ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬರುವರು ಮಾವನ ಮನೆಗೆ...

Last Updated 2 ಜನವರಿ 2012, 8:40 IST
ಅಕ್ಷರ ಗಾತ್ರ

ಕುಶಾಲನಗರ: ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಕೊಡಗಿನ ಅಳಿಯ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪತ್ನಿ ಡಾಟಿ ಅವರ ತವರಾದ ಗುಡ್ಡೆಹೊಸೂರು ಗ್ರಾಮ ಹಾಗೂ ಕುಶಾಲನಗರ ಪಟ್ಟಣಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಲಿದ್ದಾರೆ.

ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಅಳಿಯ ಸಿಎಂ ಡಿ.ವಿ.ಸದಾನಂದಗೌಡ ಅವರನ್ನು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿಲು ಗುಡ್ಡೆಹೊಸೂರಿನಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಗ್ರಾಮಸ್ಥರು ತಮ್ಮ ಊರಿನ ಬೇಡಿಕೆಗಳ ಕುರಿತು ಸಿಎಂಗೆ ಮನವಿ ಸಲ್ಲಿಸಲು ಕಾತುರರಾಗಿದ್ದಾರೆ.

ಮಡಿಕೇರಿ ನಗರದಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮದ ನಂತರ ಮಧ್ಯಾಹ್ನ 1.45 ರ ವೇಳೆಗೆ ಗುಡ್ಡೆಹೊಸೂರಿಗೆ ಆಗಮಿಸಲಿರುವ ಸಿಎಂ ಸದಾನಂದಗೌಡ ಅವರನ್ನು ಗುಡ್ಡೆ ಹೊಸೂರು ವೃತ್ತದಲ್ಲಿ ಸ್ವಾಗತಿಸಲಾಗುವುದು.

ಮೊದಲಿಗೆ  ಸದಾನಂದಗೌಡ ಪತ್ನಿ ಡಾಟಿ ಅವರೊಂದಿಗೆ ಗ್ರಾಮ ದೇವತೆ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ತಮ್ಮ ಮಾವನ ಮನೆಗೆ ಆಗಮಿಸಲಿದ್ದಾರೆ.

ಸಿಎಂ ಆದ ಬಳಿಕ ಪತ್ನಿ ಡಾಟಿ ಅವರೊಂದಿಗೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಸದಾನಂದಗೌಡರನ್ನು ಗುಡ್ಡೆಮನೆ ಕುಟುಂಬ ಸ್ಥರು ಕೊಡಗಿನ ಸಂಪ್ರದಾಯದಂತೆ ಮದುವೆ ಮಾದರಿಯಲ್ಲಿ ಒಡ್ಡೋಲಗ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಿದ್ದಾರೆ.

ಸಿಎಂ ಭೇಟಿ ಹಿನ್ನೆಲೆಯಲ್ಲಿ ಗುಡ್ಡೆಹೊಸೂರಿನ ಗುಡ್ಡೆಮನೆಯಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು.
ಭಾನುವಾರ ಇಡೀ ಕುಟುಂಬಸ್ಥರು ಹಬ್ಬದ ಅಡುಗೆ ತಯಾರು ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂತು. 

ಗುಡ್ಡೆಮನೆಯ ಮನೆಯಂಗಳದಲ್ಲಿ ಷಾಮಿಯಾನ ಹಾಕಿ ಮನೆಗೆ ಬರುವ ಅತಿಥಿಗಳು ಮತ್ತು ಗ್ರಾಮಸ್ಥರಿಗೆ ಕುಟುಂಬದ ವತಿಯಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೂ ಮೊದಲು ಗ್ರಾಮಸ್ಥರು ಅಹವಾಲು ಸಿಎಂಗೆ ಮನವಿ ಸಲ್ಲಿಸಲಿದ್ದಾರೆ ಎಂದು ಗ್ರಾ.ಪಂ.ಸದಸ್ಯರೂ ಆದ ಸದಾನಂದಗೌಡ ಅವರ ಭಾವಮೈದುನ ಗುಡ್ಡೆಮನೆ ಎಂ. ಮಣಿಕುಮಾರ್ ಭಾನುವಾರ ಸ್ಥಳಕ್ಕೆ ತೆರಳಿದ್ದ `ಪ್ರಜಾವಾಣಿ~ ಪ್ರತಿನಿಧಿಗೆ ತಿಳಿಸಿದರು.

ಗುಡ್ಡೆಹೊಸೂರು ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ನವಗ್ರಾಮ ನಿರ್ಮಾಣ, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಕುಶಾಲ ನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಕಾರ್ಯ ಮತ್ತು ಪೀಠೋಪಕರ ಣಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ಸಿಎಂ ಭೇಟಿ ಹಿನ್ನೆಲೆಯಲ್ಲಿ ಗುಡ್ಡೆ ಹೊಸೂರಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಇಡೀ ಗ್ರಾಮವನ್ನು ಸಿಂಗರಿಸಲಾಗುತ್ತಿದೆ. ಜಿ.ಪಂ. ವತಿಯಿಂದ ಗ್ರಾಮದ ಮುಖ್ಯ ರಸ್ತೆಯಿಂದ ಮುಖ್ಯಮಂತ್ರಿ ತೆರಳುವ ಸಂಪರ್ಕ ರಸ್ತೆಗೆ ಡಾಂಬರೀಕರಣಗೊಳಿಸಲಾಗಿದೆ.

ದಾರಿಯುದ್ದಕ್ಕೂ ಸದಾನಂದಗೌಡರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ತೂಗು ಹಾಕಿ ಸ್ವಾಗತ ಕೋರಲಾಗಿದೆ. ಹಲವಾರು ಮಂದಿ ರಾಜ್ಯದ ದೊರೆಗೆ ತಮ್ಮ ಅಹವಾಲು ಸಲ್ಲಿಸಲು ಕಾದು ಕುಳಿತ್ತಿದ್ದಾರೆ.

ನಂತರ ಕುಶಾಲನಗರದಲ್ಲಿ ಗೌಡ ಸಮಾಜದ ವತಿಯಿಂದ ನಡೆಯಲಿರುವ ಹುತ್ತರಿ ಸಂತೋಷ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿಎಂ ಸದಾನಂದಗೌಡ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಕುಶಾಲನಗರ ಮತ್ತು ಗುಡ್ಡೆಹೊಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊಡಗು ಸೇರಿದಂತೆ ನೆರೆ ಜಿಲ್ಲೆಗಳಿಂದ ಮೂನ್ನರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಎಸ್‌ಪಿ ಮಂಜುನಾಥ್ ಅಣ್ಣೀಗೇರಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT