ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಬಿದ್ದ ರೈತರು ಮೇವು ಹೊತ್ತೊಯ್ದರು...

Last Updated 4 ಜುಲೈ 2012, 10:10 IST
ಅಕ್ಷರ ಗಾತ್ರ

ಕುಷ್ಟಗಿ:  ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಕನಿಷ್ಟ ಪ್ರಮಾಣದಲ್ಲಾದರೂ ಮೇವು ವಿತರಿಸುವುದಕ್ಕೆ ಮುಂದಾಗಿದ್ದು ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಮೇವು ವಿತರಣೆ ಸಂದರ್ಭದಲ್ಲಿ ಗೊಂದಲ ಉಂಟಾಗಿ ರೈತರು ಮುಗಿಬಿದ್ದು ಕೈಗೆಸಿಕ್ಕಷ್ಟು ಮೇವನ್ನು ಬಲವಂತವಾಗಿ ಕಿತ್ತುಕೊಂಡು ಹೊತ್ತೊಯ್ಯುತ್ತಿದ್ದುದು ಕಂಡುಬಂದಿತು.

ಮೇವಿಲ್ಲದೇ ಹಸಿವಿನಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕ ಭಾಗದ ಜಾನುವಾರುಗಳ ಸ್ಥಿತಿಯನ್ನು ಗಮನಿಸಿದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ಮೇವು ವಿತರಿಸುತ್ತಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಅದಕ್ಕೆ ಚಾಲನೆ ನೀಡಲಾಗಿದ್ದು ಭಾನುವಾರ ತಾಲ್ಲೂಕಿನ ಅನೇಕ ಗ್ರಾಮಗಳ ರೈತರಿಗೆ ಮೇವು ವಿತರಿಸಲಾಗಿತ್ತು.

ಸೋಮವಾರ ಇಲ್ಲಿಯ ಸಂತೆ ಮೈದಾನದಲ್ಲಿ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಮೇವು ತಂದು, ಕಾರ್ಯಕ್ರಮದ ನಂತರ ಸಂಘಟಕರು ಮೊದಲೇ ಹೆಸರು ಬರೆಯಿಸಿದ ರೈತರಿಗೆ ಮೇವು ವಿತರಿಸಲು ಮುಂದಾದರು.

 ಆದರೆ ಎಲ್ಲ ರೈತರು ಏಕಾಏಕಿ ಜಮಾಯಿಸಿದ್ದರಿಂದ ಹೆಸರು ನೋಂದಾಯಿಸಿದವರಿಗೇ ಮೇವು ದೊರೆಯದಂತಾಯಿತು.

ಅಲ್ಲದೇ ಮಕ್ಕಳು, ಮಹಿಳೆಯರು, ಯುವಕರು, ಮುದುಕರು ಸಹಿತ ಮೇವಿಗಾಗಿ ಅಂಗಲಾಚುತ್ತಿದ್ದ ದೃಶ್ಯಕಂಡುಬಂದಿತು.

ಮೇವು ಪಡೆಯುವ ಧಾವಂತದಲ್ಲಿದ್ದ ಅನೇಕ ಜನ ಅಪಾಯವನ್ನೂ ಲೆಕ್ಕಿಸದೇ ಲಾರಿ ಏರಿ ಮೇವು ಕಿತ್ತುಕೊಳ್ಳಲು ಆರಂಭಿಸಿದರು. ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಅಸಹಾಯಕ ಸ್ಥಿತಿಗೆ ತಲುಪಿದ್ದರು. ಹಾಗಾಗಿ ಕೆಲವರು ಸಾಕಷ್ಟು ಮೇವು ಸಂಗ್ರಹಿಸಿಕೊಂಡರೆ ಬಹುತೇಕ ರೈತರಿಗೆ ಮೇವು ದೊರೆಯಲೇ ಇಲ್ಲ.

ಬೇಸರ: ರೈತರು ಮುಗಿಬಿದ್ದದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ ರಾಮಚಂದ್ರಾಪುರ ಮಠದ ಸಂಚಾಲಕರು, ವಿಜಾಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿಯೂ ಮೇವು ವಿತರಣೆ ಮಾಡಿದ್ದೇವೆ, ಅಲ್ಲಿಯ ರೈತರು ಸರದಿಯಲ್ಲಿ ನಿಂತು ಶಾಂತ ರೀತಿಯಲ್ಲಿ ಮೇವು ಪಡೆದರು. ಆದರೆ ಅಂಥ ಮಾದರಿ ಇಲ್ಲಿ ಕಾಣಲಿಲ್ಲ ಎಂದರು.

 ಅದಕ್ಕೂ ಪೂರ್ವದಲ್ಲಿ ಬನ್ನಿಕಟ್ಟೆ ಬಳಿ ನಡೆದ ಕಾರ್ಯಕ್ರಮದಲ್ಲಿ ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

 ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ, ತಹಶೀಲ್ದಾರ ವೀರೇಶ ಬಿರಾದಾರ, ದೇವೇಂದ್ರಪ್ಪ ಬಳೂಟಗಿ, ರಾಮಚಂದ್ರಾಪುರ ಮಠದ ಸಂಚಾಲಕ ವಿ.ಡಿ.ಭಟ್, ಬಸಪ್ಪ ಕರಡಿ, ವೀರೇಶ ಬಂಗಾರಶೆಟ್ಟರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT