ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಬೆಳೆಗೆ ಕೀಟ ಭಾದೆ

Last Updated 23 ಜನವರಿ 2012, 6:40 IST
ಅಕ್ಷರ ಗಾತ್ರ

ಯಳಂದೂರು: ಇಳೆಗೀಗ ಚಳಿಯ ಭಯ. ಹಣ್ಣುಗಳ ರಾಜ ಮಾವು ಹೂ ಅರಳುವ ಸಮಯ. ಈಗಾಗಲೇ ಹಲವು ವೃಕ್ಷಗಳಲ್ಲಿ ಹೂ ಗೊಂಚಲು ಅರಳಿ ಕೃಷಿಕರಲ್ಲಿ ಸಂತಸ ತಂದಿದೆ. ಆದರೆ ನಿರ್ವಹಣೆಯ ಕೊರತೆಯಿಂದ ಕೆಲವು ಗಿಡಗಳಲ್ಲಿ ವಿಕಾರ ಬೆಳವಣಿಗೆಯ ಹೂ ಗೊನೆ, ಎಲೆ ಬಲೆ ಕಟ್ಟಿಕೊಂಡ ಕೀಟಗಳು, ಕುಡಿಕೊರಕ, ತೊಗಟೆ ತಿನ್ನುವ ಹುಳುಗಳ ಬಾಧೆಯಿಂದ ಅರಳುವ ಮುನ್ನವೆ ನೆಲ ಸೇರುವಂತಾಗಿದೆ.

ಕೊಯ್ಲಿನ ನಂತರ ಮರಗಳನ್ನು ನಿರ್ಲಕ್ಷಿಸಿದ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಸಕಾಲದಲ್ಲಿ ಕೀಟಗಳನ್ನು ಹತೋಟಿಗೆ ತಂದಲ್ಲಿ ಉತ್ತಮ ಫಸಲನ್ನು ಕೃಷಿಕರು ನಿರೀಕ್ಷಿಸಬಹುದು.

`ನಮ್ಮ ರಾಷ್ಟ್ರದಲ್ಲಿ 15.2 ಲ. ಹೆಕ್ಟೇರ್ ಪ್ರದೇಶದಿಂದ 95 ಲ.ಮೆ.ಟನ್ ಮಾವು ಸಂಗ್ರಹವಾಗುತ್ತದೆ. ರಾಜ್ಯದಲ್ಲಿ 1.30 ಲ. ಹೆಕ್ಟೇರ್‌ನಿಂದ 14 ಲ.ಟನ್ ಮಾವು ಉತ್ಪಾದಿಸಲಾಗುತ್ತದೆ. ಆದರೆ ತಾಲ್ಲೂಕಿನಲ್ಲಿ 634 ಹೆಕ್ಟೇರ್‌ಗಳಲ್ಲಿ ಮಾವು ಸೇರಿದಂತೆ ಎಲ್ಲ ರೀತಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಆದರೆ ಮಾವಿಗೆ ಚಿಬ್ಬು, ಎಲೆಚುಕ್ಕೆ ರೋಗಗಳು ಚಳಿಗಾಲ, ಬೇಸಿಗೆ ನಡುವೆ ವಿವಿಧ ಹಂತಗಳಲ್ಲಿ ಕಾಡುತ್ತದೆ. ಇದಕ್ಕೆ ಎಚ್ಚರಿಕೆ ವಹಿಸಬೇಕು~ ಎಂದು ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಶಿವರಾಯ ನಾವಿ ~ಪ್ರಜಾವಾಣಿ~ಗೆ ತಿಳಿಸಿದರು.

ಬೂದಿರೋಗ: ಜನವರಿ-ಮಾರ್ಚ್ ನಡುವೆ ಇದು ಕಾಡುತ್ತದೆ. ಶೇ. 20 ರಿಂದ 60 ಫಸಲು ಕುಸಿತಕ್ಕೆ ಕಾರಣವಾಗುತ್ತದೆ. ಚಿಗುರು, ಹೂ, ಎಳೆಕಾಯಿಗಳಿಗೆ ಸೋಂಕು ತಗಲುತ್ತದೆ. ಎಲೆಗಳ ಮೇಲೆ ಆವರಿಸುತ್ತದೆ. ಹೂ ಬಿಡುವ ಮುನ್ನ ನೀರಲ್ಲಿ ಕರಗುವ ಗಂಧಕ 3ಗ್ರಾಂ ಇಲ್ಲವೇ ಹೆಕ್ಸಾಕೋನೋಜೋಲ್ 5ಇ.ಸಿ 1 ಮಿ.ಲೀ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಿಸಿಲು ತೀವ್ರವಾದಾಗ ಗಂಧಕ ಬಳಸಬಾರದು.

ಕೆಂಪಿರುವೆ ಕಾಟ: ಕೆಲಸಗಾರ್ತಿ ಇರವೆ ಜುಲೈ ತಿಂಗಳಿನಿಂದಲೇ ಎಲೆಗಳನ್ನು ಬಳಸಿ ದೊಡ್ಡಗೂಡು ನಿರ್ಮಿಸುತ್ತವೆ. ಆದರೆ ಇವುಗಳಿಂದ ತೊಂದರೆ ಇಲ್ಲ. ಆದರೆ ಬೂಸ್ಟು, ಸಸ್ಯ ಹೇನುಗಳು, ಹಸಿರು ತಿಗಣೆ ಮರದ ಮೇಲೆ ವಿಸರ್ಜಿಸುವ ಸಿಹಿ ಹಂಟು ತಿನ್ನಲೂ ಇರುವೆಗಳು ಇವುಗಳನ್ನು ಗೂಡುಗಳಲ್ಲಿಟ್ಟು ಆಹಾರ ಪಡೆಯುತ್ತವೆ. ಈಗಾಗಿ ಬಾಧಿತ ಟೊಂಗೆ ಕೀಳಬೇಕು. ಜನವರಿಯಲ್ಲಿ ಬುಡದಲ್ಲಿ ನೇಗಿಲು ಒಡೆದು ಮಣ್ಣು ಸಡಿಲಗೊಳಿಸಿ ಕೀಟಕೋಶ ನಾಶಪಡಿಸಬೇಕು. ಗಿಡದ ಮೇಲೆ ಬಿಸಿಲು ಬರುವಂತೆ ನೋಡಿಕೊಳ್ಳಬೇಕು. ಕಾರ್ಬರಿಲ್ 4 ಗ್ರಾಂ ಪ್ರತಿ ಲೀ. ನೀರಿಗೆ ಸೇರಿಸಿ 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು.

ಕುಡಿಕೊರಕ; ಬಾಧಿತ ಕುಡಿಗಳನ್ನು ಚಾಟಣಿ ಮಾಡಿ ನಾಶ ಮಾಡಬೇಕು. ಚಿಗುರು ಬರುವ ಮುನ್ನ ಕ್ವಿನಾಲ್‌ಫಾಸ್ 2 ಎಂ.ಎಲ್ ಪ್ರತಿ ಲೀ, ನೀರಿಗೆ ಬೆರಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು ಎನ್ನುತ್ತಾರೆ ಇವರು.

ಮಾವು ಬೆಳೆಗಾರರು ಸರಿಯಾದ ಅಂತರದಲ್ಲಿ ಸಸಿ ನೆಡುವುದು, ಸ್ವಚ್ಛವಾಗಿ ಭೂಮಿ ಇಡುವುದು, ಅಂತರ ಬೇಸಾಯದಲ್ಲಿ ಸರಿಯಾದ ನಿರ್ವಹಣೆ ಅಗತ್ಯ, ಸಿಂಪಡಣೆಯನ್ನು  ಹೂ ಬಿಡುವ ಹಂತದಲ್ಲಿ ಮಾಡಬಾರದು.

ಬೇವಿನ ಕೀಟನಾಶಕ, ಪರತಂತ್ರ, ಪರಭಕ್ಷಕ ಕೀಟಗಳಿಂದ ರೋಗ ನಿಯಂತ್ರಸಿದರೆ ಒಳಿತು ಎಂಬುದು ಸಾವಯವ ಕೃಷಿಕ ನಾಗನಾಯಕರ ಅನುಭವದ ಮಾತು.

ಪ್ರಕೃತಿದತ್ತವಾಗಿ ಬಾದಾಮಿ, ಮಲಗೋವ, ಲಾಂಗ್ರ, ದಶಹರಿ 2 ವರ್ಷಕ್ಕೊಮ್ಮೆ ಕೊಯ್ಲಿಗೆ ಬರುತ್ತದೆ. ಮಧ್ಯದ ವರ್ಷ ಕಡಿಮೆ ಇಳುವರಿ ನೀಡುತ್ತದೆ. ಹೂ ಬಿಡುವ 100 ದಿನಗಳ ಮುಂಚೆ ಪ್ಯಾಕ್ಲೋಬುಟ್ರಜಾಲ್ 5 ಎಂ.ಎಲ್ ಸಂಯುಕ್ತ ವಸ್ತುವನ್ನು 10ಲೀ. ನೀರಲ್ಲಿ ಬೆರಸಿ ಗಿಡದ ಪಾತಿಗಳಿಗೆ ಕಾಂಡದಿಂದ 90 ಸೆ.ಮೀ ದೂರ ಸುರಿದರೆ ಪ್ರತಿ ವರ್ಷ ಮಾವು ಪಡೆಯಲು ಸಹಾಯಕ ಎಂಬುದು ಕೃಷಿ ವಿಜ್ಞಾನಿಗಳ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT