ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿದರೆ ಮಾಸುವ ಪ್ರೇಮಕಾವ್ಯ

Last Updated 18 ಜನವರಿ 2011, 12:20 IST
ಅಕ್ಷರ ಗಾತ್ರ

ಒಳ್ಳೆಯ ಸಿನಿಮಾವೊಂದು ಹೃದಯಸ್ಪರ್ಶಿಆಗಿರಬೇಕೆಂದಿಲ್ಲ. ಹಾಗೆಯೇ ಕೇವಲ ಹೃದಯಸ್ಪರ್ಶಿ ಕತೆಯೊಂದು ಅತ್ಯುತ್ತಮ ಸಿನಿಮಾ ಆಗಿರಬೇಕಿಲ್ಲ. ಅಪರೂಪಕ್ಕೆ ಎರಡೂ ಹದವಾಗಿ ಬೆರೆತರೆ ಚಿತ್ರರಸಿಕರಿಗೆ ಅದಕ್ಕಿಂತ ಒಳ್ಳೆಯ ಸಂಗತಿ ಮತ್ತೊಂದಿಲ್ಲ.

ಪ್ರೀತಿಯೆಂಬುದು ತರ್ಕಾತೀತ. ಎಲ್ಲಿಯೋ ಹುಟ್ಟಿ ಬೆಳೆದ ಜೀವವೊಂದು ಮತ್ತೆಲ್ಲಿಯೋ ಹುಟ್ಟಿ ಬೆಳೆದ ಜೀವಕ್ಕೆ ಹಪಹಪಿಸುವ ಬದುಕಿನ ಈ ಸುಂದರ ಮಾಯೆ ವ್ಯಾಖ್ಯಾನಕ್ಕೆ ಸಿಗುವಂತಹದ್ದಲ್ಲ. ಬದುಕಿನ ಪ್ರತಿಯೊಂದನ್ನೂ ತರ್ಕದ ತಕ್ಕಡಿಯಲ್ಲಿಯೇ ತೂಗುತ್ತೇನೆಂಬುದು ಮನುಷ್ಯನ ಅಹಂಕಾರವಾಗುತ್ತದೆ. ದೇಶ, ಭಾಷೆ, ಜಾತಿ, ಮತ, ರೂಪ, ಸ್ಥಿತಿ-ಗತಿಗಳ ಆರ್ಭಟಕ್ಕೆ ಕುರುಡಾದರೆ ಮಾತ್ರ ಪ್ರೀತಿ ಕಾಣಲು ಸಾಧ್ಯ.

ಅವಳು ಜಪಾನಿನ ನಗರವೊಂದರಲ್ಲಿ ಸೈಕಲ್ಲಿನಲ್ಲಿ ಓಡಾಡುವ, ಹಾಸಿಗೆ ಹಿಡಿದ ಅಮ್ಮನನ್ನು ಪಾಲಿಸುವ, ಪ್ರೀತಿಯ ನಾಯಿಯೊಡನೆ ಒಡನಾಡುವ, ಕಿರುಗಣ್ಣಿನ, ಕೇದಗೆ ಬಣ್ಣದ, ತುಸು ಸಣ್ಣಗಾತ್ರದ ಹುಡುಗಿ. ಇವನೋ ಪಶ್ಚಿಮ ಬಂಗಾಳದ ಒಂದು ಸಣ್ಣ ಹಳ್ಳಿಯಲ್ಲಿ ಹೆಗಲಿಗೆ ಬಟ್ಟೆಯ ಚೀಲವನ್ನು ಹಾಕಿಕೊಂಡು, ಮಕ್ಕಳಿಗೆ ಗಣಿತ ಕಲಿಸುವ, ನದಿಯ ದಡದಲ್ಲಿ ಕುಳಿತು ಸಿಗರೇಟು ಸೇದುತ್ತಾ ಹಗಲುಗನಸು ಕಾಣುವ ಒಳ್ಳೆಯ ಮೈಕಟ್ಟಿನ ಅಗಲ ಚಸ್ಮಾ ಧರಿಸುವ ಬಂಗಾಳಿ ಬಾಬು. ಅವಳ ಭಾಷೆಯ ಒಂದು ಪದವೂ ಇವನಿಗೆ ಗೊತ್ತಿಲ್ಲ. ಅವಳಿಗೆ ಅವನ ಹೆಸರನ್ನುಉಚ್ಚರಿಸಲೂ ಬರುವುದಿಲ್ಲ. ಒಬ್ಬರನ್ನೊಬ್ಬರು ಒಮ್ಮೆಯೂ ನೋಡಿಲ್ಲದೆ, ಸಾವಿರಾರು ಮೈಲಿ ದೂರದಲ್ಲಿದ್ದರೂ ಹತ್ತಿರವಾಗುವದಕ್ಕೆ ಇದ್ಯಾವುದೂ ಅಡಚಣೆಗಳೆನಿಸುವದಿಲ್ಲ. ಹರಕು ಮುರುಕು ಇಂಗ್ಲೀಷಿನ ಪತ್ರಗಳು ಇಬ್ಬರಿಗೂ ಪ್ರೀತಿಸಲು ಸಾಕೆನ್ನಿಸಿಬಿಡುತ್ತವೆ.  ಪ್ರೀತಿಸಲು ಕೇಂಬ್ರಿಜ್ ಇಂಗ್ಲೀಷ್ ಬೇಕಾಗಿಲ್ಲವೆಂದು ಇಬ್ಬರಿಗೂ ಗೊತ್ತು!

ಆದರೆ ಪ್ರೀತಿಗಾಗಿ ಏನೆಲ್ಲಾ ತ್ಯಾಗ ಮಾಡಲು ಸಾಧ್ಯ? ಅಪ್ಪ-ಅಮ್ಮ, ಆಸ್ತಿ, ಜಾತಿ, ಮತ- ಎಲ್ಲವನ್ನೂ ನಿರಾಕರಿಸಿದ ಪ್ರೇಮಿಗಳನ್ನು ನಾವೀಗಾಗಲೇ ಕಂಡಿದ್ದೇವೆ. ಆದರೆ ಈ ಪ್ರೇಮಿಗಳು ಪ್ರೀತಿಯ ಮಹೋನ್ನತ ತ್ಯಾಗಕ್ಕೂ ಸಿದ್ಧವಾಗುತ್ತಾರೆ. ದೇಹ ಸಂಪರ್ಕದ ಅವಶ್ಯಕತೆಯನ್ನೇ ನಿರ್ಲಕ್ಷಿಸಿ ಮದುವೆಯಾಗಿ ಬಿಡುತ್ತಾರೆ! ಬರೀ ಅಲ್ಲಿಗೆ ಅವರ ಪ್ರೇಮ ಪಯಣ ನಿಲ್ಲುವುದಿಲ್ಲ. ಪತ್ರದ ಮೂಲಕ ಸಂಸಾರವನ್ನೂ ಶುರು ಮಾಡುತ್ತಾರೆ. ಅವಳನ್ನು ಕಾಡುವ ಬೇನೆಗೆ ಇಲ್ಲಿವನು ಯಾವ ಪತಿಗೂ ಕಮ್ಮಿಯಿಲ್ಲದಂತೆ ಹಲವು ಆಸ್ಪತ್ರೆಗಳಿಗೆ ತಿರುಗಿ ಮದ್ದನ್ನು ಸಂಗ್ರಹಿಸುತ್ತಾನೆ. ಪತಿರಾಯ ಕಳುಹಿಸಿದ ಮುತ್ತಿನ ಬಳೆಯನ್ನು ಧರಿಸಿ, ಸಿಂಧೂರವನ್ನು ಬೈತಲೆಗೆ ಹಚ್ಚಿ, ಸೀರೆಯುಟ್ಟು ಅವಳೂ ಜಪಾನಿನಲ್ಲಿ ಸಂಭ್ರಮಿಸುತ್ತಾಳೆ. ಇಬ್ಬರಿಗೂ ಜಗತ್ತಿನ ಗೊಡವೆ ಬೇಕಿಲ್ಲ. ಇಬ್ಬರೂ ಮೂರನೆಯ ವ್ಯಕ್ತಿಯನ್ನು ತಮ್ಮ ಬದುಕಿನಲ್ಲಿ ಬಿಟ್ಟುಕೊಳ್ಳುವದಿಲ್ಲ. ಕಾಮವನ್ನೂ ಪ್ರೇಮದಿಂದ ಗೆಲ್ಲುವ ಇವರಿಬ್ಬರ ಹಟ ಸ್ವಲ್ಪ ಅಸಹಜವಾಯ್ತು ಅಂತ ನಿಮಗನ್ನಿಸುವ ಹೊತ್ತಿಗೆ, ಮತ್ತದೇ ಮಾತು ನೆನಪಾಗುತ್ತದೆ. ಪ್ರೀತಿಯೆಂಬುದು ತರ್ಕಾತೀತ!

ಪತ್ರಗಳ ಮೂಲಕ ಕತೆಯೊಂದನ್ನು ತೆರೆದಿಡುವ ತಂತ್ರ ಹೊಸತೇನೂ ಅಲ್ಲ. ಹಲವು ಕಾದಂಬರಿಗಳನ್ನೂ, ನಾಟಕಗಳನ್ನೂ, ಸಿನಿಮಾಗಳನ್ನೂ ನಾವೀಗಾಗಲೇ ಕಂಡಿದ್ದೇವೆ. ಆದರೆ ಕೇವಲ ಇಬ್ಬರು ಪ್ರೇಮಿಗಳ ಮುಗ್ಧ ಒಡನಾಟಕ್ಕಷ್ಟೇ ಸೀಮಿತವಾದ ಪತ್ರ ವ್ಯವಹಾರ ಈ ಸಿನಿಮಾದ ವಿಶೇಷ. ಒಬ್ಬರ ಬಗ್ಗೆ ಮತ್ತೊಬ್ಬರು ತೋರುವ ಕಾಳಜಿ, ಇನ್ನೊಬ್ಬರ ದಡ್ಡತನವನ್ನೂ ತಮಾಷೆಯಾಗಿ ಸ್ವೀಕರಿಸುವ ವಾತ್ಸಲ್ಯ, ಬಿಟ್ಟಿರಲಾರದ ಅಸಹಾಯಕತೆ, ಕೂಡಲಾಗದ ಪರಿಸ್ಥಿತಿ- ಎಲ್ಲವೂ ವ್ಯಾಕರಣ ದೋಷದಿಂದ ಕೂಡಿದ ಇಂಗ್ಲೀಷ್ ಪತ್ರಗಳ ಮೂಲಕ ಕತೆಗಾರ ನಮ್ಮ ಮುಂದಿಡುತ್ತಾನೆ. ಪತ್ರಗಳನ್ನು ನೆಪ ಮಾಡಿಕೊಂಡು ಯಾವುದೋ ಮತ್ತೊಂದು ‘ತೂಕ’ದ ಕತೆಯನ್ನು ಹೇಳುವ ಅತಿಜಾಣತನ ಇಲ್ಲಿಲ್ಲದಿರುವುದು ಕತೆಯನ್ನು ಹೆಚ್ಚು ಆತ್ಮೀಯವಾಗಿಸುತ್ತದೆ. ಹಾಗೆ ನೋಡಿದರೆ ಪ್ರೀತಿಯ ಕತೆಯನ್ನು ಹಿಂದೆಂದೂ ಹೇಳಿಲ್ಲದಂತೆ ಹೊಸದಾಗಿ ಹೇಳಲು ಸಾಧ್ಯವೂ ಇಲ್ಲ. ಅಥವಾ ಪ್ರೀತಿಯ ಕತೆಯೊಂದು ಹಳೆಯದಾಗುವುದೂ ಇಲ್ಲ.

ಕತೆ ಹೇಳಲು ಅವಸರದ ಕುದುರೆಯನೇರಬೇಕಿಲ್ಲ. ಚುಚ್ಚುವಂತಹ ಮೊನಚಾದ ತಿರುವುಗಳು ಬೇಕಿಲ್ಲ. ಶಾಂತತೆಯನ್ನು ಭಗ್ನಗೊಳಿಸುವ ಆತಂಕವೂ ಬೇಡ. ಜಗತ್ತೆಲ್ಲಾ ಪ್ರೇಮಿಗಳ ಮಿಲನದ ವೈರಿಯೆಂದುಕೊಂಡು ಹೊಡೆದಾಡುವುದೂ ಬೇಡ. ಸುಮ್ಮನೆ ಹಚ್ಚ ಹಸುರಿನ, ತಣ್ಣನೆಯ ಆ ಹಳ್ಳಿಯಲ್ಲಿ ಅಡ್ಡಾಡಿದರಾಯ್ತು. ಕನಸಿನಲ್ಲೆಂಬಂತೆ ಆ ಊರಿನ ನದಿಯ ತೆಪ್ಪದಲ್ಲಿ ಹುಣ್ಣಿಮೆಯ ರಾತ್ರಿಯ ಬೆಳಕಿನಲ್ಲಿ ತೇಲಿದರೂ ಸಾಕು. ನವರತ್ನಕ್ಕೂ ಮಿಗಿಲಾದ ಪ್ರೇಮಪತ್ರವನ್ನು ತಂದುಕೊಡುವ ಅಂಚೆಯಣ್ಣನಿಗೆ ದಿನವಿಡೀ ಕಾದರಾಯ್ತು. ಆಷಾಢದ ಮಧ್ಯಾಹ್ನವೊಮ್ಮೆ ಭಾರತದ ಸ್ವಚ್ಛ ಆಗಸದಲ್ಲಿ ಜಪಾನಿನ ಬಣ್ಣಬಣ್ಣದ ಗಾಳಿಪಟಗಳನ್ನು ಹಾರಿಸಿದರಾಯ್ತು. ಜಪಾನಿನ ಆ ಹಿಮದ ಮಳೆಯಲ್ಲಿ ಒಂದಿಷ್ಟು ನೆನೆದು, ಗಾಜಿನ ಕಿಟಕಿಯ ಮೇಲೆ ಪ್ರಿಯಕರನ ಹೆಸರನ್ನು ಬರೆದರೂ ಸಾಕು. ಸುಮ್ಮನೆ ತಣ್ಣನೆಯ ಹವೆಯಲ್ಲಿ ಸೈಕಲ್ಲಿನಲ್ಲಿ ಒಂದು ಸುತ್ತು ಊರು ತಿರುಗಿ, ನಮ್ಮ ಪ್ರೀತಿ ಪಾತ್ರರ ಸಮಾಧಿಗೆ ಒಂದೆರಡು ಹೂ ಏರಿಸಿ ಧ್ಯಾನಿಸಿ ಬಂದರೂ ನಡದೀತು.

ರಾತ್ರಿಯ ಜಾವದ ಚಳಿಯಲ್ಲಿ ದೂರದ ಗುಡ್ಡದ ಮೇಲಿರುವ ದೇವಸ್ಥಾನದ ಗರುಡಗಂಭದ ಗಂಟೆಯೊಂದು ಗಾಳಿಯ ಸದ್ದಿಗೆ ಹಗೂರಕ್ಕೆ ನಾದ ಮೂಡಿಸಿದಂತೆ ಹಿನ್ನಲೆಯಲ್ಲಿ ಕೇಳುವ ಜಪಾನೀ ಸಂಗೀತವನ್ನೋ, ರಬೀಂದ್ರ ಸಂಗೀತವನ್ನೋ ಆಲಿಸಿದರೂ ಸಾಕು. ಆದರೆ ಎಲ್ಲದಕ್ಕೂ ಒಂದು ಸಣ್ಣ ತಯಾರಿ ಮಾಡಿಕೊಳ್ಳೋಣ. ಕಟ್ಟುಪಾಡುಗಳನ್ನು ಕಟ್ಟಿಡೋಣ. ಸೀಮೆಗಳ ಗೆರೆಗಳನ್ನು ಅಳಿಸಿ ಬಿಡೋಣ. ಸಣ್ಣತನಗಳನ್ನು ದೂರವಿಡೋಣ. ಅಲಂಕಾರಗಳನ್ನು ಕಳಚಿಟ್ಟು ಹಗುರಾಗೋಣ. ಉಫ್ ಎಂದು ಊದಿದರೆ ಹಾರಿಹೋಗುವ ಕಥಾವಸ್ತುವಿದು. ಆದರೆ ಎಲ್ಲಿಂದಲೋ ಗಾಳಿಯಲ್ಲಿ ಹಾರಿ ಬಂದು ನಮ್ಮ ಕೈ ಸೇರಿದ ಪುಟ್ಟ ಹಕ್ಕಿಯ ಹೂಹಗುರ ಪುಕ್ಕವೊಂದು, ಅತ್ಯಾಧುನಿಕ ಎಲೆಕ್ಟ್ರಾನಿಕ್ ಮೊಬೈಲಿಗಿಂತಲೂ ಸೂಕ್ಷ್ಮದ್ದೆಂದು ನಮಗೆ ಕೆಲವು ಗಳಿಗೆ ಅನಿಸಿದರೂ ಸಾಕು.

ನೇಮಗೆಡಿಸಲು ಹಲವು ಆಕರ್ಷಣೆಗಳಿವೆ. ಜಾತ್ರೆಯಲ್ಲಿ ಕೈಹಿಡಿದು ಎಳೆದುಕೊಳ್ಳುವ ವೇಶ್ಯೆಯರಿದ್ದಾರೆ. ‘ಬರೀ ಪತ್ರ ಬರೆದರೆ ಮಕ್ಕಳಾಗಲ್ಲ’ ಎಂದು ಕುಟುಕುವ, ಮದುವೆಗೆ ಒತ್ತಾಯಿಸುವ ಚಿಕ್ಕಮ್ಮನಿದ್ದಾಳೆ. ತನ್ನ ಊಟದ ಎಲೆಯಿಂದ ಮೀನನ್ನು ತೆಗೆದು ಅವನ ಎಲೆಯಲ್ಲಿ ಹಾಕುವ ಸುಂದರ ವಿಧವೆಯೊಬ್ಬಳು ಕೈಗೆಟಕುವಷ್ಟು ಹತ್ತಿರದಲ್ಲಿದ್ದಾಳೆ. ಆದರೆ ಅವು ಯಾವವೂ ಅವನನ್ನು ಕಂಗೆಡಿಸುತ್ತಿಲ್ಲ. ಪತ್ರದ ಮೂಲಕ ಮದುವೆಯಾದರೇನಾಯ್ತು? ಅದು ಉಳಿದ ಮದುವೆಗಳಿಗಿಂತ ಹೇಗೆ ಭಿನ್ನ? ದೂರದ ಜಪಾನಾದರೇನು? ಹಾಗೆಲ್ಲಾ ಆಕರ್ಷಣೆಗಳಿಗೆ ಆದರ್ಶವನ್ನು ಬಲಿ ಕೊಡಬಹುದೆ?

ಹಲವರಿಗೆ ಇವರು ವಿಚಿತ್ರ ಮತ್ತು ವಿಕ್ಷಿಪ್ತ ಅನ್ನಿಸಬಹುದು. ಇದು ಪ್ರೀತಿ ಅಲ್ಲವೇ ಅಲ್ಲ, ಬರೀ ಹಟಮಾರಿತನವೆನ್ನಿಸಬಹದು. ಇವರಿಬ್ಬರೂ ಹೇಡಿಗಳು, ವಾಸ್ತವದ ಬದುಕನ್ನು ನಿಭಾಯಿಸುವ ಧೈರ್ಯವಿಲ್ಲದೆ ಹೀಗೆ ಕಾಲ್ಪನಿಕ ಬದುಕನ್ನು ನಡೆಸುತ್ತಿದ್ದಾರೆ ಅನ್ನಿಸಬಹುದು. ನಮ್ಮ ಹತ್ತಿರವೇ ಇರುವ ಇನ್ನೊಬ್ಬರಿಗೆ ಒಂದು ಸುಂದರ ಬದುಕನ್ನು ನೀಡುವ ಅವಕಾಶಕ್ಕೆ ನಕಾರ ತೋರುತ್ತಿರುವ ಇವರ ಸ್ವಭಾವ ಕ್ರೌರ್ಯವಾಗಿಯೂ ಕಾಣಬಹುದು. ನಮಗೆ ಹೀಗೆ ಏನೆಲ್ಲಾ ಅನ್ನಿಸಬಹುದಾದರೂ, ಪ್ರೇಮಿಸುತ್ತಿರುವ ಅವರಿಬ್ಬರಿಗೆ ಏನನ್ನಿಸುತ್ತದೆಂಬುದು ಮುಖ್ಯವಾದ್ದರಿಂದ ಮೌನವಾಗಿ ಅವರ ಬದುಕನ್ನು ವೀಕ್ಷಿಸಬಹುದು.

ಸಿನಿಮಾದ ಕೊನೆಯಲ್ಲಿ ಒಂದು ಆರ್ದ್ರ ದೃಶ್ಯವಿದೆ. ಅಗಲಿದ ಪತಿಯ ಮನೆಗೆ ಕೊನೆಗೂ ಜಪಾನಿನ ಪತ್ನಿ ಬರುತ್ತಾಳೆ. ಬಿಳಿಯ ಸೀರೆಯನ್ನು ಉಟ್ಟು, ತಲೆಯನ್ನು ಪೂರ್ತಿ ಬೋಳಿಸಿಕೊಂಡು, ಹಣೆಯ ಸಿಂಧೂರವನ್ನು ತೆಗೆದು, ತನಗೆ ಗೊತ್ತಿಲ್ಲದ ಭಾಷೆಯನ್ನಾಡುವ ಜನರ ಊರಿಗೆ ತೆಪ್ಪದಲ್ಲಿ ಹಗೂರಕ್ಕೆ ತೇಲುತ್ತಾ ಬರುವ ಆಕೆಯನ್ನು ನೋಡುವಾಗ ನಿಮ್ಮ ಕಣ್ಣಲ್ಲಿ ನೀರಾಡದಿದ್ದರೆ ಹೇಳಿ. ಹಿಂದೆಂದೋ ಸಹಜವಾಗಿ ಪತಿರಾಯ ಒಂದು ಪತ್ರದಲ್ಲಿ ಇಲ್ಲಿನ ವಿಧವೆಯ ದಿರಿಸನ್ನು ಹೇಳಿದ್ದನ್ನು ಆಕೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡು ಕಾರ್ಯರೂಪಕ್ಕೆ ಇಳಿಸಿರುವುದು ನಮ್ಮನ್ನೂ ಬೆಚ್ಚಿ ಬೀಳಿಸುತ್ತದೆ. ನಾವೆಂದೋ ಮೌಢ್ಯವೆಂದು ನಿರಾಕರಿಸಿದ ಪದ್ಧತಿಯೊಂದನ್ನು ಆಕೆ ಪಾಲಿಸಿರುವುದು ಕಂಡಾಗ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಮನಸ್ಸು ಮೂಕವಾಗುತ್ತದೆ. ವಿಚಿತ್ರವೆಂದರೆ ಅವಳ ಆ ದಿರಿಸು ನಮಗೆ ಮೌಢ್ಯವಾಗಿಯೂ ಕಾಣುವದಿಲ್ಲ.  ತಾನು ಕಾಣದ ಪತಿಯ ಮನೆಯ ಮೂಲೆ ಮೂಲೆಯನ್ನು ಮುಟ್ಟಿ ಅನುಭವಿಸುವ ಆಕೆ ಕೇವಲ ಪ್ರೀತಿಯ ಸಂಕೇತದಂತೆ ನಮ್ಮ ಮುಂದೆ ನಿಲ್ಲುತ್ತಾಳೆ.  ಮತ್ತೊಬ್ಬರ ಮನಸ್ಸನ್ನು ನೋಯಿಸದ ಪ್ರತಿಯೊಂದು ನಂಬಿಕೆಯೂ, ಆಚರಣೆಯೂ ಕೇವಲ ಅವರವರ ಸತ್ಯವಲ್ಲವೆ?

ಶ್ರೇಷ್ಠತೆಯ ಶಸ್ತ್ರಾಸ್ತ್ರಗಳನ್ನು ಒಂದಿಷ್ಟು ಹೊತ್ತು ಬದಿಗಿಡೋಣ. ಸಾಧ್ಯಾಸಾಧ್ಯತೆಗಳ ಕ್ಷುಲ್ಲಕ ಜಗತ್ತಿನಿಂದ ಹೊರಗೆ ಬರೋಣ. ಸದ್ಯದ ನಮ್ಮೆಲ್ಲಾ ಆತಂಕಗಳನ್ನು ಮರೆಯೋಣ. ಮಗುವಿನ ಮುಗ್ಧತೆಯಿಂದ ಸಿನಿಮಾ ನೋಡೋಣ. ಒಂದಿಷ್ಟು ನಗೋಣ. ಒಂದಿಷ್ಟು ನಲಿಯೋಣ. ಮತ್ತೊಮ್ಮೆ ಪ್ರೀತಿಯ ಗಂಗೆಯಲ್ಲಿ ಮೀಯೋಣ. ಒಂಚೂರು ಪವಿತ್ರರಾಗೋಣ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT