ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಪಿಂಡ ಹಗರಣ: ವೈದ್ಯರು ಆರೋಪಮುಕ್ತ

Last Updated 10 ಜನವರಿ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡಗಳನ್ನು ತೆಗೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ಹೊತ್ತ ನಗರದ ವೈದ್ಯರಿಗೆ ಶಿಕ್ಷೆ ವಿಧಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.

ವಿಕ್ಟೋರಿಯಾ ಆಸ್ಪತ್ರೆಯ ಡಾ.ಕೆ.ಎಸ್.ಸಿದ್ದರಾಜು, ಡಾ. ಆದಿಲ್, ಡಾ.ದಿಲೀಪ್ ಪಾಟೀಲ್ ಹಾಗೂ ಡಾ. ದಿಲೀಪ್ ಸಿ. ಧನಪಾಲ್ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ವಜಾ ಮಾಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಕೆಲವೊಂದು ಕಲಮುಗಳ ಅಡಿ ಇವರನ್ನು ದೋಷಮುಕ್ತಗೊಳಿಸಿ, ಇನ್ನು ಕೆಲವು ಕಲಮುಗಳ ಅಡಿ ಆರೋಪಪಟ್ಟಿ ನಿಗದಿ ಮಾಡಿ 2005ರ ಅಕ್ಟೋಬರ್ 19ರಂದು ಸೆಷನ್ಸ್ ಕೋರ್ಟ್ ಆದೇಶಿಸಿತ್ತು. ದೋಷಮುಕ್ತಗೊಳಿಸಿರುವ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೆ, ಆರೋಪಪಟ್ಟಿ ನಿಗದಿ ಮಾಡಿರುವ ಕ್ರಮವನ್ನು ಆರೋಪಿ ವೈದ್ಯರು ಪ್ರಶ್ನಿಸಿದ್ದರು. ವೈದ್ಯರ ಮೇಲ್ಮನವಿ ಎತ್ತಿಹಿಡಿದ ನ್ಯಾಯಮೂರ್ತಿಗಳು ಸರ್ಕಾರದ ಮನವಿ ತಿರಸ್ಕರಿಸಿದರು.

`ಮೂತ್ರಪಿಂಡ ಕೊಟ್ಟಿರುವ ರೋಗಿಗಳಿಗೆ ಇದರ ಅರಿವು ಮುಂಚೆಯೇ ಇತ್ತು. ಅದನ್ನು ನೀಡುವ ಮುನ್ನ ಅವರು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಇದು ಮೂತ್ರಪಿಂಡದ ಕಳವು ಎಂದು ಹೇಳಲಾಗದು~ ಎಂಬ ವೈದ್ಯರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. 1995ರಲ್ಲಿ ಈ ಪ್ರಕರಣವು ಭಾರಿ ಸುದ್ದಿ ಮಾಡಿತ್ತು.

ಬಿದರಿ ಆದೇಶಕ್ಕೆ  ತಡೆ
ಚಿತ್ರನಟ ವಿನೋದ್ ಕುಮಾರ್ ಅವರ ಕೊಲೆ ಪ್ರಕರಣವನ್ನು ಮುಂದಿನ ತನಿಖೆಗೆ ಸಿಐಡಿಗೆ ಒಪ್ಪಿಸಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ನಾಲ್ಕನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಅಂತಿಮ ಹಂತದಲ್ಲಿ ಇರುವಾಗಲೇ ಅದನ್ನು ಕಳೆದ ಡಿಸೆಂಬರ್ 9ರಂದು ಸಿಐಡಿಗೆ ಒಪ್ಪಿಸಿದ್ದು, ಅದು ಸರಿಯಲ್ಲ ಎಂದು ದೂರಿ ವಿನೋದ್ ಅವರ ಸಹೋದರ ಎನ್.ಕಿರಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಆನಂದ ನಡೆಸಿದರು.

2008ರ ಅಕ್ಟೋಬರ್ 6ರಂದು ನಗರದ ಬಾಗಲೂರು ಬಳಿಯ `ಎಲ್‌ಜಿ ರೋಸ್~ ಅತಿಥಿ ಗೃಹದಲ್ಲಿ  ವಿನೋದ್ ಅವರ ಕೊಲೆ ನಡೆದಿತ್ತು. ಔತಣಕೂಟಕ್ಕೆ ಬಂದಿದ್ದ ವಿನೋದ್ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎನ್ನುವುದು ಆರೋಪ.

`ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆದರೆ ಇಂತಹ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕರು ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದು ಸರಿಯಲ್ಲ~ ಎಂದು ಕಿರಣ್ ದೂರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.
 

ಸಿಎಂಗೆ ತುರ್ತು ನೋಟಿಸ್
ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹೊತ್ತ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಹೈಕೋರ್ಟ್ ಮಂಗಳವಾರ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.

ನಗರದ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಅವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ದೂರಿ ಪತ್ರಕರ್ತೆ ಕೆ.ಜಿ.ನಾಗಲಕ್ಷ್ಮಿ ಬಾಯಿ ಸಲ್ಲಿಸಿರುವ ಅರ್ಜಿ ಇದಾಗಿದೆ.  ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸದಾನಂದ ಗೌಡ ಅವರು 50/80 ಅಡಿ ನಿವೇಶನ ಪಡೆದುಕೊಂಡಿದ್ದಾರೆ.

ಇಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎನ್ನುವುದು ಅವರ ವಾದ. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರ, ಬಿಬಿಎಂಪಿ ಸೇರಿದಂತೆ ಇತರ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೆ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT