ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ವಿಜ್ಞಾನದ ಮಹತ್ವ ಪೋಷಕರಲ್ಲೂ ಅರಿವು ಅಗತ್ಯ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ವಿದ್ಯಾರ್ಥಿಗಳ ಜತೆ ಪೋಷಕರಿಗೂ ಮೂಲ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ~ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್) ನಿರ್ದೇಶಕ ಪ್ರೊ. ಎಚ್.ಎ. ರಂಗನಾಥ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನ ಶಾಲೆಯು ಜ್ಞಾನಭಾರತಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ `ಇನ್ಸ್‌ಪೈರ್ ಇಂಟರ್ನ್‌ಶಿಪ್ ಸೈನ್ಸ್~ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವೃತ್ತಿಪರ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮೂಲ ವಿಜ್ಞಾನ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ದೇಹದ ಎಲ್ಲ ಭಾಗಗಳು ಹೇಗೆ ಸಮಾನಾಂತರವಾಗಿ ಬೆಳವಣಿಗೆ ಆಗಬೇಕೋ, ಅದೇ ರೀತಿಯಲ್ಲಿ ವಿಜ್ಞಾನವೂ ಬೆಳೆಯಬೇಕು. ಇಲ್ಲದಿದ್ದರೆ ಇಡೀ ವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಹೇಳಿದರು.

ಮೂಲ ವಿಜ್ಞಾನ ಬೋಧಿಸುವ ಉಪಾಧ್ಯಾಯರೂ ಸಿಗುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿ.  ಮೂಲ ವಿಜ್ಞಾನದ ಮಹತ್ವ ಹೆಚ್ಚಿಸುವ ಅಗತ್ಯ ಇದೆ. ವೃತ್ತಿಪರ ಕೋರ್ಸ್‌ಗೆ ಸೇರುವಂತೆ ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿಗೆ ಸಹ ಅರಿವು ಮೂಡಿಸಬೇಕಿದೆ ಎಂದರು.

ನ್ಯಾನೊ ತಂತ್ರಜ್ಞಾನದ ವಿಷಯವನ್ನು ಪದವಿ ಹಂತದ ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಸಲಹೆ ನೀಡಿದರು.

ಸ್ನಾತಕೋತ್ತರ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ವಿಷಯವೊಂದನ್ನು ಅಭ್ಯಾಸ ಮಾಡುವ ಮತ್ತು ಅದರಲ್ಲಿ ಪ್ರಾವಿಣ್ಯತೆ ಪಡೆಯುವ ಅವಕಾಶ ನೀಡಬೇಕು. ಎಂಬಿಬಿಎಸ್ ಓದುವ ವಿದ್ಯಾರ್ಥಿ ಎಲ್ಲ ವಿಷಯದ ಬಗ್ಗೆ ಪ್ರಾಥಮಿಕವಾಗಿ ಅಧ್ಯಯನ ಮಾಡಿ ನಂತರ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸುತ್ತಾನೆ. ಇದೇ ರೀತಿ ಬೇರೆ ಎಲ್ಲ ಕೋರ್ಸ್‌ಗಳಲ್ಲೂ ಇರಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ಪ್ರಭುದೇವ್ ಹೇಳಿದರು.

ಶಿಕ್ಷಣಕ್ಕೆ ಸಂಬಂಧಿಸಿದ ಒಟ್ಟು 26 ಕೇಂದ್ರೀಯ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಈ ಸಂಸ್ಥೆಗಳ ಉಪಯೋಗ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಪ್ರಯೋಗಾಲಯ ಮುಂತಾದ ಸೌಲಭ್ಯಗಳು ನಮ್ಮ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲಾಗುತ್ತದೆ. ವಿ.ವಿ ಸಹ ಆ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಲಿದೆ ಎಂದು ಅವರು ಹೇಳಿದರು.

ಕುವೆಂಪು ವಿವಿಯ ನಿವೃತ್ತ ಕುಲಪತಿ ಪ್ರೊ. ಪಿ.ವೆಂಕಟರಾಮಯ್ಯ, ಶಿಬಿರದ (ಡಿಎಸ್‌ಟಿ ಇನ್ಸ್‌ಪೈರ್) ಸ್ಥಳೀಯ ಸಂಚಾಲಕ ಪ್ರೊ. ಎಚ್.ಪಿ. ಪುಟ್ಟರಾಜು, ಪ್ರೊ. ಶ್ರೀಧರನ್ ಮತ್ತಿತರರು ಇದ್ದರು. ಜ. 22ರವರೆಗೆ ಈ ಶಿಬಿರ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT