ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಯುವಕರೇ ಹಾದಿ ತಪ್ಪದಿರಿ

Last Updated 8 ಜನವರಿ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಿನ ಕಾರಣಕ್ಕಾಗಿಯೇ ಎಲ್ಲ ಕಡೆಯೂ ತಪಾಸಣೆಗೆ ಒಳಗಾಗುವಂತಹ ಕೆಟ್ಟ ಪರಿಸ್ಥಿತಿ ಮುಸ್ಲಿಮರಿಗೆ ಎದುರಾಗಿದೆ. ಸಮುದಾಯದ ಯುವಕರು ಇಸ್ಲಾಂನ ಮೂಲ ಆಶಯಗಳಿಂದ ದೂರವಾಗದಂತೆ ತಡೆಯುವ ಮೂಲಕ ಈ ಅವಮಾನವನ್ನು ತಪ್ಪಿಸಿಕೊಳ್ಳಬೇಕು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಡಾ.ಫಾರೂಕ್ ಅಬ್ದುಲ್ಲಾ ಹೇಳಿದರು.

`ಇಮಾಮ್ ಹುಸೇನ್~ ಸ್ಮರಣೆಯ ದಿನದ ಅಂಗವಾಗಿ ನಗರದ ರಿಚ್‌ಮಂಡ್ ಟೌನ್‌ನ ಶಿಯಾ ಆರಂಗಹ್‌ನಲ್ಲಿ ಭಾನುವಾರ ನಡೆದ `ಇಮಾಮ್ ಹುಸೇನ್: ಸ್ವಾತಂತ್ರ್ಯ, ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಸಂಕೇತ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 

 `ಅಬ್ದುಲ್ಲಾ, ಮಹಮ್ಮದ್ ಎಂಬ ಹೆಸರಿರುವ ಕಾರಣಕ್ಕಾಗಿಯೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಮ್ಮ ಜನರು ಅಂಗಿ, ಪ್ಯಾಂಟ್ ಬಿಚ್ಚಿಸಿಕೊಂಡು ತಪಾಸಣೆ ಮಾಡಿಸಿಕೊಂಡು ಅವಮಾನ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಸಮುದಾಯದ ಕೆಲ ಯುವಕರು ಹಾದಿ ತಪ್ಪಿರುವುದೇ ಕಾರಣವಲ್ಲವೇ~ ಎಂದು ಪ್ರಶ್ನಿಸಿದರು.

`ದೇಶ ವಿಭಜನೆಯಿಂದ ಮುಸ್ಲಿಮರಿಗೆ ಅನುಕೂಲವಾಯಿತೆಂಬ ತಪ್ಪು ಕಲ್ಪನೆ ಇದೆ. ಬ್ರಿಟಿಷರು ದೇಶವನ್ನು ಇಬ್ಭಾಗ ಮಾಡಿದ ಪರಿಣಾಮವಾಗಿ ಹೆಚ್ಚು ತೊಂದರೆ ಅನುಭವಿಸಿದವರು ಮತ್ತು ಅನುಭವಿಸುತ್ತಲೇ ಇರುವವರು ಮುಸ್ಲಿಮರು. ಕಾಶ್ಮೀರದಂತಹ ಸಮಸ್ಯೆಗಳ ಪ್ರಸ್ತಾಪವಾದಾಗ ಮುಸ್ಲಿಂ ಸಮುದಾಯ ಗಟ್ಟಿತನ ಪ್ರದರ್ಶಿಸಬೇಕು. ನಾವು ದೇಶದ ಪರವಾಗಿದ್ದೇವೆ, ಖರೀದಿಗೆ ಲಭ್ಯವಿಲ್ಲ ಎಂಬ ದಿಟ್ಟತನ ತೋರಬೇಕು~ ಎಂದರು.

ದೇಶದಲ್ಲಿ ಮುಸ್ಲಿಂ ಸಮುದಾಯದ ಶ್ರಮವನ್ನು ಲೆಕ್ಕ ಹಾಕಿದರೆ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್‌ಗಿಂತ ದೊಡ್ಡದು. ಆದರೆ ಬಡತನ ಅವರನ್ನು ಕಾಡುತ್ತಲೇ ಇದೆ. ಈಗ ಈ ಸಮುದಾಯ ಎಚ್ಚೆತ್ತುಕೊಳ್ಳದೇ ಇದ್ದರೆ, ಭವಿಷ್ಯದ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಇತರೆ ಭಾರತೀಯರಂತೆ ಈ ಸಮುದಾಯವೂ ಅಭಿವೃದ್ಧಿಯ ಪಥದಲ್ಲಿ ಮುಖ್ಯವಾಹಿನಿ ಜೊತೆ ಸೇರಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

`ಮುಸ್ಲಿಮರಲ್ಲಿನ ಒಳಜಗಳಕ್ಕೆ ಮೊದಲು ಇತಿಶ್ರೀ ಹಾಡಬೇಕು. ಶಿಯಾ ಮತ್ತು ಸುನ್ನಿ ಜನರು ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುವುದು ಸಲ್ಲ. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಎಲ್ಲ ಮುಸ್ಲಿಮರಿಗೂ ಕುರಾನ್, ಕಾಬಾ ಎಲ್ಲವೂ ಒಂದೇ. ಹೀಗಿರುವಾಗ ನಾವೇಕೆ ಉಪ ಪಂಗಡಗಳ ಹೆಸರಿನಲ್ಲಿ ರಕ್ತ ಹರಿಸಬೇಕು. ಒಬ್ಬರ ಪ್ರಾಣವನ್ನು ಮತ್ತೊಬ್ಬರು ತೆಗೆಯುವುದರಿಂದ ಏನು ಸಾಧಿಸಲು ಸಾಧ್ಯವಿದೆ~ ಎಂದು ಅಬ್ದುಲ್ಲಾ ಪ್ರಶ್ನಿಸಿದರು.

`ಮೀಸಲಾತಿ ಹೆಸರಲ್ಲಿ ವಂಚನೆ~: ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಾತನಾಡಿ, `ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಆಟದ ಗೊಂಬೆಗಳಂತೆ ಬಳಸುತ್ತಿವೆ. ಕೆಲವರು ದುರುದ್ದೇಶದಿಂದ ಜೈಲಿಗೆ ಹಾಕುತ್ತಾರೆ. ಇನ್ನು ಕೆಲವು ರಾಜಕೀಯ ಪಕ್ಷಗಳು ಮೀಸಲಾತಿಯ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸುತ್ತಿವೆ~ ಎಂದು ಟೀಕಿಸಿದರು.

`ಇಸ್ಲಾಂ ಶಾಂತಿ, ಪ್ರೇಮ ಮತ್ತು ಕರುಣೆಯನ್ನು ಸಾರುವ ಧರ್ಮ. ಇಸ್ಲಾಂ ಇರುವಲ್ಲಿ ಭಯವಿಲ್ಲ. ಭಯ ಇರುವಲ್ಲಿ ಇಸ್ಲಾಂ ಇರದು. ಭಯೋತ್ಪಾದನೆ ನಡೆಸುವವರು ಮುಸ್ಲಿಮರೇ ಅಲ್ಲ~ ಎಂದು ಅವರು ಹೇಳಿದರು.

ಇಮಾಮ್ ಹುಸೇನ್ 1,400 ವರ್ಷಗಳ ಹಿಂದೆಯೇ ಸ್ವಾತಂತ್ರ್ಯ ಮತ್ತು ಹಕ್ಕುಗಳ ರಕ್ಷಣೆಯ ಕೆಲಸ ಮಾಡಿದ್ದರು. ಅವರು ನಡೆದ ಹಾದಿ ಮುಸ್ಲಿಮರಷ್ಟೇ ಅಲ್ಲ, ಎಲ್ಲರಿಗೂ ಮಾದರಿ. ಮುಸ್ಲಿಮರ ಪಾಲಿಗೆ `ಹುಸೇನ್~ ಎಂಬುದು ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಸದಾ ಎಚ್ಚರಿಸುವ ಹೆಸರು. ಹುಸೇನರ ತತ್ವಗಳು ಜಗತ್ತಿನ ಹಿತರಕ್ಷಣೆಗೆ ಈಗಲೂ ಅನಿವಾರ್ಯ ಎಂದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಹಜ್ಜತ್ ಉಲ್ ಇಸ್ಲಾಂ ಮೌಲಾನಾ ಸೈಯದ್ ಕಲ್ಬೆ ಜವಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್, ಕೇಂದ್ರ ಹಜ್ ಸಮಿತಿ ಉಪಾಧ್ಯಕ್ಷ ಹಸನ್ ಅಹಮ್ಮದ್, ದೆಹಲಿ ಜಾಮಿಯಾ ಮಸೀದಿ ಸಂಯುಕ್ತ ರಂಗದ ಅಧ್ಯಕ್ಷ ಯಾಹ್ಯಾ ಬುಖಾರಿ, ಇರಾನ್ ಪರಮೋಚ್ಛ ನಾಯಕರ ಭಾರತ ಪ್ರತಿನಿಧಿ ಹಜ್ಜತ್ ಉಲ್ ಇಸ್ಲಾಂ ಮಹ್ದಿ ಮಹ್ದವಿಪುರ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಏಷ್ಯಾ ಅಧ್ಯಯನಗಳ ವಿಭಾಗದ ಮುಖ್ಯಸ್ಥ ಪ್ರೊ.ಸೈಯದ್ ಐನುಲ್ ಹಸನ್ ಅಬೇದಿ, ಉಸ್ತಾದ್ ಬಡೆ ಗುಲಾಂ ಅಲಿ ಖಾನ್‌ರ ಮೊಮ್ಮಗ ಉಸ್ತಾದ್ ರಝಾ ಅಲಿ ಖಾನ್, ಪತ್ರಕರ್ತರಾದ ಶಕೀಲ್ ಹಸನ್ ಶಂಷಿ, ಡಾ.ಜಾಫರ್ ಹೈದರಿ, ಕಾರ್ಯಕ್ರಮದ ಸಂಘಟಕ ಆಗಾ ಸುಲ್ತಾನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT