ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳೂರು ಗದ್ದೆಗೆ ದಾರಿಯೆಲ್ಲಿ ?

Last Updated 11 ಡಿಸೆಂಬರ್ 2013, 8:51 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಮುಳ್ಳೂರು ಗದ್ದೆ ಬಯಲಿನಲ್ಲಿ ರೈತರು ಬೆಳೆದ ಭತ್ತ ಮತ್ತು ಹುಲ್ಲನ್ನು ಮನೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.

ಬೆಳೆದ ಬೆಳೆ ಸಾಗಿಸಲು ರಸ್ತೆಯೇ ಇಲ್ಲದೇ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಗ್ರಾಮದಲ್ಲಿ 70 ರೈತ ಕುಟುಂಬಗಳು ವಾಸಿಸುತ್ತಿವೆ. 400 ಎಕರೆ ಗದ್ದೆ ಬಯಲು ಇದ್ದು ‘ಮುಳ್ಳೂರು ಗದ್ದೆ ಬಯಲು’ ಎಂಬ ಹೆಸರು ಪಡೆದಿದೆ.

ಜಿಲ್ಲೆಯಲ್ಲೇ ಅತಿ ದೊಡ್ಡ ಗದ್ದೆ ಬಯಲೆಂದು ಖ್ಯಾತಿ ಪಡೆದಿದೆ. ವಿಪರ್ಯಾಸವೆಂದರೆ ರೈತರು ಈ ಗದ್ದೆ ಬಯಲಿಗೆ ಹೋಗಲು ಮತ್ತು ಬೆಳೆದ ಬೆಳೆಯನ್ನು ಕಟಾವು ಮಾಡಿ ಮನೆಗೆ ತರಲು ದಾರಿಯೇ ಇಲ್ಲ. ಶತಮಾನದಿಂದಲೂ ಇದೇ ಪರಿಸ್ಥಿತಿ ಇದೆ. ಗದ್ದೆ ಬಯಲಿನಲ್ಲಿ ನೀರಿನ ಅನುಕೂಲವಿಲ್ಲ. ಕೊಳವೆ ಬಾವಿಗಳೂ ಇಲ್ಲದೇ ಬೇಸಿಗೆಯಲ್ಲಿ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಲ್ಲವಾಗಿದೆ. ಕೊಳವೆ ಬಾವಿ ತೆಗೆಸಬೇಕೆಂದರೂ ಲಾರಿಗಳು ಹೋಗಲು ದಾರಿ ಮೊದಲೇ ಇಲ್ಲ. ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದ್ದಾರೆ. ಸಮಸ್ಯೆಗೆ ಸ್ಪಂದಿಸುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಇದೀಗ ಗದ್ದೆಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದೆ. ರೈತರು ಬೆವರು ಹರಿಸಿ ಬೆಳೆದ ಬೆಳೆಯನ್ನು ಮನೆಗೆ ಸಾಗಿಸಲೇಬೇಕಾಗಿದೆ.  ಹಾಗಾಗಿ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಗಂಟೆಗೆ ₨ 750 ಬಾಡಿಗೆಯಂತೆ ಹಿಟಾಚಿಯನ್ನು ಬಾಡಿಗೆ ತಂದು 300 ಮೀಟರ್‌ ಉದ್ದದ ತಾತ್ಕಾಲಿಕ ರಸ್ತೆಯನ್ನು ಮಾಡುತ್ತಿದ್ದಾರೆ.

ರಸ್ತೆಯ ಎರಡೂ ಪಕ್ಕದಲ್ಲೂ ಕಲ್ಲು ಬಂಡೆಗಳಿದ್ದು ಯಾವ ಸಂದರ್ಭದಲ್ಲಿ ಉರುಳಿ ಮೈಮೇಲೆ ಬೀಳುವುದೋ ಎಂಬ ಭಯವೂ ರೈತರನ್ನು ಕಾಡುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು ಸ್ಪಂದಿಸಲಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.                   

– ಶ.ಗ. ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT