ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚು ಹರಿಸಿದ ಸ್ಕೇಟರ್‌ಗಳು...!

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಈ ವರ್ಷವೂ ನಾವೇ ಚಾಂಪಿಯನ್. ಸತತ ಆರು ವರ್ಷದಿಂದ ಈ ಸ್ಥಾನವನ್ನು ನಾವು ಉಳಿಸಿಕೊಂಡಿದ್ದೇವೆ. ತವರು ನೆಲದಲ್ಲಿ ಈ ಸಲ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲೂ ನಮಗೆ ಸಮಗ್ರ ಪ್ರಶಸ್ತಿ ಬರುತ್ತದೆ. ಆದರೆ, ಪದಕಗಳ ಸಂಖ್ಯೆ ಹೆಚ್ಚಾಗಬೇಕಷ್ಟೇ~
-ಹೀಗೆ ಹೇಳಿದ್ದು 16 ವರ್ಷದ ಮೇಲ್ಟಟ್ಟವರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ಕೇಟರ್ ವರ್ಷಾ ಎಸ್. ಪುರಾಣಿಕ್.
 
ಇದಕ್ಕೆ ಧ್ವನಿಗೂಡಿಸಿದ್ದು ಕರ್ನಾಟಕದ ತಂಡದ ಕೋಚ್ ಶ್ರೀಕಾಂತ್‌ರಾವ್. ಅವರ ನಿರೀಕ್ಷೆಯೂ ನಿಜವಾಯಿತು. ಆತಿಥೇಯರು ಸತತ ಏಳನೇ ಸಲ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.  ಉದ್ಯಾನ ನಗರಿಯಲ್ಲಿ ಕಳೆದ ತಿಂಗಳು ನಡೆದ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ರಾಜ್ಯದ ಸ್ಕೇಟರ್‌ಗಳು ಉತ್ತಮ ಪ್ರದರ್ಶನ ನೀಡಿದರು.

ಸ್ವೀಡನ್‌ನಲ್ಲಿ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವ ಸ್ಕೇಟಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ. ಇದಕ್ಕೆ ಅರ್ಹತೆ ಪಡೆಯಲು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.
 
ಕೇವಲ ಎರಡು ತಿಂಗಳು ಕಳೆದರೆ, ಅರ್ಹತಾ ಸುತ್ತು ಬರಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತೆ ಸಮಗ್ರ ಪ್ರಶಸ್ತಿ ಜಯಿಸಿದ್ದು ಸ್ಪರ್ಧಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿದರು. 21 ರಾಜ್ಯಗಳ 700ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದವರು 68 ಜನರಿದ್ದರು. ಕಳೆದ ವರ್ಷ ವಿಶಾಖ ಪಟ್ಟಣದಲ್ಲಿ ನಡೆದಾಗಲೂ ಕರ್ನಾಟಕವೇ ಸಮಗ್ರ ಪ್ರಶಸ್ತಿ ಜಯಿಸಿತ್ತು.
 
48 ವರ್ಷ ನಡೆದ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ 28 ಸಲ ಪಾಲ್ಗೊಂಡಿದೆ. ಅದರಲ್ಲಿ 18 ಸಲ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದು ರಾಜ್ಯದ ಸ್ಕೇಟರ್‌ಗಳು ಹೊಂದಿರುವ `ಶಕ್ತಿ~ಗೆ ಸಾಕ್ಷಿ.

1991ರಲ್ಲಿ ಮೈಸೂರಿನಲ್ಲಿ ಸಬ್ ಜೂನಿಯರ್ ವಿಭಾಗದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ನಡೆದಿತ್ತು. ಜನವರಿ 24ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯ 16 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಹೆಚ್ಚು ಪದಕ ಜಯಿಸಿ `ಚಿನ್ನ~ದ ಹುಡುಗಿ ಎನಿಸಿಕೊಂಡಿದ್ದು ವರ್ಷಾ ಎಸ್. ಪುರಾಣಿಕ್.
 
ಈ ಸ್ಪರ್ಧಿ ಚೈನಿಸ್ ತೈಪಿನಲ್ಲಿ ಕಳೆದ ವರ್ಷ ನಡೆದ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಶಾರ್ಟ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ವಿಶಾಖ ಪಟ್ಟಣದಲ್ಲಿ ಕಳೆದ ವರ್ಷ ಹೆಚ್ಚು ಪದಕ ಗೆದ್ದ ಸ್ಕೇಟರ್ ಎನ್ನುವ ಗೌರವ ಸಹ ಪಡೆದಿದ್ದರು. ಈ ಸಲವೂ ಅದೇ `ಅಗ್ರ~ ಪಟ್ಟವನ್ನು ತಮ್ಮಲ್ಲಿಯೇ ಉಳಿಸಿಕೊಂಡರು.

`ಕಳೆದ ವರ್ಷ ಒಟ್ಟು 46 ಚಿನ್ನ ಗೆದ್ದಿದ್ದೆವು. ಈ ಸಲ ಅದಕ್ಕಿಂತ ನಾಲ್ಕು ಪದಕಗಳು ಕಡಿಮೆ ಬಂದವು. ಈ ಬಗ್ಗೆ ಬೇಸರವೇನಿಲ್ಲ. ಸಮಗ್ರ ಪ್ರಶಸ್ತಿ ಪಟ್ಟ ನಮ್ಮಲ್ಲಿಯೇ ಉಳಿಯಿತು~ ಎಂದು ಶ್ರೀಕಾಂತ್‌ರಾವ್ ಸಂತಸ ವ್ಯಕ್ತಪಡಿಸಿದರು.

ರೋಹಿತ್ ಗೌಡ (8-10 ವರ್ಷದೊಳಗಿನ ವಿಭಾಗ), ಆದಿತ್ಯ ಎಸ್. ರಾವ್ (10-12ವರ್ಷದೊಳಗಿನ ವಿಭಾಗ), ಶ್ರೀರಕ್ಷಾ (12-14ವರ್ಷದೊಳಗಿನ ವಿಭಾಗ), ಶರವಣಿ ಶೆಟ್ಟಿ (14-16 ವರ್ಷದೊಳಗಿನ ವಿಭಾಗ) 16 ವರ್ಷ ಮೇಲ್ಟಟ್ಟವರ ವಿಭಾಗದಲ್ಲಿ ವರ್ಷಾ ಎಸ್. ಪುರಾಣಿಕ್, ಬೆನಜಿರ್ ಮೀರಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. 14-16 ವರ್ಷದೊಳಗಿನ ಬಾಲಕರ ವಿಭಾಗದ 500ಮೀ ರೇಸ್ ಸ್ಪರ್ಧೆಯಲ್ಲಿ ಮಿಂಚು ಹರಿಸಿದ್ದು ಧನುಷ್ ಬಾಬು.

ನಾಲ್ಕು ಚಿನ್ನದ ಪದಕಗಳನ್ನು ಜಯಿಸಿದ ವಿ. ವರ್ಷಿತ್ 10 ಕಿ.ಮೀ. ಪಾಯಿಂಟ್ ಟು ಪಾಯಿಂಟ್, 1000ಮೀ, ರಿಲೇ ಹಾಗೂ ಮ್ಯಾರಥಾನ್‌ನಲ್ಲಿ ಪದಕ ಗೆದ್ದುಕೊಂಡರು. ವರ್ಷಾ 500, 1000, ರಿಲೇ ಹಾಗೂ ಮ್ಯಾರಥಾನ್‌ನಲ್ಲಿ ಸ್ವರ್ಣ ಪದಕ ಜಯಿಸಿದರು.
 
ವಿಶ್ವ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಈ ಸ್ಪರ್ಧೆ ತಂದುಕೊಟ್ಟಿದೆ. ಎಲ್ಲಕ್ಕಿಂತ ಮಿಗಿಲಾಗಿ ತವರು ನೆಲದ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಪ್ರತಿಭೆ ತೋರಿಸಲು ಅವರಿಗೆ ಅವಕಾಶ ಸಿಕ್ಕಿತು.

`ಸತತ ಏಳು ಸಲ ಚಾಂಪಿಯನ್ ಆಗಿರುವ ಕರ್ನಾಟಕ ಭವಿಷ್ಯದಲ್ಲಿ ಭಾರತ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯಲಿದೆ. ಇದುವರೆಗು ನಮ್ಮ ಸ್ಕೇಟರ್‌ಗಳು ಮಾಡಿದ ಸಾಧನೆ ಇದಕ್ಕೆ ಸಾಕ್ಷಿಯಾಗಿದೆ. ಮತ್ತೆ ಕರ್ನಾಟಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಬೇಕು. ಸ್ಕೇಟರ್‌ಗಳಿಗೆ ಪ್ರೋತ್ಸಾಹ ನೀಡಬೇಕು~ ಎಂದು ಹಿರಿಯ ಸ್ಕೇಟರ್ ಹಾಗೂ ಅಥ್ಲೀಟ್ ಸಹ ಆಗಿರುವ ಸುಧಾ ಬಾಬು ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT