ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ನ್ಯಾಯಮೂರ್ತಿಯಾಗಿ ಸದಾಶಿವಂ ಪ್ರಮಾಣ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಪಿ.ಸದಾಶಿವಂ ಅವರು ರಾಷ್ಟ್ರದ 40ನೇ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಒಂಬತ್ತು ತಿಂಗಳಿಂದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಲ್ತಮಸ್ ಕಬೀರ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸದಾಶಿವಂ ನೇಮಕವಾಗಿದ್ದಾರೆ. 64 ವರ್ಷದ ಸದಾಶಿವಂ ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಧಾನಿ ಮನಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ, ಎನ್‌ಡಿಎ ಕಾರ್ಯಾಧ್ಯಕ್ಷ ಎಲ್.ಕೆ.ಅಡ್ವಾಣಿ, ಸಿಪಿಐ ನಾಯಕ ಡಿ.ರಾಜಾ ಹಾಗೂ ಕೇಂದ್ರದ ಹಲವು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.

2007ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದ ಸದಾಶಿವಂ ಅವರ ಸೇವಾವಧಿ 2014ರ ಏ.26ರವರೆಗೆ ಇದೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನು ಪ್ರಸ್ತುತ ನೇಮಕಾತಿ ಮಂಡಳಿ ಮೂಲಕ ನೇಮಕ ಮಾಡುವ ಪದ್ಧತಿಯಿದ್ದು, ಅಲ್ತಮಸ್ ಕಬೀರ್ ಅವರಂತೆಯೇ ಸದಾಶಿವಂ ಕೂಡ ಇದರ ಪರ ಇದ್ದಾರೆ.

ನೇಮಕಾತಿ ಮಂಡಳಿ ಪದ್ಧತಿಯಲ್ಲಿ ಕೆಲವು ಲೋಪಗಳಿದ್ದರೂ ಅವನ್ನು ಸರಿಪಡಿಸಲು ಹಾಗೂ ಪಾರದರ್ಶಕತೆ ಖಾತ್ರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲು ಅವಕಾಶಗಳಿವೆ ಎಂಬುದು ಅವರ ಅಭಿಪ್ರಾಯವಾಗಿದೆ.

1949ರ ಏ.27ರಂದು ಜನಿಸಿದ ಸದಾಶಿವಂ 1973ರ ಜುಲೈನಲ್ಲಿ ಮದ್ರಾಸ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿಕೊಂಡಿದ್ದರು. 1996ರ ಜನವರಿಯಲ್ಲಿ ಅವರು ಮದ್ರಾಸ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT