ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಕಾಲುವೆ ಕಾಮಗಾರಿ

ನಗರ ಸಂಚಾರ
Last Updated 2 ಡಿಸೆಂಬರ್ 2013, 8:20 IST
ಅಕ್ಷರ ಗಾತ್ರ

ಗದಗ: ನಗರದ ಜನತಾ ಬಜಾರ್ ಮುಂದಿನ ರಸ್ತೆಯಲ್ಲಿ ಕೈಗೊಂಡಿರುವ ರಾಜಾಕಾಲುವೆ ಕಾಮಗಾರಿ ಸ್ಥಗಿತಗೊಂಡು ಸಂಚಾರಕ್ಕೆ ತೊಂದರೆಯಾಗಿದೆ.

ಇಲ್ಲಿನ ಬ್ಯಾಂಕ್‌ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನ, ಜನರು ಸಂಚರಿಸುತ್ತಾರೆ. ಬಸ್‌ ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ಬ್ಯಾಂಕ್‌ ರಸ್ತೆ ಅವಳಿ ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ನಗರದ ಪ್ರಮುಖ ಅಂಗಡಿಗಳು ಇದೇ ರಸ್ತೆಯಲ್ಲಿ ಇರುವುದರಿಂದ ರಸ್ತೆ ಸದಾ ಗಿಜಿಗುಡುತ್ತದೆ.

ಇಂತಹ ರಸ್ತೆಯಲ್ಲಿ ಕಾಮಗಾರಿ ನೆಪದಲ್ಲಿ ಕಾಲುವೆ ಅಗೆದು ಹಲವು ತಿಂಗಳು ಕಳೆದರೂ ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ಬ್ಯಾಂಕ್‌ ರಸ್ತೆ­ಯಿಂದ ಮಹೇಂದ್ರಕರ ವೃತ್ತದವರೆಗೆ ಕಾಂಕ್ರಿಟ್‌ ರಸ್ತೆ ಕಾಮಗಾರಿಯನ್ನು ನಗರಸಭೆ ಕೈಗೆತ್ತಿ­ಗೊಂಡಿದೆ. ಶೇಕಡಾ 50ರಷ್ಟು ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಉಳಿದ ಭಾಗಕ್ಕೆ ಅಡಚಣೆ ಎದುರಾಯಿತು.

ರಸ್ತೆ ಕೆಳಗೆ ಹಾದು ಹೋಗಿರುವ ರಾಜಾಕಾಲು­ವೆ­ಗೆ ಒಳಚರಂಡಿ ನಿರ್ಮಿಸಬೇಕು ಎಂದು ಕಂಬಾರ­ಸಾಲು ಓಣಿಯ ಜನರು ತಕರಾರು ತೆಗೆದರು. ಒತ್ತಾಯಕ್ಕೆ ಮಣಿದ ನಗರಸಭೆ ರೂ 7.45 ಲಕ್ಷ ವೆಚ್ಚದಲ್ಲಿ ಎರಡು ತಿಂಗಳೊಳಗೆ ಪೂರ್ಣ­ಗೊಳಿಸಲು ಕಾಲಮಿತಿ ನಿಗದಿಪಡಿಸಿ ಕಾಲುವೆ ಕಾಮಗಾರಿಗೆ ನಿರ್ಧರಿಸಿತು.

ರಸ್ತೆ ಕೆಳಗೆ ಕಾಂಕ್ರಿಟ್‌ ಒಳಚರಂಡಿ ನಿರ್ಮಿಸುವು­ದರಿಂದ ಕಾಲುವೆಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ಹಾಕಲಾಗುತ್ತದೆ. ಇದರಿಂದ ಕಾಲುವೆ ನೀರು ಸರಾಗವಾಗಿ ಹರಿದುಹೋಗುತ್ತದೆ ಎಂಬುದು ಜನರ ವಾದ. ಜನರ ಮನವಿಗೆ ಸ್ಪಂದಿಸಿದ ನಗರಸಭೆ ಕಾಲುವೆ ನಿರ್ಮಿಸಲು ರಸ್ತೆ ಅಗೆದು ಕಾಮಗಾರಿ ಆರಂಭಿಸಿತು. ಕೆಲಸ ಆರಂಭ­ಗೊಂಡು ಬರೋಬ್ಬರಿ ಮೂರು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಸಾರ್ವ­ಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬ್ಯಾಂಕ್‌ ರಸ್ತೆಯಲ್ಲಿರುವ ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡು ಮಳೆ ಬಂದಾಗ ಕಾಲುವೆ ಹಿಂಭಾಗದ ಕಂಬಾರಸಾಲು ಓಣಿಯ ಮನೆಗಳಿಗೆ ನೀರು ನುಗ್ಗುತ್ತಿತ್ತು. ಇದರಿಂದ ಜನರು  ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಇದೇ ಕಾಲುವೆ­ಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡು­ವುದರಿಂದ ಕೆಟ್ಟ ವಾಸನೆಯೂ ಬರುತ್ತದೆ. ಅಕ್ಕಪಕ್ಕ ವಾಸಿಸುವ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ರಾಜಕಾಲುವೆ ಕಾಮಗಾರಿ ನಡೆಯು­ತ್ತಿರುವು­ದರಿಂದ ಅಕ್ಕಪಕ್ಕದ ಅಂಗಡಿಗಳ ಫುಟ್‌ಪಾತ್‌ ಮೇಲೆ ಜನರು ಸಂಚರಿಸಬೇಕಿದೆ. ಜಾಗ ಚಿಕ್ಕ­ದಾಗಿರುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂ­ದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಹಣ್ಣು, ಹೂವು ಮತ್ತು ಸಣ್ಣಪುಟ್ಟ ವಸ್ತು ವ್ಯಾಪಾರ ಮಾಡು­ವವರಿಗೆ ಕಿರಿಕಿರಿಯಾಗುತ್ತಿದೆ. ಜನರು ಓಡಾಡಲು ಆಗುತ್ತಿಲ್ಲ. ಕೂಡಲೇ ನಗರಸಭೆ ಕಾಮಗಾರಿ ಪೂರ್ಣಗೊಳಿಸಬೇಕು’ ಎನ್ನುತ್ತಾರೆ ಹೂ ವ್ಯಾಪಾರಿ ಉಮ್ಮರ್‌ ಫಾರೂಖ್‌ ಹುಬ್ಬಳಿ.‘ಬ್ಯಾಂಕ್‌ ರಸ್ತೆಯಲ್ಲಿ ಕೈಗೊಂಡಿರುವ ಕಾಲುವೆ ಕಾಮಗಾರಿ ಜಲ್ಲಿ ಕಲ್ಲುಗಳ ಕೊರತೆಯಿಂದ ಸ್ಥಗಿತಗೊಂಡಿದೆ. ಶೀಘ್ರದಲ್ಲಿಯೇ ಕೆಲಸ ಆರಂಭಿಸಲಾಗುವುದು’ ಎಂದು ನಗರಸಭೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT