ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಹತ್ಯೆ: ಭಾರತ ಕಳವಳ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ ತಿರುವನಂತಪುರ (ಐಎನ್‌ಎಸ್): ಇಟಲಿಯ ಸರಕು ಸಾಗಣೆ ಹಡಗಿನ ಭದ್ರತಾ ಅಧಿಕಾರಿಗಳು ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ ಗುಂಡು ಹೊಡೆದು ಸಾಯಿಸಿದ್ದು, ಈ ಘಟನೆಗೆ ಭಾರತ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

`ಹಡಗಿನ ಕ್ಯಾಪ್ಟನ್ ಸ್ಥಳೀಯ ಅಧಿಕಾರಿಗಳೊಂದಿಗೆ ಈ ಕುರಿತ ತನಿಖೆಗೆ ಸಹಕರಿಸಬೇಕು~ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಎಂ.ಗಣಪತಿ ಅವರು ಇಟಲಿಯ ರಾಯಭಾರಿ ಗಿಯಾಕೊಮೊ ಸ್ಯಾನ್‌ಫೆಲಿಸ್ ಡಿಮಾಂಟ್‌ಫೋರ್ಟ್ ಅವರನ್ನು ಕರೆದು ಸೂಚಿಸಿದ್ದಾರೆ.

`ಇದೊಂದು ನೋವಿನ ಘಟನೆ, ಭಾರತದ ಅಧಿಕಾರಿಗಳಿಗೆ ನಾವು ಸಹಕರಿಸುತ್ತಿದ್ದೇವೆ. ಇಟಲಿ ನೌಕಾಪಡೆ ಅಂತರ ರಾಷ್ಟ್ರೀಯ ನಿಯಮ ಅನುಸರಿಸಿದೆ. ದೋಣಿಯಲ್ಲಿದ್ದವರು ದಾಳಿ ನಡೆಸಿದ ಬಳಿಕ ಅವರ ಮೇಲೆ ಗುಂಡು ಹಾರಿಸಲಾಯಿತು. ಗುಂಡು ಹಾರಿಸುವ ಮುನ್ನ ಬೆದರಿಸಲು ಎರಡು ಬಾರಿ ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗಿತ್ತು~ ಎಂದು ಗಿಯಾಕೊಮೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ಇಟಲಿ ನೌಕಾಪಡೆ ಸಿಬ್ಬಂದಿ ತಿಳಿಸಿರುವಂತೆ ಮೀನುಗಾರರಿಗೆ ಮೊದಲು ಯಾವ ಎಚ್ಚರಿಕೆಯನ್ನೂ ನೀಡಿರಲಿಲ್ಲ. ದೋಣಿಯಲ್ಲಿದ್ದ 11 ಮೀನುಗಾರರಲ್ಲಿ 9 ಮಂದಿ ನಿದ್ರಿಸುತ್ತಿದ್ದರು. ಎಚ್ಚರವಾಗಿದ್ದ ಚಾಲಕ ಮತ್ತು ಮತ್ತೊಬ್ಬ ಮೀನುಗಾರ ಗುಂಡೇಟಿಗೆ ಬಲಿಯಾಗಿದ್ದಾರೆ. ನೌಕಾಪಡೆ, ಕರಾವಳಿ ಪಡೆ ಮತ್ತು ಸ್ಥಳೀಯ ಪೊಲೀಸರಿಂದ ಘಟನೆಯ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇರಳದ ಅಲೆಪ್ಪಿಯಿಂದ14 ನಾಟಿಕಲ್ ಮೈಲು ದೂರದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮೃತರಲ್ಲಿ ಒಬ್ಬರು ಕೇರಳ, ಇನ್ನೊಬ್ಬರು ತಮಿಳುನಾಡಿಗೆ ಸೇರಿದವರಾಗಿದ್ದಾರೆ. ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ಕೇರಳ ಸಂಪುಟ ನಿರ್ಧರಿಸಿದೆ.

ಎಫ್‌ಐಆರ್ ದಾಖಲು: ಘಟನೆ ಸಂಬಂಧ ಕೊಲ್ಲಂಗೆ ಸಮೀಪದ ನೀಡಕಾರ ಎಂಬಲ್ಲಿರುವ ಕರಾವಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

`ಇದೊಂದು ಅತ್ಯಂತ ಗಂಭೀರ ಮತ್ತು ದುರದೃಷ್ಟಕರ ಘಟನೆ. ತನಿಖೆ ಮುಂದುವರಿದಿದೆ. ದೇಶದ ಕಾನೂನಿನ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ~ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT