ಮ ಆಡಳಿತಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಅಧ್ಯಕ್ಷ ವಹೀದ್ ಈ ಹಿಂದೆ ಹೇಳಿದ ಸುಳ್ಳನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಮಹಮದ್ ನಷೀದ್ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದರು ಎಂಬುದು ಅವರ ವಾದ. ಆದರೆ ಪೊಲೀಸರು ಮತ್ತು ಕೆಲವು ಸೇನಾಧಿಕಾರಿಗಳ ಒತ್ತಡದಿಂದಾಗಿ ತಾವು ರಾಜೀನಾಮೆ ನೀಡಿದ್ದಾಗಿ ನಷೀದ್ ಹೇಳುತ್ತಿದ್ದಾರೆ. ನಷೀದ್ ಹೇಳುತ್ತಿರುವುದೇ ಸತ್ಯ ಎಂಬುದು ಈಗಾಗಲೇ ಗೊತ್ತಾಗಿರುವ ವಿಷಯ. ಅಧಿಕಾರ ಪಡೆಯಲು ವಿರೋಧಿಗಳು ಪ್ರಜಾತಂತ್ರ ಮಾರ್ಗ ಅನುಸರಿಸಿಲ್ಲ. ಸಂಸತ್ತಿನಲ್ಲಿ ನಷೀದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅವರಿಗೆ ಬಹುಮತ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕಿತ್ತು. ಆದರೆ ವಿರೋಧಿಗಳು ಅನುಸರಿಸಿದ್ದು ಸರ್ವಾಧಿಕಾರಿ ಮಾರ್ಗವನ್ನು.
 ನಷೀದ್ ಪದಚ್ಯುತಿಗೊಂಡ ದಿನದಂದು ನಡೆದ ಘಟನೆಗಳನ್ನು ನೋಡಿದರೆ ಕಟ್ಟಾ ಇಸ್ಲಾಂವಾದಿಗಳು ಆ ಕಾರ್ಯಾಚರಣೆ ಹಿಂದೆ ಇರುವುದು ಸ್ಪಷ್ಟವಾಗುತ್ತದೆ. ನಷೀದ್ ಪದಚ್ಯುತಿ ಆಗುತ್ತಿದ್ದಂತೆಯೇ ಇಸ್ಲಾಂ ಉಗ್ರವಾದಿಗಳ ಗುಂಪೊಂದು ರಾಜಧಾನಿ ಮಾಲೆಯ ರಾಷ್ಟ್ರೀಯ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ನುಗ್ಗಿ ಅಲ್ಲಿದ್ದ ದೇಶದ ಪ್ರಾಚೀನ ಸಂಸ್ಕೃತಿಯ ಪ್ರತೀಕದಂತಿದ್ದ ಬುದ್ಧನ ವಿಗ್ರಹಗಳನ್ನು ಧ್ವಂಸ ಮಾಡಿವೆ. ಇಸ್ಲಾಂನಲ್ಲಿ ವಿಗ್ರಹಾರಾಧನೆಗೆ ಅವಕಾಶವಿಲ್ಲ, ಆದ್ದರಿಂದ ಅವುಗಳನ್ನು ನಾಶಮಾಡುತ್ತಿರುವುದಾಗಿ ಆ ಗುಂಪು ಘೋಷಿಸಿದೆ. ಇದು ಆಫ್ಘಾನಿಸ್ತಾನದಲ್ಲಿ 2001ರಲ್ಲಿ ತಾಲಿಬಾನ್ ಉಗ್ರರು ಬಾಮಿಯಾನ್‌ನಲ್ಲಿದ್ದ ಬುದ್ಧನ ವಿಗ್ರಹವನ್ನು ನಾಶ ಮಾಡಿದ ಘಟನೆಯನ್ನು ನೆನಪಿಗೆ ತರುತ್ತದೆ. ಮದ್ಯಪಾನ, ಸಮುದ್ರ ತೀರದಲ್ಲಿರುವ `ಸ್ಪಾ~ಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಮೆರವಣಿಗೆಗಳು ನಡೆದಿವೆ. ಇಂಥ ಒತ್ತಡ ಹೊಸದೇನೂ ಅಲ್ಲ. ನಷೀದ್ ಅಧಿಕಾರದಲ್ಲಿದಾಗಲೇ ಅಂಥ ಒತ್ತಡ ಬಂದು ಕೆಲವು ಕಡೆ ಮದ್ಯಪಾನದ ಮೇಲೆ ನಿಷೇಧ ಹೇರಿದ ಮತ್ತು ಕೆಲವು ಸ್ಪಾ ಗಳನ್ನು ಮುಚ್ಚಿದ ನಿದರ್ಶನಗಳೂ ಇವೆ.

  ಮಾಲ್ಡೀವ್ಸ್‌ನಲ್ಲಿ ಮುಸ್ಲಿಂ ಉಗ್ರವಾದದ ಬೀಜ ಬಿತ್ತುವ ಯತ್ನಗಳು ಬಹಳ ಕಾಲದಿಂದಲೇ ನಡೆಯುತ್ತಿವೆ. ಗಯೂಮ್ ಕಾಲದಲ್ಲಿ ಇದಕ್ಕೆ ಪ್ರೋತ್ಸಾಹ ಸಿಕ್ಕಿತ್ತು. ಮುಖ್ಯವಾಗಿ ಪಾಕಿಸ್ತಾನದ ಉಗ್ರವಾದಿ ಸಂಘಟನೆಗಳು ಈ ಯತ್ನದ ಹಿಂದೆ ಇರುವುದು ಖಚಿತವಾಗಿ ಗೊತ್ತಾಗಿದೆ. ಪಾಕಿಸ್ತಾನ ಮತ್ತು ಮಾಲ್ಡೀವ್ಸ್ ನಡುವೆ ಶಿಕ್ಷಣದ ವಿನಿಮಯ ಕಾರ್ಯಕ್ರಮ ಅಧಿಕೃತವಾಗಿಯೇ ನಡೆಯುತ್ತ ಬಂದಿದೆ. ಪಾಕಿಸ್ತಾನದ ಮದರಸಾಗಳಲ್ಲಿ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತ ಬಂದಿದ್ದಾರೆ. ಈ ಹಿಂದೆ ವಾಜರೀಸ್ತಾನದಲ್ಲಿ ತಾಲಿಬಾನ್ ಮತ್ತು ಅಲ್ ಖೈದಾ ಸಂಘಟನೆಯಿಂದ ತರಬೇತಿ ಪಡೆಯುತ್ತಿದ್ದ ಮಾಲ್ಡೀವ್ಸ್‌ನ 12 ಮಂದಿಯನ್ನು ಒಮ್ಮೆ ಬಂಧಿಸಿದ್ದಿದೆ. 2007ರಲ್ಲಿ ಮಾಲೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಮಂದಿ ಮುಸ್ಲಿಂ ಉಗ್ರವಾದಿಗಳು ಪಾಕಿಸ್ತಾನಕ್ಕೆ ಪರಾರಿಯಾದ ಬಗ್ಗೆ ಮಾಹಿತಿಗಳು ಲಭ್ಯವಿವೆ. ಈಗ ಗೃಹ ಸಚಿವರಾಗಿ ನೇಮಕಗೊಂಡಿರುವ ಮಹಮದ್ ಜಮೀಲ್ ಕಟ್ಟಾ ಇಸ್ಲಾಂವಾದಿ. ಸರ್ವಾಧಿಕಾರಿ ಗಯೂಮ್ ಬೆಂಬಲಿಗರಾದ ಅವರು ಪಾಕಿಸ್ತಾನದಲ್ಲಿ ಶಿಕ್ಷಣ ಪಡೆದು ಬಂದವರು. ನಷೀದ್ ಸರ್ಕಾರ ಇಸ್ಲಾಂ ವಿರೋಧಿ ಸರ್ಕಾರವೆಂದು ಸತತವಾಗಿ ಈ ಹಿಂದೆ ಕೂಗೆಬ್ಬಿಸುತ್ತಿದ್ದವರು ಅವರೇ. ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅವರನ್ನು ನಷೀದ್ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿತ್ತು. ಆ ಪ್ರಕರಣ ಕ್ರಿಮಿನಲ್ ಕೋರ್ಟ್ ಮುಂದೆ ಬಂದಾಗ ಅವರನ್ನು ಬಿಡುಗಡೆ ಮಾಡಲು ಮುಖ್ಯ ನ್ಯಾಯಾಧೀಶರು ಆದೇಶಿಸಿದರು. ಮೋಸ, ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆ, ಕೋಮುಭಾವನೆ ಬಿತ್ತುವುದೂ ಸೇರಿದಂತೆ  ಹಲವು ಅಪರಾಧಗಳ ಆರೋಪಗಳ ಮೇಲೆ ಬಂಧಿಸಲಾಗಿದ್ದವರ ಮೇಲಿನ ಪ್ರಕರಣಗಳ ವಿಚಾರಣೆ ಸುಗಮವಾಗಿ ನಡೆಯಲು ಅವರು ಅವಕಾಶ ಕೊಡುತ್ತಿರಲಿಲ್ಲವೆಂಬ ಕಾರಣ ಕೊಟ್ಟು ಅವರ ಬಂಧನಕ್ಕೆ ಅಧ್ಯಕ್ಷ ನಷೀದ್ ಆದೇಶ ಮಾಡಿದ್ದರು. ಆ ವೇಳೆಗೆ ಬಿಡುಗಡೆಯಾಗಿದ್ದ ಜಮೀಲ್ ಇದನ್ನೇ ಕಾರಣವಾಗಿಟ್ಟುಕೊಂಡು ಇಸ್ಲಾಂವಾದಿ ಗಯೂಮ್ ಬೆಂಬಲಿಗರನ್ನು ಒಂದು ಶಕ್ತಿಯಾಗಿ ಪರಿವರ್ತಿಸಿ ದೇಶದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಿದರು. ಅಂತಿಮವಾಗಿ ನಷೀದ್ ರಾಜೀನಾಮೆ ಪಡೆಯುವಲ್ಲಿ ಸಫಲರಾದರು. ಉದಾರವಾದಿಗಳ ಕೈಯಿಂದ ಇದೀಗ ಕಟ್ಟಾ ಇಸ್ಲಾಂ ವಾದಿಗಳ ಕೈಗೆ ಅಧಿಕಾರ ಹೋಗಿದೆ. ಈಗಾಗಲೇ ದೇಶದಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗಳನ್ನು ಜನರಲ್ಲಿ ಕೆರಳಿಸುವಲ್ಲಿ ವಹೀದ್ ಬೆಂಬಲಿಗರು ಸಫಲರಾಗಿದ್ದಾರೆ. ಅಧಿಕಾರ ಅವರ ಕೈಯ್ಯಲ್ಲೇ ಇರುವುದರಿಂದ ಆ ಭಾವನೆಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಮತ್ತು ಅದೇ ಗುಂಪು  ಅಧಿಕಾರ ಗಟ್ಟಿ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು ಕಾಣುತ್ತಿದೆ.

  ಮಾಲ್ಡೀವ್ಸ್‌ನಲ್ಲಿ ನೆಲೆಸಿದ್ದ ಮೂಲ ಜನಾಂಗದವರು ದ್ರಾವಿಡರು. ಮುಖ್ಯವಾಗಿ ಶ್ರಿಲಂಕಾದ ಮೂಲನಿವಾಸಿಗಳು. ಕ್ರಿಸ್ತಪೂರ್ವ ಮೂರನೆಯ ಶತಮಾನ ಮತ್ತು ಕ್ರಿಸ್ತಶಕ 11ನೇ ಶತಮಾನದ ನಡುವೆ ಪೋರ್ಚುಗೀಸರು, ಗ್ರೀಕರು, ಬೌದ್ಧರು, ಬ್ರಿಟಿಷರು ಅಲ್ಲಿಗೆ ಬಂದು ನೆಲೆಸಿದ್ದಾರೆ. ಬ್ರಿಟಿಷರು ಬರುವ ಮೊದಲು ಮಾಲ್ಡೀವ್ಸ್ ಬೌದ್ಧರ ದೊಡ್ಡ ನೆಲೆಯಾಗಿತ್ತು. ಬ್ರಿಟಿಷರ ಆಡಳಿತಕಾಲದಲ್ಲಿಯೇ ಮಾಲ್ಡೀವ್ಸ್ ದ್ವೀಪ ಸುಲ್ತಾನ್ ದೊರೆಗಳ ತೆಕ್ಕೆಗೆ ಬಿದ್ದಿತು. 11ನೇ ಶತಮಾನದ ಅಂತ್ಯದಿಂದೀಚೆಗೆ ಮಾಲ್ಡೀವ್ಸ್‌ನಲ್ಲಿ ಇಸ್ಲಾಂ ಧರ್ಮ ನೆಲೆಯೂರಿ 19ನೇ ಶತಮಾನದ ಅಂತ್ಯದ ವೇಳೆಗೆ ಅದು ಮುಸ್ಲಿಂ ಬಹುಸಂಖ್ಯಾತರ ದೇಶವಾಗಿ ಪರಿವರ್ತಿತವಾಯಿತು. ಪೂರ್ಣ ಇಸ್ಲಾಂ ದೇಶವಾದ ನಂತರವೂ ಅಧಿಕಾರಕ್ಕಾಗಿ ಹಲವು ಕ್ಷಿಪ್ರ ಕ್ರಾಂತಿಗಳು ನಡೆದಿವೆ. ಆ ಧರ್ಮದ ಉದಾರವಾದಿಗಳು ಮತ್ತು ಕಟ್ಟಾವಾದಿಗಳ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆ. ಉದಾರವಾದಿಗಳು ಮೇಲುಗೈ ಸಾಧಿಸುತ್ತ ಅಧಿಕಾರ ಹಿಡಿಯುತ್ತ ಬಂದದ್ದರಿಂದಾಗಿ ಅಲ್ಲಿ ಪ್ರವಾಸೋದ್ಯಮ ಗಟ್ಟಿಯಾಗಿ ಬೆಳೆದಿದೆ. ಮಾಲ್ಡೀವ್ಸ್‌ನ ಆರ್ಥಿಕ ಶಕ್ತಿಯೇ ಪ್ರವಾಸೋದ್ಯಮ. ಅಲ್ಲಿನ ನಯನ ಮನೋಹರ ಹವಳದ ದ್ವೀಪಗಳು ತೇಲುವ ಸ್ವರ್ಗಗಳೆಂದೇ ಖ್ಯಾತಿ ಪಡೆದಿವೆ. ಸಮುದ್ರ ಮಟ್ಟದಿಂದ ಕೇವಲ 4.11 ಅಡಿ ಎತ್ತರವಿರುವ ಈ ದ್ವೀಪ ಸಮುದಾಯದ ಸಮುದ್ರದಲ್ಲಿರುವ ಜಲಚರಗಳು, ಬಿಳಿ ಮರಳಿನ ತೀರಗಳು ಮತ್ತು ಹವಳಗಳ ರಮ್ಯ ಲೋಕದಿಂದ ತುಂಬಿರುವ ನಿಸರ್ಗವನ್ನು ನೋಡಿ ಆನಂದಿಸಲು ವಿಶ್ವದಾದ್ಯಂತ ಜನರು ಇಲ್ಲಿಗೆ  ಬರುತ್ತಾರೆ.

ಪ್ರವಾಸೋದ್ಯಮವನ್ನೇ ಅವಲಂಬಿಸಿ ಜೀವನ ನಡೆಸಬೇಕಾಗಿರುವುದರಿಂದಾಗಿ ಧರ್ಮ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಜನರು ಹೊಂದಾಣಿಕೆ ಮಾಡಿಕೊಂಡು ಬದುಕುತ್ತ ಬಂದಿದ್ದಾರೆ. 

 ಇತ್ತೀಚಿನ ವರ್ಷಗಳಲ್ಲಿ  ವಿಶ್ವದ ಎಲ್ಲಕಡೆ ಮುಸ್ಲಿಂ ಉಗ್ರವಾದ ವ್ಯಾಪಕವಾಗಿ ತಲೆಎತ್ತುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲಿರುವ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟು ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳು ಅನುಸರಿಸುತ್ತಿರುವ ನೀತಿಗಳು ಉಗ್ರವಾದ ಗರಿಕಟ್ಟಿಕೊಳ್ಳಲು ಕಾರಣವಾಗಿದೆ. ಮಾಲ್ಡೀವ್ಸ್ ಕೂಡಾ ಈ ಬೆಳವಣಿಗೆಯ ಭಾಗವಾಗಿದೆ. 

 ಹಿಂದೂ ಮಹಾಸಾಗರದಲ್ಲಿರುವ ಮಾಲ್ಡೀವ್ಸ್ ದ್ವೀಪ ಸಮುದಾಯ ಭಾರತದ ನೆರೆಯ ದೇಶ. ಶ್ರೀಲಂಕಾಕ್ಕೆ ನೈಋತ್ಯಕ್ಕೆ ಸುಮಾರು 700 ಕಿ.ಮೀ. ದೂರದಲ್ಲಿದೆ ಈ ದೇಶ. ಮೊದಲಿನಿಂದಲೂ ಆ ದೇಶದಲ್ಲಿನ ರಾಜಕೀಯ ವಿದ್ಯಮಾನಗಳ ಮೇಲೆ ಭಾರತದ ಹಿಡಿತ ಕಡಿಮೆಯೇ. ಆದರೂ ಭಾರತದ ನಿಯಂತ್ರಣವನ್ನು ಮೀರಿ ಅಲ್ಲಿನ ಬೆಳವಣಿಗೆಗಳು ನಡೆದಿದ್ದಿಲ್ಲ. 1988ರಲ್ಲಿ ಶ್ರೀಲಂಕಾ ತಮಿಳು ಬಂಡಾಯಗಾರರ ಗುಂಪೊಂದು ಅಧಿಕಾರ ಕಬಳಿಸುವ ಪ್ರಯತ್ನ ನಡೆದಾಗ ಭಾರತ ಅಲ್ಲಿಗೆ ರಾತ್ರೋ ರಾತ್ರಿ ಮಿಲಿಟರಿ ಪಡೆಗಳನ್ನು ರವಾನಿಸಿ ತಮಿಳು ಉಗ್ರರನ್ನು ಸೆದೆಬಡಿಯಿತು. ಪ್ರತ್ಯೇಕ ತಮಿಳು ದೇಶವನ್ನು ಕಟ್ಟುವ ದಿಸೆಯಲ್ಲಿ ಶ್ರೀಲಂಕಾ ಮಿಲಿಟರಿ ವಿರುದ್ಧ ಹೋರಾಡಲು ಮಾಲ್ಡೀವ್ಸ್ ದ್ವೀಪಗಳನ್ನು ನೆಲೆ ಮಾಡಿಕೊಳ್ಳಲು ತಮಿಳು ಉಗ್ರರು ಯತ್ನಿಸಿದ್ದರು. ಆಗ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಯಾವುದೇ ಆಕ್ಷೇಪ ಅಂತರರಾಷ್ಟ್ರೀಯ ಸಮುದಾಯದಿಂದ ಬಂದಿರಲಿಲ್ಲ. ಅದು ಭಾರತದ ನೆರೆ ರಾಷ್ಟ್ರವಾಗಿರುವುದರಿಂದ ಅಲ್ಲಿ ಸ್ಥಿರತೆಯನ್ನು ಕಾಪಾಡುವುದು ಭಾರತದ ಕರ್ತವ್ಯ ಎಂದೇ ಅಂದು ಅಂತರರಾಷ್ಟ್ರೀಯ ಸಮುದಾಯ ಭಾವಿಸಿತು. ಅಷ್ಟೇ ಅಲ್ಲ ಯಾವ ದೇಶವೂ ಆ ದೇಶದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಇಸ್ಲಾಂ ಉಗ್ರವಾದದ ನೆಲೆ ಆಗುತ್ತಿರುವ ಸೂಚನೆ ಕಂಡುಬಂದ ನಂತರ ಎಲ್ಲ ದೇಶಗಳೂ ಆಸಕ್ತಿ ತೋರಿಸುತ್ತ ಬಂದಿವೆ.

 ಮೂವತ್ತು ವರ್ಷಗಳ ಗಯೂಮ್ ಸರ್ವಾಧಿಕಾರಿ ಆಡಳಿತ 2008ರಲ್ಲಿ ಕೊನೆಗೊಂಡು ಪ್ರಜಾತಂತ್ರ ಮಾರ್ಗದಲ್ಲಿ ಚುನಾವಣೆಗಳು ನಡೆದು ಮಹಮದ್ ನಷೀದ್ ಅಧಿಕಾರಕ್ಕೆ ಬಂದಿದ್ದರು. ಅವರು ತಮ್ಮ ಅಧಿಕಾರದ ಅವಧಿ ಪೂರೈಸುವ ಮೊದಲೇ ಮಿಲಿಟರಿ ಮತ್ತು ಪೊಲೀಸರ ಒತ್ತಡದಲ್ಲಿ ಅವರ ಪದಚ್ಯುತಿ ಆಗಿದೆ. ಇಷ್ಟೆಲ್ಲಾ ಬೆಳವಣಿಗೆಗಳಾದರೂ ಭಾರತ ಅದು ಆಂತರಿಕ ವಿಷಯ ಎಂದು ಸುಮ್ಮನಿದ್ದುದು ವಿಚಿತ್ರ. ಅಂದ ಮಾತ್ರಕ್ಕೆ ಹಿಂದೆ ಮಾಡಿದಂತೆ ಮಿಲಿಟರಿ ಹಸ್ತಕ್ಷೇಪ ಮಾಡಬೇಕಾದ ಅಗತ್ಯವೇನೂ ಇರಲಿಲ್ಲ.

ಆದರೆ ಒತ್ತಡದ ಮೂಲಕ ಪ್ರಜಾತಂತ್ರ ವ್ಯವಸ್ಥೆ ಕುಸಿಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು. ಭಾರತ ಸುಮ್ಮನೇನೂ ಇರಲಿಲ್ಲ; ಬದಲಾಗಿ ಪ್ರಜಾತಂತ್ರವನ್ನು ಬುಡಮೇಲು ಮಾಡಿದವರ ಅಧ್ಯಕ್ಷತೆಯ ಸರ್ಕಾರಕ್ಕೆ ಮಾನ್ಯತೆ ನೀಡಿತು. ಅಂಥ ಅವಸರ ಏನೂ ಇರಲಿಲ್ಲ. ಬೆಳವಣಿಗೆಗಳನ್ನು ಸರಿಯಾಗಿ ತಿಳಿಯದೆ ಮತ್ತು ಪರಿಣಾಮಗಳನ್ನು ಯೋಚಿಸದೆ ತೆಗೆದುಕೊಂಡ ನಿರ್ಧಾರ ಅದು. ಅದರ ಪರಿಣಾಮವಾಗಿ ಈಗ ಬೇಗ ಚುನಾವಣೆ ನಡೆಸುವಂತೆ ವಹೀದ್‌ರನ್ನು ಬೇಡುವಂಥ ಸ್ಥಿತಿಗೆ ಭಾರತ ತಲುಪಿದೆ. ಅವರು ಆಗದು ಎಂದರೆ ಸುಮ್ಮನಿರಬೇಕಾದ ದಯನೀಯ ಸ್ಥಿತಿಯಲ್ಲಿ ಭಾರತ ಇರುವಂತಾಗಿದೆ. 

 ಪಾಕಿಸ್ತಾನ, ಚೀನಾ, ನೇಪಾಳ, ಶ್ರಿಲಂಕಾ, ಬಾಂಗ್ಲಾ, ಭಾರತದ ನೆರೆಯ ರಾಷ್ಟ್ರಗಳು. ಯಾವದೇಶದ ಜೊತೆಗೂ ಭಾರತ ಉತ್ತಮ ಮೈತ್ರಿ ಸಾಧಿಸಿಲ್ಲ. ಎಲ್ಲ ದೇಶಗಳ ಜೊತೆಗೂ ಸಮಸ್ಯೆಯೇ. ಇಸ್ಲಾಂ ಭಯೋತ್ಪಾದನೆ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿರುವಾಗ ಮಾಲ್ಡೀವ್ಸ್ ದ್ವೀಪದಲ್ಲಿ ಆಗಿರುವ ಬೆಳವಣಿಗೆಗಳು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿಯಾದುದು. ಭಾರತ ಇನ್ನಾದರೂ ನೆರೆಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಕ್ರಿಯಾತ್ಮಕವಾದ ಕಾರ್ಯನೀತಿಯನ್ನು ಅಳವಡಿಸಿಕೊಳ್ಳುವುದು ಒಳಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT