ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲ್ಲಪೆರಿಯಾರ್ ಜಲಾಶಯ: ನಿರ್ಮಾತೃ ಸ್ಮಾರಕ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಮುಲ್ಲಪೆರಿಯಾರ್ ಜಲಾಶಯ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಜಲಾಶಯ ನಿರ್ಮಿಸಿದ ಆಂಗ್ಲ ಎಂಜಿನಿಯರ್  ಕರ್ನಲ್ ಜಾನ್ ಪೆನ್ನಿಕ್ವಿಕ್ ಅವರ ಸ್ಮಾರಕ ನಿರ್ಮಿಸುವುದಾಗಿ ತಮಿಳುನಾಡು ಸರ್ಕಾರ ಭಾನುವಾರ ಪ್ರಕಟಿಸಿದೆ.

`ಪೆನ್ನಿಕ್ವಿಕ್ ಅವರ ಸ್ಮರಣೆಗೆ ಸ್ಮಾರಕ ನಿರ್ಮಿಸುವ ನಿರ್ಧಾರ ಪ್ರಕಟಿಸಲು ನನಗೆ ಸಂತೋಷವಾಗುತ್ತಿದೆ. ಜಲಾಶಯದ ಗಡಿ ಭಾಗದ ಥೇಣಿ ಜಿಲ್ಲೆಯಲ್ಲಿನ ತಮಿಳುನಾಡು ವಿದ್ಯುತ್ ಮಂಡಳಿಯ ಆವರಣದಲ್ಲಿ 2,500 ಚದರ ಅಡಿ ವ್ಯಾಪ್ತಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು. ಇದರಲ್ಲಿ ಅವರ ಪ್ರತಿಮೆಯನ್ನೂ ಸ್ಥಾಪಿಸಲಾಗುವುದು. ಸ್ಮಾರಕ ನಿರ್ಮಾಣವಾದ ಬಳಿಕ ಕ್ವಿಕ್ ಅವರ ಮೊಮ್ಮಗನಿಂದ ಅದನ್ನು ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಜೆ. ಜಯಲಲಿತಾ ಹೇಳಿದ್ದಾರೆ.

ಬ್ರಿಟಿಷ್ ಸೇನಾ ಎಂಜಿನಿಯರ್ ಆಗಿದ್ದ ಕೋಲ್ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ ಕಷ್ಟಗಳ ನಡುವೆಯೇ ಜಲಾಶಯ ನಿರ್ಮಿಸಿದ್ದಾರೆ.  ಸುಣ್ಣದ ಕಲ್ಲು ಮತ್ತು ಬೃಹತ್ ಕಲ್ಲು ಬಂಡೆಗಳನ್ನು ಬಳಸಿ ಗುರುತ್ವಾಕರ್ಷಣೆ ನಿಯಮದ ಪ್ರಕಾರ ಜಲಾಶಯ ನಿರ್ಮಿಸಿದ್ದು, 116 ವರ್ಷಗಳು ಗತಿಸಿದರೂ ಜಲಾಶಯ ಇನ್ನೂ ಭದ್ರವಾಗಿದೆ ಎಂದು ಜಯಾ ಸ್ಮರಿಸಿದ್ದಾರೆ.

ಈ ಜಲಾಶಯ ಥೇಣಿ, ಮದುರೆ, ದಿಂಡಿಗಲ್, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳ ಜನರಿಗೆ ಉಪಯುಕ್ತವಾಗಿದ್ದು,  2.23 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ ಎಂದು ಅವರು ಹೇಳಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ಈ ಜಲಾಶಯವನ್ನು ಮರು ನಿರ್ಮಿಸಬೇಕು ಎಂದು ಕೇರಳ ಪ್ರತಿಪಾದಿಸುತ್ತಿದ್ದರೆ, ಜಲಾಶಯ ಸುಭದ್ರವಾಗಿದೆ ಎಂದು ತಮಿಳುನಾಡು ಹೇಳುತ್ತಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಚೆನ್ನೈನ ಪತ್ರಿಕಾ ಸಂಪಾದಕರ ತಂಡದೊಂದಿಗೆ ಶನಿವಾರ ತಿರುವನಂತಪುರದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸುರಕ್ಷತೆ ದೃಷ್ಟಿಯಿಂದ ಹೊಸ ಜಲಾಶಯ ನಿರ್ಮಾಣವೇ ಈ ಸಮಸ್ಯೆಗೆ ಪರಿಹಾರ ಎಂದು ಪ್ರತಿಪಾದಿಸಿದ್ದಾರೆ.

ನ್ಯಾಯಾಲಯದ ಹೊರಗಡೆಯೇ ಈ ಸಮಸ್ಯೆ ಪರಿಹರಿಸಿಕೊಳ್ಳುವುದು ಸೂಕ್ತ ಎಂದು ಚಾಂಡಿ  ಸಲಹೆ ನೀಡಿದ್ದು, ಈ ಬಗ್ಗೆ ಚರ್ಚಿಸಲು ಜಯಾ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT