ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ಭಗ್ನ: ಆಳಂದ ಉದ್ವಿಗ್ನ

Last Updated 13 ಫೆಬ್ರುವರಿ 2011, 19:10 IST
ಅಕ್ಷರ ಗಾತ್ರ

ಆಳಂದ: ಪಟ್ಟಣದ ಮೂರು ದೇವಸ್ಥಾನಗಳ ಮೇಲೆ ದಾಳಿ ಮಾಡಿ ದೇವರ ವಿಗ್ರಹಗಳನ್ನು ಭಗ್ನಗೊಳಿಸಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ. ಇದರಿಂದ ತಾಲ್ಲೂಕಿನ ಎಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ಬಡಾವಣೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಕ್ಷಿಪ್ರಪಡೆ, ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನಾಗರಿಕರೊಂದಿಗೆ ಶಾಂತಿ ಸಭೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ.

ವಿವರ: ಪಟ್ಟಣದ ವಿಭೂತಿ ಗಲ್ಲಿಯ ಸಿದ್ದೇಶ್ವರ ಮಠದ ಗರ್ಭಗುಡಿಯಲ್ಲಿನ ಮೂರ್ತಿಯನ್ನು ಕಿತ್ತು ಮುಖ್ಯ ರಸ್ತೆಯ ಶಹಾ ಮಕ್ಕಳ ಆಸ್ಪತ್ರೆಯ ಬಾಗಿಲ ಬಳಿ ಎಸೆಯಲಾಗಿದೆ. ಅದೇ ಗದ್ದುಗೆ ಮೇಲೆ ಮತ್ತೊಂದು ಕಲ್ಲು ಬಂಡೆ ಇಟ್ಟಿದ್ದಾರೆ. ಶರಣ ಏಕಾಂತರಾಮಯ್ಯ ಮಂದಿರ ಬಳಿಯ ಅರಳಿ ಮರದ ಕೆಳಗಿದ್ದ ನಂದಿ ಮೂರ್ತಿಯನ್ನು ಭಗ್ನಗೊಳಿಸಿ ನಡು ರಸ್ತೆ ಮೇಲೆ ಇಟ್ಟಿದ್ದಾರೆ. ಅದೇ ಕಟ್ಟೆಯ ಮೇಲಿನ ನಾಗಮೂರ್ತಿಯ ಮೇಲೂ ದಾಳಿ ನಡೆದಿದ್ದು,  ವಿಗ್ರಹ ಬಿರುಕು ಬಿಟ್ಟಿದೆ.

ಹೃದಯ ಭಾಗದ ಶ್ರೀರಾಮ ಮಾರುಕಟ್ಟೆಯಲ್ಲಿನ ಗುಡಿಯ ಬಾಗಿಲು ಬೀಗ ಮುರಿದು ಹನುಮಾನ್  ಮೂರ್ತಿಯ ಬಲಗೈ ಮುರಿದು ವಿರೂಪಗೊಳಿಸಲಾಗಿದೆ. ಮೂರ್ತಿಗಳನ್ನು ವಿರೂಪಗೊಳಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಮುಂಜಾನೆ ಹರಡಿತು. ಜನ ತಂಡೋಪತಂಡವಾಗಿ ಘಟನೆ ಸ್ಥಳಕ್ಕೆ ಆಗಮಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರು. ಪಟ್ಟಣದಲ್ಲಿ ಅಘೋಷಿತ ಬಂದ್ ಆಚರಿಸಲಾಯಿತು. ಕಳೆದ 28ರಂದು ರಾತ್ರಿ ಪಟ್ಟಣದ ಬಡಾವಣೆಗಳಲ್ಲಿ ನಾಲ್ಕು ದ್ವಿಚಕ್ರವಾಹನಗಳಿಗೆ ಬೆಂಕಿಹಚ್ಚಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT