ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತವ್ಯಯದ ಮನೆ ...

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಖ್ಯಾತ ಅರ್ಥಶಾಸ್ತ್ರಜ್ಞ ಲೂರಿಕರ್ ಒಂದೆಡೆ ಸ್ವಂತ    ಮನೆ ಕಟ್ಟುವಾಗ ಹೆಚ್ಚಾಗಿ ಸ್ಥಳೀಯ ಸಂಪನ್ಮೂಲಗಳನ್ನೇ ಕಲಾತ್ಮಕವಾಗಿ ಬಳಸಿಕೊಂಡರೆ ಶೇ 60ರಷ್ಟು ಖರ್ಚನ್ನು ಉಳಿತಾಯ ಮಾಡಬಹುದೆಂಬುದನ್ನು ಉದಾಹರಣೆ ಸಹಿತ ವಿವರಿಸ್ದ್ದಿದಾನೆ. ದೂರದಿಂದ ತರಿಸಿದ ಸಲಕರಣೆಗಳಿಗಾಗಿ ಮುಗಿಯುವ ಬೃಹತ್ ಮೊತ್ತದ ಅರಿವು ನಮಗಿರುವುದಿಲ್ಲ. ಸನಿಹದಲ್ಲಿ ಎಷ್ಟೋ ಯೋಗ್ಯವಾದ ಮನೆ ನಿರ್ಮಾಣದ ಸಲಕರಣೆಗಳಿರುತ್ತವೆ ಎಂಬುದು ಅವನ ನಿಲುವಾಗಿತ್ತು.

ಉಜಿರೆಯ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಉದಯಚಂದ್ರ ಮತ್ತವರ ಸಹಧರ್ಮಿಣಿ ಮನೋರಮಾ 2001ರಲ್ಲಿ ಇದೇ ಲೆಕ್ಕಾಚಾರ ಓದಿ ಹೊಸಮನೆ ಕಟ್ಟಿಸ್ದ್ದಿದಾರೆ. ಸ್ಥಳೀಯ ಗುಡ್ಡಗಳಿಂದ ತಂದ ಕಪ್ಪು ಕಲ್ಲುಗಳನ್ನೆ ಮನೆಗೆ ಹೆಚ್ಚಾಗಿ ಬಳಸಿದ್ದರಿಂದ ಅನ್ವರ್ಥವಾಗಿ ಮನೆಗೆ `ತಕ್ಷಶಿಲಾ~ ಎಂಬ ಹೆಸರಿಟ್ಟಿದ್ದಾರೆ.

ಅತಿ ಕಡಿಮೆ ವೆಚ್ಚದಲ್ಲಿ ಚಂದದ ಮನೆ ಕಟ್ಟುವ ಕನಸಿರುವವರಿಗೆ ಇಂದಿಗೂ ಇದೊಂದು ಮಾದರಿಯಾಗಿದೆ. ಕಗ್ಗಲ್ಲುಗಳನ್ನು ನೀಟಾಗಿ ಒಡೆದು ಎರಡೆರಡು ಕಲ್ಲುಗಳನ್ನು ಜೋಡಿಸಿ ಅದರಿಂದ ಅಗಲವಾದ ಪಿಲ್ಲರುಗಳನ್ನು ಮಾಡಿರುವ ಮನೆಗೆ ಕಬ್ಬಿಣ; ಕಾಂಕ್ರೀಟು ಬಳಸಿದ ಪಿಲ್ಲರುಗಳೇ ಇಲ್ಲ.

ಲಾರಿಗೆ ದುಬಾರಿ ಬಾಡಿಗೆ ಕೊಟ್ಟು ದೂರದಿಂದ ಕೆಂಪು ಕಲ್ಲು ತರಿಸುವುದರ ಬದಲಿಗೆ ಒಂದು ಕೆಂಪು ಕಲ್ಲಿನ ಬೆಲೆಯಲ್ಲಿಯೇ ಮೂರು ಕಗ್ಗ್ಲ್ಲಲುಗಳನ್ನು  ಕಡಮೆ ವೆಚ್ಚದಲ್ಲಿ ಬಳಸಲಾಗಿದೆ. ಇದರಿಂದ ಕಟ್ಟಿದ ಪಿಲ್ಲರುಗಳು ಒಂದರ್ಥದಲ್ಲಿ ಗೋಡೆಯೂ ಹೌದು. ಎರಡೂ ಪಿಲ್ಲರುಗಳ ಮಧ್ಯದ ಭಾಗವನ್ನು         ಕ್ಲೇಹಾಲೋಬ್ರಿಕ್ ಇಟ್ಟಿಗೆಗಳಿಂದ ಭರ್ತಿ ಮಾಡಲಾಗಿದೆ.

ಕಲ್ಲು ಗೋಡೆಗೆ ಗಾರೆ ಬಳಿದಿಲ್ಲ. ಇಟ್ಟಿಗೆಯ ಗೋಡೆಗೆ ಕೆಂಪು ಸಿಂಟೆಕ್ಸ್ ಮ್ಯಾಡ್ ಲೇಪಿಸಿರುವುದರಿಂದ ಅದರ ಬಣ್ಣವೂ ಚಿತ್ತಾಕರ್ಷಕವಾಗಿದೆ. ಕಗ್ಗಲ್ಲಿನ ಚೆಲುವೂ ಎದ್ದು ಕಾಣುತ್ತದೆ. ಗಮನಾರ್ಹ ಎಂದರೆ ಮನೆಗೆ ಅತಿ ಕಡಿಮೆ ಪ್ರಮಾಣದ ಸಿಮೆಂಟ್ ಖರ್ಚಾಗಿದೆ.

ವರಾಂಡಕ್ಕೆ ಹಾಸಿರುವುದು ಹಂಚಿನ ಕಾರ್ಖಾನೆಯ ಮಾರ್ಬಲ್. ಇದರ ಬೆಲೆ ಕಡಮೆ ಅನ್ನುವುದಕ್ಕಿಂತಲೂ ಒಳಗಡೆ ಸದಾ ತಂಪು ಹವೆಯಿರುತ್ತದೆ. ಸೆಕೆಗಾಲದಲ್ಲಿ ಫ್ಯಾನು ಕೈಕೊಟ್ಟರೂ ನಡೆಯುತ್ತದೆ. ನೆಲದಲ್ಲಿ ಆರಾಮ ಮಲಗಿಕೊಂಡರೂ ಮೈಕೈ ನೋವಿಲ್ಲ. ಇಪ್ಪತ್ತು ಅಡಿ ಎತ್ತರವಿರುವ ಮನೆಯ ತಾರಸಿಗೆ ಮಾತ್ರ ಸುಣ್ಣ ಬಳಿದದ್ದು ಬಿಟ್ಟರೆ ಇನ್ನೆಲ್ಲೂ ಸುಣ್ಣ ಬಣ್ಣ ಬಳಕೆಯಿಲ್ಲ.

ನೆಲ ಅಂತಸ್ತು 950 ಚದರಡಿಗಳು. ಮಹಡಿ 750 ಚದರಡಿ. ಅನಗತ್ಯವಾಗಿ ಒಳಗೆ ಎಲ್ಲೂ ಅಡ್ಡಗೋಡೆಗಳಿಲ್ಲ. ಹೆಬ್ಬಾಗಿಲಿನಿಂದ ವಿಶಾಲವಾದ ವರಾಂಡಕ್ಕೆ ಪ್ರವೇಶಿಸಿದರೆ ವರಾಂಡದ ಇನ್ನೊಂದು ತುದಿಯಿಂದ ನೇರ ಅಡುಗೆ ಮನೆಗೆ ಪ್ರವೇಶ ದ್ವಾರವಿದೆ, ಸನ್ ಮೈಕ್ ಮತ್ತು ಕಡಪ ಕಲ್ಲಿನಿಂದ ಸುಂದರವಾದ ಮಿತವೆಚ್ಚದ ಅಡುಗೆಮನೆ ನಿರ್ಮಾಣವಾಗಿದೆ,
ಮೂರು ಬೆಡ್ ರೂಮುಗಳಿರುವ ಮನೆಯಲ್ಲಿ ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಮಾತ್ರ ಮರದ ಬಾಗಿಲುಗಳಿವೆ.

ಉಳಿದ ಕೋಣೆಗಳಿಗೆ ಚೌಕಟ್ಟು ಮಾತ್ರವಿದ್ದು ಬಾಗಿಲಿನ ಬದಲಾಗಿ ಬಟ್ಟೆಯ ಕರ್ಟನ್ ಇಳಿಬಿಡಲಾಗಿದೆ, ಸ್ನಾನ ಮತ್ತು ಶೌಚದ ಕೊಠಡಿಗಳಿಗೆ ಫೈಬರ್ ಬಾಗಿಲು ಜೋಡಿಸಿದ್ದಾರೆ, ಮಹಡಿಯ ಮೆಟ್ಟಿಲುಗಳಿಗೆ ಮರ ಬಳಸದೆ ಸ್ಟೀಲಿನಿಂದ ಅದನ್ನು ನಿರ್ಮಿಸಿದ್ದರ ಫಲವಾಗಿ ಹಣ ಮತ್ತು ಮರ ಎರಡರಲ್ಲೂ ಮಿತವ್ಯಯ ಸಾಧ್ಯವಾಗಿದೆ.ಕಿಟಕಿಗಳು ಕೂಡ ಸ್ಟೀಲಿನದೇ.

ಚದರಡಿಗೆ ಇಪ್ಪತ್ತೈದು ರೂಪಾಯಿ ಖರ್ಚು ಮಾಡಿ ಬಿದಿರಿನಿಂದ ಹೆಣೆದ ಕಲಾತ್ಮಕ ಚಾಪೆಗಳನ್ನು ಇಳಿಬಿಟ್ಟಿದ್ದಾರೆ. ಬಾಗಿಲುಗಳಿಲ್ಲದ ಈ ಕಿಟಕಿಗಳು ಧಾರಾಳವಾಗಿ ಗಾಳಿ ಮತ್ತು ಬೆಳಕನ್ನು ಅನಿಯಂತ್ರಿತವಾಗಿ ಕೊಡುತ್ತವೆ, ವಾಸ್ತುಶಾಸ್ತ್ರಜ್ಞರ ಸಲಹೆಯಿಲ್ಲದೆ ಈ ಮನೆ ಕಟ್ಟಿದ್ದೆೀನೆ. ಉದ್ದೆೀಶಪೂರ್ವಕವಾಗಿ ಅಡುಗೆ ಮನೆಯನ್ನು ಪಶ್ಚಿಮ ದಿಕ್ಕಿಗೇ ಇರಿಸಿದ್ದೆೀನೆ. ಅದರಿಂದಾಗಿ ಈ ಮನೆಯಲ್ಲಿ ಒಂದು ದಶಕಕ್ಕಿಂತ ಹೆಚ್ಚಿನ ಅವಧಿಯಲ್ಲಿ ವಾಸವಾಗಿದ್ದರೂ ಯಾವುದೇ ತೊಂದರೆ ಬಂದಿಲ್ಲ ಎನ್ನುತ್ತಾರೆ ಪ್ರೊ. ಉದಯಚಂದ್ರರು.

ಮನೆ ಕಟ್ಟುವ ಮೊದಲು ಗಂಡ ಹೆಂಡತಿ ಒಟ್ಟಾಗಿ ಕುಳಿತು ನಾವು ಕಟ್ಟುವ ಮನೆ ಹೀಗೆಯೇ ಇರಬೇಕೆಂಬ ನಿರ್ಧಾರಕ್ಕೆ ಬರುವುದು ಮುಖ್ಯ. ಒಬ್ಬೊಬ್ಬರದು ಬೇರೆ ಯೋಚನೆಗಳಾದರೆ ಯೋಜನೆಯ ಆಯ ತಪ್ಪುತ್ತದೆ. ನಾವು ಸತಿ ಪತಿ ಪೂರ್ವ ನಿರ್ಧಾರ ಪ್ರಕಾರ ಮನೆ ಕಟ್ಟಿಸಿದ ಕಾರಣ ಯಾವುದೇ ಭಿನ್ನಾಭಿಪ್ರಾಯವೂ ಬರದೆ ಚಂದದ ಮನೆ ನಿರ್ಮಾಣವಾಯಿತೆಂಬ ಕಿವಿಮಾತನ್ನೂ ಅವರು ಹೇಳುತ್ತಾರೆ, ಆ ಕಾಲದಲ್ಲಿ  ಇಷ್ಟು ಚಂದದ ದೊಡ್ಡ ಮನೆ ಕಟ್ಟಲು ಆದ ವೆಚ್ಚ ಕೇವಲ ಆರು ಲಕ್ಷ ರೂಪಾಯಿ ಮಾತ್ರ.
 
ಇದರಿಂದ ಮಾಮೂಲಿಗಿಂತ ಶೇ 50ರಷ್ಟು ಖರ್ಚು ಉಳಿತಾಯವಾಗಿದೆಯೆಂದು  ಹೇಳುವ ಈ ದಂಪತಿ ಎಂಜಿನಿಯರ್ ಒಪ್ಪುತ್ತಿದ್ದರೆ ತಾರಸಿಗೆ ಕಬ್ಬಿಣದ ಬದಲು ಬಿದಿರನ್ನು ಬಳಸುವ ಬಗೆಗೂ ಯೋಚಿಸಿದ್ದರು. ಮಿತವ್ಯಯದ ದೃಷ್ಟಿಯಿಂದ ಇದು ಪ್ರಯೋಗಕ್ಕೆ ಅರ್ಹವಾದ ವಿಷಯವೆನ್ನುವ ಚಿಂತನೆ ಅವರದ್ದು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT