ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿವಿಧಾನಸೌಧಕ್ಕೆ ರೂ. 5 ಕೋಟಿ

ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಹೇಳಿಕೆ
Last Updated 9 ಜನವರಿ 2014, 6:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲು ಒಂದು ವಾರ­ದೊಳಗೆ ರೂ. 5 ಕೋಟಿ ಬಿಡುಗಡೆ ಮಾಡಲಾಗು­ವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರಮಾಣ ಪತ್ರ ವಿತ­ರಣಾ ಸಮಾರಂಭಕ್ಕೆ ಚಾಲನೆ ನೀಡಿ, 3 ವರ್ಷದೊಳಗೆ 30 ಜಿಲ್ಲಾ ಕೇಂದ್ರಗಳಲ್ಲಿ ಮತ್ತು 176 ತಾಲ್ಲೂಕು ಕೇಂದ್ರಗಳಲ್ಲಿ ಆಡಳಿತ ಸಂಕೀರ್ಣಗಳ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಮೀನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಸರ್ವೇಯರ್‌ಗಳ ಕೊರತೆ­ಯನ್ನು ನೀಗಿಸಲು ಸಿಬ್ಬಂದಿ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಈಗಾಗಲೇ 2 ಸಾವಿರ ಮಂದಿಯನ್ನು ನೇಮಿಸಿ, ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳೊಳಗೆ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು. ಕೋಲಾರ ಜಿಲ್ಲೆಗೂ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರೂಪಿಸಿರುವ ಜಮೀನುಗಳ ಪುನರ್ ಸರ್ವೆ ಕಾರ್ಯಕ್ಕೂ ಚಾಲನೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ತಲಾ ಶೇ.50ರಷ್ಟು ಅನುದಾನವನ್ನು ವಿನಿಯೋಗಿಸಿ ಯೋಜನೆಯನ್ನು ಜಾರಿಗೆ ತರಲಾಗು­ವುದು. ಈಗಾಗಲೇ ಕೇಂದ್ರ ಸರ್ಕಾರವು ರೂ. 90 ಕೋಟಿ ಬಿಡುಗಡೆ ಮಾಡಿದೆ. 2 ವರ್ಷದೊಳಗೆ ಪುನರ್ ಸರ್ವೆ ಕಾರ್ಯವನ್ನು ಪೂರ್ಣಗೊಳಿಸ­ಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಕ್ರಾಂತಿಗೆ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

ಪಿಂಚಣಿ: ಅನರ್ಹರು ಪಿಂಚಣಿ ಸೌಲಭ್ಯವನ್ನು ಹೆಚ್ಚು ಪಡೆಯುತ್ತಿರುವುದರಿಂದ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬ ಕಾರಣಕ್ಕೆ ಬಿಜೆಪಿ  ನೇತೃತ್ವದ ರಾಜ್ಯ ಸರ್ಕಾರವು ಪಿಂಚಣಿ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಅದರಿಂದ ಬಡವರಿಗೆ ಆಗಿರುವ ಅನನುಕೂಲಗಳ ಅರಿವಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ಪಿಂಚಣಿ ವಿತರಣೆಯನ್ನು ಜಾರಿಗೊಳಿಸಿತು ಎಂದು ಹೇಳಿದರು.

ಮನಸ್ವನಿ ಯೋಜನೆ ವಯೋಮಿತಿಯಲ್ಲೂ ರಿಯಾಯಿತಿಯನ್ನು ನೀಡಲು ಸರ್ಕಾರ ನಿರ್ಧರಿ­ಸಿದೆ. ಪತಿ ಪರಿತ್ಯಕ್ತರಾದ ಮಹಿಳೆಯರಿಗೆ ಮನಸ್ವಿನಿ ಯೋಜನೆ ಅಡಿ ವೇತನ ನೀಡಲು ನಿಗದಿ ಮಾಡಿದ್ದ ವಯೋಮಿತಿಯನ್ನು 40ರಿಂದ 21ಕ್ಕೆ ಇಳಿಸಲಾಗು­ವುದು. ಆಶ್ರಯ ಮನೆಗಳನ್ನು ಹಂಚುವ ಸಂದರ್ಭ­ದಲ್ಲಿ ಮನಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಂಘಟಿತ ಪ್ರಯತ್ನ: ರಾಜ್ಯದಲ್ಲಿ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳ ಜನ­ಪ್ರತಿನಿಧಿಗಳು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿಗಾಗಿ ಅಸಂಖ್ಯಾತ ಕೊಳವೆ ಬಾವಿ ಕೊರೆಸುವ ಬದಲು ಶಾಶ್ವತ ನೀರಾವರಿ ತರಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಆರ್‌ ರಮೇಶ್‌ ಕುಮಾರ್, ಭದ್ರತಾ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ತಾಲ್ಲೂಕು ಆಡಳಿತವು ಗಣನೀಯ ಶ್ರಮ ವಹಿಸಿದೆ. ಕ್ಷೇತ್ರದಲ್ಲಿ 6 ಸಾವಿರ ಅರ್ಹ ಫಲಾನುಭವಿಗಳನ್ನು ಗುರುತಿ­ಸಲಾಗಿದೆ. ಪರಿಶೀಲನೆ ನಂತರ ಇನ್ನಷ್ಟು ಫಲಾ­ನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಲಾಗುವುದು ಎಂದರು. ನಂತರ 6045 ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಪ್ರಮಾಣ ಪತ್ರ ವಿತರಿಸಲಾಯಿತು.

ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆರ್‌.ನಾರಾಯಣಸ್ವಾಮಿ, ಸದಸ್ಯ ಜಿ. ಸೋಮಶೇಖರ್‌, ಮಾಜಿ ಆಧ್ಯಕ್ಷ  ವಿ.ವೆಂಕಟ­ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಬಂಡಪಲ್ಲಿ ಕೃಷ್ಣಾರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲ್‌ ಕುಮಾರ್‌, ಪ್ರಧಾನ ಕಾರ್ಯ­ದರ್ಶಿ ದಿಂಬಾಲ ಅಶೋಕ್‌, ಕೋಲಾರ –ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಎನ್‌.ಜಿ.ಬ್ಯಾಟಪ್ಪ. ಮುಖಂಡರಾದ ಬಿ.ವೆಂಕಟ­ರೆಡ್ಡಿ, ಬಿ.ಎಂ.ಪ್ರಕಾಶ್‌, ಮುನಿರಾಜು, ವೆಂಕಟೇಶ್‌, ಅನ್ನೀಸ್‌ ಅಹ್ಮದ್‌, ವೆಂಕಟಾದ್ರಿ, ಮುಕ್ತಿಯಾರ್‌, ಕೃಷ್ಣಮೂರ್ತಿ, ಅಕ್ಬರ್‌ ಷರೀಫ್‌, ಉಪ ವಿಭಾಗಾಧಿಕಾರಿ ಸಿ.ಎಸ್‌.ಮಂಜುನಾಥ್‌, ತಹ­ಶೀಲ್ದಾರ್ ಎಚ್‌.ಜಯ, ಕೋಲಾರ ತಹಶೀಲ್ದಾರ್‌ ಜಿ.ಆರ್‌.ನಾಗರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT