ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್ ಅಳವಡಿಸದಿದ್ದರೆ ಪರವಾನಗಿ ರದ್ದು

ಆಟೊ ರಿಕ್ಷಾ ಮಾಲೀಕರಿಗೆ ಆಗಸ್ಟ್ 31ರ ಗಡುವು: ಜಿಲ್ಲಾಧಿಕಾರಿ
Last Updated 18 ಜುಲೈ 2013, 8:49 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಎಲ್ಲಾ ಆಟೊ ರಿಕ್ಷಾಗಳಿಗೆ ಆಗಸ್ಟ್ 31ರ ಒಳಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪೊಲೀಸ್, ಸಾರಿಗೆ ಇಲಾಖೆ, ನಗರಸಭೆ ಹಾಗೂ ಜಿಲ್ಲೆಯ ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಆಟೊ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಹಿಂದೆಯೇ ಮೀಟರ್ ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಅದರೂ ಬಹಳಷ್ಟು ಆಟೊ ರಿಕ್ಷಾಗಳಿಗೆ ಮೀಟರ್ ಅಳವಡಿಸಿಲ್ಲ. ಆಗಸ್ಟ್ 31ರ ಒಳಗೆ ಆಟೊ ರಿಕ್ಷಾಗಳಿಗೆ ಮೀಟರ್ ಅಳವಡಿಸದಿದ್ದರೆ ಅಂತಹ ಆಟೊ ರಿಕ್ಷಾಗಳ ಪರ್ಮಿಟ್ ರದ್ದು ಪಡಿಸಿ, ರಿಕ್ಷಾಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಯಾದ್ಯಂತ ಸಹಾಯಕ ಸಾರಿಗೆ ಪ್ರದೇಶಿಕ ಕಚೇರಿಗಳ ವ್ಯಾಪ್ತಿಯಲ್ಲೂ ಈ ನಿಯಮ ಏಕ ಪ್ರಕಾರವಾಗಿ ಅನ್ವಯವಾಗಿದ್ದು ಮಲೆನಾಡು, ಬಯಲುಸೀಮೆ ಎಂಬ ಯಾವುದೇ ಪ್ರಶ್ನೆ ಇಲ್ಲ. ಎಲ್ಲರೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಹೇಳಿದರು.

ಮೀಟರ್ ಅಳವಡಿಕೆ ನಂತರ ಆಯಾ ಸಾರಿಗೆ ಪ್ರದೇಶಿಕ ಕಚೇರಿಗಳಲ್ಲಿ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್, ವಿಮೆ, ಆರ್‌ಸಿ ಹಾಗೂ ಹೊಗೆ ಪರೀಕ್ಷೆ ದಾಖಲೆಗಳನ್ನು ಸುಸ್ಥಿತಿಯಲ್ಲಿ ಇರುವ ಬಗ್ಗೆ ದೃಢೀಕರಣ ಮಾಡಿಸಿಕೊಳ್ಳಬೇಕು ಎಂದರು.

ಶಿವಮೊಗ್ಗ ನಗರಸಭೆ ವ್ಯಾಪ್ತಿಯಲ್ಲಿ 1,500 ಆಟೊಗಳಿಗೆ ಮೀಟರ್‌ಗಳು ಮಂಜೂರಾಗಿದ್ದು, ಇದುವರೆಗೂ ಕೆಲವೇ ಜನರು ಮೀಟರ್ ಅಳವಡಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಟರ್ ಅಳವಡಿಸಿಕೊಳ್ಳುವ ಆಟೋಗಳಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ಎರಡು ಹಂತಗಳಲ್ಲಿ ಮಾತ್ರ ಸಬ್ಸಿಡಿ ನೀಡಲಾಗುವುದು, ಈ ನಂತರ ಬರುವ ಆಟೋಗಳಿಗೆ ಸಬ್ಸಿಡಿ ಸಿಗುವುದಿಲ್ಲ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಆರ್‌ಟಿಒ ಕುಬೇರಪ್ಪ, ಎಆರ್‌ಟಿಒ ಧರ್ಮಯ್ಯಗೌಡ, ನಗರಸಭೆ ಆಯುಕ್ತ ಗಣೇಶ್, ನಾಗರಿಕ ವೇದಿಕೆಯ ರವಿಶಂಕರ್ ಹಾಗೂ ತೂಕ ಮತ್ತು ಅಳತೆ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ  ಉಪಸ್ಥಿತರಿದ್ದರು.


ಆಟೊ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ
ಶಿವಮೊಗ್ಗ ನಗರದ ಪ್ರಯಾಣಿಕ ಆಟೊಗಳ ಬಾಡಿಗೆ ದರ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸಹಮತ ವ್ಯಕ್ತಪಡಿಸಿದರು. ಮೊದಲ 1.5 ಕಿ.ಮೀ. ವರೆಗೆ (ಮಿನಿಮಮ್) ರೂ 20 ಹಾಗೂ ನಂತರದ ಪ್ರತಿ ಕಿ.ಮೀ.ಗೆ ತಲಾ ರೂ10 ದರ ನಿಗದಿ ಮಾಡಲಾಗಿದೆ. ಇದಕ್ಕೆ ಸಭೆಯಲ್ಲಿ ಇದ್ದ ಆಟೊ ಮಾಲೀಕರು, ಚಾಲಕರು ಕೂಡ ಒಪ್ಪಿಗೆ ಸೂಚಿಸಿದರು.

2011ರಿಂದ ಇಲ್ಲಿಯವರೆಗೆ ನಗರದಲ್ಲಿ ಆಟೋ ಬಾಡಿಗೆ ದರದಲ್ಲಿ ಹೆಚ್ಚಳ ಮಾಡಿಲ್ಲ. ಹೆಚ್ಚಾಗುತ್ತಿರುವ ಇಂಧನ ಬೆಲೆಯಿಂದ ಸಾಕಷ್ಟು ನಷ್ಟವಾಗುತ್ತಿದೆ. ಉಡುಪಿ ಮಾದರಿಯಲ್ಲಿ ಪ್ರಯಾಣ ದರ ನಿಗದಿ ಮಾಡುವಂತೆ ಜಿಲ್ಲಾಧಿಕಾರಿಗೆ ಸಭೆಯಲ್ಲಿ ಮನವಿ ಮಾಡಿದರು.

ಉಡುಪಿಗೂ, ಶಿವಮೊಗ್ಗ ನಗರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಉಡುಪಿಯಲ್ಲಿ ಇರುವ ಸ್ಥಿತಿಗತಿ ಶಿವಮೊಗ್ಗದಲ್ಲಿ ಇಲ್ಲ. ಅಲ್ಲಿನ ಆಟೊ ಪ್ರಯಾಣ ದರದ ಕುರಿತಂತೆ ತಾವು ಉಡುಪಿ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಅವರು ತಿಳಿಸಿದರು.

ಅಂತಿಮವಾಗಿ ಬೆಂಗಳೂರು ಮಾದರಿಯಂತೆ ಆದರೂ ಪ್ರಯಾಣ ದರ ನಿಗದಿ ಮಾಡಿ ಎಂಬ ಆಟೊ ಚಾಲಕರ ಬೇಡಿಕೆ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ಹೊಸ ದರವನ್ನು ತಾವೇ ನಿಗದಿಪಡಿಸಿದರು. ಇದಕ್ಕೆ ಆಟೊ ಚಾಲಕರು ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT