ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೂರು ವರ್ಷ ಮದುವೆ ಇಲ್ಲ'

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

 ಹೊರಗೆ ಬಿರುಬಿಸಿಲಿದ್ದರೂ ಫೀನಿಕ್ಸ್ ಮಾಲ್ ಒಳಗೆ ಮಾತ್ರ ತಂಪಾಗಿತ್ತು. ನಗರದಲ್ಲಿ ಇದೇ ಮೊದಲ ಬಾರಿಗೆ `ಚೇಂಬರ್ ಫೀನಿಕ್ಸ್'ನಲ್ಲಿ ತನ್ನ ಮೇಕ್ ಓವರ್ ಬೊಟಿಕ್ ತೆರೆಯುತ್ತಿದ್ದು, ಉದ್ಘಾಟನೆಗೆಂದು ನಟಿ ಐಂದ್ರಿತಾ ಬಂದರು. ಬಂದಾಕ್ಷಣವೇ ಮೇಕಪ್‌ಗೆ ಮುಖ ಒಡ್ಡಿ ಕುಳಿತಿರು. ಮೇಕಪ್ ಮುಗಿಯುತ್ತಿದ್ದಂತೆ ಚೇಂಬರ್ ಬಗ್ಗೆ ಒಂದಿಷ್ಟು ಔಪಚಾರಿಕ ಮಾತುಗಳನ್ನಾಡಿದರು.

`ಚೇಂಬರ್‌ನಲ್ಲಿ ತುಂಬಾ ಒಳ್ಳೆ ಸಂಗ್ರಹವಿದೆ. ಬಣ್ಣ, ಗುಣಮಟ್ಟ ಎಲ್ಲಕ್ಕೂ ಉತ್ತಮ ಆಯ್ಕೆಯಿದೆ. ಇಲ್ಲಿಗೆ ಬಂದರೆ ಮೇಕಪ್ ಹೇಗಿರಬೇಕು, ಯಾವ ಮುಖಕ್ಕೆ ಯಾವ ರೀತಿ ಮೇಕಪ್ ಸೂಕ್ತ ಎಂಬುದನ್ನೂ ತಿಳಿದುಕೊಳ್ಳಬಹುದು. ಈಗ ಎಲ್ಲರೂ ಮೇಕಪ್ ಬಯಸುತ್ತಾರೆ. ಆದ್ದರಿಂದ ಈ ಕ್ಷೇತ್ರ ಇನ್ನಷ್ಟು ಬೆಳೆಯುತ್ತದೆ' ಎಂದು ಮೇಕಪ್ ಬಗ್ಗೆ ಉರುಹೊಡೆದಂತೆ ಮಾತನಾಡಿದರು.

ಸದ್ಯಕ್ಕೆ `ಭಜರಂಗಿ' ಚಿತ್ರದಲ್ಲಿ ಬಿಜಿಯಾಗಿರುವ ಐಂದ್ರಿತಾಗೆ ಬೇಸಿಗೆಯಲ್ಲಿ ಹೊರಗೆ ಓಡಾಡುವುದು ಸ್ವಲ್ಪ ಕಷ್ಟವಂತೆ. ಇದೇ ಕಾರಣಕ್ಕೆ ಬಿಸಿಲಿದ್ದಾಗ ಮೇಕಪ್ ಹೇಗಿರಬೇಕು ಎಂಬ ಕುರಿತು ಟಿಪ್ಸ್ ನೀಡಿದರು.

ಬಿಸಿಲಿನಲ್ಲಿ ಹೊರಗೆ ಹೋಗುವಾಗ ಕೇವಲ ಐಲೈನರ್, ಲಿಪ್ ಗ್ಲಾಸ್ ಮಾತ್ರ ಹಾಕಿಕೊಳ್ಳುವ ಅವರು ಸದಾ ನೈಸರ್ಗಿಕವಾಗಿಯೇ ಸುಂದರವಾಗಿರಲು ಬಯಸುತ್ತಾರೆ. ಆದಷ್ಟು ಮೇಕಪ್ ಬಳಸಬೇಡಿ, ಬಳಸಿದರೂ ಗಾಢವಿರದಿರಲಿ' ಎಂದು ಸಲಹೆ ನೀಡುತ್ತಾರೆ. ಅವರ ಮೇಕಪ್ ಕಿಟ್‌ನಲ್ಲಿ ಲಿಪ್ ಗ್ಲಾಸ್, ಕಾಜಲ್, ಕನ್ಸೀಲರ್, ಲಿಪ್‌ಸ್ಟಿಕ್ ಈ ಸಾಮಗ್ರಿಗಳು ಇದ್ದೇ ಇರುತ್ತದಂತೆ.

ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಕ್ಕೆ ಹೆಚ್ಚು ಇಷ್ಟಪಡುವ ಅವರು ಸಿನಿಮಾ ಹೊರತುಪಡಿಸಿ ಬಯಸುವುದು ಆರಾಮದಾಯಕ ಉಡುಪುಗಳಂತೆ. ಬೇಸಿಗೆಯಿರಲಿ, ಚಳಿಯಿರಲಿ, ಮಳೆಯಿರಲಿ, ಎಲ್ಲಿಗೇ ಹೋದರೂ ತೊಡಲು ಆರಾಮವಾಗಿರುವ, ಸಿಂಪಲ್ ಆಗಿರುವ ಬಟ್ಟೆಗಳನ್ನೇ ತೊಡುತ್ತೇನೆ ಎನ್ನುತ್ತಾರೆ.

ಇನ್ನು ವ್ಯಾಯಾಮದ ಗೋಜಿಗೆ ಹೋಗದ ಅವರು ಯೋಗಕ್ಕೆ ಮೊರೆಹೋಗುತ್ತಾರಂತೆ. `ತುಂಬಾ ವೀಕ್ ಇದ್ದೇನೆ' ಎನ್ನುತ್ತಲೇ, ಮೇ 7ರಿಂದ ಫಿಟ್‌ನೆಸ್‌ನಲ್ಲಿ ತೊಡಗಿಕೊಳ್ಳುವ ಮುಹೂರ್ತವನ್ನೂ ಹಾಕಿಕೊಂಡಿದ್ದಾರೆ. ಇದುವರೆಗೂ ಡಯಟ್ ಎಂದು ಯಾವ ಆಹಾರವನ್ನು ನಿರಾಕರಿಸಿಯೂ ಇಲ್ಲ, ಯಾವುದನ್ನೂ ಹೆಚ್ಚು ತಿನ್ನುವುದೂ ಇಲ್ಲ ಎಂದು ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿಕೊಂಡರು.

ಸ್ವಲ್ಪ ಬಿಡುವು ಸಿಕ್ಕರೂ ಸಿನಿಮಾಗಳನ್ನು ನೋಡಿಕೊಂಡು ಕೂರುತ್ತೇನೆ ಎನ್ನುವ ಐಂದ್ರಿತಾ ಪ್ರವಾಸಪ್ರಿಯೆಯೂ ಹೌದು. `ಬಿಡುವಿದ್ದಾಗ ತುಂಬಾ ಸಿನಿಮಾ ನೋಡುತ್ತೇನೆ. ಇನ್ನೂ ಹೆಚ್ಚು ಬಿಡುವಿದ್ದರೆ ಸ್ನೇಹಿತರೊಂದಿಗೆ ತಿರುಗಾಡುತ್ತೇನೆ. ಬೆಂಗಳೂರಿನಲ್ಲಿ ತಿರುಗುವುದು ಸಾಧ್ಯವಿಲ್ಲ. ಮಾಲ್‌ಗಳಿಗೂ ಹೋಗುವುದಕ್ಕೆ ಆಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಸುಂದರ ಸ್ಥಳವಿರುವ ಚಿಕ್ಕಮಗಳೂರು, ಸಕಲೇಶಪುರ ಹೀಗೆ ಹಲವು ಕಡೆಗೆ ಆಗಾಗ್ಗೆ ಪ್ರವಾಸಕ್ಕೆ ಹೋಗುತ್ತಿರುತ್ತೇನೆ' ಎನ್ನುತ್ತಾರೆ.

ಇನ್ನು ಕೇಶ ಶೈಲಿಯ ಬಗ್ಗೆ ಎಂದಿಗೂ ಅವರು ತಲೆಕೆಡಿಸಿಕೊಂಡವರಲ್ಲವಂತೆ. `ಮೊದಲ ಸಿನಿಮಾದಿಂದ ಇದುವರೆಗೂ ಹೇರ್‌ಸ್ಟೈಲನ್ನು ಬದಲು ಮಾಡಿಕೊಂಡಿಲ್ಲ. ಕೂದಲನ್ನು ಹೀಗೆ ಸುಮ್ಮನೆ ಬಿಡುವುದೇ ಇಷ್ಟ. ಅದಕ್ಕೆಂದು ಹೆಚ್ಚು ಕಲರಿಂಗ್, ಡೈಯಿಂಗ್ ಮಾಡುವುದಿಲ್ಲ. ವಾರಕ್ಕೊಮ್ಮೆ ಎಣ್ಣೆ ಮಸಾಜ್ ಮಾಡಿಕೊಂಡರೆ ಸಾಕು, ಆರಾಮವೆನಿಸುತ್ತದೆ' ಎನ್ನುತ್ತಾರೆ.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಹೊರಡಲು ಅನುವಾದ ಐಂದ್ರಿತಾ ತಮ್ಮ ಸೌಂದರ್ಯದ ಸಾರಾಂಶವನ್ನು ಒಂದೇ ಮಾತಿನಲ್ಲಿ ಹೇಳಿ ಮುಗಿಸಿದರು.

`ನೀವು ಸುಂದರವಾಗಿರಬೇಕೆಂದರೆ, ಮುಖದಲ್ಲಿ ಸದಾ ನಗು ತುಂಬಿಕೊಂಡಿರಿ' ಎಂದು ಟಿಪ್ಸ್ ನೀಡಿದರು. ಮದುವೆ ಯಾವಾಗ ಎಂದು ದೂರದಿಂದ ಪ್ರಶ್ನೆ ಬಂದಿದ್ದೇ ತಡ, `ಮೂರು ವರ್ಷದ ನಂತರ ಖಂಡಿತ ಆಗುತ್ತೇನೆ' ಎನ್ನುತ್ತಾ, ಪ್ರಶ್ನೆಯಿಂದ ಜಾರಿಕೊಳ್ಳುವವರಂತೆ ಹೊರಗೆ ಹೆಜ್ಜೆ ಹಾಕಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT