ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಕೃಷಿಗೆ ಸಿದ್ಧತೆ

Last Updated 9 ಏಪ್ರಿಲ್ 2013, 7:03 IST
ಅಕ್ಷರ ಗಾತ್ರ

ಹನುಮಸಾಗರ:  ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆಗಳು ಸುರಿಯದಿರುವುದರಿಂದ ರೈತರಿಗೆ ಕೃಷಿಯ ಮೇಲಿನ ಆಸೆ ಕಮರಿ ಹೋಗಲು ಕಾರಣವಾಗಿದೆ. ಈ ಹಿಂದೆ ಕಾರು ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಬಿತ್ತನೆ ಕಾರ್ಯ ಸಂಪೂರ್ಣಗೊಳಿಸುತ್ತಿದ್ದ ರೈತರು ಕಾರು ಹುಣ್ಣುಮೆ ಕಡೆ ಕೂರಿಗೆಗಳು ಎಂದು ಬಿತ್ತನೆಯಾಗಿ ಉಳಿದ ಬೀಜಗಳನ್ನೆಲ್ಲ ದೋಸೆ ಮಾಡಿ ಉಣ್ಣುತ್ತಿದ್ದರು.

ಆದರೆ ಸದ್ಯ ಕಾಲ ಬದಲಾಗಿದ್ದು ಕಾರು ಹುಣ್ಣಿಮೆ ಬಂದರೂ ಮಳೆಯಾಗದೆ ಕೂರಿಗೆಗಳು ಜಮೀನುಗಳಿಗೆ ಹೋಗಲಾರದ ಸಂದರ್ಭ ಬಂದಿದೆ ಎಂದು ರೈತರು ವಿಷಾದದಿಂದ  ಹೇಳುತ್ತಾರೆ.

ವಾಡಿಕೆಯಂತೆ ರೈತರು ಬಸವ ಜಯಂತಿಯ ನಂತರದಲ್ಲಿ ಮುಂಗಾರು ಬೆಳೆಗೆ ಭೂಮಿ ಹದ ಮಾಡುವುದು ವಾಡಿಕೆಯಾದರೂ ಈ ಬಾರಿ ಆಗಸದಲ್ಲಿ ಅವಧಿಗಿಂತ ಮೊದಲೆ  ಗುಡುಗು ಸಿಡಿಲುಗಳು ಅಬ್ಬರಿಸುತ್ತಿರುವುದರಿಂದಾಗಿ ಮಳೆ ಬಂದರೂ ಬರಬಹುದು ಎಂದುಕೊಂಡು ಕೊಂಚ ಬೇಗನೆ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಈ ಭಾಗದಲ್ಲಿ ಕಂಡು ಬರುತ್ತಿದೆ.

ಹಿಂದಿನಿಂದಲೂ ಭರಣಿ ಮಳೆಗೆ ವಿವಿಧ ಬೀಜಗಳ ಬಿತ್ತನೆ ಆರಂಭಗೊಳ್ಳುತ್ತಿದ್ದವು. ಮುಂಗಾರಿನ ಮೊದಲ ಮಳೆಯಾದ ಅಶ್ವಿನಿ ಹಾಗೂ ಭರಣಿ ಮಳೆಗಳು ನಾಲ್ಕಾರು ವರ್ಷಗಳಿಂದ ಹೇಳಿಕೊಳ್ಳುವಷ್ಟು ಮಳೆಯಾಗದಿರುವುದರಿಂದ ರೈತರಿಗೆ ರೋಹಿಣಿ ಮಳೆಯ ಮೇಲೆಯೇ ವಿಶ್ವಾಸ ಇಟ್ಟುಕೊಂಡಿದ್ದಾರೆ.

ರೋಹಿಣಿ ಮಳೆ ಸರಿಯಾದ ಸಮಯಕ್ಕೆ ಸುರಿದರೆ ಮುಂಗಾರು ಬೆಳೆಗಳಾದ ಜೋಳ, ಹೆಸರು, ತೊಗರಿ ಬೆಳೆಗಳ ಬಿತ್ತನೆಗೆ ಪ್ರಶಸ್ತವಾದ                         ಸಮಯವಾಗಿರುತ್ತದೆ. ರೋಹಿಣಿ ಮಳೆಯ ನಂತರದಲ್ಲಿ ಬೀಳುವ ಮಳೆಗೆ ಈ ಬೀಜಗಳನ್ನು ಬಿತ್ತಲು ಸಮಯ ಮುಗಿದು ಹೋಗುವುದರಿಂದ ಅನಿವಾರ್ಯವಾಗಿ ಸಜ್ಜೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಕಡಲೆಯಂತಹ ಬೀಜಗಳನ್ನು ಮಾತ್ರ ಬಿತ್ತನೆ ಮಾಡಬೇಕಾಗುತ್ತದೆ ಎಂದು ಅಡವಿಭಾವಿಯ ರೈತ ಬಸವಲಿಂಗಪ್ಪ ಭಾವಿ ಹೇಳುತ್ತಾರೆ. ಆದರೆ ಈ ಬೆಳಗಳು ಕೈಗೆ ಕಾಸು ತಂದರು ಮುಂದೆ ಜಾನುವಾರುಗಳಿಗೆ ಆಹಾರದ ಸಮಸ್ಯೆ ತಲೆದೂರುವ ಸಂಭವ ಇರುತ್ತದೆ ಎಂದು ಅವರು ಹೇಳುತ್ತಾರೆ.

ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ, ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಲೆದೂರಿದೆ. ಬೇಗನೆ ಮಳೆಗಳು ಆರಂಭವಾದರೆ ಕೆಲ ತಾಪತ್ರೆಯಗಳು ತಪ್ಪುತ್ತಿವೆ ಎಂಬ ಕಾರಣದಿಂದ ರೈತರು ಮೊಡಗಳತ್ತ ಕಣ್ಣು ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT