ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಯ್ಯಿ ತೀರಿಸುವುದು ಸುಲಭವಲ್ಲ!

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಒಂದೊಮ್ಮೆ ನೀವು ಅಗ್ರಸ್ಥಾನದಲ್ಲಿ ಕುಳಿತರೆ ಜನ ಯಾವಾಗಲೂ ನಿಮ್ಮನ್ನು ಕೆಳಕ್ಕೆ ನೂಕಲು ಪ್ರಯತ್ನ ನಡೆಸುತ್ತಾರೆ. ಅತ್ಯಂತ ಸಹಜ ಪ್ರಕ್ರಿಯೆ ಇದಾಗಿದ್ದು, ಇದರಿಂದ ನಮಗೇನೂ ಬೇಸರವಿಲ್ಲ. ಅಂತಹ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧರಾಗಿಯೇ ಇದ್ದೇವೆ~

- ಬಂದೂಕಿನಿಂದ ಗುಂಡು ಹಾರಿಸಿದಂತೆ ಇಂತಹ ಖಡಕ್ ಹೇಳಿಕೆಯನ್ನು ನೀಡಿದ್ದಾರೆ, ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ, ಅಲಸ್ಟರ್ ಕುಕ್. ಗೆಲುವಿನ ಅಮಲಿನಲ್ಲಿ ತೇಲಾಡುವವರನ್ನು ಹಣಿಯುವುದು ತೀರಾ ಸುಲಭ.

ವಾಸ್ತವ ಪ್ರಜ್ಞೆಯೊಂದಿಗೆ ಯುದ್ಧಕ್ಕೆ ನಿಂತವರನ್ನು ಸೋಲಿಸುವುದು ಬಲು ಕಷ್ಟ. ಇಂಗ್ಲೆಂಡ್ ತಂಡಕ್ಕೆ ಅಗತ್ಯವಾದ  ಅಂತಹ ವಾಸ್ತವ ಪ್ರಜ್ಞೆ ಇದೆ ಎಂಬುದಕ್ಕೆ ಕುಕ್ ಅವರ ಮಾತೇ ಸಾಕ್ಷಿಯಾಗಿದೆ.

ಅಕ್ಟೋಬರ್ ಎರಡನೇ ವಾರದಲ್ಲಿ ಏಕದಿನ ಸರಣಿ ಆಡಲು ಭಾರತಕ್ಕೆ ಆಗಮಿಸುತ್ತಿದೆ ಕುಕ್ ಪಡೆ. ಐದು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯಗಳು ನಡೆಯಲಿವೆ. `ನಿಜಾಮರ ನಾಡು~ ಹೈದರಾಬಾದ್‌ನಿಂದ ಕ್ರಿಕೆಟ್ ಯಾಗ ಆರಂಭವಾಗಲಿದೆ.

ಚಳಿಗಾಲ ಇನ್ನೂ ಶುರುವಾಗಿಲ್ಲ. ಎದುರಾಳಿಗಳ ಆಗಮನಕ್ಕೂ ಎರಡು ವಾರ ಬಾಕಿ ಇದೆ. ಆಗಲೇ ಭಾರತ ತಂಡಕ್ಕೆ ನಡುಕ ಶುರುವಾಗಿದೆ. `ಮರೆತೇನಂದರೆ ಮರೆಯಲಿ ಹ್ಯಾಂಗ~ ಎನ್ನುವಂತೆ `ಕ್ರಿಕೆಟ್ ಜನಕ~ರ ನಾಡಿನಲ್ಲಿ ಅನುಭವಿಸಿರುವ ಟೆಸ್ಟ್ ಹಾಗೂ ಏಕದಿನ ಸರಣಿಗಳ ಸಾಲು ಸಾಲು ಸೋಲು, ಮಹೇಂದ್ರ ಸಿಂಗ್ ದೋನಿ ಬಳಗವನ್ನು ಇನ್ನೂ ಬೆಂಬಿಡದಂತೆ ಕಾಡುತ್ತಿದೆ.

ಇಂಗ್ಲೆಂಡ್ ತಂಡ ಪ್ರವಾಸದುದ್ದಕ್ಕೂ ಆಟದಲ್ಲಷ್ಟೇ ಅಲ್ಲ; ಶಿಸ್ತುಬದ್ಧ ಯೋಜನೆಯಲ್ಲೂ ಭಾರತವನ್ನು ಮೀರಿಸಿ ನಿಂತಿತ್ತು. ದೋನಿ ಪಡೆಗೆ ಸಾಕಷ್ಟು ಪಾಠಗಳು ಅಲ್ಲಿದ್ದವು. ಭಾರತ ತಂಡದ ಅಸ್ಥಿರ ಪ್ರದರ್ಶನ ತುಂಬಾ ಹೆಸರುವಾಸಿ. ಸೌರವ್ ಗಂಗೂಲಿ-ಜಾನ್ ರೈಟ್ ಹಾಗೂ ದೋನಿ-ಗ್ಯಾರಿ ಕರ್ಸ್ಟನ್ ಅವಧಿ ಮಾತ್ರ ಇದಕ್ಕೆ ತುಸು ಅಪವಾದ. ತಂಡ ಹೆಚ್ಚಿನ ಜಯದ ಸವಿ ಉಂಡಿದ್ದು ಇದೇ ಅವಧಿಯಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.

ಯಶಸ್ಸಿನ ಉತ್ತುಂಗಕ್ಕೆ ಏರಿ, ಸೋಲಿನ ಪ್ರಪಾತಕ್ಕೆ ಬಿದ್ದಿದ್ದನ್ನು ಅರಗಿಸಿಕೊಳ್ಳಲು ಭಾರತ ತಂಡಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಕೆಲವೇ ತಿಂಗಳ ಹಿಂದೆ ಪ್ರಶಂಸೆಗಳ ಮಹಾಪೂರದಲ್ಲಿ ತೇಲಾಡಿದ್ದ ದೋನಿ ಪಡೆ, ಇದೀಗ ಟೀಕೆಗಳಿಂದ ಆವೃತವಾದ ರಾಡಿಯೊಳಗೆ ಬಿದ್ದು ಹೊರಳಾಡುತ್ತಿದೆ. ನಿರಾಸೆಯ ಮಡುವಿನಲ್ಲಿ ಹೂತು ಹೋಗಿರುವ ತಂಡಕ್ಕೆ ಮನಸ್ಸಿನ ಮೇಲಾಗಿರುವ ಗಾಯವನ್ನು ವಾಸಿಮಾಡಿಕೊಳ್ಳಲು ಇಂಗ್ಲೆಂಡ್ ವಿರುದ್ಧದ ಗೆಲುವು ಪರಿಣಾಮಕಾರಿ ಮುಲಾಮು ಆಗಬಲ್ಲದು.

ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಅದೃಷ್ಟ ರಾತ್ರಿ ಬೆಳಗಾಗುವಷ್ಟರಲ್ಲಿ ಒಲಿದು ಬಂದಿದ್ದಲ್ಲ. ಸತತ 18 ತಿಂಗಳ ಪರಿಶ್ರಮ ಅದರ ಹಿಂದಿದೆ. ಹಾಗೆ ನೋಡಿದರೆ, ಡೆಂಕನ್ ಫ್ಲೆಚರ್ ಹಾಗೂ ನಾಸಿರ್ ಹುಸೇನ್ ಜೋಡಿಯ ರಾಜ್ಯಭಾರ ನಡೆದಾಗಲೇ ಈ ಯಶಸ್ಸಿನ ಬೀಜವನ್ನು ಬಿತ್ತಲಾಗಿತ್ತು. ಹಲವು ಅಡೆತಡೆಗಳು ಎದುರಾದರೂ ಸ್ಪಷ್ಟವಾದ ಗುರಿ ಹಾಗೂ ಆ ಗುರಿಯತ್ತ ಮುನ್ನುಗ್ಗಲು ಆಟಗಾರರು ತೋರಿದ ಸತತ ತುಡಿತವೇ ಆ ತಂಡವನ್ನು ಇಷ್ಟೊಂದು ಎತ್ತರಕ್ಕೆ ಮುನ್ನಡೆಸಿದೆ.

ಒಂದೂವರೆ ವರ್ಷದ ಹಿಂದಿನವರೆಗೂ ಕೆವಿನ್ ಪೀಟರ್ಸನ್ ಅವರಿಲ್ಲದ ಇಂಗ್ಲೆಂಡ್ ತಂಡವನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿತ್ತು. ಪೀಟರ್ಸನ್ ಆಡಿದರೆ ಉಂಟು; ಇಲ್ಲದಿದ್ದರೆ ಇಂಗ್ಲೆಂಡ್ ತಂಡ ಲೆಕ್ಕಕೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತು. ಆದರೆ, ಸದ್ಯದ ವಾತಾವರಣ ಹಾಗಿಲ್ಲ. ಸ್ವತಃ ನಾಯಕ ಕುಕ್ ಅವರಲ್ಲದೆ ಜೋನಾಥನ್ ಟ್ರಾಟ್ ಅವರಂತಹ ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳನ್ನು ತಂಡ ಹೊಂದಿದೆ.

ಟ್ರಾಟ್ `ಐಸಿಸಿ ವರ್ಷದ ಆಟಗಾರ~ ಪ್ರಶಸ್ತಿ ಪಡೆದರೆ, ಕುಕ್ `ಐಸಿಸಿ ವರ್ಷದ ಟೆಸ್ಟ್ ಆಟಗಾರ~ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇಂಗ್ಲೆಂಡ್ ತಂಡದ ತಾಕತ್ತು ಹೇಗಿತ್ತು ಎಂಬುದಕ್ಕೆ ಈ ಪ್ರಶಸ್ತಿಗಳೇ ಸಾಕ್ಷಿಯಾಗಿವೆ. ದಿನ 12 ಟೆಸ್ಟ್ ಹಾಗೂ 24 ಏಕದಿನ ಪಂದ್ಯಗಳಲ್ಲಿ ಟ್ರಾಟ್ ಕ್ರಮವಾಗಿ 1042 ಹಾಗೂ 1064 ರನ್‌ಗಳನ್ನು ಕೊಳ್ಳೆ ಹೊಡೆದಿದ್ದಾರೆ.

ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 3-1ರಿಂದ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯಲು ಈ ಆಟಗಾರ ನೀಡಿದ ಕೊಡುಗೆ ದೊಡ್ಡದಾಗಿದೆ. ಕುಕ್ ಅವರಂತೂ ತಂಡದ ಗೆಲುವಿನ ಅಡುಗೆ ಸಿದ್ಧವಾಗದ ಹೊರತು ಬ್ಯಾಟ್ ಕೆಳಗೆ ಇಡುವುದೇ ಇಲ್ಲ ಎಂಬ ಶಪಥ ಾಡಿದಂತಿದೆ.

ಕುಕ್-ಟ್ರಾಟ್ ಜೋಡಿಯಲ್ಲದೆ ಆ್ಯಂಡ್ರ್ಯೂ ಸ್ಟ್ರಾಸ್, ಇಯಾನ್ ಬೆಲ್, ಪೀಟರ್ಸನ್ ಅವರಂತಹ ಆಟಗಾರರೂ ಎಂದಿನಂತೆ ಬ್ಯಾಟ್ ಝಳಪಿಸುತ್ತಿರುವ ಕಾರಣ ತಂಡಕ್ಕೆ ಬಲಾಢ್ಯ ಸ್ವರೂಪ ಬಂದಿದೆ. ಗ್ರೇಮ್ ಸ್ವ್ಯಾನ್, ಜೇಮ್ಸ  ಅಂಡರ್‌ಸನ್ ಅವರಂತಹ ಶ್ರೇಷ್ಠ ಬೌಲರ್‌ಗಳೂ ತಂಡದಲ್ಲಿದ್ದಾರೆ.

ಫ್ಲೆಚರ್ ಅವರಿಂದ ಸಾಕಷ್ಟು ಪಾಠಗಳನ್ನು ಕಲಿತಿರುವ `ಬಾರ್ಮಿ ಆರ್ಮಿ~ ಪಡೆ, ಸದ್ಯ ಆ್ಯಂಡಿ ಫ್ಲಾವರ್ ಅವರನ್ನು ಗುರುವಿನ ರೂಪದಲ್ಲಿ ಹೊಂದಿದೆ. ಯೋಜನಾಬದ್ಧ ಆಟದ ಮೂಲಕ ಜಗತ್ತನ್ನೇ ಜಯಿಸುವ ಹುಮ್ಮಸ್ಸು ಆ ತಂಡದಲ್ಲಿ ಎದ್ದು ಕಾಣುತ್ತಿದೆ.

ಗಾಯದ ಸಮಸ್ಯೆ, ತೆರಪಿಲ್ಲದ ವೇಳಾಪಟ್ಟಿ, ಐಪಿಎಲ್ ಗುಂಗು, ಪ್ರತಿಭಾವಂತರ ಪಡೆಯೇ ಇದ್ದರೂ ಸಿಗದ ಸೂಕ್ತ ತರಬೇತಿ ಇಂತಹದ್ದೇ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ತಂಡ, ಯಶಸ್ಸಿನ ಕಡೆಗೆ ಮತ್ತೆ ವಾಲುವ ಹಾದಿ ಕಲ್ಲು-ಮುಳ್ಳಿನಿಂದ ಕೂಡಿದೆ.

ಒಬ್ಬ ಜಹೀರ್ ಖಾನ್ ಇಲ್ಲದ್ದರಿಂದ ಜಂಗಾಬಲವೇ ಉಡುಗಿಹೋದಂತೆ ಬೌಲಿಂಗ್ ಪಡೆ ಪಾತಾಳ ಕಂಡ ಉದಾಹರಣೆ ಕಣ್ಣ ಮುಂದೆಯೇ ಇದೆ. ಕೂಲ್ ಕ್ಯಾಪ್ಟನ್ ದೋನಿ ಇದೀಗ ಹೊಣೆಗಾರಿಕೆ ಬಿಸಿಯನ್ನು ಚೆನ್ನಾಗಿಯೇ ಅನುಭವಿಸುತ್ತಿದ್ದಾರೆ.
ಪಶ್ಚಿಮದ ಕ್ರಿಕೆಟ್ ಸೂರ್ಯನ ಪ್ರಕಾಶದ ಮುಂದೆ ಪೂರ್ವದ ಸೂರ್ಯ ಮಂಕು ಹೊಡೆದಿದ್ದಾನೆ.

ಮತ್ತೆ ಮೊದಲಿನ ಪ್ರಖರತೆಯನ್ನು ಗಳಿಸಿಕೊಳ್ಳುವ ಜವಾಬ್ದಾರಿ ದೋನಿ ಅವರ ಹೆಗಲ ಮೇಲೆಯೇ ಬಿದ್ದಿದೆ. ಆದರೆ, ಮುಯ್ಯಿ ತೀರಿಸುವುದು ಅಂದುಕೊಂಡಷ್ಟು ಸುಲಭವಾಗಿಲ್ಲ .  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT