ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಪತ್ರ

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಗೌರವಪೂರ್ವಕ ವಂದನೆಗಳು.
ರಾಜ್ಯದ ಸಾಂಸ್ಕೃತಿಕ ಧೋರಣೆಯ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭ ಇದು. ಈ ಸಂದರ್ಭದಲ್ಲಿ `ಧೋರಣೆ' ಎಂಬ ದೊಡ್ಡ ಶಬ್ದಕ್ಕೆ ಒಗ್ಗದಂತೆ ಕಾಣುವ, ಆದರೆ  ನಿಶ್ಚಯವಾಗಿಯೂ ಸಾಂಸ್ಕೃತಿಕ ಧೋರಣೆಯ ಒಂದು ಅಂಗವೇ ಆಗಿರುವ ಸಮಸ್ಯೆಗಳಿವೆ. ಅವುಗಳಲ್ಲಿ ಸದ್ಯಕ್ಕೆ ಎರಡನ್ನಷ್ಟೇ ನಿಮ್ಮ ಗಮನಕ್ಕೆ ತರಲು ಇಚ್ಛಿಸಿ ಈ ಪತ್ರ ಬರೆಯುತ್ತಿದ್ದೇನೆ. ಹೆಣ್ಣುಮಕ್ಕಳು ಕೇವಲ ವಸ್ತುವಾಗಿ ಪರಿಗಣಿತವಾಗುವ, ನಿತ್ಯ ಅತ್ಯಾಚಾರ, ಹಿಂಸೆಗೆ ಪಕ್ಕಾಗುತ್ತಿರುವ ಕರಾಳ ಸಾಮಾಜಿಕ ವಾತಾವರಣದಲ್ಲಿ ಕೊನೇಪಕ್ಷ ನೀವು ಇಷ್ಟನ್ನು ಕೈಗೊಂಡರೆ ಉಳಿದವುಗಳನ್ನು ತೋಡಿಕೊಳ್ಳಲು ನಮಗೆ ಧೈರ್ಯ ಬರುತ್ತದೆ. ಇಲ್ಲವಾದರೆ, ಇದೂ ಎಲ್ಲ ಸರ್ಕಾರದ ಹಾಗೆಯೇ ಬಂತು ಹೋಯಿತು, ಎಂದು ನಾವು ಮನದಲ್ಲೇ ಗೊತ್ತುವಳಿ ಬರೆದುಕೊಂಡು ನೋಯಬೇಕಾಗುತ್ತದೆ.

1.ರಾತ್ರಿ ಬಸ್ಸಿನಲ್ಲಿ ಹಲವು ಬಾರಿ ಪಯಣಿಸಿದ ನಾನು ಅನುಭವದಿಂದ ಇದನ್ನು ತಿಳಿಸುತ್ತಿದ್ದೇನೆ. ಕೆಲ ರಾತ್ರಿ ಬಸ್ಸುಗಳಲ್ಲಿ ಬಸ್ ಸ್ಟಾರ್ಟ್ ಆದ ಸ್ವಲ್ಪ ಹೊತ್ತಿಗೇ ಎದುರಿಗೇ ಇರುವ ಸ್ಕ್ರೀನಿನ ಮೇಲೆ ಯಾವುದೊ ಸಿನಿಮಾ ಸುರುವಾಗುತ್ತದೆ. ನೋಡುವುದಿಲ್ಲ ಎಂದರೆ ಕಣ್ಣು ಮುಚ್ಚಿಕೊಳ್ಳಬೇಕು ಅಷ್ಟೆ. ಬಲವಂತವಾಗಿ ಕಣ್ಣುಮುಚ್ಚಿಕೊಳ್ಳಬೇಕಾದ ಪ್ರಸಂಗ ಎಂತಹ ಹಿಂಸೆ ಎಂದು ನಿಮಗೆ ಗೊತ್ತಿದೆ- ಎಂದು ತಿಳಿಯುತ್ತೇನೆ. ಆ ಸಿನಿಮಾಗಳೋ ತೀರಾ ಕೆಳಮಟ್ಟದ ಅಭಿರುಚಿಯವು. ಕತೆಗೆ ಹೊಂದಿರಲಿ ಇಲ್ಲದಿರಲಿ ಹೆಣ್ಣನ್ನು ಅತಿ ಭೀಕರವಾಗಿ ಪ್ರೊಜೆಕ್ಟ್ ಮಾಡುವ ಸಿನಿಮಾಗಳು. ಇವು ಒಂದು ಬಗೆಯವಾದರೆ, ದ್ವೇಷ, ಪ್ರತೀಕಾರ, ಕತ್ತಿ, ಲಾಂಗು, ಸೇಡು, ರಕ್ತಪಾತ ಇತ್ಯಾದಿ ಇನ್ನೊಂದು ಬಗೆಯವು. (ಇಲ್ಲಿಯೂ ಹೆಣ್ಣನ್ನೂ, ಹೆಣ್ಣುಗಳನ್ನೂ ಕ್ಯಾಮೆರಾ ಎಲ್ಲೆಲ್ಲಿ ಬೇಕೋ ಹೇಗೆಹೇಗೆ ಬೇಕೋ ಹಾಗೆಹಾಗೆ ತೋರಿಸುತ್ತಲೇ ಇರುತ್ತದೆ). ಇವತ್ತಿನ ದಿವಸ, ಊರೆಲ್ಲ ರಕ್ಕಸಪ್ರಾಯದ ಪ್ರಕರಣಗಳು ನಡೆಯುತ್ತಲೇ ಇದ್ದರೂ ರಾಜಾರೋಷವಾಗಿ ಇಂತಹ ಸಿನಿಮಾಗಳ ಪ್ರದರ್ಶನ ರಾತ್ರಿ ಬಸ್ಸುಗಳಲ್ಲಿ ಹಾಕುತ್ತಾರಲ್ಲ. ಯೋಚಿಸಿ. ಒಬ್ಬಳೇ ಮಹಿಳೆ ಇದ್ದರಂತೂ ತನ್ನ ನಿಲ್ದಾಣ ತಲುಪಿ ಮನೆ ಮುಟ್ಟುವವರೆಗೂ ಅವಳ ಮನಸ್ಥಿತಿ ಹೇಗಿರಬಹುದು ಊಹಿಸಿ. ಮನೆಹೆಣ್ಣುಮಕ್ಕಳನ್ನೇ ಬಸ್ಸಿನ ಸೀಟಿನಲ್ಲಿ ಕೂಡಿಸಿ ಊಹಿಸಿ ನೋಡಿ. ನಾನು ಹೆಚ್ಚು ವಿವರಿಸುವುದಿಲ್ಲ.

ಸಿನಿಮಾ ನಿಲ್ಲಿಸಿ, ಇಂಥ ಸಿನಿಮಾ ಹಾಕಬೇಡಿ ಎಂದರೆ,     `ನಿಮಗೆ ಬೇಡದಿದ್ದರೆ ಉಳಿದವರಿಗೂ ಬೇಡವೆ?' ಎಂಬ ಸಿದ್ಧ ಉತ್ತರ ಬರುತ್ತದೆ. ಯಾವುದೇ ಪುರುಷ ಪ್ರಯಾಣಿಕನೂ ದನಿಯೆತ್ತಿದವರ ಜೊತೆ ಸೇರದೆ, ಮಹಿಳೆಯರೂ ಸೇರದೆ (ಏನು ಬೇಕಾದರೂ ಸತ್ತುಕೊಳ್ಳಲಿ, ನಮಗೆ ಯಾಕೆ, ಸುಮ್ಮನಿರ‌್ರೀ...) ಸಿನಿಮಾ ಅದು ಮುಗಿಯುವವರೆಗೂ ನಿರಾತಂಕವಾಗಿ ಓಡುತ್ತದೆ. ರಾತ್ರಿ ಸೆಕೆಂಡ್ ಶೋ ಸಿನಿಮಾ ಓಡಿದಂತೆ. ಈಗ ಹಲವು ಬಸ್ಸುಗಳಲ್ಲಿ ಚಿತ್ರ ಹಾಕುವುದಿಲ್ಲವಂತೆ. ಆದರೆ ಅದು ತೀರಾ ಇಲ್ಲವೇ ಇಲ್ಲ ಅಂತಲೂ ಆಗಿಲ್ಲ.

ಸಿ.ಡಿ.ಗಳನ್ನು ಬಸ್ಸುಗಳಲ್ಲಿ ಹಾಕುವುದೇ ಆದರೆ, ಅದಕ್ಕೆ ಸರ್ಕಾರದ ಅನುಮತಿ ಇದೆಯಾದರೆ, ಅದನ್ನು ಜನ ಬಯಸುತ್ತಾರೆ ಅಂತಾದರೆ, ಹೋಗಲಿ, ಅಭಿರುಚಿಯ ಸಿನಿಮಾಗಳೇ ಇಲ್ಲವೆ? ಸೆಕ್ಸ್, ದ್ವೇಷ ಇವೆರಡರಲ್ಲೇ ಸುತ್ತುವ ಚಿತ್ರಗಳೇ ಆಗಬೇಕೆ? ಯಾಕೆ? ಈ ಹಿಂಸೆಗೆ ಕೊನೆಯೆಲ್ಲಿ?

ಇಂಥ ಸಂದರ್ಭದಲ್ಲೆಲ್ಲ ನನಗೆ ನೆನಪಾಗುವುದು, ನಮ್ಮದೇ ಸಂಸ್ಕೃತಿ ಬಿಂಬಿಸುವ ನೃತ್ಯ, ಗಾಯನ, ಕರಾವಳಿಯ ಯಕ್ಷಗಾನ, ತಾಳಮದ್ದಳೆ ಸಿ.ಡಿ.ಗಳು, ಸರ್ಕಾರದ ಸಂಗ್ರಹಾಗಾರದಲ್ಲಿ ಕೇಳುವವರಿಲ್ಲದೆ ಸುಮ್ಮನೆ ಬಿದ್ದಿರುವ ನಮ್ಮ ಬರಹಗಾರರು, ಸಾಧಕರು, ಸಂಗೀತಗಾರರು, ಮುಂತಾದವರ ಕುರಿತ, ಅನೇಕ ವಿಷಯಗಳ ಕುರಿತ ಅಸಂಖ್ಯ ಡಾಕ್ಯುಮೆಂಟರಿಗಳು. ಬಸ್ಸಿನಲ್ಲಿ (ಸಿನಿಮಾ ಹಾಕುವುದು ನಿಂತಿರಲಿ, ನಿಲ್ಲದಿರಲಿ, ಆ ಜಾಗದಲ್ಲಿ) ತೀರಾ ದೀರ್ಘವಲ್ಲದ ಇಂಥ ಸಿ.ಡಿ.ಗಳನ್ನು ಹಾಕುವಂತಾಗಲಿ. ಇಂತಹ ಸಿ.ಡಿ.ಗಳು ಕನ್ನಡದ ಕೆಲಸವನ್ನೂ ಮಾಡುತ್ತವೆ, ನಾಡಿನ ಹಾಗೂ ದೇಶದ ಸಂಸ್ಕೃತಿಯನ್ನೂ ಪರಿಚಯಿಸುತ್ತವೆ. ಅವುಗಳೂ ಬೆಳಕು ಕಾಣುತ್ತವೆ. ಅವನ್ನು ತೆಗೆದ ಉದ್ದೇಶವೂ ತುಸುಮಟ್ಟಿಗೆ ಈಡೇರುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯೂ ಆಗದು. ಈ ಕೆಲಸ ಬಹಳ ಸರಳ. ಇದನ್ನು ಮಾಡಲಾದೀತೆ?

2. ಇದನ್ನೇ ಮೊದಲು ಹೇಳಬೇಕಿತ್ತು. ನಮ್ಮ ನಮ್ಮ ಮುಜುಗರವೇ ನಮ್ಮನ್ನು ತಿಂದಿತು ಎನ್ನುವ ಹಾಗೆ, ಇದನ್ನು ಪ್ರಸ್ತಾಪಿಸಲು ಏನೋ ಕಿರಿಕಿರಿ, ಮನೆಯ ಹೊಣೆ ಹೊತ್ತವರಿಗೆ ಇದನ್ನೂ ಎಲ್ಲ ತಿಳಿಸಿ ಬಿಡಿಸಿ ಹೇಳಬೇಕಲ್ಲ. ಇದು ನಮ್ಮ ಕರ್ಮವಲ್ಲವೆ ಎಂಬ ವಿಷಾದ. ಏನೆಂದರೆ, ಮಹಿಳೆಯರು ನೈಟ್‌ಬಸ್ಸುಗಳಲ್ಲಿ ಪ್ರಯಾಣಿಸುವ ಇನ್ನೊಂದು ಕಷ್ಟ ಇದು. ಮೂತ್ರಾಲಯದ ಸಮಸ್ಯೆ. ಇದು ಮಹಿಳೆಯರು ಮನುಷ್ಯರೇ ಅಲ್ಲ ಎಂದು ಪರಿಗಣಿಸುವ ಒಂದು ವಿಧಾನವೂ.

ಇದೂ ಕೂಡ ಎಲ್ಲ ಬಸ್ಸುಗಳ ಕತೆ ಎಂದು ತಿಳಿಯಬೇಕಿಲ್ಲ. ಆದರೆ ಎಲ್ಲ ಬಸ್ಸುಗಳದು ಅಲ್ಲ ಎನ್ನುವಂತೆಯೂ ಇಲ್ಲ. ನಡುರಾತ್ರಿ ಕಗ್ಗತ್ತಲಲ್ಲಿ ಇದ್ದಕ್ಕಿದ್ದಂತೆ ಬಸ್ಸು ಒಮ್ಮಮ್ಮೆ ನಿಲ್ಲುವ ಜಾಗ ಬಿಟ್ಟು ಬೇರೊಂದು ಕಡೆ ನಿಲ್ಲುತ್ತದೆ. ಹತ್ತು ನಿಮಿಷ ಟೈಮಿದೇ ಎನ್ನುತ್ತ ಕಂಡಕ್ಟರು ಡ್ರೈವರು ಇಳಿದು ಹೋಗುತ್ತಾರೆ. ಆಗ ಪುರುಷರು ಎಲ್ಲೆಂದರಲ್ಲಿ ನಿಂತಾಯಿತು. ಮಹಿಳೆಯರು?  `ಜಾಗ ಎಲ್ಲಿದೆಯಪ್ಪ ಇಲ್ಲಿ?'  ಕೇಳುವಂತಿಲ್ಲ. `ಇದೆಯಲ್ಲಮ್ಮ, ಅಷ್ಟು! ಅಲ್ಲೆ ಎಲ್ಲಾದರೂ ಹೋಗಿ.' 
ಜೊತೆಗೆ ಯಾರಾದರೂ ಇದ್ದವರೂ ಇರದಿದ್ದವರೂ ಅವ್ಯಕ್ತ ಭಯದಿಂದ ಎಲ್ಲ ಮುಗಿಸಿ ಬಸ್ಸು ಏರಬೇಕು. ನಿದ್ದೆಗಣ್ಣು ಬೇರೆ. ಬಸ್ಸು ರಸ್ತೆಯ ಆಚೆ ನಿಂತರೆ ವಯಸ್ಸಾದವರಿಗೆ ಈಚೆ ದಾಟುವ ಕಷ್ಟವೂ. (ನಟಿ ಪಂಡರಿಬಾಯಿ ಅವರ ಅಪಘಾತ ಮತ್ತು ಪರಿಸರ ಹೋರಾಟಗಾರ್ತಿ ಕುಸುಮಾ ಸೊರಬ ಅವರ ಸಾವು ಮರೆಯಲು ಸಾಧ್ಯವೆ?) ಮೂತ್ರಾಲಯ ಇದ್ದರೂ ಅಲ್ಲಿಗೆ ಹೋಗುವ ಮಾರ್ಗವೋ, ಎಷ್ಟೋ ಕಡೆ ಓಣಿ, ನಿರ್ಜನ, ಕತ್ತಲೆ. `ಕುತ್ತಿಗೆ ಒತ್ತಿದರೂ ಕೇಳುವವರಿಲ್ಲ'.

ಈ ಇಂಥ ಭೀತಿ ತಲ್ಲಣಗಳನ್ನು ಸುಲಭವಾಗಿ ನಿವಾರಿಸಬಹುದಾದರೂ ಇವು ಸರ್ಕಾರಗಳ ಗಮನ ಸೆಳೆಯಲೇ ಇಲ್ಲ ಏಕೆ? ನೀವೊಮ್ಮೆ ಸಕಲೇಶಪುರ ಬಸ್‌ಸ್ಟಾಂಡಿನ ಮೂತ್ರಾಲಯಕ್ಕೆ ದಯಮಾಡಿ ಭೇಟಿ ನೀಡಿ. ಮಹಿಳೆಯರ ಕಡೆಗೆ ಅಲ್ಲಿರುವುದು ಮೂರೋ ನಾಲ್ಕೋ ಕೋಣೆ. ಬಸ್ಸುಗಳು ಸಾಲುಸಾಲು ತಂಗಿರುತ್ತವೆ. ಮಹಿಳೆಯರ ಕ್ಯೂ. ಆಚೆ ಬಸ್ಸು ಹೊರಟುಹೋದರೆ ಎಂಬ ಧಾವಂತ. ಈಚೆ, ಸಹಿಸಲಾರದ ದುರ್ವಾಸನೆ.(ಇನ್ನೊಂದು ಕಡೆ, ದುಡ್ಡು ವಸೂಲಿ. ಹೆಂಗಸರಿಗೆ ಗಂಡಸರಿಗಿಂತ ಒಂದು ರೂಪಾಯಿ ಜಾಸ್ತಿ ಅಂತ ಬೇರೆ!!) ಒಟ್ಟು, ನರಕ.

ನಗರಗಳಲ್ಲಿ ಸಾರ್ವಜನಿಕ ಮೂತ್ರಾಲಯಗಳಾದರೂ ಎಷ್ಟಿವೆ? ಮಹಿಳೆಯರಿಗಾಗಿ ಎಲ್ಲಿವೆ, ಹೇಗಿವೆ? ಒಮ್ಮೆ ಸರ್ವೆ ಮಾಡಿಸಿ. ಶೋಚನೀಯ ಸ್ಥಿತಿಯ ದರ್ಶನವಾಗುತ್ತದೆ. ನಮಗೆ ಹೆಣ್ಣುಮಕ್ಕಳಿಗೆ ನಿಮ್ಮ ಆಡಳಿತ ಕಾಲದಲ್ಲಾದರೂ ಮೂತ್ರಾಲಯ ವ್ಯವಸ್ಥೆ ಸುರಕ್ಷಿತವಾಗಿ ಕಟ್ಟುನಿಟ್ಟಾಗಿ ಸರಿಹೋಗಲಿ. ನಮಗೆ ಆ ಅಲ್ಪ ಸಮಯದ ಮಟ್ಟಿಗಾದರೂ ಸುಭದ್ರ, ನಿರ್ಭಯ ಹಾಗೂ ಶುಚಿಯಾದ ವಾತಾವರಣವನ್ನು ಕಲ್ಪಿಸಲು ಸಾಧ್ಯವೆ? ಆದೀತೆ? ನಿಮ್ಮಿಂದ?

ಜೊತೆಗೆ, ಆಗೀಗ ಒಟ್ಟಾರೆ ಒಂದು ಬಸ್ಸಿನಲ್ಲಿ ಪಯಣಿಸಿ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿ ಅಲ್ಲ. ಮುಂಚಿನ ಅರಸರು ಹೊರಡುತ್ತಿದ್ದರಲ್ಲ, ಮಾರುವೇಷದಲ್ಲಿ? ಹಾಗೆ. ಆವಾಗ, ಗ್ರಾಮೀಣ, ಬಡ, ತಬ್ಬಿಬ್ಬು ಪ್ರಯಾಣಿಕರಿಗೆ,  ವಿಶೇಷತಃ ಹೆಣ್ಣುಮಕ್ಕಳಿಗೆ ಬಸ್ಸಿನವರು ಎರಚುವ ಭಾಷೆ ಮತ್ತು ಗೆಶ್ಚರುಗಳ ಪರಿಚಯವೂ ನಿಮಗೆ ಆದೀತು. ಆದದ್ದೇ ಆದರೆ ನಿಮ್ಮ ಮೈ ಖಂಡಿತ ಉರಿದೀತು ಎಂಬ ನಂಬಿಕೆ ನನ್ನದು. ಸಭ್ಯ ವರ್ತನೆ ಕೂಡ ಯಾವುದೇ ಸಂಸ್ಕೃತಿಯ ಒಂದು ಲಕ್ಷಣವೇ ಅಲ್ಲವೆ?
ಭರವಸೆಯಿಂದ, ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT