ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ; ಸಂಚಾರ ವ್ಯತ್ಯಯ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳು ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಮತ್ತೆ ಉದ್ಭವಿಸಿದ್ದು, 50ಕ್ಕೂ ಹೆಚ್ಚು ಪೈಲಟ್‌ಗಳು ಮುಷ್ಕರದಲ್ಲಿ ತೊಡಗಿದ್ದಾರೆ. ಇದರಿಂದ ಕೆಲವು ಅಂತರರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳು ಸೇರಿ ಕನಿಷ್ಠ 36 ವಿಮಾನಗಳ ಸಂಚಾರ ಶನಿವಾರ ರದ್ದುಗೊಂಡಿತ್ತು.

ವೇತನ ಮತ್ತು ಭತ್ಯೆ ನೀಡುವಲ್ಲಿ ತೀರಾ ವಿಳಂಬ ಮಾಡಲಾಗುತ್ತಿದೆ ಎಂದು ಸರ್ಕಾರದ ಧೋರಣೆಯನ್ನು ಖಂಡಿಸಿದ ಪೈಲಟ್‌ಗಳು, ಕರ್ತವ್ಯಕ್ಕೆ ಹಾಜರಾದರೂ ವಿಮಾನ ಹಾರಾಟ ನಡೆಸದೆ ಮುಷ್ಕರ ನಡೆಸಿದರು.

ದೆಹಲಿಯಲ್ಲಿ ಸಂಜೆ 5ರವರೆಗೆ ಏರ್ ಇಂಡಿಯಾದ 28 ವಿಮಾನಗಳು ರದ್ದುಗೊಂಡರೆ, ಮುಂಬೈನಲ್ಲಿ ಎಂಟು ವಿಮಾನಗಳು ಸಂಚಾರದಿಂದ ವಿಮುಖವಾಗಿದ್ದವು. ಪ್ರರ್ಯಾಯ ಕ್ರಮವಾಗಿ ಬೇರೆ ವಿಮಾನಗಳನ್ನು ಸಂಯೋಜಿಸಿದ್ದರಿಂದ ಪ್ರಯಾಣಿಕರಿಗೆ ಗೊಂದಲವಾಗಿ, ಪರದಾಡಿದರು. ಕಾಬೂಲ್, ಕಠ್ಮಂಡು, ಮಸ್ಕತ್ ಮತ್ತು ಅಬುಧಾಬಿ ನಗರಗಳಿಗೆ ಹೋಗುವ ಅಥವಾ ಅಲ್ಲಿಂದ ಆಗಮಿಸುವ ವಿಮಾನಗಳು ರದ್ದುಗೊಂಡವು.

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಕೌಂಟರ್‌ನಲ್ಲಿ ಪ್ರಯಾಣಿಕರ ದೊಡ್ಡ ಸರತಿ ಸಾಲು ಇತ್ತು. ಆದರೂ, ಲಂಡನ್, ನ್ಯೂಯಾರ್ಕ್, ಟೊರಾಂಟೊ, ಟೋಕಿಯೊ, ಷಿಕಾಗೊ ನಗರಗಳಿಗೆ ವಿಮಾನಗಳು ನಿಗದಿತ ವೇಳೆಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

`ನಾವು ಪಡೆಯುವ ತಿಂಗಳ ಸಂಬಳದಲ್ಲಿ ಶೇ 80ರ ಪಾಲು `ಹಾರಾಟ ಭತ್ಯೆ~ಯೇ ಆಗಿದೆ. ಆದರೆ, ಸರ್ಕಾರ ಕಳೆದ ಆಗಸ್ಟ್‌ನಿಂದ ಇದನ್ನು ನೀಡಿಲ್ಲ~ ಎಂದು ಪೈಲಟ್‌ಗಳು ದೂರಿದ್ದಾರೆ.

ಸಂಬಳ- ಭತ್ಯೆ ನೀಡದಿರುವುದರ ವಿರುದ್ಧ ಮುಷ್ಕರ ನಡೆಸಲು ಕೆಲವು ಪೈಲಟ್‌ಗಳು ಶುಕ್ರವಾರವೇ ನಿರ್ಧರಿಸಿದ್ದರು. ಈ ಕುರಿತು ದೆಹಲಿ, ಮುಂಬೈ, ಕೋಲ್ಕತ್ತ ಮತ್ತು ಚೆನ್ನೈಗಳಲ್ಲಿ ಸಭೆ ಕೂಡ ನಡೆಸಿದ್ದರು.

`ಮುಂದಿನ ವಾರಾಂತ್ಯದೊಳಗೆ ಬಹುತೇಕ ಬಾಕಿ ಪಾವತಿ~

`ಒಂದೆರಡು ತಿಂಗಳಿಂದ ಪೈಲಟ್‌ಗಳಿಗೆ ಸಂಬಳ ನೀಡಿಲ್ಲ. ಅನೇಕ ತಿಂಗಳುಗಳ ಭತ್ಯೆ ಬಾಕಿ ಇರುವುದೂ ನಿಜ. ಅವರ ಕಷ್ಟ ಅರ್ಥ ಆಗುತ್ತದೆ. ಏರ್ ಇಂಡಿಯಾ ಕೂಡ ಆರ್ಥಿಕ ಸಂಕಷ್ಟದಲ್ಲಿದೆ. ಆದ್ದರಿಂದ ಪೈಲಟ್‌ಗಳ ವೇತನ- ಭತ್ಯೆಗೆ ಸಂಬಂಧಿಸಿದ ಲೆಕ್ಕಪತ್ರ ವ್ಯವಹಾರವನ್ನು ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ~ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ.

`ಏರ್ ಇಂಡಿಯಾದ ಆರ್ಥಿಕ ಸಂಕಷ್ಟದ ಬಗ್ಗೆ ಚರ್ಚಿಸಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಮುಂದಿನ ವಾರ ಭೇಟಿ ಮಾಡುವೆ. ಬಾಕಿ ಇರುವ ವೇತನ ಮತ್ತು ಭತ್ಯೆಯಲ್ಲಿ ಬಹುತೇಕ ಮೊತ್ತವನ್ನು ಮುಂದಿನ ವಾರದ ಅಂತ್ಯದೊಳಗೆ ಪಾವತಿಸಲು ಪ್ರಯತ್ನಿಸುತ್ತೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT