ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವಾರಗಳು

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ಒಂದು ಸಣ್ಣ ಊರು. ಅಲ್ಲೊಬ್ಬ ದಂಪತಿ ವಾಸವಾಗಿದ್ದರು. ಇಬ್ಬರೂ ತುಂಬ ಒಳ್ಳೆಯವರು. ಯಾರಿಗೂ ತೊಂದರೆ ಕೊಟ್ಟವರಲ್ಲ. ತಾವು ತೆಗೆದುಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸುವಂಥವರು. ಅವರಿಗೆ ಮಕ್ಕಳಾಗಲಿಲ್ಲ. ಎಷ್ಟೊಂದು ಬಾರಿ ಎಷ್ಟೊಂದು ದೇವರಿಗೆ ಹರಕೆ ಹೊತ್ತು ಸೇವೆ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.

ಮಕ್ಕಳಾಗದಿದ್ದರೂ ಅವರಿಗೆ ದೇವರ ಮೇಲಿನ ನಂಬಿಕೆ ದೃಢವಾಗಿಯೇ ಇತ್ತು. ಇಬ್ಬರಿಗೂ ಖಚಿತವಾದ ನಂಬಿಕೆ ಏನೆಂದರೆ ಭಗವಂತ ಏನು ಮಾಡಿದರೂ ಒಳ್ಳೆಯದಕ್ಕೇ ಮಾಡುತ್ತಾನೆ. ‘ನಮಗೆ ಮಕ್ಕಳಾಗದಿರುವುದಕ್ಕೂ ಯಾವುದಾದರೂ ವಿಶೇಷವಾದ ಕಾರಣದ್ದಿರಲೇಬೇಕು’ ಹೀಗೆಂದುಕೊಂಡು ಅವರು ದಿನನಿತ್ಯ, ಸದಾ ದೇವರ ಧ್ಯಾನಮಾಡುತ್ತಲೇ ಇರುತ್ತಿದ್ದರು. ಇಂದಲ್ಲ ನಾಳೆ ಭಗವಂತನ ಕೃಪೆ ತಮ್ಮ ಮೇಲೆ ಆದೀತೆಂದು ನಂಬಿ ಜೀವನ ನಡೆಸುತ್ತಿದ್ದರು. ಭಗವಂತ ಭಕ್ತವತ್ಸಲ ಅಲ್ಲವೇ! ಅವನು ಹೇಗೆ ಭಕ್ತರ ಕೈ ಬಿಟ್ಟಾನು? ಒಂದು ದಿನ ಅವರ ಮುಂದೆ ಪ್ರತ್ಯಕ್ಷನಾದ. ಅದುವರೆಗೂ ಕೇವಲ ದೇವರನ್ನು ಕ್ಯಾಲೆಂಡರುಗಳಲ್ಲೇ ನೋಡಿದ್ದ ದಂಪತಿಗೆ ಸಂತೋಷವಾಯಿತು. ಅವನು ಕ್ಯಾಲೆಂಡರಿನಲ್ಲಿ ಇರುವುದಕ್ಕಿಂತ ಹೆಚ್ಚು ಸುಂದರವಾಗಿದ್ದಂತೆ ಕಂಡಿತು.

ಭಗವಂತ ಹೇಳಿದ, ‘ನಿಮ್ಮ ಭಕ್ತಿಗೆ ನಾನು ಮೆಚ್ಚಿದ್ದೇನೆ. ಏನು ಬೇಕಾದರೂ ಕೇಳಿಕೊಳ್ಳಿ. ನಿಮಗೆ ಒಂದಲ್ಲ ಮೂರು ವರಗಳನ್ನು ನೀಡುತ್ತೇನೆ. ಅವುಗಳ ಸರಿಯಾದ ಉಪಯೋಗ ಪಡೆದುಕೊಳ್ಳಿ. ಮೂರು ಬಾರಿ ನೀವು ಏನು ಕೇಳಿದರೂ ಆಗಿಬಿಡುತ್ತದೆ. ಆದ್ದರಿಂದ ವಿಚಾರ ಮಾಡಿ ನಿಮಗೆ ಏನು ಬೇಕೋ ಕೇಳಿಕೊಳ್ಳಿ.’ ಹೀಗೆ ಹೇಳಿ ಭಗವಂತ ಮಾಯವಾದ. ದಂಪತಿಗೆ ಸಂಭ್ರಮವೋ ಸಂಭ್ರಮ. ಈಗ ತಾವು ಏನು ಕೇಳಿದರೂ ಸಿಕ್ಕುಬಿಡುತ್ತದೆ. ಕೇವಲ ಒಂದು ಸಲ ಮಾತ್ರವಲ್ಲ, ಮೂರು ಬಾರಿ. ಜಗತ್ತಿನ ಯಾವ ಸುಖವೂ ತಮ್ಮ ಅಪೇಕ್ಷೆಯನ್ನು ಮೀರುವುದು ಸಾಧ್ಯವಿಲ್ಲ.

ಹೆಂಡತಿ ಹೇಳಿದಳು, ‘ಅವಸರ ಬೇಡ. ಇಬ್ಬರೂ ಕುಳಿತು ಯೋಚನೆ ಮಾಡಿ ಯಾವುದು ಸರಿಯೋ ಅದನ್ನು ಕೇಳಿಕೊಳ್ಳೋಣ.’ ‘ಅದೇ ಸರಿ’ ಎಂದು ಇಬ್ಬರೂ ಚಿಂತಿಸತೊಡಗಿದರು. ಸ್ವಲ್ಪ ಹೊತ್ತಿನ ನಂತರ ಗಂಡ ಹೇಳಿದ ‘ನಮ್ಮ ಎಲ್ಲ ಭಾಗ್ಯವೂ ಬರಲಿ. ಅದಕ್ಕಿಂತ ಮೊದಲು ನಾವು ಅತ್ಯಂತ ಚೆನ್ನಾಗಿ ಇರಬೇಕು, ಕಾಣಬೇಕು. ನೀನು ತಪ್ಪು ತಿಳಿಯಬೇಡ. ನೀನು ತುಂಬ ಸುಂದರಳಾಗಿದ್ದೀ, ಆದರೆ ನಿನ್ನ ಮೂಗು ಮಾತ್ರ ಚಪ್ಪಟೆ. ಅದೊಂದು ಸರಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?’ ಹೆಂಡತಿಗೆ ಕೋಪ ಬಂತು, ‘ನನ್ನ ಮೂಗು ಮಾತ್ರ ಹಾಗೆಯೇ? ನಿಮ್ಮದು ನನಗಿಂತ ಚಪ್ಪಟೆ. ಅಂತೆಯೇ ನನ್ನನ್ನು ನಿಮ್ಮ ಕೊರಳಿಗೆ ನೇತು ಹಾಕಿದರು. ಜನ ನಮಗೆ ಚಪ್ಪಟೆ ಮೂಗಿನ ದಂಪತಿ ಎನ್ನುವುದಿಲ್ಲವೇ?’ ಗಂಡ ಹೇಳಿದ. ‘ಹಾಗಾದರೆ ಮೊದಲು ನಮ್ಮ ಮೂಗು ಸರಿಯಾಗಲಿ ಎಂದು ವರ ಕೇಳೋಣ ನಂತರ ಎಲ್ಲ ಭೋಗ ಭಾಗ್ಯಗಳು ಬರಲಿ.’ ಅಕೆಗೂ ಹೌದೆನ್ನಿಸಿತು. ಗಂಡ ಕಣ್ಣು ಮುಚ್ಚಿ ಹೇಳಿದ, ‘ದೇವರೇ ನಮ್ಮಿಬ್ಬರಿಗೂ ಸುಂದರವಾದ ಮೂಗುಗಳನ್ನು ಕೊಡು.’ ಕ್ಷಣದಲ್ಲಿ ಅನಾಹುತವಾಯಿತು. ಅವರಿಬ್ಬರಿಗೂ ಸುಂದರವಾದ ಮೂಗುಗಳು ಬಂದವು. ಕೇವಲ ಒಂದಲ್ಲ, ಇಬ್ಬರ ಮೈ ತುಂಬ ಮೂಗುಗಳು. ‘ಅಯ್ಯೋ ಇದೇನಾಯಿತು ಅಸಹ್ಯ? ಒಂದೊಂದೇ ಮೂಗನ್ನು ಕೇಳಬಾರದಿತ್ತೇ?’ ಎಂದವಳೇ ಹೆಂಡತಿ ಕೇಳಿಕೊಂಡಳು. ‘ದೇವರೇ ನಮಗೆ ಈ ವಿಪರೀತವಾದ ಮೂಗುಗಳೇ ಬೇಡ.’ ಮರುಕ್ಷಣ ಅವರ ದೇಹದಿಂದ ಮೂಗುಗಳು ಮಾಯವಾದವು. ಒಂದೂ ಉಳಿಯಲಿಲ್ಲ, ಚಪ್ಪಟೆ ಮೂಗು ಸಹ ಇರಲಿಲ್ಲ.

ಗಂಡ ಬೈದ, ‘ಏನು ಮೂರ್ಖಳೇ ನೀನು? ಮುಖದಲ್ಲಿ ಮೂಗೇ ಇಲ್ಲ, ಅದು ಹೇಗೆ ಬದುಕುವುದು?’ ಎಂದು ದೇವರೇ ‘ನಮ್ಮ ಒಂದೇ ಮೂಗನ್ನು ದಯಪಾಲಿಸು’ ಎಂದ. ತಕ್ಷಣ ಇಬ್ಬರ ಮುಖದಲ್ಲಿ ಒಂದೊಂದು ಮೂಗು ಬಂದವು ಆದರೆ ಅವು ಅದೇ ಹಳೆಯ ಚಪ್ಪಟೆ ಮೂಗುಗಳು. ಮೂರೂ ವರಗಳು ಮುಗಿದು ಹೋಗಿದ್ದವು.

ನಮ್ಮ ಜೀವನದಲ್ಲೂ ಪ್ರಗತಿಯ ಸ್ಥಿತಿ ಬಂದಾಗ, ಅವಕಾಶಗಳು ಮುಂದೆ ಬಂದಾಗ ಏನು ಕೇಳಬೇಕೆಂಬುದು ತಿಳಿಯದೇ ಹೋದಾಗ ಹೀಗೆಯೇ ಆಗುತ್ತದೆ. ಅವಕಾಶಗಳು ಬರಬಹುದು ಆದರೆ ಅವುಗಳನ್ನು ಸರಿಯಾಗಿ ಉಪಯೋಗಿಸುವ ಪ್ರಜ್ಞೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT