ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನುಗು ತಾರೆಗಳಲ್ಲಿ ಮೆರೆಯುವ ಸೌರವ್ಯೂಹ

ನೆಹರೂ ತಾರಾಲಯದಲ್ಲಿ `ನಮ್ಮ ಸೌರವ್ಯೆಹ' ಪ್ರದರ್ಶನಕ್ಕೆ ಚಾಲನೆ
Last Updated 8 ಜುಲೈ 2013, 20:20 IST
ಅಕ್ಷರ ಗಾತ್ರ

ಬೆಂಗಳೂರು: `ಅಷ್ಟೊಂದು ಬೆಂಕಿ ಉಗುಳುವ ಸೂರ್ಯನನ್ನು ನುಂಗಲು ರಾಹು-ಕೇತು ಏಕೆ ಬೆನ್ನು ಬೀಳುತ್ತಾರೆ? ಸೂರ್ಯನ ಸುತ್ತ ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳು ಸುತ್ತು ಹಾಕಲು ಇರುವ ತಂತುವಾದರೂ ಯಾವುದು? ಮಂಗಳನ ಅಂಗಳದಲ್ಲಿ ಏನೇನಿದೆ? ಶನಿಯ ಸುತ್ತ ಉಂಗುರವನ್ನು ನಿರ್ಮಿಸಿದವರು ಯಾರು?'

ಇಂತಹ ನೂರಾರು ಕೌತುಕದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿತ್ತು ನಗರದ ಜವಾಹರಲಾಲ್ ನೆಹರೂ ತಾರಾಲಯದ `ನಮ್ಮ ಸೌರವ್ಯೆಹ' ಪ್ರದರ್ಶನ. ಈ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಸೌರವ್ಯೆಹದ ಮೇಲಿರುವ ಪೌರಾಣಿಕ ಕಥೆಗಳಿಂದ ಪ್ರದರ್ಶನ ಆರಂಭವಾಯಿತು. ರಾತ್ರಿಯ ಆಗಸಕ್ಕೆ ಸದ್ದಿಲ್ಲದೆ ಕರೆದೊಯ್ದ ಪ್ರದರ್ಶನ, ಅಲ್ಲಿರುವ ನಕ್ಷತ್ರಗಳಲ್ಲಿ ರಾಜ-ರಾಣಿ, ನೃತ್ಯಗಾರ್ತಿ, ಮೀನು ಮೊದಲಾದ ಪಾತ್ರಗಳನ್ನು ಸೃಷ್ಟಿಸಿತು. ಆ ಮೂಲಕ ಪೌರಾಣಿಕ ಕಥಾಲೋಕದಲ್ಲಿ ಪ್ರವೇಶ ಕಲ್ಪಿಸಿತು. ಅಲ್ಲಿ ಬಿಚ್ಚಿಕೊಳ್ಳುವ ಕಥೆಗಳು ಸೌರ ಮಂಡಲದ ಕುರಿತು ಕುತೂಹಲವನ್ನು ಕೆರಳಿಸಿದವು.

ರಾಜ-ರಾಣಿಯರು ಕ್ಷಿತಿಜದಿಂದ ಮರೆಯಾಗುತ್ತಿದ್ದಂತೆ ಮೇಷ, ವೃಷಭ, ಮಿಥುನ, ವೃಶ್ಚಿಕ, ಮಕರ, ಧನಸ್ಸು ಮೊದಲಾದ ರಾಶಿಗಳು ಕಾಣಿಸಿಕೊಂಡವು. ಅಲ್ಲಿಯೂ ಒಂದಿಷ್ಟು ಕಲ್ಪಿತ ಕಥೆಗಳ ಮೆರವಣಿಗೆ. ದಿಗಂತದಲ್ಲಿ ರಾಶಿಗಳು ಮಾಯವಾದ ಬಳಿಕ, ಅಶ್ವಿನಿ, ಭರಣಿ, ಸೇರಿದಂತೆ 27 ನಕ್ಷತ್ರಗಳು ಫಳ-ಫಳ ಹೊಳೆದವು. ಆಕಾಶದ ಒಂದೊಂದು ಮೂಲೆಯಲ್ಲಿ ಒಂದೊಂದು ನಕ್ಷತ್ರ ಮಿನುಗತೊಡಗಿದಾಗ ಕುಳಿತವರೆಲ್ಲ ಸುತ್ತಲೂ ಕತ್ತು ಹೊರಳಿಸಿದರು.

ಪೌರಾಣಿಕ ಪಾತ್ರಗಳು ಹಿಂದೆ ಸರಿದ ಮೇಲೆ ಸೌರವ್ಯೆಹದ ನೈಜ ಕಥೆ ಹೇಳಲು ಬಂದವರು ಖಗೋಳ ವಿಜ್ಞಾನಿಗಳು. ನಿಕೋಲಸ್ ಕೋಪರ್ನಿಕಸ್, ಗೆಲಿಲಿಯೊ, ಐಸಾಕ್ ನ್ಯೂಟನ್, ಜೊಹಾನ್ನೆಸ್ ಕೆಪ್ಲರ್, ಎಡ್ವಿನ್ ಹಬಲ್ ಮೊದಲಾದ ಸಂಶೋಧಕರು ತಮ್ಮ ಶೋಧದ ಫಲಶ್ರುತಿಯನ್ನು ಕ್ಷಿತಿಜದ ಮೇಲೆ ತಂದು ತೋರಿದರು. ಸೌರವ್ಯೆಹದ ವಾಸ್ತವ ಸಂಗತಿಗಳನ್ನು ಬಿಡಿಸಿ ಹೇಳಿದರು. ಸೂರ್ಯನ ಉಗಮ, ಆತನ ಆಯಸ್ಸು, ಆತನ ಸಹಚರರ ಮಾಹಿತಿ ಒಂದೊಂದಾಗಿ ತಿಳಿನೀಲಿ ಬಣ್ಣದ ಆಕಾಶದಲ್ಲಿ ಒಡಮೂಡಿದವು.

ನಕ್ಷತ್ರಪುಂಜಗಳ ರಚನೆ, ಗ್ರಹಗಳ ಚಲನೆ ವಿವರಗಳೂ ಸುರುಳಿ-ಸುರುಳಿಯಾಗಿ ಬಿಚ್ಚಿಕೊಂಡವು. ವಿಜ್ಞಾನಿಗಳು ಹಾರಿಬಿಟ್ಟ ಗಗನ ನೌಕೆಗಳು ಏನೆಲ್ಲ ಮಾಹಿತಿ ಸಂಗ್ರಹಿಸುತ್ತವೆ ಎಂಬುದರ ಪರಿಚಯವನ್ನು ಮಾಡಿಕೊಡಲಾಯಿತು.

ನಲವತ್ತು ನಿಮಿಷಗಳ ದೃಕ್‌ಶ್ರವಣ ಕಾರ್ಯಕ್ರಮದಲ್ಲಿ ನಮ್ಮ ಇಡೀ ಸೌರವ್ಯೆಹದ ಕುರಿತು ಮಾಹಿತಿ ಒದಗಿಸಲಾಯಿತು. ಪ್ರದರ್ಶನದಲ್ಲಿ 3ಡಿ ಅನಿಮೇಷನ್‌ಗಳ ಮೂಲಕ ಆಕಾಶಮಂದಿರದ ಗೋಳವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದು ಪ್ರೇಕ್ಷಕರಲ್ಲಿ ಬಾಹ್ಯಾಕಾಶದಲ್ಲಿ ಯಾನ ಮಾಡಿದ ಅನುಭವ ನೀಡಿತು. 

ಗ್ರಹಗಳ ಅಧ್ಯಯನದಲ್ಲಿ ದೂರದರ್ಶಕದ ಆವಿಷ್ಕಾರ ಒಂದು ಮಹತ್ವದ ಮೈಲಿಗಲ್ಲು. ಅದರ ಸಹಾಯದಿಂದ ಗ್ರಹಗಳ ಬಗ್ಗೆ ಹಿಂದೆಂದೂ ಕಂಡಿರದ ಎಷ್ಟೋ ಸಂಗತಿಗಳು ಪರಿಚಯವಾದ ಕುರಿತು ವಿವರಣೆ ನೀಡಲಾಯಿತು. ಮೊಯೇಜರ್ ಮತ್ತು ಪಯೊನಿಯರ್‌ನಂತಹ ಗಗನ ನೌಕೆಗಳು ಗ್ರಹಗಳ ಅಧ್ಯಯನಕ್ಕೆ ಹೇಗೆ ಹೊಸ ಬೆಳಕನ್ನು ಚೆಲ್ಲಿದವು ಎಂಬ ರಸವತ್ತಾದ ಮಾಹಿತಿಯೂ ಸಿಕ್ಕಿತು. ಗೆಲಿಲಿಯೊ, ಕೆಸಿನಿ ಮುಂತಾದ ಗಗನ ನೌಕೆಗಳು ಕೆಲ ನಿರ್ದಿಷ್ಟ ಗ್ರಹಗಳ ಮತ್ತು ಅವುಗಳ ಉಪಗ್ರಹಗಳ ಬಗೆಗೆ ವೈಜ್ಞಾನಿಕ ಕಥೆಗಳನ್ನು ಹೇಳಲಾಯಿತು.

ಕ್ಲಾಸಿಕಲ್ ಆಪ್ಟೊ-ಮೆಕಾನಿಕಲ್ ಮತ್ತು ಮಿರರ್ ಡೋಂ ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆಗಳನ್ನು ಒಟ್ಟಿಗೆ ಉಪಯೋಗಿಸಿ ಈ ಪ್ರದರ್ಶನವನ್ನು ಏರ್ಪಡಿಸಿರುವುದು ವಿಶೇಷ. ಎರಡೂ ವಿಭಿನ್ನ ತಂತ್ರಜ್ಞಾನ ಉಪಯೋಗಿಸಿ ಪ್ರದರ್ಶನವನ್ನು ನಡೆಸಿರುವ ಇಂತಹ ಪ್ರಯತ್ನ ಭಾರತದಲ್ಲಿ ಇದೇ ಮೊದಲು.

ಚಂದ್ರನಾಥ ಆಚಾರ್ಯರ ಮನೋಜ್ಞ ಚಿತ್ರಗಳು ಮತ್ತು ಬಿ.ಜಿ. ಗುಜ್ಜಾರಪ್ಪ ಅವರ ಕಾರ್ಟೂನ್‌ಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತುಂಬಿತ್ತು.

ಜಗದೀಶ ರಾಜು ಹಾಗೂ ಸತ್ಯನಾರಾಯಣ ಅವರ ಹಿನ್ನೆಲೆ ವಿವರಣೆ ಮಕ್ಕಳನ್ನು ಕೂಡಿಸಿ ಕಥೆ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ತಾರಾಲಯದ ನಿರ್ದೇಶಕಿ ಡಾ. ಬಿ.ಎಸ್. ಶೈಲಜಾ ಈ ಪ್ರದರ್ಶನದ ಕಥಾ ಹಂದರವನ್ನು ಸಿದ್ಧಪಡಿಸಿದವರು.1600x1600 ಪಿಕ್ಸೆಲ್‌ಗಳ ಫಿಶ್ ಐ ಬಿಂಬಗಳನ್ನು ಫುಲ್ ಡೋಂ ಪ್ಲಗ್‌ನಿಂದ ನಿರ್ಮಿಸಲಾಗಿದೆ.

ನಾಳೆಯಿಂದ ನಿತ್ಯ ಪ್ರದರ್ಶನ
ಪ್ರದರ್ಶನವು ಜುಲೈ10 ರಿಂದ ಸಾರ್ವಜನಿಕರಿಗೆ ಲಭ್ಯವಿದೆ. ಕನ್ನಡದಲ್ಲಿ ಬೆಳಿಗ್ಗೆ 11.30 ಮತ್ತು ಮಧ್ಯಾಹ್ನ 3.30, ಇಂಗ್ಲಿಷ್‌ನಲ್ಲಿ ಮಧ್ಯಾಹ್ನ 12.30 ಮತ್ತು ಸಂಜೆ 4.30. ಪ್ರವೇಶ ಧನ: ವಯಸ್ಕರಿಗೆ ರೂ35 ಮತ್ತು ಶಾಲಾ ಮಕ್ಕಳಿಗೆ    ರೂ20. ಪ್ರದರ್ಶನದ ಕುರಿತು ಮಾಹಿತಿಗಾಗಿ ವೆಬ್‌ಸೈಟ್- www.taralaya,org ಸಂದರ್ಶಿಸಿ. ದೂರವಾಣಿ ಸಂಖ್ಯೆ- 2237 9725 ಅಥವಾ 2220 3234.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT